ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಒಂದಿಷ್ಟು ಮನರಂಜನೆಗೆ, ಒಂದಿಷ್ಟು ಸಂಘಟನೆಗೆ ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ಯುವವಾಹಿನಿ (ರಿ) ಯಡ್ತಾಡಿ ಘಟಕ ಆರಂಭಿಸಿದ ನಮ್ಮ ನಡೆಯ ಎರಡನೇ ಕಾರ್ಯಕ್ರಮ ನಮ್ಮ ನಡೆ, ಕಂಬಳಕಟ್ಟು ಕಡೆ, ಅಧ್ಯಕ್ಷರಾದ ಸತೀಶ ಪೂಜಾರಿಯವರ ಮನೆಯಲ್ಲಿ ದಿನಾಂಕ 21-10-2018 ರಂದು ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ಸದಸ್ಯರು ಭಾಗವಹಿಸದೇ ಇದ್ದರೆ ಯಾವುದೇ ಸಂಘಟನೆಯನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಅದೂ ಅಲ್ಲದೆ ಅದು ವ್ಯರ್ಥ ಕೂಡ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಯುವವಾಹಿನಿ ಪ್ರಾರಂಭಿಸಿದ ಕಾರ್ಯಕ್ರಮ ನಮ್ಮ ನಡೆ. ಸಭೆಗಳನ್ನು ಸದಸ್ಯರ ಕುಟುಂಬದ ಜೊತೆ ನಡೆಸಿ ಒಂದೇ ಕುಟುಂಬದ ಕಲ್ಪನೆಯನ್ನು ಬೆಳೆಯಿಸುವುದು. ಒಂದೊಂದು ಬಾರಿ ಒಂದೊಂದು ವಲಯದಲ್ಲಿ ನಡೆಸಿ ಪ್ರತಿಯೊಬ್ಬರಿಗೂ ಒಂದೆರಡು ಸಭೆಗಳಲ್ಲಾದರೂ ಭಾಗವಹಿಸುವಂತೆ ಮಾಡಿ ಯುವವಾಹಿನಿ ಬಗ್ಗೆ ಅರಿವು ಮೂಡಿಸುವುದು. ಮನೋರಂಜನಾ ಆಟದ ಮೂಲಕ ಮಕ್ಕಳಲ್ಲಿ ಹಾಗೂ ಸದಸ್ಯರಲ್ಲಿ ಹೊಸ ಹುರುಪು ರೂಪಿಸುವುದು. ಆಟದೊಳಗೆ ಕಲೆ, ಸ್ರಜನಶೀಲತೆಗೆ ಒತ್ತು ಕೊಟ್ಟು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡುವುದು. ಆದಷ್ಟು ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಆಯೋಜಿಸಿ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳಾಗಿದ್ದವು. ಅದರೊಂದಿಗೆ ಉಪಯುಕ್ತ ಮಾಹಿತಿಯನ್ನು ಹೊರೆಯಾಗದ ರೂಪದಲ್ಲಿ ಆಟದ ನಡುವೆ ಮಂಡಿಸಿ ಪ್ರತಿಯೊಬ್ಬರಿಗೂ ತಲುಪುವ ಹಾಗೆ ಮಾಡುವ ಪ್ರಯೋಗವನ್ನೂ ಈ ಸಭೆಯಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ ಸದಸ್ಯರು ಸಮಯ ಪರಿಪಾಲನೆಯಲ್ಲಿ ಬೆಳವಣಿಗೆ ತೋರಿಸಿದರು. ಸಭೆಯ ಆರಂಭವನ್ನು ಪರಿಸರದ ಹಿರಿಯ ವ್ಯಕ್ತಿಗಳು ದೀಪ ಬೆಳಗಿಸುವುದರ ಮೂಲಕ ಪ್ರಾರಂಭ ಮಾಡಲಾಯಿತು. ಗುರು ನಾರಾಯಣರ ನೂತನ ಪ್ರಾರ್ಥನೆಯನ್ನು ಮಕ್ಕಳು ಸೊಗಸಾಗಿ ಹಾಡಿದರು. ಅತಿಥಿಗಳಾಗಿ ಬಂದ ಅಲ್ತಾರು ನಾಗರಾಜು ಸರ್ ಹಾಗೂ ಹಿಂದಿನ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ತೊಡಗಿಸಿಕೊಂಡವರನ್ನು ಗೌರವಿಸಲಾಯಿತು. ಹಿಂದಿನ ಕಾರ್ಯಕ್ರಮದಂತೆ ಈ ಸಭೆಯಲ್ಲಿ ಸಹ ಸ್ಪರ್ಧಾತ್ಮಕ ಮನೋರಂಜನೆಗೆ ಆಧ್ಯತೆ ಕೊಡಲಾಗಿತ್ತು. ಸ್ಪರ್ಧೆಗಳಲ್ಲಿ ಮೂಕಾಭಿನಯ, ನಿಮಿಷ ಪೂರ್ತಿ ಮಾತಿನಂತಹ ಆಟಗಳಿಂದ ಮನೋರಂಜನೆಯ ಜೊತೆ ಸ್ರಜನಶೀಲತೆಗೂ ಒತ್ತು ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರೆಲ್ಲರಿಗೂ ವಯಸ್ಸಿನ ಮಿತಿಯಿಲ್ಲದೆ ಸ್ಪರ್ಧಾತ್ಮಕ ಆಟದಲ್ಲಿ ಸಮಾನ ಪ್ರಾಶಸ್ತ್ಯ ನೀಡಲಾಯಿತು. ನಾಲ್ಕು ಸುತ್ತುಗಳ ಸ್ಪರ್ಧೆಯಲ್ಲಿ ಪ್ರತಿ ಸುತ್ತಿನ ಕೊನೆಗೂ ಬಹುಮಾನಗಳನ್ನು ನೀಡಿ ಪ್ರತಿಯೊಬ್ಬರನ್ನು ಕೊನೆಯತನಕ ಆಸಕ್ತರನ್ನಾಗಿ ಮಾಡಲಾಯಿತು.
ಕಾರ್ಯಕ್ರಮದ ನಡುವೆ ಪ್ರಥಮ ಚಿಕಿತ್ಸೆ ಯ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ನರ್ಸಿಂಗ್ ಸೇವೆಯಲ್ಲಿ ನಿರತರಾದ ಅಕ್ಷತಾ ಪೂಜಾರಿಯವರು ಪ್ರಸ್ತುತಪಡಿಸಿದರು. ಹೃದಯಾಘಾತ, ಪಾರ್ಶ್ವವಾಯು, ಹಾವು ಕಡಿತ, ಮೂರ್ಛೆ ರೋಗದ ಸಂದರ್ಭದಲ್ಲಿ ಮಾಡಬೇಕಾಗುವ ಪ್ರಥಮಚಿಕಿತ್ಸೆಯ ಅರಿವನ್ನು ಎಲ್ಲರಿಗೂ ನೀಡಲಾಯಿತು. ಹಾಗೆಯೇ ಉತ್ತಮ ಆಹಾರ, ನಿಯಮಿತ ವ್ಯಾಯಾಮದ ಬಗ್ಗೆಯೂ ಜನರಿಗೆ ತಿಳಿಹೇಳಲಾಯಿತು. ರಕ್ತದೊತ್ತಡ, ಸಿಹಿ ರೋಗವನ್ನು ಹೇಗೆ ಕಾಪಾಡಬೇಕೆಂಬುದರ ಬಗ್ಗೆಯೂ ಮನವರಿಸಲಾಯಿತು. ಸಭಿಕರೆಲ್ಲರೂ ಆಸಕ್ತಿಯಿಂದ ಪಾಲ್ಗೊಂಡು, ತಮ್ಮಲ್ಲಿನ ಸಂಶಯವನ್ನು ಹಲವಾರು ಸೂಕ್ತವಾದ ಪ್ರಶ್ನೆಯಿಂದ ನಿವಾರಿಸಿಕೊಂಡರು.
ಕಾರ್ಯದರ್ಶಿ ಚಂದ್ರ ಪಿ ಯವರು ನೆರೆದ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಲಘು ಉಪಹಾರದೊಂದಿಗೆ ಮುಕ್ತಾಯಗೊಳಿಸಲಾಯಿತು. ಚುಟುಕಾಗಿ ಹೇಳುವುದಾದರೆ ಈ ಕಾರ್ಯಕ್ರಮದಲ್ಲಿ ಮಧ್ಯ ವಯಸ್ಸಿನ ಮಹಿಳೆಯರ ಪಾಲ್ಗೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮನೆಗೆ ತೆರಳುವ ಸಮಯದಲ್ಲಿ ಭಾಗವಹಿಸಿದ ಮಗುವೊಂದು ಅಮ್ಮಾ, ಬರುವ ಸಾರಿ ಈ ಕಾರ್ಯಕ್ರಮ ನಮ್ಮ ಮನೆಯಲ್ಲಿಯೇ ಮಾಡೋಣ ಎಂದು ಸತಾಯಿಸುವುದು ನೋಡಿದಾಗಲೇ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಿತೆಂಬ ವಿಶ್ವಾಸ ದ್ರಡವಾಯಿತು.