ಮೂಲ್ಕಿ: ತುಳುನಾಡಿನ ಸಂಸ್ಕೃತಿ ಪರಂಪರೆ ನಮ್ಮ ಧ್ಯೇಯವಾಗಬೇಕು, ಮುಂದಿನ ಪೀಳಿಗೆಗೆ ಹಿಂದಿನ ಸಾಂಸ್ಕೃತಿಕತೆಯನ್ನು ತಿಳಿ ಹೇಳುವ ಕೆಲಸ ಇಂದು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ, ಮೂಲ್ಕಿ ಯುವವಾಹಿನಿಯಂತಹ ಸಂಸ್ಥೆಗಳಿಂದ ಯುವ ಪೀಳಿಗೆಯನ್ನು ಸಂಘಟನಾ ಶಕ್ತಿಯನ್ನು ತೋರಿಸಿರುವುದು ಸಮಾಜ ಗುರುತಿಸಿದೆ ಎಂದು ಕರ್ನಾಟಕ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿ ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಹದಿನಾರನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೇದಿಕೆಯಲ್ಲಿ ತರಕಾರಿ, ತೆಂಗಿನಕಾಯಿ ಹಚ್ಚಿ ವಿಶಿಷ್ಠವಾಗಿ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಯುವವಾಹಿನಿ ಘಟಕದ ಆಧ್ಯಕ್ಷೆ ಕುಶಲಾ ಎಸ್. ಕುಕ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.
ಹಿರಿಯ ಕೃಷಿಕ ತಿಮ್ಮಪ್ಪ ಆಮೀನ್ ನಾನಿಲ್ ಹಳೆಯಂಗಡಿ ಆವರನ್ನು ವಿಶೇಷವಾಗಿ ಆಟಿದ ತಮ್ಮನದಲ್ಲಿ ಸನ್ಮಾನಿಸಲಾಯಿತು..
ಸಾಹಿತಿ ಪ್ರಮಿಳಾ ದೀಪರ್ಕ ಪೆರ್ಮುದೆ ಆವರು ಆಟಿದ ಮದಿಪು ವಿಷಯದಲ್ಲಿ ಮಾತನಾಡಿ, ಕಷ್ಟದ ದಿನಗಳು ಎಂದು ಹೇಳುವ ಮೊದಲು ಹಿರಿಯರು ಯಾಕಾಗಿ ಆಷಾಢ ಮಾಸದಲ್ಲಿ ಇಂತಹ ದಿನ ಎಂದು ಹೇಳುವುದನ್ನು ಆರ್ಥೈಸಿಕೊಳ್ಳಬೇಕು, ಮಹಿಳೆಗೆ ಮನೆಯನ್ನು ಹಾಗೂ ಸಮಾಜವನ್ನು ತಿದ್ದುವ ಸಾಮರ್ಥ್ಯ ಇದೆ ಎನ್ನುವುದನ್ನು ಮಹಿಳೆಯರು ಸಾಧಿಸಿ ತೋರಿಸಬೇಕಾಗಿದೆ. ನಮ್ಮಲ್ಲಿನ ಪಾಶ್ಚಾಥ್ಯ ಸಂಸ್ಕೃತಿಯನ್ನು ದೂರಮಾಡಬೇಕು ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಕಿನ್ನಿಗೋಳಿ ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಶುಭ ಹಾರೈಸಿದರು.
ದಗಲ್ಬಾಜಿ ಸಿನಿಮಾದ ನಿರ್ದೇಶಕ ಸೂರಜ್ ಬೋಳೂರು, ಕಲಾವಿದರಾದ ವಿಸ್ಮಯ ವಿನಾಯಕ್, ರೆಹಮಾನ್ ಉಡುಪಿ, ಸಿನಿಮಾ ನಿರ್ದೇಶಕರಾದ ಸಂದೀಪ್ ಪಣಿಯೂರ್, ಕ್ಯಾಮರಾಮ್ಯಾನ್ ಅರುಣ್ ಕನ್ಯಾನ, ನೃತ್ಯ ನಿರ್ದೇಶಕಿ ಬಬಿತಾ ನರೇಶ್ ಕಿನ್ನಿಗೋಳಿ ಇವರು ವಿಶೇಷವಾಗಿ ಭಾಗವಹಿಸಿದ್ದರು.
ಮೂಲ್ಕಿಯ ರಜತ್ ಸಸಿಹಿತ್ಲು ಅವರ ನೇತೃತ್ವದ ಎಕ್ಸ್‌ಟ್ರೀಮ್ ಡ್ಯಾನ್ಸ್ ಅಕಾಡೆಮಿ ಮೂಲ್ಕಿಯ ನೇತೃತ್ವದಲ್ಲಿ ವಿಶೇಷ ನೃತ್ಯ ಸಂಯೋಜನೆ ನಡೆಯಿತು, ಸದಸ್ಯ ವಿನಯ್‌ಕುಮಾರ್ ಕೊಲ್ಲೂರು ಪದವು ಹಾಗೂ ನಿವೃತ್ತ ಶಿಕ್ಷಕಿ ಪೌಸ್ಟಿನ್ ಅವರು ಆಟಿದ ಗೀತೆಯನ್ನು ಹಾಡಿ ರಂಜಿಸಿದರು.
ವೇದಿಕೆಯಲ್ಲಿ ನಿರ್ದೇಶಕರಾದ ರಾಜೇಶ್ವರೀ ನಿತ್ಯಾನಂದ, ಭಾಸ್ಕರ ಕೋಟ್ಯಾನ್ ಕೊಕ್ರಾಣಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್ ಪ್ರಸ್ತಾವನೆಗೈದರು, ರಾಜೀವಿ ವಿಶ್ವನಾಥ್ ಪರಿಚಯಿಸಿದರು. ಉದಯ ಅಮೀನ್ ಮಟ್ಟು ಮತ್ತು ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ವಂದಿಸಿದರು.
ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ 1700 ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.