ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ದಿನಾಂಕ 06.01.2019 ರಂದು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬಿಲ್ಲವ ವಧುವರರ ಅನ್ವೇಷಣೆ , ವಿವಾಹ ಅಪೇಕ್ಷಿತರ ಸಮಾಗಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ವಾಸ್ತವ ಬದುಕಿನ ಅರಿವು ದಾಂಪತ್ಯ ಜೀವನದ ಗೆಲುವು : ಸುಮಲತಾ ಎನ್.ಸುವರ್ಣ
ಹೆಣ್ಣು ಗಂಡು ಇಬ್ಬರೂ ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ, ಇಂದಿನ ದಿನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ, ವಾಸ್ತವ ಬದುಕಿನ ಅರಿವು ಮೂಡಿದಾಗ ದಾಂಪತ್ಯ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಮಂಗಳೂರು ಮಹಿಳಾ ಘಟಕದ ವಧುವರರ ಅನ್ವೇಷಣಾ ಕಾರ್ಯಕ್ರಮವು ಸರ್ವರ ಪ್ರಶಂಸೆಗೆ ಕಾರಣವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್ ಮಹಿಳಾ ಘಟಕದ ಅಧ್ಯಕ್ಷೆ ಸುಮಲತಾ.ಎನ್.ಸುವರ್ಣ ತಿಳಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾಜ ಸೇವಕಿ ಲಯನ್ ಉಷಾ ಪ್ರಭಾಕರ್, ದ.ಕ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಪ್ರೀಯಾ ವುಡ್ ಇಂಡಸ್ಟ್ರೀಸ್ ಮಾಲಕ ದೇವೇಂದ್ರ ಕೋಟ್ಯಾನ್, ಇಂಡಸ್ ಕೇರ್ ಇಕ್ವಿಪ್ ಮೆಂಟ್ಸ್ ಮಾಲಕ ಶ್ರೀನಿವಾಸ ಕೂಳೂರು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರ ಜಿತೇಂದ್ರ ಜೆ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಹೆಣ್ಣು ಹೆತ್ತ ಮನಗಳ ಆಶಾ ಕಿರಣ : ರಶ್ಮಿ.ಸಿ.ಕರ್ಕೇರ
ಸಮಾಜದ ಪ್ರತಿಯೊಂದು ಹೆಣ್ಣು ಮಗಳಿಗೂ ಕಂಕಣ ಕೂಡಿ ಬರಬೇಕು, ಬಡತನದ ಬೇಗುದಿಯಲ್ಲಿ ಬೆಂದಿರುವ ಹೆಣ್ಣು ಹೆತ್ತ ಮನಗಳು ಮಕ್ಕಳಿಗೆ ವಿವಾಹ ಆಗಿಲ್ಲವೆಂದು ನೊಂದುಕೊಳ್ಳಬಾರದು, ಬಡವರಿಗೂ ಸಂಬಂಧ ಕೈಗೂಡಿ ಬರಬೇಕು ಎನ್ನುವುದು ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ ತಿಳಿಸಿದರು. ಈ ಸಂದರ್ಭದಲ್ಲಿ ವಧುವರರ ಅನ್ವೇಷಣೆಯ ಮೂಲಕ ಸಂಬಂಧ ಕೈಗೂಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಜಿತ್ ವನಿತಾ ನವ ದಂಪತಿಗಳನ್ನು ಅಭಿನಂದಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕೆ.ಅಂಚನ್, ಸಮಾಜ ಸೇವಾ ನಿರ್ದೇಶಕ ಸಂತೋಷ್ ಎಸ್.ಪೂಜಾರಿ, ಕಾರ್ಯಕ್ರಮದ ಸಂಚಾಲಕಿ ರೇಖಾ ಗೋಪಾಲ್, ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ರವಿಕಲಾ ವೈ.ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಪ್ರಸ್ತಾವನೆ ಮಾಡಿದರು, ರಶ್ಮಿ.ಸಿ.ಕರ್ಕೆರಾ ಸ್ವಾಗತಿಸಿದರು, ಲಲಿತಾ ವಂದಿಸಿದರು. ಈ ಸಂದರ್ಭದಲ್ಲಿ ಫೆಬ್ರವರಿ 3 ರಂದು ನಡೆಯಲಿರುವ ಡೆನ್ನಾನ ಡೆನ್ನನ ಕಾರ್ಯಕ್ರಮದ ಹಾಡನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಬಿಡುಗಡೆಗೊಳಿಸಿದರು. ಬಳಿಕ ಸುಮಾರು 1,500 ಕ್ಕೂ ಅಧಿಕ ವಿವಾಹ ಅಪೇಕ್ಷಿತರ ವಿವರಗಳನ್ನು LED ಪರದೆಯಲ್ಲಿ ಪ್ರಕಟಿಸಲಾಯಿತು. ಶುಭಾ ರಾಜೇಂದ್ರ ಹಾಗೂ ರಾಕೇಶ್ ಕುಮಾರ್ ವಿವಾಹ ಅಪೇಕ್ಷಿತರ ವಿವರ ಸಭೆಗೆ ಪರಿಚಯಿಸಿದರು.
ಸಮಾರೋಪ ಸಮಾರಂಭ
ಗಂಡು ಹೆಣ್ಣಿನ ಸಂಬಂಧ ಬೆಸೆಯುವುದು ಪುಣ್ಯದ ಕಾರ್ಯ : ಜಯಂತ್ ನಡುಬೈಲು
ದೇವರು ಬರೆದ ಜೋಡಿಗಳನ್ನು ಒಂದು ಗೂಡಿಸುವ ಸೇತುವೆಯಾಗಿ ಯುವವಾಹಿನಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಗಂಡು ಹೆಣ್ಣಿನ ನಡುವೆ ಸಂಬಂಧ ಬೆಸೆಯುವ ವಿವಾಹ ಯಜ್ಞದ ಪುಣ್ಯದ ಕಾರ್ಯ ಮಾಡುತ್ತಿರುವ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಕಾರ್ಯ ಶ್ಲಾಘನೀಯ ಎಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಕೋಶಾಧಿಕಾರಿ ಆರ್.ಪದ್ಮರಾಜ್, ದಿವಾಕರ್ ಕನ್ ಸ್ಟ್ರಕ್ಷನ್ ಮಾಲಕ ದಿವಾಕರ್, ನ್ಯಾಯವಾದಿ ಅರುಣ್ ಬಂಗೇರ, ಎಸ್.ಆರ್.ಟ್ರೇಡಿಂಗ್ ಮಾಲಕ ನಾಗೇಶ್ ಕೋಟ್ಯಾನ್, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮೀ.ಸಿ.ಕರ್ಕೇರ, ಸಲಹೆಗಾರ ಜಿತೇಂದ್ರ ಜೆ.ಸುವರ್ಣ, ಸಮಾಜ ಸೇವಾ ನಿರ್ದೇಶಕ ಸಂತೋಷ್ ಎಸ್.ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ರೇಖಾ ಗೋಪಾಲ್ ಸ್ವಾಗತಿಸಿದರು, ಕಾರ್ಯದರ್ಶಿ ರವಿಕಲಾ.ವೈ.ಅಮೀನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.