ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ,ಚುಟುಕು ಸಾಹಿತ್ಯ ಪರಿಷತ್ತುಮಂಗಳೂರು,ರೋಟರಿ ಸಮುದಾಯ ದಳ ಕೊಲ್ಯ ,ಸೋಮೇಶ್ವರ ಇದರ ಜಂಟಿ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರೀಟೇಬಲ್ ಟ್ರಸ್ಟ್ (ರಿ) ಕೊಲ್ಯ ಇದರ ಸಹಯೋಗದೊಂದಿಗೆ “ಮುಂಜಾನೆಯ ಕವಿ ಕಲರವ” ಕನ್ನಡ ,ತುಳು,ಕೊಂಕಣಿ ಭಾಷೆಗಳ “ಕವಿಗೋಷ್ಠಿ ಕಾರ್ಯಕ್ರಮ” ವು ದಿನಾಂಕ 25/11/2018ನೇ ರವಿವಾರದಂದು ಶ್ರೀ ಕ್ಷೇತ್ರ ಕೊಲ್ಯ ಮಠದಲ್ಲಿ ಜರಗಿತು
ಶ್ರೀ ಕ್ಷೇತ್ರ ಕೊಲ್ಯ ಮಠದ ಅಧ್ಯಕ್ಷರಾದ ಮಹಾಬಲ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ,ಕೆಲವೊಂದು ಸಂದರ್ಭಗಳಲ್ಲಿ ಜಿಡ್ಡುಗಟ್ಟಿದ ಸಮಾಜದಲ್ಲಿರುವ ಕುಂದುಕೊರತೆಗಳನ್ನು ಕವಿಗಳು ತಮ್ಮ ಕವಿತೆಗಳ ಮೂಲಕ ಪ್ರಚಾರಪಡಿಸುವಲ್ಲಿ ಹಿಂಜರಿಯಬಾರದು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಕ್ಷೇತ್ರ ಕೊಲ್ಯ ಮಠದ ಕಾರ್ಯದರ್ಶಿಯವರಾದ ನಾರಾಯಣ ಕುಂಪಲರವರು ,ಮಕ್ಕಳಿಗೆ ಬಾಲ್ಯದಲ್ಲೇ ಸಾಹಿತ್ಯದ ಅಭಿರುಚಿಯನ್ನು ಬೆಳೆಸಬೇಕು ,ಸಾಹಿತ್ಯದ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಕೊಲ್ಯ ಮಠವು ಸರ್ವ ವಿಧದಲ್ಲೂ ಪ್ರೋತ್ಸಾಹವನ್ನು ನೀಡುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು. ಸಾಹಿತ್ಯ,ಚುಟುಕು,ಮತ್ತು ಕವಿತೆಗಳ ರಚನೆಯ ಕುರಿತು ಮಾಹಿತಿ ಮತ್ತು ಕಾರ್ಯಗಾರ ನಡೆಸುವುದರಿಂದ ಹೊಸ ಪ್ರತಿಭೆಗಳಿಗೆ ಮತ್ತು ಬೆಳೆಯುತ್ತಿರುವ ಯುವಕವಿಗಳಿಗೆ ತುಂಬಾ ಪ್ರಯೋಜನವಾಗುತ್ತದೆ ಎಂದು ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಅಧ್ಯಕ್ಷರಾದ ಸುಧಾ ಸುರೇಶ್ ರವರು ಅಭಿಪ್ರಾಯಪಟ್ಟರು.
ಸಾಹಿತ್ಯ ಯಾರ ಮನಸ್ಸುಗಳನ್ನು ನೋಯಿಸಬಾರದು,ಉತ್ತಮ ಸಾಹಿತ್ಯಗಳು ಎಲ್ಲರ ಮನಸ್ಸನ್ನು ತಟ್ಟುತ್ತದೆ ,ಕವಿ ಮನಸ್ಸುಗಳ ಬಾವನೆಗಳನ್ನು ವ್ಯಕ್ತಪಡಿಸುವ ಈ ಕವಿಗೋಷ್ಠಿ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿದೆ ಎಂದು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ಜೈಕುಮಾರ್ ಪರ್ಯತ್ತೂರು ಕೊಲ್ಯರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯವರಾದ ನಳಿನಾಕ್ಷಿ ಬಿಜೈ ರವರು ಚುಟುಕು ಮತ್ತು ಕವನಗಳ ರಚನೆಯ ಕುರಿತು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದರು .
ಕನ್ನಡ,ತುಳು ಮತ್ತು ಕೊಂಕಣಿ ಭಾಷೆಯಲ್ಲಿ ಸರಿಸುಮಾರು 25 ಕವಿಗಳು ತಮ್ಮ ಸ್ವರಚಿತ ಚುಟುಕು ಮತ್ತು ಕವನಗಳನ್ನು ವಾಚಿಸಿದರು.ಯುವವಾಹಿನಿ (ರಿ) ಕೊಲ್ಯ ಘಟಕದ ಕೆಲವು ಸದಸ್ಯರು ಪ್ರಪ್ರಥಮ ಬಾರಿಗೆ ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿ ಸರ್ವರ ಮೆಚ್ಚುಗೆಯನ್ನು ಗಳಿಸಿದರು,ಭಾಗವಹಿಸಿದ ಎಲ್ಲಾ ಕವಿಗಳಿಗೆ ಸಾಹಿತ್ಯದ ಪುಸ್ತಕ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ಸಂಘಟನಾ ಕಾರ್ಯದರ್ಶಿ ಗಣೇಶ್ ಕಿನ್ಯ,ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಅನೀಶ್ ಕಿನ್ಯ ,ಸದಸ್ಯರಾದ ಸೌಮ್ಯ ಕುಸುಮಾಕರ್ ,ಘಟಕದ ಪ್ರಚಾರ ನಿರ್ದೇಶಕರು ಮತ್ತು ಸಾಹಿತಿ ಲತೀಶ್ ಎಮ್ ಸಂಕೋಳಿಗೆ ,ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ ಮಾಡೂರು ಕವಿಗೋಷ್ಠಿಯಲ್ಲಿ ಚುಟುಕು ,ಕವನ ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಸುರೇಶ್ ನೆಗಳಗುಳಿಯವರು ಬರೆದುದೆಲ್ಲವು ಕವನವಾಗುದಿಲ್ಲ ,ಕವಿತೆಯಲ್ಲಿ ನೈಜತೆಯಿರಬೇಕು ,ಚುಟುಕು ಅಥವಾ ಕವನ ಎಲ್ಲರ ಮನಸ್ಸನ್ನು ಮುದಗೊಳಿಸುವಂತಿರಬೇಕು ಎಂದು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಮುಂಜಾನೆಯ ತಿಳಿ ನೀರಿನ ಕೊಳದಲ್ಲಿ ಕವಿ ಮನಸ್ಸುಗಳ ಕವಿತೆಗಳೆಂಬ ಹೂವಿನ ಎಸಳುಗಳು ತೇಲಾಡಿ
ಸಾಹಿತ್ಯದ ಕಂಪನ್ನು ಪಸರಿಸಿತು, ಘಟಕವು ಮುಂದೆಯೂ ಸಾಹಿತ್ಯದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಜತೆಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಪ್ರಾರ್ಥನೆಯನ್ನು ನೆರವೇರಿಸಿದರು,ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಸ್ವಾಗತಿಸಿದರು,ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯವರಾದ ನಳಿನಾಕ್ಷಿ ಬಿಜೈರವರು ಕವಿಗೋಷ್ಠಿ ಕಾರ್ಯಕ್ರಮವನ್ನು ನೇರವೇರಿಸಿದರು,ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಮತ್ತು ಯುವವಾಹಿನಿ (ರಿ) ಕೊಲ್ಯ ಘಟಕದ ಪ್ರಚಾರ ನಿರ್ದೇಶಕರಾದ ಲತೀಶ್ ಎಮ್ ಸಂಕೋಳಿಗೆಯವರು ಧನ್ಯವಾದ ನೀಡಿದರು,ಮಂಗಳೂರು ಚುಟಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಸುಭ್ರಾಯ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು.