ಪುತ್ತೂರು: ವಿಜಯ ಕರ್ನಾಟಕ ದಿನ ಪತ್ರಿಕೆ ಮತ್ತು ಪುತ್ತೂರು ಯುವವಾಹಿನಿ (ರಿ.) ಇವರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ – ಸಂವಾದ ಕಾರ್ಯಕ್ರಮ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿಜಯೀಭವ ಹೆಸರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ರಾಜ್ಯದಾದ್ಯಂತ ಇಂಥ ಕಾರ್ಯಕ್ರಮ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿತ್ತು. ಯುವವಾಹಿನಿ ಪುತ್ತೂರು ಘಟಕವು ಪೂರ್ಣ ಸಹಯೋಗ ನೀಡುವ ಮೂಲಕ ಕಾರ್ಯುಕ್ರಮದಲ್ಲಿ ಸಂಪೂರ್ಣ ಪಾಲು ಪಡೆಯಿತು.
ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಯುವವಾಹಿನಿಯ ಧ್ಯೇಯವಾಕ್ಯಕ್ಕೆ ಒಪ್ಪುವ ಪರಿಕಲ್ಪನೆ ಇದಾಗಿರುವ ಕಾರಣ ವಿಜಯ ಕರ್ನಾಟಕದ ಉಪಕ್ರಮಕ್ಕೆ ಯುವವಾಹಿನಿ ಘಟಕ ಸಂಪೂರ್ಣ ಸಹಕಾರದೊಂದಿಗೆ ಸಹಯೋಗ ನೀಡಿತು. ಕಾರ್ಯಕ್ರಮದಲ್ಲಿ ಪುತ್ತೂರು ಪರಿಸರದ 12 ಸರಕಾರಿ ಮತ್ತು ಖಾಸಗಿ ಶಾಲೆಗಳ ಸುಮಾರು ಸಾವಿರದ ಇನ್ನೂರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಶಾಲಾ ಶಿಕ್ಷಕರೊಂದಿಗೆ ಭಾಗವಹಿಸಿ ಒತ್ತಡ ರಹಿತರಾಗಿ ಪರೀಕ್ಷೆ ಎದುರಿಸುವ ಬಗ್ಗೆ ಪರಿಣಾಮಕಾರಿ ಮಾಹಿತಿ ಪಡೆದುಕೊಂಡರು. ಜೆಸಿ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಅವರು ಅರ್ಧ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿಕೊಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಸಂತ ಫಿಲೋಮಿನಾ ಪ್ರೌಢಶಾಲೆ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪುತ್ತೂರು ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರತೀ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟ. ಅದನ್ನು ಆತ್ಮವಿಶ್ವಾಸದಿಂದ ದಾಟಬೇಕು. ಪರೀಕ್ಷೆ ಭಯ ಇರುವುದು ಸಾಮಾನ್ಯವಾದರೂ ಸೂಕ್ತ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕರೆ ಈ ಭಯ ಮೆಟ್ಟಿ ನಿಂತು ಸಾಧನೆ ಮಾಡಲು ಸಾಧ್ಯ ಎಂದವರು ನುಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೂ ಇಂಥ ಶಿಬಿರಗಳ ಆಯೋಜನೆಯಾಗಬೇಕು. ತಾಲೂಕಿನ ಎಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಆಗುವ ನಿಟ್ಟಿನಲ್ಲಿ ಶಿಬಿರ ಪ್ರೇರಣೆ ನೀಡಲಿ ಎಂದು ಹೇಳಿದ ಶಕುಂತಳಾ ಶೆಟ್ಟಿ, ಅಧಿಕ ಅಂಕ ಗಳಿಸುವುದು ಅಗತ್ಯ ನಿಜ. ಹಾಗೆಂದು ಕಡಿಮೆ ಅಂಕ ಗಳಿಸಿದ ಮಾತ್ರಕ್ಕೆ ಹತಾಶರಾಗಬೇಡಿ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಧೈರ್ಯ ಮೂಡಿಸುವ ಕೆಲಸ ಮಾಡಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಮಾತನಾಡಿ, ಹಿಂದೆ ನಾವು ಪರೀಕ್ಷೆಗೆ ಹೋಗುವ ಕಾಲದಲ್ಲಿ ಆಲ್ ದಿ ಬೆಸ್ಟ್ ಹೇಳಿ ಎಂದು ನಾವೇ ಹೇಳಬೇಕಾಗಿತ್ತು. ಶುಭ ಹಾರೈಸುವವರು ವಿರಳವಾಗಿದ್ದರು. ಈಗ ಹಾಗಿಲ್ಲ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಹಲವರು ಮುಂದೆ ಬರುತ್ತಾರೆ. ವಿಜಯೀಭವ ಅಂದರೆ ಆಲ್ ದಿ ಬೆಸ್ಟ್ ಎಂದೇ ಅರ್ಥ. ಇದು ಉತ್ತೇಜನಕಾರಿಯಾಗಿದೆ ಎಂದರು.
ಮುಖ್ಯ ಅತಿಥಿ, ಯುವವಾಹಿನಿ(ರಿ.) ಪುತ್ತೂರು ಘಟಕದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಹತ್ತಾರು ಕಾರ್ಯಕ್ರಮಗಳನ್ನು ಯುವವಾಹಿನಿ ನಡೆಸುತ್ತಾ ಬಂದಿದೆ. ಇದೇ ಆಶಯದ ಕಾರ್ಯಕ್ರಮ ವಿಜಯ ಕರ್ನಾಟಕ ನಡೆಸಿದ್ದು ನಾವು ಸಂತೋಷದಿಂದಲೇ ಇದರೊಂದಿಗೆ ಸೇರಿಕೊಂಡೆವು ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ, ಪುತ್ತೂರು ರೋಟರಿ ಪೂರ್ವ ಇದರ ಅಧ್ಯಕ್ಷರೂ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರೂ ಆದ ಜಯಂತ ನಡುಬೈಲು ಮಾತನಾಡಿ, ಇದೊಂದು ಮೌಲ್ಯವರ್ಧನೆಯ ಕಾರ್ಯಕ್ರಮ. ಇಂಥ ಕಾರ್ಯಕ್ರಮ ಹಳ್ಳಿ ಹಳ್ಳಿಯಲ್ಲೂ ನಡೆಯಬೇಕು ಎಂದರು.
ಮಾದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಆಲ್ಫ್ರೆಡ್ ಜೆ.ಪಿಂಟೊ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಟಿವಿ, ಮೊಬೈಲ್ ಮುಂತಾದ ಆಧುನಿಕ ಸಾಧನಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ತರುವ ಇಂದಿನ ದಿನಗಳಲ್ಲಿ ಇಂಥ ಕಾರ್ಯಕ್ರಮ ನಿಜಕ್ಕೂ ಪರಿಣಾಮಕಾರಿ ಎಂದರು.
ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಪೂರಕವಾಗಿ ವಿಜಯ ಕರ್ನಾಟಕ ಸ್ಪಂದಿಸುತ್ತಿದೆ. ತನ್ನ ಸಂಚಿಕೆಗಳ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆಗೆ ನೆರವಾಗುತ್ತಿದೆ. ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗ ಮಾರ್ಗದರ್ಶಿಯಾಗಿ ಪತ್ರಿಕೆ ಜನರೊಂದಿಗೆ ಸಾಗುತ್ತಿದೆ. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಯಶಸ್ವಿಯಾಗಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ವಿಜಯ ಕರ್ನಾಟಕ ಪತ್ರಿಕೆಯ ಆರ್‌ಎಂಡಿ ವಿಭಾಗದ ಸೀನಿಯರ್ ಮ್ಯಾನೇಜರ್ ನಾರಾಯಣ್ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಓಸ್ವಾಲ್ಡ್ ರೋಡ್ರಿಗಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಿಕ್ಷಣ ಸಂಯೋಜಕ ಲೋಕಾನಂದ, ಯುವವಾಹಿನಿ ಪುತ್ತೂರು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯ ಕರ್ನಾಟಕ ಮುಖ್ಯ ಉಪ ಸಂಪಾದಕ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ವಿಜಯ ಕರ್ನಾಟಕ ಪುತ್ತೂರು ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜೇಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ ನೀಡಿ ಸಂವಾದ ನಡೆಸಿದರು. ಪರೀಕ್ಷೆಯನ್ನು ಗೆಲ್ಲುವ ಸುಲಭ ಉಪಾಯಗಳು ಮತ್ತು ಒತ್ತಡ ರಹಿತವಾಗಿ ಪರೀಕ್ಷೆ ಎದುರಿಸುವ ಬಗ್ಗೆ ಅವರು ಮಾರ್ಗದರ್ಶನ ನೀಡಿದರಲ್ಲದೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಶಾಲ ಸಭಾ ಭವನವದಲ್ಲಿ ಸಾವಿರದ ಇನ್ನೂರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೆರೆದಿದ್ದು, ಭರ್ಜರಿ 4 ಗಂಟೆಗಳ ಸುದೀರ್ಘ ಕಾರ್ಯಕ್ರಮವದಾಗಿತ್ತು. ವಿಶೇಷವೆಂದರೆ ಒಬ್ಬನೇ ಒಬ್ಬ ವಿದ್ಯಾರ್ಥಿ ಅಷ್ಟೂ ಹೊತ್ತಿನಲ್ಲಿ ಒಂದಿಂಚೂ ಕದಲದೆ ತದೇಕಚಿತ್ತದಿಂದ ಇಡೀ ಕಾರ್ಯಕ್ರಮ ಆಲಿಸಿ ಥ್ರಿಲ್ ಆದರು.
ಪೂರ್ವಾಹ್ನ ಸಭಾಭವನಕ್ಕೆ ಬರುವಾಗ ಯಾವ ಉತ್ಸಾಹದಲ್ಲಿ ವಿದ್ಯಾರ್ಥಿಗಳು ನಳನಳಿಸುತ್ತಿದ್ದರೋ, ಮಧ್ಯಾಹ್ನ ಒಂದೂವರೆಯಾದಾಗ ಅವರ ಉತ್ಸಾಹ ಕುಗ್ಗುವ ಬದಲು ೧೦ ಪಟ್ಟು ಮಿಗಿಲಾಗಿ ಮಿಂಚುತ್ತಿತ್ತು. ಅಷ್ಟೂ ಹೊತ್ತು ವಿದ್ಯಾರ್ಥಿ ಸಮೂಹವನ್ನೇ ಮಾತಿನ ಮೋಡಿಯಿಂದ ಕೇಂದ್ರೀಕರಿಸಿಕೊಂಡರು ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರತೀ ವಿಷಯಗಳ ಆಳ ಹರವನ್ನು ಅತ್ಯಂತ ಸರಳ ಭಾಷೆಯಲ್ಲಿ ವಿವರಿಸುತ್ತಾ, ಪ್ರತೀ ವಿಷಯಗಳಲ್ಲಿ ಯಾವ ಮಾದರಿಯ ಪ್ರಶ್ನೆಗಳು ಪ್ರತ್ಯಕ್ಷವಾಗುತ್ತವೆ, ಅವುಗಳನ್ನು ಹೇಗೆ ಸುಲಭವಾಗಿ ಬಿಡಿಸಬಹುದು, ಓದುವಿಕೆಗೆ ಅನುಸರಿಸಬಹುದಾದ ಸುಲಭ ವಿಧಾನಗಳು ಯಾವುವು? ಯಾವ ವಿಧಾನಗಳನ್ನು ಅನುಸರಿಸಬಾರದು, ಪರೀಕ್ಷೆಯ ಸಂದರ್ಭ ಎದುರಾಗುವ ಮಾನಸಿಕ ಒತ್ತಡವನ್ನು ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ರಾಜೇಂದ್ರ ಭಟ್ ಒಂದೊಂದಾಗಿ ವಿವರಿಸಿದರು.