ಮೂಡುಬಿದಿರೆ, ಫೆ. 3: ಯುವ ಸಂಪತ್ತು ಈ ದೇಶದ ಸಂಪತ್ತು. ಯುವ ಸಮುದಾಯವನ್ನು ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ಸದೃಢಗೊಳಿಸಬೇಕಾಗಿದೆ. ಅದರಲ್ಲೂ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತಣ್ತೀವನ್ನು ಸಾರಿದ ಶ್ರೀ ನಾರಾಯಣ ಗುರುಗಳ ಆಶಯ, ತುಳುನಾಡಿನ ವೀರಪುರುಷರಾದ ಕೋಟಿ- ಚೆನ್ನಯರ ಸತ್ಯಧರ್ಮ ಧೈರ್ಯದ ನಡೆನುಡಿ ಯುವಜನಾಂಗಕ್ಕೆ ಆದರ್ಶವಾಗಲಿ ಎಂದು ಡಾ| ಎಂ. ಮೋಹನ ಆಳ್ವ ಹೇಳಿದರು.
ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆ ಯಲ್ಲಿ ರವಿವಾರ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ‘ಡೆನ್ನಾನ ಡೆನ್ನನ 2019’ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ನಾರಾಯಣ ಪಿ. ಎಂ. ಜತೆಗೂಡಿ ಬಿಲ್ಲುಗಳ ಮೂಲಕ ಬಾಣ ಹೂಡಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಯುವವಾಹಿನಿಯ ಮೂಲಕ ಕಲಾವಿದರನ್ನು ಗುರುತಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಭಿವೃದ್ಧಿಯ ಧ್ಯೇಯವನ್ನು ಸಾಕಾರಗೊಳಿಸಿ
ಅಖೀಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಮಾತನಾಡಿ, ಇಂದು ಯುವ ಸಮುದಾಯ ಹಾದಿ ತಪ್ಪುತ್ತಿದ್ದು ಮಾರ್ಗದರ್ಶನದ ಕೊರತೆಯನ್ನು ಇದು ತೋರಿಸುತ್ತದೆ. ಯುವ ಜನಾಂಗವನ್ನು ಸರಿಯಾದ ಮಾರ್ಗದರ್ಶನದ ಮೂಲಕ ಸದೃಢರನ್ನಾಗಿಸಬೇಕು. ಈ ಸಮಾಜಕ್ಕೆ ದೊರಕುತ್ತಿರುವ ಸವಲತ್ತುಗಳನ್ನು ಬಳಸಿ ಅಭಿವೃದ್ಧಿಯ ಧ್ಯೇಯವನ್ನು ಸಾಕಾರಗೊಳಿಸಬೇಕು ಎಂದರು.
ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ದ್ವಜಾರೋಹಣಗೈದರು. ಮೂಡುಬಿದಿರೆ ಘಟಕದ ಅಧ್ಯಕ್ಷ ರಾಜೇಶ್ ಡಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲದ ಅಧ್ಯಕ್ಷ ಎಚ್. ಎಸ್. ಸಾಯಿ ರಾಮ್, ಬಿಲ್ಲವರ ಅಸೋಸಿಯೇಷನ್ ಮುಂಬೈನ ನಿಕಟಪೂರ್ವ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್, ಚೌಟರ ಅರಮನೆಯ ಕುಲದೀಪ ಎಂ., ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಸಿನೆಮಾ ನಿರ್ಮಾಪಕ ರಾಜಶೇಖರ್ ಕೋಟ್ಯಾನ್,ಯುವವಾಹಿನಿ ಮೂಡುಬಿದಿರೆ ಘಟಕದ ಸಲಹೆಗಾರ ಟಿ. ಶಂಕರ್ ಸುವರ್ಣ, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಎಂ. ಸುವರ್ಣ, ಕಾರ್ಯದರ್ಶಿ ರಾಜೇಶ್ ಸುವರ್ಣ, ಡೆನ್ನಾನ ಡೆನ್ನನ ಸಂಚಾಲಕ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಕೇಂದ್ರ ಸಮಿತಿಯ ಸಾಹಿತ್ಯ ಮತ್ತು ಸಾಂಸ್ಕ್ರತಿಕ ನಿರ್ದೇಶಕ ವಿಠಲ್ ಎಮ್ . ಪೂಜಾರಿ, ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ನಾರಾಯಣ ಪಿ.ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಡಾ| ಮುರಳೀಕೃಷ್ಣ ಆರ್.ವಿ. ವಂದಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.