(ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜಯಂತಿಯ ಸಂದರ್ಭದಲ್ಲಿ ಸಕಾಲಿಕವಾಗಿ ಈ ಲೇಖನ)
ಮನುಕುಲದ ಉದ್ಧಾರಕ್ಕಾಗಿ ಜಗತ್ತಿನಲ್ಲಿ ಅನೇಕ ಸಂತರು, ಮಹಾಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಅವತರಿಸಿ ತಮ್ಮ ತಪಸ್ಸು, ಚಿಂತನೆ, ಸಾಧನೆಗಳ ಪ್ರಭಾವದಿಂದ ಜನರಲ್ಲಿ ಜಡ್ಡುಗಟ್ಟಿದ್ದ ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರು. ವೇದ ಉಪನಿಷತ್ತುಗಳ ತವರೂರಾದ ನಮ್ಮ ಭಾರತ ದೇಶದಲ್ಲಿಯೂ ಬುದ್ಧ, ಶಂಕರ, ಚೈತನ್ಯ, ಮಾಧವ, ರಾಮಾನುಜ, ಜಿನ, ಬಸವಣ್ಣ ಮೊದಲಾದ ಮತ ಸ್ಥಾಪಕರೂ ನಾಮದೇವ, ಜ್ಞಾನದೇವ, ತುಕಾರಾಮ, ಕಬೀರ, ಪುರಂದರದಾಸ, ಕನಕದಾಸ ಮೊದಲಾದ ಸಾಧುಸಂತರೂ ಅವರವರ ಕಾಲದಲ್ಲಿ ಕರ್ಮ, ಭಕ್ತಿ, ಜ್ಞಾನ ಮಾರ್ಗಗಳನ್ನು ಪ್ರಚಾರಗೊಳಿಸಿ ಸನಾತನ ಧರ್ಮದ ಮೂಲ ತತ್ವಗಳಾದ ಅಹಿಂಸೆ, ಸತ್ಯ, ದಯೆ, ಸದಾಚಾರಗಳನ್ನು ತಾವು ಅನುಷ್ಠಾನ ಮಾಡಿಕೊಂಡು ಜನರಿಗೆ ಬೋಧಿಸಿದರು. ಈ ರೀತಿಯಾಗಿ ಸಮಾಜದಲ್ಲಿ ಶಾಂತಿ ಸಂಯಮಗಳನ್ನು ಸ್ಥಾಪಿಸಿದರು.
ಲೋಕದ ಸತ್ಯವನ್ನು ಮಾನವತಾವಾದದ ಬೆಳಕಿನಲ್ಲಿ ಕಂಡುಕೊಳ್ಳಲು ಯತ್ನಿಸಿದ; ವಿಶ್ವಮಾನವತ್ವ, ವಿಶ್ವ ಸಹೋದರತ್ವ, ಸಮಾನತ್ವದ ನೆಲೆಯಲ್ಲಿ ಬೋಧಿಸಿದ ಅಗ್ರಗಣ್ಯರಲ್ಲಿ ಸುಮಾರು ೨೫೦೦ ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಜೀವಿಸಿದ್ದ ಗೌತಮ ಬುದ್ಧ, ೧೨ನೇ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ಜೀವಿಸಿದ್ದ ಕ್ರಾಂತಿಯೋಗಿ ಬಸವಣ್ಣ, ೧೯ನೇ ಶತಮಾನದಲ್ಲಿ ದಕ್ಷಿಣ ಭಾರತದ ಕೇರಳದಲ್ಲಿ ಬದುಕಿ ಬಾಳಿದ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಮುಖರು. ’ಅಹಿಂಸೋ ಪರಮೋ ಧರ್ಮಃ’ ಎಂದು ಜಗತ್ತಿಗೆ ಸಂದೇಶ ನೀಡಿದ ನಮ್ಮ ದೇಶದಲ್ಲಿಯೇ ಜಾತಿ, ಧರ್ಮ, ಭಾಷೆ, ಗಡಿಗಳ ಸಂಬಂಧವಾಗಿ ದ್ವೇಷ, ಅಸೂಯೆಗಳಿಂದ ಜನ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ; ಧರ್ಮದ ಹೆಸರಿನಲ್ಲಿ ವಿಶ್ವದಲ್ಲಿ ಇಂದು ನಡೆಯುತ್ತಿರುವ ಭಯೋತ್ಪಾದನೆ ಹಾಗೂ ಹಿಂಸಾಚಾರದಿಂದ ಮಾನವ ಧರ್ಮಕ್ಕೆ ಹಾನಿಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಬುದ್ಧ, ಬಸವ, ನಾರಾಯಣ ಗುರುಗಳಂತಹ ದಾರ್ಶನಿಕರ ಬೋಧನೆಗಳು, ಸಂದೇಶಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು.
ಭಗವಾನ್ ಬುದ್ಧ:
ಧರ್ಮ ಎನ್ನುವುದು ಜೀವನದ ಸತ್ಯಸಂಗತಿಗಳಿಗೆ ಸಂಬಂಧಿಸಿದ್ದಿರಬೇಕು. ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವಗಳಿಗಲ್ಲ. ಅಥವಾ ಆತ್ಮ ಮತ್ತು ಸ್ವರ್ಗಗಳ ಬಗೆಗೂ ಅಲ್ಲ. ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಿಲ್ಲ ಎಂಬುದು ಗೌತಮ ಬುದ್ಧನ ಚಿಂತನೆ, ಲೌಖಿಕ ಕಷ್ಟ, ಕಾರ್ಪಣ್ಯಗಳಿಂದ ದೂರವಿರಿಸಿ ಮಗನನ್ನು ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡಬೇಕೆಂಬ ತಂದೆ ಶುದ್ಧೋದನನ ಇಚ್ಛೆಗೆ ವ್ಯಕ್ತಿರಿಕ್ತವಾಗಿ ಲೋಕದ ದುಃಖ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ಸನ್ಯಾಸಿಯಾದ. ಮಾನವತೆಗಾಗಿ ಹೃದಯ ಮಿಡಿದಾಗ ಅರಮನೆಯಲ್ಲಿ ಸುಖಭೋಗದಲ್ಲಿದ್ದ ಸಿದ್ಧಾರ್ಥ ಗೌತಮ ಬುದ್ಧನಾದ. ಮನೆ, ಮಠ, ಸಂಸಾರ, ಸಾಮ್ರಾಜ್ಯಗಳ ಸುಖವನ್ನು ಬದಿಗೊತ್ತಿ ಕಾಡಿಗೆ ನಡೆದ. ದೇವರು ಧರ್ಮದ ಕಟ್ಟುಪಾಡುಗಳಿಂದ ಸಂಕುಚಿತಗೊಂಡು ಕಂದಾಚಾರದಲ್ಲಿ ಮುಳುಗಿ ಹೋಗಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಸತ್ಯ ಅನ್ವೇಷಿಸಿದಾಗ ಕಂಡದ್ದು ಸಾವು, ನೋವು, ವೃದ್ಧಾಪ್ಯ ಮತ್ತು ಅಂತಃಕಲಹ. ಇಂತಹ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಮಾರ್ಗ ಹುಡುಕುತ್ತಾ ದೇಹ ದಂಡಿಸಿ ತಪಸ್ಸು ಮಾಡಿದ. ದೇಹದಂಡನೆಯಿಂದ ಸಮಸ್ಯೆ ನಿವಾರಣೆ ಅಸಾಧ್ಯ ಎಂದು ಅರಿತು ಮಾರ್ಗ ಬದಲಿಸಿದ.
ನೈತಿಕತೆ ಎನ್ನುವುದು ಜೀವನದ ಆದರ್ಶವಾಗಿದ್ದರೆ ಸಾಲದು, ಅದು ಜೀವನದ ನಿಯಮ ಮತ್ತು ಕಾನೂನು ಕೂಡ ಆಗಬೇಕು. ಎಂದ ಬುದ್ಧನ ಮಾತಿನಲ್ಲಿ ನಿಖರತೆ ಮತ್ತು ಎಲ್ಲವನ್ನೂ ವರ್ತಮಾನದಲ್ಲೇ ನಿಂತು ನೋಡುವ ದೃಷ್ಟಿಯಿದೆ. ಅದೇ ರೀತಿ ಧರ್ಮದ ಹೆಸರಿನಲ್ಲಿ ಜನರಲ್ಲಿರುವ ಮೂಢನಂಬಿಕೆ, ಕಟ್ಟುಪಾಡುಗಳ ಬಗ್ಗೆ ತಿರಸ್ಕಾರವಿದೆ. ಹಾಗೆಯೇ ಲಜ್ಜೆ ಎಂಬುದು ಆಭರಣ, ಬೆಲೆಬಾಳುವ ವಸ್ತುವೂ ಹೌದು; ಅದು ಭ್ರಷ್ಟ ಮನಸ್ಸಿಗೆ ಅಂಕುಶವೂ ಆಗಬಲ್ಲುದು. ಆದ್ದರಿಂದ ಲಜ್ಜೆ ಎಂಬುದು ಬೇಕು. ಯಾರು ನಿರ್ಲಜ್ಜರಾಗಿರುವರೋ ಅವರು ಹಿತಾಹಿತ ವಿವೇಕ ಶೂನ್ಯರೂ, ಪಶು ಸಮಾನರೂ ಆಗಿರುವರು ಎಂಬುದು ಬುದ್ಧನ ಅಭಿಪ್ರಾಯ.
ಜಗತ್ತಿಗೆ ಮಾನವತೆಯ ಬೆಳಕನ್ನು ತೋರಿದವನು ಗೌತಮ ಬುದ್ಧ. ಮನುಷ್ಯರಿಗೆ ಮಾನವೀಯತೆಯ ಪಾಠ ಹೇಳಿದ ಮೊದಲ ಶಿಕ್ಷಕ ಅವನು. ಪ್ರಜಾಸತ್ತೆಯ ಬಗ್ಗೆ ಮೊದಲು ಉಲ್ಲೇಖಿಸಿದವನೂ ಅವನೇ. ವ್ಯಕ್ತಿ ಹಾಗೂ ಸಮಾಜಕ್ಕೆ ನೈತಿಕ ನೆಲೆಗಟ್ಟು ಅತ್ಯಂತ ಮುಖ್ಯ ಎಂಬುದನ್ನು ಪ್ರತಿಪಾದಿಸಿದ್ದಲ್ಲದೆ ಅತ್ಯಂತ ಆದರ್ಶವಾಗಿ ಬದುಕಿದವನು. ಜತೆಗೆ ರಾಷ್ಟ್ರ, ಸಂಘ ಹಾಗೂ ವ್ಯಕ್ತಿಯಲ್ಲಿ ನೈತಿಕತೆ ನಾಶವಾದರೆ ಬರ್ಬರತೆ ವ್ಯಾಪಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದವನು. ಮಾನವೀಯತೆಯನ್ನು ಪ್ರತಿಪಾದಿಸಿ ಮನುಷ್ಯರ ಉನ್ನತಿಗೆ ಶ್ರಮಿಸಿದವರಲ್ಲಿ ಅಗ್ರಗಣ್ಯ. ’ಹಸಿದವರಿಗೆ ಭೋದನೆಯನ್ನು ಮಾಡುವುದಿಲ್ಲ’ ಎಂದಿರುವ ಬುದ್ಧ ಹಸಿವಿನ ಬಾಧೆಯನ್ನು ಮಾರ್ಮಿಕವಾಗಿ ತಿಳಿಸುತ್ತಾನೆ. ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವುದಿಲ್ಲ ಎಂದಿರುವ ಬುದ್ಧನ ಸಂದೇಶಗಳು ದ್ವೇಷದಿಂದ ತತ್ತರಿಸಿರುವ ಇಂದಿನ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಬಲ್ಲವು. ಅಹಿಂಸೆಯನ್ನು ಬೋಧಿಸಿದ ಮಣ್ಣಲ್ಲೇ ರಕ್ತಪಾತವಾಗುತ್ತಿರುವ ವರ್ತಮಾನದ ಭಾರತಕ್ಕೆ ಅರಿವಿನ ಬೆಳಕು ನೀಡಬಲ್ಲವು.
ಕ್ರಾಂತಿಯೋಗಿ ಬಸವಣ್ಣ:
ವಿಶ್ವಮಾನವತ್ವ, ಸಮಾನತ್ವ ತತ್ವಗಳ ಮೂಲಕ ೧೨ನೇ ಶತಮಾನದಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ತಾರತಮ್ಯವನ್ನು ಹೊಡೆದೊಡಿಸಿದ ಕೀರ್ತಿ ಮಹಾಮಾನವತಾವಾದಿ ಬಸವಣ್ಣನವರಿಗೆ ಸಲ್ಲುತ್ತದೆ. ಅಂದಿನ ಕಾಲದಲ್ಲಿ ಇದ್ದ ಜಾತೀಯತೆಯನ್ನು ತೊಡೆದು ಹಾಕಲು ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದು ಬಸವಣ್ಣನವರ ಉದ್ದೇಶವಾಗಿದ್ದು ಇದಕ್ಕಾಗಿ ಅವರು ವಚನಗಳನ್ನು ಉಪಯೋಗಿಸಿಕೊಂಡರು. ಕೆಳವರ್ಗದ ಜನರ ದುಡಿಮೆಯನ್ನು ಮೇಲ್ವರ್ಗದ ಜನ ಅನುಭವಿಸುತ್ತಿದ್ದರು. ಇದನ್ನು ವಿರೋಧಿಸಲು ಬಸವಣ್ಣನವರು ವಚನ ಸಾಹಿತ್ಯವನ್ನು ದುಡಿಸಿಕೊಂಡರು. ಮೇಲ್ವರ್ಗದ ಜನರಿಂದ ಶೋಷಣೆಗೆ ಒಳಗಾದ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು, ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ’ಕಾಯಕವೇ ಕೈಲಾಸ’ ಎಂಬ ಸಂದೇಶದ ಮೂಲಕ ಸಮಾಜದ ಎಲ್ಲ ಬಗೆಯ ವೃತ್ತಿನಿರತರಿಗೆ ಮೇಲು ಕೀಳೆನ್ನದೆ ಪ್ರೋತ್ಸಾಹ ನೀಡಿದರು.
ಒಂದು ರಾಜ್ಯದ ಮಂತ್ರಿಯಾಗಿ ಅತ್ಯುನ್ನತ ಸ್ಥಾನದಲ್ಲಿದ್ದ ಬಸವಣ್ಣನವರು ಸಮಾಜದಲ್ಲಿದ್ದ ಮೇಲುಕೀಳು ಭಾವನೆ, ಜಾತೀಯತೆ, ದುಃಖದಿಂದ ಇರುವವರ ಸಂಕಟದ ಜೀವನ, ಧರ್ಮದ ಹೆಸರಿನಲ್ಲಿ ನಡೆಯುವ ದುರಾಚಾರಗಳು ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಂಡರು.
ರಾಜ್ಯದ ಮಂತ್ರಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತವನ್ನು ಬಸವಣ್ಣನವರು ನಡೆಸಿದರು. ಉತ್ತಮ ನಡತೆ, ತ್ಯಾಗ ಮುಂತಾದ ಸದ್ಗುಣಗಳಿಗೆ ಆಶ್ರಯದಾತರಾಗಿದ್ದು ರಾಜ್ಯದ ಹಿತವನ್ನು ಕಾಪಾಡುವುದರ ಜೊತೆಗೆ ಇಲ್ಲಿ ಸಲ್ಲುವರು ಅಲ್ಲಿ ಸಲ್ಲುವರಯ್ಯ ಎಂದು ಜೀವನದ ಪದ್ಧತಿಯನ್ನು ಜಗತ್ತಿಗೇ ತಿಳಿಸಿದರು. ಭಕ್ತಿ ಭಂಡಾರಿ ಎನಿಸಿದ ಬಸವಣ್ಣನವರು ’ದಾಸೋಹ’, ’ಸ್ವರಸಮತೆ’, ’ಕಾಯಕತತ್ವ’, ’ಮುಕ್ತಿಯ ಮಾರ್ಗ ಶೋಧನೆ’ ಮುಂತಾದ ಸಾಧನೆಗಳನ್ನು ಮಾಡಿಕೊಂಡು ಆಧ್ಯಾತ್ಮಿಕ ಶಿಖರವನ್ನು ತಲುಪಿದರು. ಸಾಧಕರಾಗಿ ಲಿಂಗಾಂಗ ಸಾಮರಸ್ಯ ಪಡೆದು ಜನರ ನೋವನ್ನು ನಿವಾರಿಸಿ ಸಮಾಜದಲ್ಲಿನ ವಿಷಮತೆಯನ್ನು ದೂರ ಮಾಡಲು ಪ್ರಯತ್ನಿಸಿದರು. ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಎಲ್ಲಾ ರೀತಿಯ ತ್ಯಾಗ ಮಾಡಿದರು. ಬಸವಣ್ಣನವರು ದುರ್ಬಲರ ಧ್ವನಿಯಾಗಿದ್ದರು.
ಸಾಹಿತ್ಯ ಕ್ಷೇತ್ರವು ಕೇವಲ ರಾಜರ ಆಶ್ರಯ ಹೊಂದಿದ ಕೆಲವೇ ಕವಿಗಳಿಗೆ ಸೀಮಿತವಾಗಿತ್ತು. ಅದನ್ನು ಜನಸಾಮಾನ್ಯರ ಸಂಪತ್ತನ್ನಾಗಿಸಿದವರು ಬಸವಣ್ಣನವರು ಮತ್ತು ಅನೇಕ ಶರಣರು. ತತ್ವಬೋಧನೆ, ನೀತಿ, ವ್ಯವಹಾರ ಜ್ಞಾನ, ಜೀವನದ ಅನುಭವಗಳನ್ನು ಸಾಹಿತ್ಯದಲ್ಲಿ ಅಳವಡಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿರುವ ಅಸ್ಪೃಶ್ಯತೆ, ಜಾತಿಭೇದಗಳನ್ನು ದೂರಮಾಡಲು ವ್ಯಕ್ತಿಯನ್ನು ನೋಡದೇ ಅವರ ಜೀವನ ಸಾಧನೆಗಳನ್ನು ಗಮನಿಸಿ ಗೌರವಿಸಿದ ಕೀರ್ತಿಯು ಬಸವಣ್ಣನವರಿಗೆ ಸಲ್ಲುವುದು. ಪರಿಪೂರ್ಣವಾದ ಸರ್ವಸಮಾನತೆಯನ್ನು ಹೊಂದಿದ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರು ಕ್ರಾಂತಿಯನ್ನೇ ಮಾಡಿದರು.
ಅಂತರ್‌ಜಾತಿಯ ವಿವಾಹವನ್ನು ನಡೆಸಿದರು. ಅಸ್ಪೃಶ್ಯರನ್ನು ಬಂಧುಗಳಂತೆ ನೋಡಿ ಅವರೊಡನೆ ಇದ್ದು ಊಟ ಮಾಡಿ ಸದಾಚಾರವನ್ನು ಮೆರೆದರು. ಮಾವನರಿಗೆ ತಪಸ್ಸಿನ ಕಠಿಣವಾದ ಮಾರ್ಗವು ಅತ್ಯಂತ ಕಷ್ಟಕಾರಕವೆಂದು ತಿಳಿಸಿ ಸಹಜವಾದ ತ್ಯಾಗಪೂರ್ಣವಾದ ಜೀವನ ಸಾಧನೆಯ ಮಾರ್ಗವನ್ನು ಬೋಧಿಸಿದರು. ಭೂಮಿಯನ್ನು ಕೈಲಾಸವನ್ನಾಗಿ ಪರಿವರ್ತಿಸುವಂತಹ ’ಕಾಯಕವೇ ಕೈಲಾಸ’ ಎಂಬ ಮಂತ್ರವನ್ನು ಜನರ ಹೃದಯದಲ್ಲಿ ಬಿತ್ತಿದರು.
ಬಸವಣ್ಣನವರು ಒಂದು ಮತಕ್ಕಾಗಲಿ, ಧರ್ಮಕ್ಕಾಗಲಿ ಸೀಮಿತವಾಗಿರಲಿಲ್ಲ. ಅವರು ಎಲ್ಲಾ ಜನರಿಗಾಗಿದ್ದರು. ಅವರ ಜೀವನದ ಉದ್ದೇಶವು ಇಡೀ ಮಾನವ ಜನಾಂಗಕ್ಕಾಗಿತ್ತು. ಹೀಗೆ ಅವರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬಹುಕಾಲ ನಿಲ್ಲುವಂತಹ ಕಾರ್ಯಮಾಡಿ ತೋರಿಸಿದ್ದಾರೆ. ಮಾನವರೆಲ್ಲರೂ ಕ್ಷೇಮವಾಗಿರಲಿ ಎಂಬ ಉತ್ತಮ ತತ್ವವನ್ನು ಜನರಿಗೆ ತಿಳಿಸಿ ಹೇಳಿ ’ಸಕಲ ಜೀವಾತ್ಮರಿಗೂ ಲೇಸನೇ ಬಯಸುವವನು ಶರಣ’ ಎಂದು ಮಾನವ ಧರ್ಮವನ್ನು ಅಭಿನಂದಿಸಿದರು. ಹೀಗೆ ಆದರ್ಶ ಪೂರ್ಣವಾದ ಜೀವನ ನಡೆಸಿ ಸಾಧನೆಗಳ ಮೂಲಕ ಶಾಶ್ವತ ಸ್ಥಾನಮಾನ ಗಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು:
19ನೇ ಶತಮಾನದ ಭಾರತದ ಸಾಮಾಜಿಕ ವ್ಯವಸ್ಥೆ, ವರ್ಣಭೇದ, ಅಸ್ಪೃಶ್ಯತೆ, ಕಂದಾಚಾರ, ಧಾರ್ಮಿಕ ಕಟ್ಟುಪಾಡುಗಳಿಂದ ತುಂಬಿ ತುಳುಕುತ್ತಿದ್ದ ಕಾಲದಲ್ಲಿ ಜನರ ಅಂಧಶ್ರದ್ಧೆ, ಜಾತೀಯತೆ, ಮೂಢನಂಬಿಕೆ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಮಾನವೀಯ ಕಟ್ಟುಪಾಡುಗಳನ್ನು ಹೊಡೆದೊಡಿಸಿ ಸಮಾನತೆ, ಸಹೋದರತ್ವ, ಶಾಂತಿ ನೆಮ್ಮದಿ ನೆಲೆಗೊಳಿಸಲು ದಕ್ಷಿಣ ಭಾರತದ ಕೇರಳದಲ್ಲಿ ಉದಯಿಸಿದ ’ಕ್ರಾಂತಿ ಸೂರ್ಯ’ ಬ್ರಹ್ಮಶ್ರೀ ನಾರಾಯಣಗುರುಗಳು. ಓರ್ವ ತಪಸ್ವಿಗಳಾಗಿ, ಶ್ರೇಷ್ಠ ಚಿಂತಕರಾಗಿ, ಸಮಾಜ ಸುಧಾರಣೆಯ ಕ್ರಾಂತಿ ಪುರುಷರಾಗಿ ಬೆಳಗಿದವರು.
ಸುಮಾರು ನೂರೈವತ್ತು ವರ್ಷಗಳ ಹಿಂದೆ ಕೇರಳ ರಾಜ್ಯದ ಸಾಮಾಜಿಕ ವಿಷಮತೆಗಳನ್ನು ವರ್ಣಿಸಲು ಅಸಾಧ್ಯವಾಗಿತ್ತು. ಮೇಲುಕೀಳೆಂಬ, ಸ್ಪರ್ಶಾಸ್ಪೃಶ್ಯವೆಂಬ ಭೇದಭಾವಗಳು ತುಂಬಿ ತುಳುಕುತ್ತಿದ್ದ ಕಾಲವಾಗಿತ್ತು. ಅಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ತಿರುವನಂತಪುರದ ಸಮೀಪದ ಚೆಂಬಳಾಂತಿ ಎಂಬ ಗ್ರಾಮದ ಈಳವ ಕುಟುಂಬವೊಂದರಲ್ಲಿ ಈ ಅವತಾರ ಪುರುಷನ ಜನನವಾಯಿತು. ಕುಲಕಸುಬು ಶೇಂದಿ ಇಳಿಸುವುದಾಗಿದ್ದರೂ ಅದನ್ನು ಬಿಟ್ಟು ವ್ಯವಸಾಯ, ಜ್ಯೋತಿಷ್ಯ, ವೈದ್ಯ ವೃತ್ತಿಗಳನ್ನು ಮಾಡಿಕೊಂಡಿದ್ದ, ಸಿರಿವಂತಿಕೆ ಇಲ್ಲದಿದ್ದರೂ ಎಲ್ಲರಿಗೂ ಬೇಕಾದವರಾಗಿ ಮೇಲ್ಪಂಕ್ತಿಯಾಗುವ ಜೀವನ ನಡೆಸಿಕೊಂಡು ಬಂದ ತಂದೆ ತಾಯಿಗಳ ಮುದ್ದಿನ ಮಗನಾಗಿ ಬೆಳೆದರು. ಬಾಲ್ಯದಲ್ಲಿ ಪ್ರೀತಿಯಿಂದ ’ನಾಣು’ ಎಂದು ಕರೆಸಿಕೊಳ್ಳುತ್ತಿದ್ದ ನಾರಾಯಣಗುರುಗಳು ಮಳೆಯಾಳಂ, ಸಂಸ್ಕೃತ, ತಮಿಳು ಭಾಷೆಯಲ್ಲಿ ಒಳ್ಳೆಯ ಪಾಂಡಿತ್ಯಗಳಿಸಿಕೊಂಡರು.
ತಮ್ಮ ಸಮಾಜವು ಅಸ್ಪೃಶ್ಯತೆಯ ಪಿಡುಗಿನಿಂದ ಅನುಭವಿಸುತ್ತಿದ್ದ ಮೂಕ ವೇದನೆಯನ್ನು ಕಂಡು ನಾರಾಯಣಗುರುಗಳು ಕರಗಿ ಹೋದರು. ತಮಗಿಂತಲೂ ಕೆಳಜಾತಿಯವರೆನಿಸಿದ ಜನರ ಸಾಮಾಜಿಕ ತುಚ್ಛೀಕರಣವನ್ನು ಕಂಡು ಮರುಗಿದರು. ಈ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕು; ಸಮಾಜದ ನವನಿರ್ಮಾಣ ಮಾಡಬೇಕು; ಧ್ವನಿ ಕಳೆದುಕೊಂಡ ಜನರಿಗೆ ಆತ್ಮವಿಶ್ವಾಸ ತುಂಬಬೇಕು; ಅವರಲ್ಲಿ ವಿದ್ಯೆಯ ಜ್ಯೋತಿಯನ್ನು ಬೆಳಗಿಸಬೇಕು ಎಂದು ದೃಢನಿರ್ಧಾರ ಮಾಡಿದರು. ವಿವಾಹವಾದರೂ ಸಂಸಾರ ಬಂಧನದಿಂದ ಮುಕ್ತರಾಗಿ ಸನ್ಯಾಸ ದೀಕ್ಷೆಯನ್ನು ಪಡೆದು ಆಧ್ಯಾತ್ಮಿಕ ಸಾಧನೆಗಾಗಿ ಸುದೀರ್ಘ ತಪಸ್ಸನ್ನಾಚರಿಸಿದರು. ಭಗವಂತನ ಸಾಕ್ಷಾತ್ಕಾರಗಳಿಸಿಕೊಂಡ ಗುರುಗಳು ಜ್ಞಾನಯೋಗಿಗಳಾದರೂ ತಾನು ಹುಟ್ಟಿ ಬೆಳೆದ ಸಮಾಜದ ಉದ್ಧಾರಕ್ಕಾಗಿ ಕರ್ಮಯೋಗಿಗಳಾದರು. ಊರೂರು ಅಲೆಯತೊಡಗಿ ಎಲ್ಲ ವರ್ಗದ ಜನರೊಡನೆ ಬೆರೆತು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದರು. ಮೇಲು ವರ್ಗದವರ ದೇವಾಲಯಗಳಿಗೆ ಕೆಳವರ್ಗದವರಿಗೆ ಪ್ರವೇಶವಿಲ್ಲವಾದ್ದರಿಂದ ತಾವೇ ಹಲವು ಕಡೆಗಳಲ್ಲಿ ಶಿವಾಲಯ, ಸ್ಕಂದಾಲಯಗಳನ್ನು ಸ್ಥಾಪಿಸಿದರು. ಉಪನಿಷತ್ತುಗಳ ಅದ್ವೈತ ತತ್ವಜ್ಞಾನ ಅವರ ಅಂತಃಕರಣದ ಧರ್ಮವಾಯಿತು. ವಿದ್ಯೆ ಮತ್ತು ಸಂಘಟನೆಯ ಮಹತ್ವವನ್ನು ಜನರಿಗೆ ತಿಳಿಯಪಡಿಸಿ ಜನರನ್ನು ವಿದ್ಯಾವಂತರನ್ನಾಗಿಯೂ ಸಂಘಟಿತರನ್ನಾಗಿಯೂ ಮಾಡಲು ಪ್ರಯತ್ನಿಸಿ ಯಶಸ್ವಿಯಾದರು. ’ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ದಿವ್ಯ ವಾಣಿಯಿಂದ ಸಮಾಜದಲ್ಲಿ ಜ್ಞಾನದ ಬೆಳಕನ್ನು ಹರಿಸಿದರು.
ಬ್ರಾಹ್ಮಣನಲ್ಲದ ನೀನು ಶಿವನನ್ನು ಹೇಗೆ ಪ್ರತಿಷ್ಠಾಪಿಸಿದೆ? ಎಂದು ಮೇಲ್ವರ್ಗದವರು ಪ್ರಶ್ನಿಸಿದಾಗ ನಾನು ನಿಮ್ಮ ಶಿವವನ್ನು ಪ್ರತಿಷ್ಠಾಪಿಸಿಲ್ಲ, ನನ್ನ ಶಿವನನ್ನು ಪ್ರತಿಷ್ಠಾಪಿಸಿದ್ದೇನೆ ಎಂದು ಅರ್ಥಪೂರ್ಣವಾದ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದರು. ಕಲವನ್ಕೋಡು ಎಂಬಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಬದಲು ನಿಲುಗನ್ನಡಿಯೊಂದನ್ನಿರಿಸಿ ನಿನ್ನಲ್ಲಿರುವ ದೇವರನ್ನು ನೀನು ಮೊದಲು ನೋಡಿಕೋ ಎಂದು ಬೋಧಿಸಿದರು. ಮೂಢನಂಬಿಕೆ ಹಾಗೂ ಮದ್ಯ ಮಾಂಸಗಳಿಂದ ಮುಕ್ತವಾದ ಸಾತ್ವಿಕ ಪೂಜಾ ವಿಧಾನಕ್ಕೆ ಒತ್ತುಕೊಟ್ಟರು. ಜಾತಿ ಎನ್ನುವುದು ಮನುಷ್ಯರು ಕೆಲವರು ಒಂದಾಗಿ ದಿನಾ ಆಚರಿಸಿಕೊಂಡು ಬಂದ ಒಂದು ವ್ಯವಸ್ಥೆ. ಮಾನವೀಯ ಗುಣವಿರುವವರೆಲ್ಲ ಒಂದು ಜಾತಿ, ಅದು ಮಾನವ ಜಾತಿ ಎಂಬ ಸಂದೇಶದ ಮೂಲಕ ಜಾತಿಯ ನೆಲೆಗಟ್ಟಿನ ಪೊಳ್ಳುತನವನ್ನು ಬಯಲಿಗೆಳೆದರು. ಈ ವಿಶಾಲ ವಿಶ್ವದ ಸೃಷ್ಟಿಕರ್ತನು ಒಬ್ಬನೇ, ಆತನೇ ಸರ್ವಶಕ್ತನಾದ ಭಗವಂತ; ಆತ ವಿಶ್ವರೂಪಿ, ಸರ್ವವ್ಯಾಪಿ ಎಂದು ಸಾರುವ ಮೂಲಕ ದೇವನೊಬ್ಬನೇ, ನಾಮ ಹಲವು ಎಂಬ ಸಂದೇಶವನ್ನು ನೀಡಿದರು.
ಹಿಂದುಳಿದ, ಬಡ, ದೀನದಲಿತರಿಗಾಗಿ ಆಂಗ್ಲ, ಸಂಸ್ಕೃತ ವಿದ್ಯಾಲಯಗಳನ್ನು ಸ್ಥಾಪಿಸಿದರು. ಅಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲರೂ ವಿದ್ಯಾರ್ಥಿಗಳಾದರು. ಹಿಂದುಳಿದವರನ್ನು ದೀನ ದಲಿತರನ್ನು ಮೇಲೆತ್ತುವ ಕಾರ್ಯದಲ್ಲಿ ರಕ್ತರಹಿತ ಕ್ರಾಂತಿಯನ್ನೇ ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಆ ವರ್ಗದ ಆರಾಧ್ಯ ಮೂರ್ತಿಯಾದರು. ದೀನದಲಿತರ ಬಾಳಿನ ಬೆಳಕಾದ ಅವರು ಕತ್ತಲೆಯ ಹಾದಿಯಲ್ಲಿ ಧ್ರುವತಾರೆಯೇ ಆದರು. ಸಮಸ್ತ ಮನುಕುಲದ ಉದ್ಧಾರದ ದಿಕ್ಕು ದೆಸೆಗಳನ್ನು ತೋರಿದ ಗುರುಗಳು ಕಾಲಕ್ರಮದಲ್ಲಿ ಸಮಸ್ತ ಮಾನವರ ಗೌರವಾದರಗಳಿಗೆ ಪಾತ್ರರಾಗಿ ’ವಿಶ್ವಮಾನವ’ರಾದರು. ಅವರ ಸಂದೇಶಗಳು ’ಅಮರ ಸಂದೇಶ’ಗಳಾದವು.
Parivarthaneya harikara melgurugalu