ಪಡುಬಿದ್ರಿ : ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರು ಮೂಲ ನಂಬಿಕೆಗಳನ್ನು ತಿಳಿಸುವ ಅನಿವಾರ್ಯತೆಯಿದೆ. ಮೂಲ ನಂಬಿಕೆಗಳು ಮೂಢನಂಬಿಕೆಗಳಾಗದಂತೆ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವೈ.ಎನ್. ಶೆಟ್ಟಿ ಹೇಳಿದರು.
ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 21.09.2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ 90ನೇ ಪುಣ್ಯತಿಥಿಯ ಅಂಗವಾಗಿ ತುಳುನಾಡಿನ ಆಚರಣೆಯಲ್ಲಿ ನಂಬಿಕೆ- ಮೂಢನಂಬಿಕೆಗಳು ಎಂಬ ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಳು ಸಿರಿಚಾವಡಿ ಒಡಿಪು ಅಧ್ಯಕ್ಷರಾದ ಕುದಿ ವಸಂತಶೆಟ್ಟಿ ಮಾತನಾಡಿ ಆಚರಣೆಗಳ ಹಿಂದಿನ ಸತ್ಯದ ನಿಲುವನ್ನು ಮನಗಾಣಬೇಕಾಗಿದೆ. ಆಚರಣೆಯ ಅರ್ಥ ತಿಳಿದು ನಂಬಿಕೆಯಿದ್ದರೆ ಮೂಢನಂಬಿಕೆ ಆಗಲಾರದು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಎ. ಗೋಪಾಲ್ ಅಂಚನ್ ಮಾತನಾಡಿ ಹಲವು ಆಚರಣೆಗಳಲ್ಲಿ ಮಹಿಳೆಯರನ್ನು ಅಮಾನವೀಯತೆಯಿಂದ ನೋಡುವುದು ಮೂಢನಂಬಿಕೆಯೇ ಆಗಿದೆ. ಅಂದಿನ ಆಚರಣೆಗಳ ಮೂಲ ಸ್ವರೂಪ ನಾವು ತಿಳಿಯಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಎಸ್. ವಿ.ಎಸ್ ಪದವಿಪೂರ್ವ ಕಾಲೇಜು ಬಂಟ್ವಾಳದ ಉಪನ್ಯಾಸಕರಾದ ಚೇತನ್ ಮುಂಡಾಜೆ ಮಾತನಾಡಿ ಕೃಷಿ ಸಂಸ್ಕೃತಿ ಆರಾಧನೆಗೆ ಮಹತ್ವ ನೀಡುತ್ತಿದ್ದರೂ ಕಾಲ ಕ್ರಮೇಣ ಆರ್ಥಿಕ ಸ್ಥಿತಿವಂತತೆಯಿಂದ ಆಢಂಬರದ ಆರಾಧನೆಗೆ ಮಹತ್ವ ನೀಡಲಾಗುತ್ತಿದೆ. ದೈವದ ಪರಿಕರಗಳು ಅಂದು ಬಡತನದಿಂದ ಇದ್ದವು ಇಂದು ಸಿರಿತನದ ಬಲಾಢ್ಯತೆಯಿಂದ ಚಿನ್ನ, ಬೆಳ್ಳಿಗಳಾಗಿ ಬದಲಾಗಿದೆ ಎಂದರು.
ಯುವ ಚಿಂತಕ ಸಂಜಯ್ ಪೂಜಾರಿ ಸಾಂತೂರು ಮಾತನಾಡಿ ವೈದಿಕತೆಗಿಂತ ತುಳು ಸಂಸ್ಕೃತಿಯು ಮೇಲು. ಆಚರಣೆಯಲ್ಲಿ ಬದಲಾವಣೆಗಳಾಗುತ್ತಿವೆ ಇದರೊಂದಿಗೆ ವೈದಿಕತೆಗೆ ನಾವೇ ಅವಕಾಶವನ್ನು ನೀಡಿ ಇನ್ನೊಂದೆಡೆ ವಿರೋಧಿಸುತ್ತಿದ್ದೇವೆ ಎಂದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಯಶವಂತ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ ,ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ (ರಿ.) ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ವಹಿಸಿದ್ದರು.
ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ ಪ್ರಸ್ತಾವಿಸಿದರು. ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕಿ ನಿಶ್ಮಿತಾ ಪಿ.ಎಚ್ ಸ್ವಾಗತಿಸಿ, ಕಾರ್ಯಕ್ರಮವನ್ನು ರವಿರಾಜ್ ಕೋಟ್ಯಾನ್ ಮತ್ತು ಶಾಶ್ವತ್ ಪೂಜಾರಿ ನಿರ್ವಹಿಸಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಶೈಲಜ ವಂದಿಸಿದರು.
ಸಮಾರಂಭಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಭಜನೆ, ತುಳಸಿ ಅರ್ಚನೆ ಮತ್ತು ಮಹಾಮಂಗಳಾರತಿ ನಡೆಯಿತು.