ಮುಲ್ಕಿ: ಮಕ್ಕಳಿಗೆ ವಾಸ್ತವದ ಅರಿವನ್ನು ಮಾಡಿ ಸುತ್ತಾ, ಸ್ವಾವಲಂಬನೆಯ ಬದುಕನ್ನು ಕಲಿಸುವುದು ಒಳಿತು, ಅಂದಾಗ ಮಾತ್ರ ಒಂದು ಮಗು ಮುಂದಿನ ಸಮಾಜದ ಒಳ್ಳೆಯ ಪ್ರಜೆಯಾಗಲು ಸಾಧ್ಯ.ಬಾಲ್ಯವೆಂದರೆ ಹಾಗೆ ಏನೂ ತಿಳಿಯದ ಮುಗ್ಧ ಸ್ಥಿತಿ. ನೆನಪುಗಳು ಅತಿ ಸುಂದರ, ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಅದು ಅವಿಸ್ಮರಣೀಯ ಇತಿಹಾಸವಾಗಿ ಉಳಿದುಬಿಡುತ್ತದೆ. ಹೋದ ಹೋದಂತೆ ಅದು ಮಸುಕಾದರೂ ನಮ್ಮ ಅರಿವಿನ ಸಂಕೋಲೆಗಳಿಂದ ದೂರ ನಡೆಯುವುದಿಲ್ಲ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಆದರೆ ಬರಬರುತ್ತಾ ಇದು ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಯುವವಾಹಿನಿ ಮುಲ್ಕಿ ಘಟಕವು ಅನಾಥ ಆಶ್ರಮದಲ್ಲಿ ಆಚರಿಸಿದ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ತಿಳಿಸಿದರು.
ಅವರು ದಿನಾಂಕ ೧೪. ೧೧. ೨೦೧೮ ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್ .ಕುಕ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್, ಸಿ. ಎಸ್. ಐ ಬಾಲಿಕಾಶ್ರಮದ ಮುಖ್ಯಸ್ಥರಾದ ರೆ.ಶಶಿಕಲಾ ಅಂಚನ್ , ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್. ಕೆ. ಅಂಚನ್ , ಯುವಸಿಂಚನ ಪತ್ರಿಕೆಯ ಸಂಪಾದಕ ರಾಜೇಶ್ ಸುವರ್ಣ ಮುಖ್ಯಅಥಿತಿಯಾಗಿ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಜಯಕುಮಾರ್ ಕುಬೆವೂರು ಆಟೋಟ ಸ್ಪರ್ಧೆ ನಡೆಸಿಕೊಟ್ಟರು.
ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್ .ಕುಕ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ಧನ್ಯವಾದ ನೀಡಿದರು. ರಾಜೀವಿ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.