ಮಂಗಳೂರು: ಅಭಿವೃದ್ಧಿ ಆಗಿದ್ದೇವೆ ಪರಿವರ್ತನೆ ಆಗಿದೆ ಎಂದು ನಾವೆಷ್ಟೇ ಅಂದುಕೊಂಡರೂ ಸಮಾಜದಲ್ಲಿ ಇಂದಿಗೂ ಸಮಸ್ಯೆಗಳು ಇವೆ, ಜನರ ಈ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದಾಗ ಜನ ಸಂಘಟನೆಗೆ ಹತ್ತಿರವಾಗುತ್ತಾರೆ ಮತ್ತು ಗೌರವಿಸುತ್ತಾರೆ, ಯುವವಾಹಿನಿಯ ಈ ಸಾರ್ಥಕ ಕೆಲಸಗಳಿಂದಲೇ ಅದು ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದೆ ಎಂದು ಉದ್ಯಮಿ ಸಂತೋಷ್ ಕುಮಾರ್ ಉಗ್ಗೆಲ್‍ಬೆಟ್ಟು ತಿಳಿಸಿದರು.
ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಹಕಾರದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಬಿಲ್ಲವ ವಧುವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಿಲ್ಲವ ಸಮುದಾಯ ಅತ್ಯಂತ ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯ ಈ ಕಾರಣದಿಂದ ಸಾಮಾಜಿಕ ಸಮಸ್ಯೆಗಳೂ ಅಧಿಕವಾಗಿದೆ, ಆದರೆ ಯುವವಾಹಿನಿಯಂತಹ ಸಂಘಟನೆ ಇರುವವರೆಗೆ ಆ ನೋವು ಸಮಾಜವನ್ನು ಭಾದಿಸದು, ನಾವೆಲ್ಲ ಯುವವಾಹಿನಿ ಜೊತೆಗಿರೋಣ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅವರು ಮಾತನಾಡಿ, ಕಳೆದ ಬಾರಿ ಈ ಕಾರ್ಯಕ್ರಮ ಆಯೋಜಿಸಿದಾಗ ಮಹಿಳಾ ಘಟಕಕ್ಕೆ ಆತಂಕವಿತ್ತು, ಆದರೆ ಅದಕ್ಕೆ ಸಿಕ್ಕಿದ ಸ್ಪಂದನೆ ನಮ್ಮ ಆತಂಕ ದೂರ ಮಾಡಿ ಈ ಬಾರಿಯೂ ಕಾರ್ಯಕ್ರಮ ಮಾಡಲು ಪ್ರೇರಣೆ ನೀಡಿತು. ಕಳೆದ ಬಾರಿ 600 ಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿದ್ದರು. ಈ ಪೈಕಿ 150 ಕ್ಕೂ ಅಧಿಕ ಜೋಡಿಗೆ ಕಂಕಣ ಭಾಗ್ಯ ಒದಗಿಸಿದ ಸಂತೃಪ್ತಿ ಮಹಿಳಾ ಘಟಕದ್ದು ಎಂದರು. ಈ ಬಾರಿಯೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದು ಇಂದಿನಿಂದ ಈ ಕಂಕಣ ಯಜ್ಞ ನಿರಂತರವಗಿ ಮುಂದುವರಿಯಲಿದೆ ಎಂದರು.
ಸಮಾರಂಭವನ್ನು ಕುದ್ರೊಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್ ಸಾಯಿರಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಮಹಿಳಾ ಘಟಕದ ಸಲಹೆಗಾರ ಪರಮೇಶ್ವರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರೀತಾ ಉಪಸ್ಥಿತಿರಿದ್ದರು. ಅನ್ವೇಷಣಾ ಕಾರ್ಯಕ್ರಮದ ಸಂಚಾಲಕಿ ಉಮಾ ಶ್ರೀಕಾಂತ್ ಸ್ವಾಗತಿಸಿದ್ದು, ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು ಶುಭಾ ರಾಜೇಂದ್ರ, ರವಿಕಲಾ, ನರೇಶ್‍ಕುಮಾರ್ ಸಸಿಹಿತ್ಲು, ಹಾಗೂ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.