ವಿದ್ಯೆಯು ಮಗುವಿಗೆ ಜ್ಞಾನ ಸಂಪಾದನೆಯ ಜೊತೆಗೆ ಬದುಕುವ ಕಲೆಯನ್ನು ಕಲಿಸುವ ಕಲೆಯಾಗಬೇಕು. ಅದೇ ರೀತಿ ಇಂದು ಮಕ್ಕಳಿಗೆ ಮೌಲ್ಯ ಶಿಕ್ಷಣದ ಅನಿವಾರ್ಯವಿದೆ. ಇದರ ಜೊತೆಗೆ ಕಲಿತ ಶಾಲೆ, ಶಿಕ್ಷಕರು, ತಾಯಿನಾಡಿನ ಬಗೆಗೆ ಗೌರವಾದರಣೆಯನ್ನು ಹೊಂದಬೇಕಾಗಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಪದ್ಮನಾಭ ಮರೋಳಿ ಹೇಳಿದರು.
ಅವರು ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಪಡುಬಿದ್ರಿ ಇಲ್ಲಿ ನಡೆದ ಮಕ್ಕಳ ಹಬ್ಬ-2016 ಮತ್ತು ಕಲಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭವನ್ನು ನಿವೃತ್ತ ಶಿಕ್ಷಕ ಸೋಮನಾಥ ಪೂಜಾರಿ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿನಿ ಕುಮಾರಿ ಭಾಗ್ಯಶ್ರೀಗೆ ’ಕಲಾಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ವೀರೇಂದ್ರ ಎನ್. ವಹಿಸಿದ್ದರು. ಈ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷ ಯಶವಂತ ಪೂಜಾರಿ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಅಡ್ವೆ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕೆ. ಬಿಜೈ, ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಸರಸ್ವತಿ, ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಭಾಗ್ಯಶ್ರೀ, ಕಾರ್ಯಕ್ರಮ ಸಂಚಾಲಕ ದೀಪಕ್ ಕೆ. ಬೀರ ವೇದಿಕೆಯಲ್ಲಿದ್ದರು.
ಘಟಕದ ಕಾರ್ಯದರ್ಶಿ ಯಶೋಧ ಸ್ವಾಗತಿಸಿ, ರವಿರಾಜ್ ಎನ್. ಕೋಟ್ಯಾನ್ ವಂದಿಸಿ, ಚೈತ್ರ ಮತ್ತು ಸುಶ್ಮಾ ಕಾರ್ಯಕ್ರಮ ನಿರೂಪಿಸಿದರು.