ಯಡ್ತಾಡಿ : ಸ್ವಾತಂತ್ರ್ಯ ದಿನದಂದು ಕೇವಲ ಧ್ವಜ ಹಾರಿಸಿ ಸಿಹಿ ತಿಂಡಿ ತಿಂದು ಮನೆಗೆ ಮರಳುವ ಬದಲು, ನಾಲ್ಕು ಜನರಿಗೆ ಉಪಯೋಗವಾಗುವ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡುವುದು, ಯುವವಾಹಿನಿ (ರಿ) ಯಡ್ತಾಡಿ ಘಟಕದ ಪ್ರತಿ ವರುಷದ ಕಾರ್ಯಕ್ರಮ. ಈ ಬಾರಿ ಮಾಡಲೇ ಬೇಕಾದ ಕೆಲಸ ಎಲ್ಲರ ಕಣ್ಣೆದುರೇ ಇದ್ದರೂ, ಯಾರಿಗೂ ಈ ಮೊದಲು ಅನುಕೂಲಕರ ಸಮಯ ಒದಗಿ ಬಂದಿರಲಿಲ್ಲ. ಯಡ್ತಾಡಿಯಿಂದ ಕಂಬಳಗದ್ದೆಗೆ ಹೋಗುವ ಕಾಂಕ್ರೀಟ್ ರೋಡಿನ ಎರಡು ಬದಿಗಳಲ್ಲಿ ಹಬ್ಬಿದ ಗಿಡ ಮರ ಹಾಗು ಕಸ ಕಡ್ಡಿಗಳು, ಅದಾಗಲೇ ಪಾಚಿಯನ್ನು ಬೆಳೆಸಿ, ನಾಲ್ಕೈದು ಜನ ಆಯ ತಪ್ಪಿ ಬಿದ್ದಿದ್ದರು. ಹಾಗಾಗಿ ಯುವವಾಹಿನಿಯಿಂದ ಈ ರಸ್ತೆಯನ್ನು ಮತ್ತೆ ಚೊಕ್ಕವಾಗಿ, ಸುರಕ್ಷವಾಗಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಈ ವರುಷ ನಾಗರಪಂಚಮಿ ಹಾಗೂ ಸ್ವಾತಂತ್ರ್ಯ ದಿನ ಒಂದೇ ದಿನ ಬಂದಿರುವುದರಿಂದ ಸದಸ್ಯರ ಪಾಲ್ಗೊಳ್ಳುವಿಕೆಯೇ ದೊಡ್ಡ ಸಮಸ್ಯೆಯಾಗಿತ್ತು. ಆದರೂ ಕೂಡ ನಿರೀಕ್ಷೆಗೂ ಮೀರಿ ಸರಿ ಸುಮಾರು ಮುವತ್ತು ಮಂದಿ ಈ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಹಿಡಿದ ಕೆಲಸವನ್ನು ಬೇಗನೆ ಪೂರೈಸುವ ಸಲುವಾಗಿ, ನಮ್ಮ ಘಟಕದವರೆ ಆದ ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಕಡೆಯಿಂದ ಗಿಡಗಳನ್ನು ಕತ್ತರಿಸುವ ಕಟಿಂಗ್ ಮಷೀನ್ ತರಿಸಿ ಕೊಟ್ಟರು. ನಾಗರ ಪಂಚಮಿಗೆ ಬಂದ ಅಸಂಖ್ಯಾತ ಮಂದಿ ಯುವವಾಹಿನಿ ಸದಸ್ಯರ ಕೆಲಸವನ್ನು ಮನಸಾರೆ ಮೆಚ್ಚಿ ಹೊಗಳಿಕೆಯ ಉತ್ಸಾಹವನ್ನು ನೀಡಿದರು. ರಸ್ತೆಯನ್ನು ಸ್ವಚ್ಛಗೊಳಿಸಿ ಎರಡೂ ಬದಿಗಳಿಗೆ ಜಾರದಂತೆ ಸುಣ್ಣವನ್ನು ಹಾಕಿದಾಗ ಅದು ಹೊಸ ರೂಪವನ್ನೇ ಪಡೆದುಕೊಂಡಿತ್ತು.
ರಸ್ತೆ ಕೆಲಸ ಪೂರ್ಣಗೊಂಡ ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕರೆಸಿ, ನಮ್ಮ ಕೆಲಸದ ವಿವರ ನೀಡಿ, ಮುಂದೆ ಮಾಡಬೇಕಿರುವ ಕೆಲಸದ ಮನವರಿಕೆ ಮಾಡಲಾಯಿತು. ನಮ್ಮ ಕೆಲಸದಿಂದ ಸಂತೃಪ್ತಿ ಹೊಂದಿದ ಅಧ್ಯಕ್ಷರು ಪಂಚಾಯತ್ ಕಡೆಯಿಂದ ರಸ್ತೆಯ ಎರಡು ಬದಿಗು ಮಣ್ಣು ತುಂಬಿಸುವ ಭರವಸೆ ನೀಡಿದರು. ಯುವವಾಹಿನಿಯ ಸಮಾವೇಶದಲ್ಲಿ ಮಾನ್ಯ ಸಚಿವರೊಬ್ಬರು ಹೇಳಿದಂತೆ, ಸರಕಾರ ಮಾಡಬೇಕಿರುವ ಕೆಲಸ ಕಾರ್ಯಗಳನ್ನು ಮಾಡುವ ಸಂಘ ಸಂಸ್ಥೆಗಳು, ಸರಕಾರದ ಸವಲತ್ತುಗಳನ್ನು ಕೇಳಿ ಪಡೆಯುವ ಕೆಲಸ ಕೂಡಾ ಮಾಡಬೇಕಿದೆ.
ರಸ್ತೆಯ ಕೆಲಸ ಮುಗಿದ ನಂತರ ಸ್ವಚ್ಛತಾ ತಂಡ ಅನಾಥವಾಗಿರುವ ರುದ್ರಭೂಮಿಯತ್ತ ನಡೆಯಿತು. ಅಲ್ಲಿಯೂ ಒಂದು ಘಂಟೆಯ ಕಾಲ ಎಲ್ಲರೂ ಸೇರಿ, ಸಾಧ್ಯವಾದಷ್ಟು ಸ್ವಚ್ಛತೆ ನಡೆಸಿ, ರುದ್ರಭೂಮಿಗೆ ಹೊಸ ರೂಪ ನೀಡಲಾಯಿತು.
ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ, ಪಾಲ್ಗೊಂಡ ಎಲ್ಲ ಸದಸ್ಯರಿಗೂ ಪ್ರಕೃತಿಯ ಮಡಿಲಲ್ಲಿ ಊಟದ ವ್ಯವಸ್ಥೆ ಮಾಡಿ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನೂ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷರಾದ ಸತೀಶ್ ಕುಮಾರ್ ಸ್ವಾಗತಿಸಿದರು , ಕಾರ್ಯದರ್ಶಿ ಚಂದ್ರ ಯಡ್ತಾಡಿ ವಂದಿಸಿದರು ,
ಸಮಾಜದ ಋಣ ಸಂದಾಯದ ಕೆಲಸ ,ಉತ್ತಮ ಪರಿಸರ, ಆರೋಗ್ಯಕರ ವಾತಾವರಣ ನಿರ್ಮಾಣ ಹಾಗೂ ಸ್ವಚ್ಚತಾ ಜಾಗ್ರತಿ ಮೂಡಿಸುವಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ ಅಭಿನಂದನೆಗಳು….
ಧನ್ಯವಾದಗಳು ಸರ್