ಪುತ್ತೂರು: ಹಿಂದಿನ ಕಾಲಘಟ್ಟದ ಸಂಸ್ಕೃತಿ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವವಾಹಿನಿ ಘಟಕವು ಜಿಲ್ಲೆಯ 26 ಘಟಕಗಳ ಯುವಸಮೂಹಕ್ಕೆ ಹಿಂದಿನ ಸಂಸ್ಕೃತಿ ಕಲೆಗಳನ್ನು ನೆನಪಿಸುವ ಅಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು. ಡಿಸೆಂಬರ್ 24 ರಂದು ಆನಡ್ಕ ಕಂಬಳಗದ್ದೆ ಮರಕೂರು ಜನನ ಎಂಬಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಟನೆಯಾದ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ ಪುತ್ತೂರು ಘಟಕದ ಆತಿಥ್ಯದಲ್ಲಿ ನಡೆದ ಕೋಟಿಚೆನ್ನಯ ಕೆಸರುಗದ್ದೆ ಕ್ರೀಡಾ ಕೂಟವನ್ನು ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿದರು.ಮರಕ್ಕೂರು ಜನನದ ಈ ಮಣ್ಣಿನಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮರಕ್ಕೂರು ಜನನದ ಈ ಮಣ್ಣಿನಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿದ್ದು ಬಹಳ ಖುಷಿ ತಂದಿದೆ ಈ ಜಾಗದಲ್ಲಿ ಅಂದು ಬ್ರಹ್ಮ ಕಲಷದ ಜೀರ್ಣೋದ್ಧಾರ ಸಂದರ್ಭದಲ್ಲಿ ನಾನು ಭಾಗವಹಿಸಿದ್ದೆ ಈಗ ಮೂರು ವರ್ಷಗಳ ಬಳಿಕ ಸ್ಥಳ ಸಾನಿಧ್ಯ ಕಾರಣಿಕ ಇರುವ ಈ ಜಾಗದಲ್ಲಿ ಇಂದು ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಲು ಬಹಳ ಖುಷಿಯಾಗುತ್ತಿದೆ ಎಂದ ಅವರು ಜಿಲ್ಲೆಯ 6 ಘಟಕಗಳನ್ನು ಒಂದೇ ಕುಟುಂಬವೆಂಬಂತೆ ಭಾಸವಾಗುತ್ತಿರುವ ಈ ಕ್ರೀಡಾ ಕೂಟದಲ್ಲಿ ಪ್ರತಿಯೊಬ್ಬ ಸಮಾಜ ಬಾಂಧವರು ನಮ್ಮ ಕ್ರೀಡಾಕೂಟ ಎಂಬಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.
ಮುಖ್ಯ ಅತಿಥಿ ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆಯವರು ಮಾತನಾಡಿ ಮರಕ್ಕೂರು ಜನನದ ಪುಣ್ಯದ ನೆಲದ ಬೇಸಾಯ ಗದ್ದೆಯಲ್ಲಿ ಕ್ರೀಡಾಕೂಟ ಮೈನವಿರೇರಿಸುವಂತಿದೆ ಬಹುತೇಕ ಗದ್ದೆಗಳು ಇಂದು ತೋಟವಾಗಿ ನಿರ್ಮಾಣವಾಗಿದ್ದರೂ ಇಲ್ಲಿನ ಗದ್ದೆಯು ಇಂದಿಗೂ ಬೇಸಾಯ ಕೃಷಿಯನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಜಿಲ್ಲೆಯಲ್ಲಿನಯುವ ಸಮೂಹ ಇಲ್ಲಿ ಒಟ್ಟು ಸೇರಿದ್ದರಿಂದ ಯುವಸಮೂಹಕ್ಕೆಪರಸ್ಪರ ಸಂಪರ್ಕವನ್ನು ಸಾಧಿಸಲು ಅಪೂರ್ವ ಅವಕಾಶವಾಗಿದೆ ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಸಂದೇಶದಂತೆ ಬಿಲ್ಲವ ಸಮಾಜ ಮುಂದುವರೆಯಬೇಬು ಎಂದರು.
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿಯವರು ಮಾತನಾಡಿ ಯುವವಾಹಿನಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಮಾಜ ಬಾಂಧವರಿಗೆ ಕೋಟಿ ಚೆನ್ನಯ ಕೆಸರು ಗದ್ದೆ ಕ್ರೀಡಾ ಕೂಟವನ್ನು ಹಮ್ಮಿಕೊಂಡಿದೆ.ಸಮಾಜ ಬಾಂಧವರು ಪ್ರತಿಯೊಂದು ವಿಭಾಗದಲ್ಲೂ ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು. ಮುಖ್ಯ ಅತಿಥಿ ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು,ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲು ಇದರ ಯಜಮಾನರಾದ ಶ್ರೀಧರ ಪೂಜಾರಿ, ಮರಕ್ಕೂರು ಜನನದ ಯಜಮಾನರಾದ ಮಾಯಿಲಪ್ಪ ಪೂಜಾರಿ, ಯುವವಾಹಿನಿ(ರಿ) ಕೇಂದ್ರ ಸಮಿತಿ ಇದರ ಕ್ರೀಡಾ ನಿರ್ದೇಶಕ ಸುಜಿತ್ ರಾಜ್ ವೇದಿಕೆಯಲ್ಲಿಉಪಸ್ಥಿತರಿದ್ದರು.ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಮಹಿಳೆಯರು ಪ್ರಾರ್ಥಿಸಿದರು,ಯುವವಾಹಿನ್ ಪುತ್ತೂರು ಘಟಕದ ಉಪಾಧ್ಯಕ್ಷ ಹರೀಶ್ ಶಾಂತಿ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜೆ ವಂದಿಸಿದರು. ಕ್ರೀಡಾ ಕೂಟದ ಸಂಚಾಲಕ ವಸಂತ ಪೂಜಾರಿ ಕಲ್ಲರ್ಪೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು ಯುವವಾಹಿನಿ (ರಿ) ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ
ಕೋಟಿ ಚೆನ್ನಯ ಕ್ರೀಡಾ ಕೂಟಕ್ಕೆ ವಿಶೇಷವಾದ ಪರಿಕಲ್ಪನೆಯಿದೆ ಸ್ವಾಭಿಮಾನದ ಬದುಕು ಕೋಟಿಚೆನ್ನಯರಲ್ಲಿ ಅಡಕವಾಗಿತ್ತು. ಕೃಷಿಕರ ಆಟದ ಕಲ್ಪನೆಗೆ ಪೂರಕವಾಗಿ ಕೆಸರುಗದ್ದೆಯಲ್ಲಿ ಕ್ರೀಡೆಯನ್ನು ಆಡಲಾಗುತ್ತಿತ್ತು.ವ್ಯಕ್ತಿಯ ದೈಹಿಕತೆ ಮತ್ತು ಮಾನಸಿಕತೆ ಗಟ್ಟಿಗೊಳಿಸುವಲ್ಲಿ ಕೆಸರುಗದ್ದೆ ಕ್ರೀಡೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದರು.
ಅವರು ಡಿಸೆಂಬರ್ 24 ರಂದುಆನಡ್ಕ ಕಂಬಳಗದ್ದೆ ಮರಕ್ಕೂರು ಜನನ ಎಂಬಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಪುತ್ತೂರು ಘಟಕದ ಆತಿಥ್ಯದಲ್ಲಿ ನಡೆದ ಕೋಟಿ ಚೆನ್ನಯ ಕೆಸರು ಗದ್ದೆ ಕ್ರೀದಾಕೂಟದ ಸಮಾರೋಪ ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗದ್ದೆ ಬೇಸಾಯವೆನ್ನುವುದು ಗೌರವದ ಸಂಕೇತವಾಗಿದ್ದು ಸಂಸಾರವನ್ನು ಒಂದು ಗೂಡಿಸುವ ಶಕ್ತಿ ಇದೆ ಹಿರಿಯರು ಕೃಷಿ ಮಾಡಿಕೊಂಡು ಮಣ್ಣಿನ ವಾಸನೆಯಲ್ಲೇ ಬದುಕಿದವರು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಎಂದರೆ ನಾಚಿಕೆ ಪಟ್ಟುಕೊಳ್ಳುವ ಕಾಲ ಇದಾಗಿದೆ.ಯಾರಿಗೂ ಮಣ್ಣಿನ ವಾಸನೆ ಬೇಡವಾಗಿದೆ. ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೃಷಿ ಬಗ್ಗೆ ತಿಳುವಳಿಕೆ ಕೊಡುವ ಕೆಲಸವಾಗಬೇಕು ಸಾಹಿತ್ಯ ಸಂಸ್ಕೃತಿ ಕೃಷಿ ಆಧಾರಿತವಾಗಿದೆ ಆದರೆ ಕೃಷಿಯೇ ಇಲ್ಲದ ಮೇಲೆ ಇನ್ನು ಇದರ ಉಳಿವು ಹೇಗೆ? ನಮ್ಮ ಮಕ್ಕಳಿಗೆ ಕೃಷಿಯ ಬಗ್ಗೆ ಹೆಚ್ಚಿನ ಒಲವು ತೋರುವಂತೆ ಮಾಡಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಮಾತನಾಡಿ ಈ ಭಾಗದಲ್ಲಿ ಯುವವಾಹಿನಿ ಸಂಘಟನೆಯು ಕೆಸರುಗದ್ದೆ ಕ್ರೀಡಾಕೂಟವನ್ನು ಸಂಘಟಿಸಿ ಒಂದರ್ಥದಲ್ಲಿ ಜಾತ್ರೆಯ ವಾತಾವರಣದಂತೆ ಇಲ್ಲಿ ಕಂಗೊಳಿಸುತ್ತಿದೆ. ಕೆಸರುಗದ್ದೆ ಕ್ರೀಡಾಕೂಟವು ಮನಸ್ಸಿಗೆ ಮುದ ನೀಡುವ ಕ್ರೀಡಾ ಕೂಟವಾಗಿದೆ. ಕ್ರೀಡೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಇದರ ಹಿಂದೆ ಹಗಲು ರಾತ್ರಿ ಸಾಕಷ್ಟು ಕೈಗಳು ದುಡಿದಿವೆ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದಜಯಂತ್ ರವರು ಇದರ ಹಿಂದೆ ಬೆನ್ನೆಲುಬಾಗಿ ನಿಂತು ಯುವಕರನ್ನು ಉತ್ತಮ ರೀತಿಯಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ ಎಂದರು
ಮೂಲ್ಕಿ ರಾಷ್ಟ್ರೀಯ ಮಹಾಮಂಡಲದ ಉಪಾಧ್ಯಕ್ಷ ಪಿತಾಂಬರ ಹೆರಾಜೆಯವರು ಮಾತನಾಡಿ ಯುವಮನಸ್ಸುಗಳ ಆಲೋಚನೆ ಆಚಾರ ವಿಚಾರ ಕಷ್ಟಸುಖಗಳ ಒಟ್ಟು ಸಮ್ಮಿಳಿತ ಮಿಶ್ರಣ ಈ ಮರಕ್ಕೂರು ಜನನದಲ್ಲಿ ಆಗಿದೆ. ಒಟ್ಟಾರೆ ಇಡೀ ಬಿರುವೆರ್ ಈ ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಸೇರಿದ್ದಾರೆ ಎಂದರು.
ಎಸ್‍ಆರ್‍ಆರ್ ಸಂಸ್ಥೆಯ ಮಾಲಕ ಶೈಲೇಂದ್ರರವರು ಮಾತನಾಡಿ ಯುವವಾಹಿನಿ ಸಂಘಟನೆಯು ವರ್ಷದಿಂದ ವರ್ಷಕ್ಕೆ ಉತ್ತಮ ಕಾರ್ಯಕ್ರಮ ನೀಡುತ್ತಿದೆ. ಬಿಲ್ಲವರು ರಾಜಕೀಯದಲ್ಲಿ ಜಾಸ್ತಿ ಗುರುತಿಸುವುದಕ್ಕಿಂತ ಬಿಲ್ಲವ ಸಮಾಜದಲ್ಲಿ ಜಾಸ್ತಿ ಸಕ್ರಿಯರಾಗಿ ಸಮಾಜವನ್ನು ವೃಧ್ಧಿಗೊಳಿಸುವತ್ತ ಚಿತ್ತ ಹರಿಸಬೇಕಾಗಿದೆ ಎಂದರು.
ಗೌರವ ಉಪಸ್ಥಿತಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಿರುತೆರೆ ನಟ ಹಿತೇಶ್ ಬೆಳ್ತಂಗಡಿರವರು ಮಾತನಾಡಿ, ಮಣ್ಣಿನಲ್ಲಿ ಆಟವಾಡುವುದು ಗಲೀಜು ಎಂದು ನಂಬುವವರೇ ಜಾಸ್ತಿ. ಆದರೆ ಅದೇ ಮಣ್ಣಿನಲ್ಲಿ ಏನೆಲ್ಲಾ ಸತ್ವ ಅಡಗಿದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಬಿಲ್ಲವರು ಎಂದು ಗುರುತಿಸಿಕೊಂಡವರು ಅವಕಾಶಗಳನ್ನು ಸಿಕ್ಕಿದಾಗ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮುಂದಡಿಯಿಟ್ಟಾಗ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಸಿಗಬಲ್ಲುದು ಎಂದು ಅವರು ಹೇಳಿದರು ಅಲ್ಲದೆ ಸಮಾಜ ಬಾಂಧವರ ಅಪೇಕ್ಷೆ ಮೇರೆಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಅಭಿನಯಿಸಿದ ಪ್ಯಾಂಕ್, ಪ್ಯಾಂಕ್…ಡಯಲಾಗ್‍ನ್ನು ಹೇಳಿ ಮನರಂಜಿಸಿದರು.
ಪಟ್ಟೆ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಪಟ್ಟೆರವರ ಮುಂದಾಳತ್ವದಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಸ್ವ-ಜಾತಿಯ ಶಿಕ್ಷಕರಾದ ಬಾಲಕೃಷ್ಣ ಸವಣೂರು, ಶೇಖರ್ ಕಡಬ, ರಾಜೇಶ್ ಪದವು, ಪ್ರಸಾದ್ ನಿಂತಿಕಲ್ಲು, ಬಾಲಚಂದ್ರ ಸುಳ್ಯ, ಗೀತಾಮಣಿ ಪುತ್ತೂರು, ಗಣೇಶ್ ನಡ್ವಾಳ್, ರಾಜೇಶ್ ಸುಳ್ಯಪದವು, ಸಂತೋಷ್ ಕೆಯ್ಯೂರು, ಪ್ರವಿತ, ವಿಜಯ ಕೋಡಿಂಬಾಡಿ, ಅವಿನಾಶ್, ಶಾರದಾ ಬಿ.ಟಿ, ಕವಿತ ಎಂ.ಎಸ್ ಮುಂಡೂರು, ವಿನಯ ಮರಕ್ಕೂರು, ರಾಧಾಕೃಷ್ಣರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ಕ್ರೀಡಾಜ್ಯೋತಿ ಮೆರವಣಿಗೆ ಸಂದರ್ಭದಲ್ಲಿ ಬ್ಯಾಂಡ್ ವಾದ್ಯಗಳೊಂದಿಗೆ ಸಹಕರಿಸಿದ ಪಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ:
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ಬಂಟ್ವಾಳ ಯುವವಾಹಿನಿ ಘಟಕದ ಆಶ್ರಯದಲ್ಲಿ ಬಂಟ್ವಾಳದ ಸ್ಪರ್ಶಾ ಸಭಾಂಗಣದಲ್ಲಿ ನಡೆಯಲಿರುವ ಯುವವಾಹಿನಿ ಅಂತರ್-ಘಟಕ ಸಾಂಸ್ಕ್ರತಿಕ ಕಾರ್ಯಕ್ರಮ ಡೆನ್ನಾನ..ಡೆನ್ನಾನ.. ಆಮಂತ್ರಣ ಪತ್ರಿಕೆಯನ್ನು ಎಸ್.ಆರ್.ಆರ್ ಸಂಸ್ಥೆಯ ಮಾಲಕ ಶೈಲೇಂದ್ರರವರು ಬಿಡುಗಡೆಗೊಳಿಸಿದರು. ಬಂಟ್ವಾಳ ಯುವವಾಹಿನಿ ಘಟಕದ ಲೋಕೇಶ್‍ರವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ರಾಜೇಶ್ ಸುವರ್ಣ, ಯುವವಾಹಿನಿ ಪುತ್ತೂರು ಘಟಕದ ಸಲಹೆಗಾರರಾದ ಡಾ.ಸದಾನಂದ ಕುಂದರ್, ಸಂಚಾಲಕರಾದ ಜಯಂತ್ ಬಾಯಾರ್‍ರವರು ಉಪಸ್ಥಿತರಿದ್ದರು. ಶಿವತೇಜಾ ಪ್ರಾರ್ಥಿಸಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲು ಸ್ವಾಗತಿಸಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉದಯ ಕೋಲಾಡಿ ವಂದಿಸಿದರು. ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಹೊನ್ನಪ್ಪ ಪೂಜಾರಿ ಕೈಂದಾಡಿ, ನಾಗೇಶ್ ಬಲ್ನಾಡು, ವಿನಯ ಮರಕ್ಕೂರು, ರಂಜಿತ್, ಗೌರೀಶ್ ನರಿಮೊಗರು, ಅನೂಪ್ ನರಿಮೊಗರು, , ಕ್ರೀಡಾ ಸಂಯೋಜಕ ವಸಂತ್ ಪೂಜಾರಿ ಕಲ್ಲರ್ಪೆ, ಪ್ರಜ್ವಲ್‍ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಮತ್ತು ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟಕ್ಕೆ ಪುತ್ತೂರು ತಾಲೂಕಿನ ಸ್ವ-ಜಾತಿ ದೈಹಿಕ ಶಿಕ್ಷಕ-ಶಿಕ್ಷಕಿಯರು, ಪುತ್ತೂರು ಬಿಲ್ಲವ ಸಂಘ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆ, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿüಕಾರಿಗಳು ಹಾಗೂ ಸರ್ವ ಸದಸ್ಯರು, ನರಿಮೊಗರು ವಲಯದ ಬಿಲ್ಲವ ಗ್ರಾಮ ಸಮಿತಿ ಸಹಕರಿಸಿದ್ದಾರೆ.
ಕಂಡೊದ ಸ್ಪರ್ಧೆಗಳು…
ಬೆಳಿಗ್ಗೆ ಮುಕ್ತ ನಿಧಿ ಶೋಧ, ಪುರುಷರಿಗೆ 50ಮೀ.ಓಟ, ರಿಲೇ 50ಮೀ.*4, ಹಾಲೆ ಓಟ(2 ಜನ), ಉಪ್ಪು ಮೂಟೆ(7 ಜನ), ಕಬಡ್ಡಿ(7 ಜನ), ಹಗ್ಗ-ಜಗ್ಗಾಟ(7 ಜನ), ವಾಲಿಬಾಲ್(6 ಜನ), ಮಹಿಳೆಯರಿಗೆ 50ಮೀ.ಓಟ, ರಿಲೇ 50ಮೀ.*4, ಹಾಲೆ ಓಟ, ಉಪ್ಪು ಮೂಟೆ, ಹಗ್ಗ-ಜಗ್ಗಾಟ(7 ಜನ), ತ್ರೋಬಾಲ್(6 ಜನ), ಬಕೆಟ್‍ಗೆ ನೀರು ತುಂಬಿಸುವುದು(4 ಜನ), 12 ರಿಂದ 18 ವರ್ಷ ಮುಕ್ತ ವಿಭಾಗದ ಹುಡುಗರಿಗೆ ಹಾಗೂ ಹುಡುಗಿಯರಿಗೆ 50ಮೀ.ಓಟ, ಹಾಲೆ ಓಟ(ಸ್ಥಳದಲ್ಲಿ ಆಯ್ಕೆ), ವಾಟರ್ ಬಲೂನು ಹೊಡೆಯುವುದು(ಕಣ್ಣಿಗೆ ಬಟ್ಟೆ ಕಟ್ಟಿ), 50 ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ಮುಕ್ತ ವಿಭಾಗ(18-50)ದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ 50ಮೀ.ಓಟ, ರಿಲೇ 50ಮೀ*4, ಹಗ್ಗ-ಜಗ್ಗಾಟ(ಪುತ್ತೂರು ತಾಲೂಕಿನಲ್ಲಿರುವವರಿಗೆ ಮಾತ್ರ) ನಡೆಯಿತು.
ಕ್ರೀಡೋತ್ಸವದಲ್ಲಿ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 26 ಘಟಕಗಳು ಭಾಗವಹಿಸಿದ್ದವು. ಮಾಣಿ ಘಟಕವು 61 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 51 ಅಂಕ ಪಡೆದ ಪುತ್ತೂರು ಘಟಕವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. 44 ಅಂಕಗಳನ್ನು ಪಡೆದ ಉಡುಪಿ ಘಟಕವು ಮೂರನೇ ಸ್ಥಾನಿಯಾಗಿ ತೃಪ್ತಿಪಟ್ಟುಕೊಂಡಿತು.