ಬಜ್ಪೆ: ಯುವವಾಹಿನಿ(ರಿ.) ಬಜ್ಪೆ ಘಟಕದ 5ನೇ ವರ್ಷದ ಸಮಾಜಮುಖಿ ಕಾರ್ಯಕ್ರಮಗಳ ಅಂಗವಾಗಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಅಂಬಿಕಾರೋಡ್ ತೊಕೊಟ್ಟು ಇವರ ಸಹಕಾರದಲ್ಲಿ ದಿನಾಂಕ 23/02/2019ರಂದು ಶನಿವಾರ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ, ಬಜ್ಪೆ ಇಲ್ಲಿ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ಶ್ರವಣ ಸಾಧನ ವಿತರಣೆಯು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ ಬಜ್ಪೆ ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ವಿನೋಧರ ಪೂಜಾರಿ, ನೋಟರಿ ಮತ್ತು ವಕೀಲರು ನೆರವೇರಿಸಿ, ತನ್ನ ಉದ್ಘಾಟನಾ ಭಾಷಣದಲ್ಲಿ ಯುವವಾಹಿನಿ ಬಜ್ಪೆ ಘಟಕದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ನಡೆಸುವರೇ ತಮ್ಮ ಸಂಪೂರ್ಣ ಸಹಕಾರವಿದೆಯೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾರ್ಯಕ್ರಮದ ಕೇಂದ್ರ ಬಿಂದು ಪ್ರಶಾಂತ್ ಕಾಪಿಕಾಡು, ಪ್ರಧಾನ ಕಾರ್ಯದರ್ಶಿ ಸ್ವಾಮಿ ಕೊರಗಜ್ಜ ಸೇವಾ ಸಮಿತಿ , ಅಂಬಿಕಾರೋಡ್ ತೊಕೊಟ್ಟು, ಇವರು ತಮ್ಮ ಸಮಿತಿಯ ಮೂಲಕ ಅಶಕ್ತರಿಗೆ ನಡೆಸುವ ಸೇವಾಕಾರ್ಯಗಳ ಸಂಪೂರ್ಣ ಮಾಹಿತಿ ನೀಡಿದರಲ್ಲದೆ, ಇಂದಿನ ಕಾರ್ಯಕ್ರಮದಲ್ಲಿ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ಉಚಿತವಾಗಿ ಶ್ರವಣ ಸಾಧನ ವಿತರಣೆಗೆ ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷರಾದ ಸಂಧ್ಯಾ ಕುಳಾಯಿಯವರ ಮುತುವರ್ಜಿಯಿಂದ ಸಾಧ್ಯವಾಗಿದ್ದು, ಇನ್ನು ಮುಂದಿನ ದಿನಗಳಲ್ಲಿಯೂ ತಮ್ಮ ಯಾವುದೇ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರವಿದೆಯೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಜ್ಪೆ ಪರಿಸರದಲ್ಲಿ ಶ್ರವಣ ಸಮಸ್ಯೆಯಲ್ಲಿದ್ದ ಸುಮಾರು 25 ಮಂದಿ ಅಶಕ್ತರಿಗೆ ಶ್ರವಣ ಸಾಧನವನ್ನು ಪ್ರಶಾಂತ್ ಕಾಪಿಕಾಡು ಇವರು ವಿತರಿಸಿದರು. ಸಮಾಜಮುಖಿ ಕಾರ್ಯಕ್ರಮ ನಡೆಸುವರೇ ಸಹಕಾರ ನೀಡಿದ ಪ್ರಶಾಂತ್ ಕಾಪಿಕಾಡು ಇವರನ್ನು ಯುವವಾಹಿನಿ (ರಿ.) ಬಜ್ಪೆ ಘಟಕದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಘಟಕದ ಅಧ್ಯಕ್ಷರಾದ ಸಂಧ್ಯಾ ಕುಳಾಯಿ ತಮ್ಮ ಅಧ್ಯಕ್ಷ ಭಾಷಣದಲ್ಲಿ, ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ಸಹಕಾರ ನೀಡಿದ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆ ಅರ್ಪಿಸಿದರಲ್ಲದೆ ಶ್ರವಣ ಸಾಧನದ ಉಪಯೋಗದ ಸಂಪೂರ್ಣ ಮಾಹಿತಿ ನೀಡಿದರು.
ಯುವವಾಹಿನಿ (ರಿ.) ಬಜ್ಪೆ ಘಟಕದ ರೋಹಿನಿ ಪ್ರಾರ್ಥಿಸಿದರು, ಸಮಾಜ ಸೇವಾ ನಿರ್ದೇಶಕರಾದ ಸತ್ಯವತಿ ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು, ಅಶೋಕ್ ಕುಮಾರ್, ಉಪಾಧ್ಯಕ್ಷರು ಅತಿಥಿಗಳನ್ನು ಸ್ವಾಗತಿಸಿದರು, ಜತೆ ಕಾರ್ಯದರ್ಶಿ ವಿನೀತ್ ಪೂಜಾರಿ ಧನ್ಯವಾದ ಅರ್ಪಿಸಿದರು, ಶ್ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.