ಪರಿಶುದ್ಧ ಮನಸ್ಸಿನೊಂದಿಗೆ ಸತ್ಕಾರ್ಯಗಳಿಗೆ ವಿನಿಯೋಗಿಸುವಾಗ ಮಾನವ ಜನ್ಮ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿಯನ್ನು ಬಲಪಡಿಸುವಲ್ಲಿ ಆರಾಧನಾ ಕೇಂದ್ರಗಳು ದಾರಿದೀಪವಾಗಬೇಕು ಹಾಗೂ ಮಾನವ ಬದುಕಿನ ವಿಕಸನಕ್ಕೆ ಸಂಸ್ಕಾರ ,ಸಂಸ್ಕೃತಿಯ ಮಾರ್ಗದರ್ಶನ ನೀಡುವ ಕೇಂದ್ರಗಳಾಗಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ.ಎ.ಮಹಮ್ಮದ್ ಹನೀಫ್ ತಿಳಿಸಿದರು.
ಅವರು ದಿನಾಂಕ 18.10.2017 ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ತುಳುವೆರೆ ತುಡಾರ ಪರ್ಬ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಬೆಳಕಿನ ಹಬ್ಬವು ಬಲಿಯೇಂದ್ರ ಪೂಜೆ, ಗೋಪೂಜೆ, ದೀಪಗಳ ಬೆಳಕಿನ ನೋಟದ ಮೂಲಕ ತುಳುವೆರೆ ತುಡಾರ ಪರ್ಬ ಆಚರಿಸಿ ಸಂಸ್ಕತಿ, ಸಂಸ್ಕಾರ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಯುವವಾಹಿನಿ ಮುಲ್ಕಿ ಘಟಕದ ಶ್ರಮ ಶ್ಲಾಘನೀಯ ಎಂದು ಬಲೆಕಿ ಮರದ ದೊಂದಿ ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಕರ್ಗಲ್ ಕಾಯನಗಾ ಬೋರ್ಗಲ್ಲ್ ಪೂವಾನಗ
ಉರ್ದು ಮದ್ದೋಲಿ ಆನಗ ಗೊಡ್ಡೆರ್ಮೆ ಗೋಣಿ ಆನಗ
ಅರಕ್ ದ ಒಟ್ಟೆ ಓಡೋಡ್ ಮಾಯದ ಮೊಂಟು ಜಲ್ಲಡ್
ಪೊಟ್ಟು ಗಟ್ಟಿ ಪೊಡಿ ಬಜಿಲ ಪೊಲಿ ಕೊನೆಯೆರೆ…..ಬಲ ಬಲಿಯೇಂದ್ರ……
ಕೂ…..ಕೂ…..ಕೂ…..
ಎಂದು ರಂಗಕರ್ಮಿ ಜಯಕುಮಾರ್ ಕುಬೆವೂರು ಬಲಿಯೇಂದ್ರನನ್ನು ಕರೆದಾಗ ಮೇಳೈಸಿದ ಸಭಾಸದರು ಕೂ….ಎಂದು ದ್ವನಿ ಸೇರಿಸಿದರು. ವಿವಿಧ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳ ಸಾಲು , ತುಳಸಿಕಟ್ಟೆಯ ಹಿನ್ನಲೆಯಲ್ಲಿ ನಿರ್ಮಿಸಿದ ,ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ವೇದಿಕೆಯಲ್ಲಿ ಬಲೆಕಿ ಮರದ ದೊಂದಿ ದೀಪ ಆಕರ್ಷಣೀಯವಾಗಿತ್ತು. ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಾಮನ ಕೋಟ್ಯಾನ್ ನಡಿಕುದ್ರು ಇವರ ಸಾಧನೆಯನ್ನು ಗುರುತಿಸಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಯುವವಾಹಿನಿ ಮುಲ್ಕಿ ಘಟಕದ ಮಾಜಿ ಅಧ್ಯಕ್ಷರಾದ ಮೋಹನ್ ಸುವರ್ಣ ಸನ್ಮಾನ ಪತ್ರ ವಾಚಿಸಿದರು.ಸನ್ಮಾನ ಸ್ವೀಕರಿಸಿದ ಮಾಮನ ಕೋಟ್ಯಾನ್ ಯುವವಾಹಿನಿಗೆ ಕೃತಜ್ಞತೆ ಸಲ್ಲಿಸಿದರು.
ದೀಪದಿಂದ ದೀಪ ಚಚ್ಚಿ ಪ್ರೀತಿಯಿಂದ ಪ್ರೀತಿ ಬೆಳೆಸುವ ಹಬ್ಬ ದೀಪಾವಳಿ, ಹಬ್ಬಗಳಿಗೆ ತ್ಯಾಗ ಬಲಿದಾನದ ಹಿನ್ನೆಲೆ ಇದೆ., ಕೃಷಿ ಬದುಕಿನ ಕಷ್ಟದ ಬದುಕನ್ನು ಸಂತಸ ಮತ್ತು ಸಡಗರದ ಮೂಲಕ ಕಳೆಯಲು ಹಬ್ಬಗಳು ಸ್ಫೂರ್ತಿ ಮತ್ತು ಸಹಕಾರಿ ಎಂದು ಮುಖ್ಯ ಅತಿಥಿ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಸಹಶಿಕ್ಷಕಿ ರೋಸಿ ಅರಾನ಼ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾದ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ಹಾಗೂ ಯುವವಾಹಿನಿ ಮುಲ್ಕಿ ಘಟಕದ ಸಲಹೆಗಾರರಾದ ಪರಮೇಶ್ವರ ಪೂಜಾರಿ ಶುಭ ಹಾರೈಕೆ ಮಾಡಿದರು. ಕಾರ್ಯಕ್ರಮದ ಅತಿಥಿಗಳು ಹಾಗೂ ಸಾರ್ವಜನಿಕರಿಗೆ ಹೆಬ್ಬಲಸು ಹಾಗೂ ಹಳದಿ ಎಲೆಯಲ್ಲಿ ಮಾಡಿದ ಸಿಹಿ ಗಟ್ಟಿ, ಸಪ್ಪೆ ಗಟ್ಟಿ, ಮತ್ತು ಅವಲಕ್ಕಿ ನೀಡಿ ತುಡಾರ ಪರ್ಬ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಯೋಗೀಶ್ ಕೋಟ್ಯಾನ್ ಸ್ವಾಗತಿಸಿದರು.
ಕಾರ್ಯಕ್ರಮದ ಸಂಚಾಲಕರಾದ ಶ್ರೀಶ ವಿ.ಕೋಟ್ಯಾನ್, ರಾಜೀವಿ ವಿಶ್ವನಾಥ್, ಕೋಶಾಧಿಕಾರಿ ಭಾರತಿ ಭಾಸ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಯೋಗೀಶ್ ಕೋಟ್ಯಾನ್ ಪ್ರಾಸ್ತಾವನೆ ಮಾಡಿದರು, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಧನ್ಯವಾದ ನೀಡಿದರು, ಯುವವಾಹಿನಿ ಜಾಲತಾಣದ ಸದಸ್ಯರಾದ ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ರಂಗಭೂಮಿ ಕಲಾವಿದ ತುಳುನಾಡ ರತ್ನ ದಿನೇಶ್ ಅತ್ತಾವರ ಇವರಿಂದ ನೃತ್ಯ ಕಾರ್ಯಕ್ರಮ ಹಾಗೂ ವಿನಯ ಕುಮಾರ್ ಕೊಲ್ಲೂರು ಇವರ ಹಾಡುಗಳು ಮನಸೂರೆಗೊಂಡವು.
ಗೂಡುದೀಪ ಸ್ಪರ್ಧೆ
ಯುವವಾಹಿನಿಯ ಘಟಕಗಳಿಗೆ ಏರ್ಪಡಿಸಲಾದ ಗೂಡುದೀಪ ಸ್ಪರ್ಧೆಯಲ್ಲಿ ಯುವವಾಹಿನಿ ಪಡುಬಿದ್ರೆ ಘಟಕವು ಪ್ರಥಮ ಬಹುಮಾನ, ಯುವವಾಹಿನಿ ಬಜ್ಪೆ ಘಟಕವು ದ್ವಿತೀಯ ಬಹುಮಾನ, ಹಾಗೂ ಮಂಗಳೂರು ಮಹಿಳಾ, ಬಂಟ್ವಾಳ, ಪಣಂಬೂರು, ಕಟಪಾಡಿ, ಉಡುಪಿ ಹಾಗೂ ಅಡ್ವೆ ಘಟಕಗಳು ಪ್ರೋತ್ಸಾಹಕ ಬಹುಮಾನ ಪಡೆದರು.
Niceprograme