ಬಜ್ಪೆ : ಯುವ ಜನರಲ್ಲಿ ಸ್ವಸ್ಥ ಸಮಾಜದ ಬಗೆಗಿನ ಕಾಳಜಿ, ಸಂಸ್ಕೃತಿ, ಒಳ್ಳೆಯ ಆಚಾರ ವಿಚಾರಗಳು ಹಿರಿಯರಾದ ನಾವು ಅವರಲ್ಲಿ ಸದಾ ಮೇಳೈಸುವಂತೆ ಮಾಡಬೇಕು. ವಿರುದ್ಧ ದಿಕ್ಕಿಗೆ ಮುಖ ಮಾಡಿರುವ ಮನಸ್ಸುಗಳನ್ನು ಮುಖ್ಯವಾಹಿನಿಯತ್ತ ತಿರುಗಿಸಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಮಾಜದ ಯುವಕರ ಪಾತ್ರ ಇನ್ನಷ್ಟು ಹಿರಿದಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿಯಂತಹ ಘಟಕಗಳು ಮುಖ್ಯ ಪಾತ್ರವಹಿಸುತ್ತಿರುವುದು ಶ್ಲಾಘನೀಯ, ಇಂತಹ ಸ್ತುತ್ಯರ್ಹ ಕಾರ್ಯಗಳು ಇನ್ನೂ ಪರಿನಾಮಕಾರಿಯಾಗಲಿ ಎಂದು ನಳಿನಾದೇವಿ ಎಂ. ಆರ್. ಇವರು ದಿನಾಂಕ 13.01.2019ರಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗರು ಸಭಾ ಭವನದಲ್ಲಿ ಜರುಗಿದ ಯುವವಾಹಿನಿ (ರಿ.) ಬಜ್ಪೆ ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುತ್ತಾ ನುಡಿದರು.
ಇದೇ ಸಂದರ್ಭದಲ್ಲಿ ವೀರ ಯೋಧ ಶ್ರೀ ಅಶೋಕ್ ಕುಮಾರ್ ಕುಪ್ಪೆಪದವು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನ ಪೂರ್ವಕವಾಗಿ ಮಾತನಾಡಿದ ಶ್ರೀಯುತರು, ಯುವ ಸಮುದಾಯ ದೇಶ ರಕ್ಷಣೆಯತ್ತ ಹೆಚ್ಚು ಆಕರ್ಷಿತರಾಗಬೇಕು ಎನ್ನುತ್ತಾ ಯೋಧನಾದ ತನ್ನನ್ನು ಸನ್ಮಾನಿಸಿದಕ್ಕೆ ಅಭಿವಂದನೆಯನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರತಿಜ್ಞಾವಿಧಿಯನ್ನು ಭೋಧಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಇವರು ಯಾವುದೇ ಒಂದು ಸಂಘಟನೆ ಸಮಾನ ಮನಸ್ಕತೆಯ ಮೂಲಕ ಗಟ್ಟಿಯಾಗುವುದು ಅಲ್ಲದೆ ಘಟಕದ ಜವಾಬ್ದಾರಿ ಹಿಡಿದವರು ಸರ್ವರ ಸಹಕಾರದೊಂದಿಗೆ ಘಟಕವನ್ನು ಇನ್ನಷ್ಟು ಸುದೃಢಗೊಳಿಸಬೇಕು ಎಂದು ಹೇಳಿದರು. ಪದಗ್ರಹಣದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಜ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಶಿವರಾಮ್ ಪೂಜಾರಿ ಇವರು ಯುವವಾಹಿನಿಯ ಮೂಲ ಆಶಯ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಮತ್ತು ಇನ್ನಷ್ಟು ಕ್ರಿಯಾಶೀಲವಾಗಿ ನಮ್ಮ ಈ ಘಟಕ ಮುಂದಿನ ದಿನಗಳಲ್ಲಿ ಕಾರ್ಯತತ್ವರವಾಗಲೆಂದು ಹಾರೈಸಿದರು. ಘಟಕದ ಸಲಹೆಗಾರರಾದ ಶ್ರೀ ಪರಮೇಶ್ವರ ಪೂಜಾರಿ ಇವರು ಬಜ್ಪೆ ಘಟಕದ ಸಾಧನೆ ಹೆಮ್ಮೆ ತರಿಸುವಂತದ್ದಾಗಿದ್ದು ಮುಂದಿನ ದಿನಗಳಲ್ಲೂ ಇದು ವಿಸ್ತಾರಕವಾಗಲಿ ಎಂದು ಶುಭ ನುಡಿದರು.
ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಘಟಕದ ಅಧ್ಯಕ್ಷರಾದ ಶ್ರೀ ದೇವರಾಜ್ ಅಮೀನ್ ಇವರು ತನ್ನ ಕಾರ್ಯಾವಧಿಯಲ್ಲಿ ಸಹಕಾರ ನೀಡಿದ ಸರ್ವರನ್ನೂ ನೆನಪಿಸಿಕೊಂಡು ಬಜ್ಪೆ ಘಟಕದ ಶ್ರೇಯಸ್ಸಿಗೆ ಕಾರಣೀಭೂತರಾದ ಎಲ್ಲರಿಗೂ ಕೃತಜ್ಞತೆಯನ್ನು ಹೇಳಿದರು. ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಶ್ರೀಮತಿ ಸಂಧ್ಯಾ ಕುಳಾಯಿ ಇವರು, ಮುಂದಿನ ದಿನಗಳಲ್ಲೂ ಸರ್ವರ ಸಹಕಾರವನ್ನು ಬಯಸಿ ತನ್ನ ಕಾರ್ಯ ಯೋಜನೆಯನ್ನು ಸೂಕ್ಷ್ಮವಾಗಿ ಸಭೆಯ ಮುಂದಿರಿಸಿದರು. ಇದೇ ಸಂದರ್ಭದಲ್ಲಿ ತನ್ನ ಒಂದು ವರುಷದ ಕಾರ್ಯಾವಧಿಯುದ್ದಕ್ಕೆ ತನಗೆ ಹೆಗಲಿಗೆ ಹೆಗಲು ಕೊಟ್ಟ ಎಲ್ಲರನ್ನೂ ಅಧ್ಯಕ್ಷರಾದ ಶ್ರೀ ದೇವರಾಜ್ ಅಮೀನ್ ಇವರು ಗೌರವಿಸಿದರು. ಜೊತೆಗೆ ಸದರಿ ಘಟಕದ ಮಾಜಿ ಸಲಹೆಗಾರರಾದ ರವಿಚಂದ್ರ, ಭಜನಾ ಸ್ಪರ್ಧೆಯ ಸಂದರ್ಭದಲ್ಲಿ ಘಟಕದ ಸದಸ್ಯರಿಗೆ ತರಬೇತಿ ನೀಡಿದ ಶ್ರೀ ಧೀನ್‌ರಾಜ್ ಹಾಗೂ ಸಲಹೆಗಾರರಾದ ಶ್ರೀ ಜಿ. ಪರಮೇಶ್ವರ ಪೂಜಾರಿ ಇವರೆಲ್ಲನ್ನು ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.
ಕುಮಾರಿ ಗ್ರೀಷ್ಮ ಎಕ್ಕಾರು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ನಿರ್ಮಲ ಗೋಪಾಲಕೃಷ್ಣ ಇವರು ಸರ್ವರನ್ನು ಸ್ವಾಗತಿಸಿದರು. ಚಂದ್ರಶೇಖರ ಪೂಜಾರಿ ನೂತನ ಪದಾಧಿಕಾರಿಗಳು, ನಿರ್ದೇಶಕರುಗಳ ಪರಿಚಯವನ್ನು ಸಭೆಯ ಮುಂದಿರಿಸಿದರು. ಕಾರ್ಯದರ್ಶಿ ಸುನಿತಾ ವಾರ್ಷಿಕ ವರದಿ ಮಂಡಿಸಿದರು. ಮಾಧವ ಇವರು ಸನ್ಮಾನ ಪತ್ರ ವಾಚಿಸಿದರು. ರವೀಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಕಿರಣ್ ಮತ್ತು ಕೇಶವ ಇವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ರೋಹಿತ್ ವಂದನಾರ್ಪಣೆಗೈದರು.
ಪದಗ್ರಹಣ ಕಾರ್ಯಕ್ರಮದ ಪೂರ್ವದಲ್ಲಿ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ನೂತನ ಪದಾಧಿಕಾರಿಗಳತಂಡಕ್ಕೆ ಶುಭ ಹಾರೈಕೆಗಳು…