ಯಡ್ತಾಡಿ : ಬದುಕು ಒಂದೊಮ್ಮೆ ತೀರಾ ಸಂಕಷ್ಟಕ್ಕೆ ತುತ್ತಾಗುತ್ತದೆ. ಕಷ್ಟ ಬಂದವರಿಗೆ ಮರಳಿ ಮರಳಿ ನೋವು ಬರುತ್ತೆ. ಯಡ್ತಾಡಿ ಗ್ರಾಮದಲ್ಲಿ ವಾಸವಾಗಿರುವ ಸ.ಹಿ.ಪ್ರಾ. ಶಾಲೆ ಯಡ್ತಾಡಿಯ 7ನೇ ತರಗತಿ ವಿದ್ಯಾರ್ಥಿ ರಾಜೇಂದ್ರ ಎಂಬ ಹುಡುಗನ ಕರುಣಾಜನಕ ಕಥೆ ಇದು. ಕಡು ಬಡತನದಲ್ಲಿ ಹುಟ್ಟಿದ ಈ ಹುಡುಗನಿಗೆ ಹುಟ್ಟಿನಿಂದಲೇ ಒಂದು ಕಿಡ್ನಿಯಲ್ಲಿ ಸಮಸ್ಯೆ ಇತ್ತು. ಆದರೂ ಚಿಕಿತ್ಸೆಯ ಮೂಲಕ ಒಂದೇ ಕಿಡ್ನಿಯಲ್ಲಿ ಲವ ಲವಿಕೆಯ ಜೀವನ ಸಾಗಿಸುತ್ತಿದ್ದ. ಆದರೆ ಇತ್ತೀಚಿಗೆ ಇನ್ನೊಂದು ಕಿಡ್ನಿಯಲ್ಲೂ ಸಮಸ್ಯೆ ಕಾಣಿಸಿ ಹಲವಾರು ದಿನಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿದ್ದ. ಹಲವಾರು ಬಾರಿ ವಿಮೆಯ ಸೌಲಭ್ತ್ಯ ಪಡೆದಿರುವುದರಿಂದ ಅದಾವುದು ಈ ಬಾರಿ ಸಿಗುವ ಅವಕಾಶವಿರಲಿಲ್ಲ. ತಂದೆ ರಾಮನಾಯ್ಕ ಹಾಗೂ ತಾಯಿ ಬೇಬಿ ಬಾಯಿ ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಅವರ ಮಗನಿಗೆ ಬರಸಿಡಿಲಿನಂತೆ ಎರಗಿದ ಕಿಡ್ನಿ ಸಮಸ್ಯೆ ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು.
ತೀರಾ ಸಂಕಷ್ಟದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ರಾಜೇಂದ್ರನ ವೈದ್ಯಕೀಯ ನೆರವಿಗೆ ಮಿಡಿದ ಯುವವಾಹಿನಿ (ರಿ) ಯಡ್ತಾಡಿ ಘಟಕವು, 07/12/18 ರಂದು ರಾಜೇಂದ್ರ ನ ಮನೆಗೆ ಭೇಟಿ ನೀಡಿ, ರಾಜೇಂದ್ರನ ತಂದೆ ರಾಮನಾಯ್ಕರಿಗೆ 25,500.00 ರೂಪಾಯಿಗಳನ್ನು ವ್ಯದ್ಯಕೀಯ ನೆರವಿಗಾಗಿ ಹಸ್ತಾಂತರಿಸಿತು. ಮನನೊಂದ ಜನರ ಸಹಾಯಕ್ಕೆ ಯುವವಾಹಿನಿ ಸಂಸ್ಥೆಯು ಸದಾ ಸಿದ್ದ ಎನ್ನುವ ಮಾತಿನಂತೆ ನೊಂದವರ ನೋವನ್ನು ಹಗುರಾಗಿಸುವ ಸಣ್ಣ ಹೆಜ್ಜೆಯನ್ನು ಇಟ್ಟಿತು.