ಬಹುಶಃ ಬಲು ತಡವಾಗಿ ಒಂದು ಪ್ರಶ್ನೆ ನನ್ನ ಮನದ ಮುಂದೆ ಸುಳಿದಾಡುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಅವಘಡಗಳಿಗೆ ಬಲಿಯಾಗುತ್ತಿರುವವರ ನಡುವೆ ಬಿಲ್ಲವ ಯುವ ಸಮುದಾಯದ ಪಾಲು ಅಧಿಕ ಎನ್ನುವುದನ್ನು ನಾವು ಒಪ್ಪಬೇಕಾದ ಸತ್ಯ. ನಾನಾ ಕಾರಣದಿಂದ ಮನೆ ತೊರೆಯುವುದರಿಂದ ಹಿಡಿದು ಜೈಲು ಸೇರುವವರೆಗೆ ನಮ್ಮವರ ಪಾಲು ಹಿರಿದು ಎನ್ನಬಹುದು. ಲೋಕಕ್ಕೆ ಶಾಂತಿ ಮಂತ್ರವನ್ನು ಪ್ರತಿಪಾದಿಸಿದ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ಆದರ್ಶದಡಿಯಲ್ಲಿ ಜನಿಸಿದ ನಮಗೆ ಅವರ ತತ್ವಾದರ್ಶಗಳೇ ಅರ್ಥವಾಗದೇ ಇರುವುದು ದುರಂತವೇ ಸರಿ. ಲೋಕಕ್ಕೆ ಶಾಂತಿ ಮಂತ್ರ ನೀಡಿ ಬ್ರಹ್ಮಶ್ರೀ ಅನಿಸಿಕೊಂಡಿದ್ದ ಗುರುಗಳಿಗೆ ಅವರ ಸಮಾಜದಲ್ಲಿ ಇಂದು ನಡೆದ ಪರಿವರ್ತನೆ ನೋವು ತಂದರೂ ಆಶ್ಚರ್ಯವಿಲ್ಲ.
ನಮ್ಮಲ್ಲಿ ಸಂಘಗಳು ಹುಟ್ಟಿಕೊಳ್ಳುತ್ತಿದೆ, ಸಂಘಗಳು ಬೆಳೆಯುತ್ತಿದೆ, ಆದರೆ ಸಾಂಘಿಕ ಮನಸುಗಳು ಮಾತ್ರ ಕಿರಿದಾಗುತ್ತಿದೆ. ನಮ್ಮೊಳಗೆ ನಾವುಗಳು ಮಾಡುತ್ತಿರುವ ಕಾರ್ಯ ಎಂತಹುದು ಎಂದು ಒಂದು ಕ್ಷಣ ವಿಮರ್ಶೆ ನಡೆಸಿದರೆ ನಮಗೆ ಅರಿವಿಲ್ಲದಂತೆ ನಮ್ಮ ಸಮಾಜದ ಎಷ್ಟು ಭಾಗವನ್ನು ಕಳೆದುಕೊಂಡಿದ್ದೇವೆ ಎನ್ನುವುದು ತಿಳಿಯುತ್ತದೆ. ಒಂದು ಕಡೆ ನಮ್ಮ ಸಮಾಜದ ಯುವಕರು ಕ್ರೈಮ್‌ಗಳಲ್ಲಿ ಭಾಗಿಯಾಗಿ ಜೈಲು ಸೇರಿದರೆ ಯುವತಿಯರು ಆಸೆ, ಆಮಿಷ, ಕೌಟುಂಬಿಕ ನೋವುಗಳಿಂದ ಜರ್ಝರಿತರಾಗಿ ಮನೆ ತೊರೆದು ಕ್ಷಣಿಕ ಆಸೆಯನ್ನು ಬೆಂಬತ್ತಿ ಸಾಗಿ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ಮನೆಯೊಳಗಿನ ಸಮಸ್ಯೆಯನ್ನು ಸರಿ ಮಾಡಲಾಗದ ನಾವುಗಳೂ ಸಂಘಟನೆ ಮೂಲಕ ಸಮಾಜ ಸರಿ ಮಾಡಲು ಸಾಧ್ಯವೇ? ಎಂದು ಮನಸ್ಸು ಹೇಳುತ್ತಿದೆ. ಈ ಸಮಯದಲ್ಲಿ ನನಗೆ ಹೆಚ್ಚು ನೆನಪಾಗುವುದು ಅದು ಬಿಲ್ಲವ ಮಹಿಳಾ ಸಂಘಟನೆ ಅಥವಾ ಬಿಲ್ಲವ ಸಂಘಟನೆಗಳಲ್ಲಿ ಮಹಿಳೆ. ಒಂದೇ ಅರ್ಥ ಸೂಸುವ ಈ ಎರಡು ಪ್ರಶ್ನೆಗಳು ಪ್ರಸ್ತುತ ದಿನದಲ್ಲಿ ಆತ್ಮ ವಿಮರ್ಶೆಗೆ ಒಡ್ಡಲೇ ಬೇಕಾದ ಪ್ರಶ್ನೆ. ನಮ್ಮಲ್ಲಿ ಅಂತರಾತ್ಮ ಎನ್ನುವುದೊಂದಿದ್ದರೆ ಅಲ್ಲಿ ನಾವು ಈ ಪ್ರಶ್ನೆಯನ್ನಿಟ್ಟು ಉತ್ತರಕ್ಕೆ ತಡಕಾಡ ಬೇಕಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ ನಮ್ಮ ದೇಶದ ಬಗ್ಗೆ ರಾಮರಾಜ್ಯದ ಕನಸ್ಸು ಕಂಡಾಗ ಅವರು ಒಂದು ಮಾತನ್ನು ಉಲ್ಲೇಖಿಸಿದ್ದರು. ನಮ್ಮ ದೇಶದಲ್ಲಿ ಒಬ್ಬಂಟಿಯಾಗಿ ಒಬ್ಬಳು ಹೆಣ್ಣು ಮಗಳು ನಡುರಾತ್ರಿ ನಿಶ್ಚಿಂತೆಯಿಂದ ನಡೆದುಕೊಂಡು ಮನೆ ಸೇರುವ ಕಾಲ ಎಂದು ಬರುವುದೋ ಅಂದು ನಮ್ಮದೇಶ ರಾಮ ರಾಜ್ಯವಾಗುತ್ತೆ ಎಂದು. ಬಹುಷಃ ಗುಲಗುಂಜಿ ಕಾಯಿ ಸಂಪೂರ್ಣವಾಗಿ ಕಪ್ಪಾದಾಗ ಪ್ರಳಯ ಆಗುತ್ತೆ ಎಂದು ಜನಪದರು ಹೇಳಿದಷ್ಟೇ ಸತ್ಯದ ಮಾತು ಗಾಂಧಿಯ ಕನಸ್ಸಾಗಿತ್ತು. ಗುಲಗುಂಜಿ ಕಪ್ಪಾಗಲೂ ಸಾಧ್ಯವಿಲ್ಲ. ಹೆಣ್ಣುಮಗಳು ತಡರಾತ್ರಿ ಏಕೆ ನಡುಹಗಲೇ ಒಬ್ಬಂಟಿಯಾಗಿ ಹೋಗಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯಕಾರಣ ಮಹಿಳೆ ಇಂದಿಗೂ ಸಂಘಟನೆಯಲ್ಲಿ ಸಬಲ ಗೊಂಡಿಲ್ಲ. ಇದು ಒಟ್ಟು ಮಹಿಳಾ ಸಮುದಾಯವನ್ನೇ ಗಮನದಲ್ಲಿರಿಸಿ ಹೇಳುವ ಮಾತಾದರೆ ಇನ್ನು ಬಿಲ್ಲವ ಸಮುದಾಯಕ್ಕೆ ಸೀಮಿತಗೊಳಿಸಿ, ಸಂಘಟನಾತ್ಮಕವಾಗಿ ಬಿಲ್ಲವ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದರೆ ಬಿಲ್ಲವ ಮಹಿಳೆಯರು ಸಂಘಟನಾತ್ಮಕವಾಗಿ ಸಾಧಿಸಿದ್ದು ತೃಣ ಮಾತ್ರ ಎನ್ನಬಹುದು.
ನಮ್ಮಲ್ಲಿ ಬಿಲ್ಲವ ಅಥವಾ ಅದಕ್ಕೆ ಹೊಂದಿಕೊಂಡ ಉಪನಾಮವನ್ನು ಇರಿಸಿಕೊಂಡು ಹುಟ್ಟಿಕೊಂಡಿರುವ ಹತ್ತಾರು ಬಿಲ್ಲವ ಮಹಿಳಾ ಸಂಘಟನೆಗಳಿವೆ, ಅಲ್ಲದೆ ಬಿಲ್ಲವ ಸಂಘಟನೆ ಜೊತೆ ಕೈ ಜೋಡಿಸಿಕೊಂಡು ದುಡಿಯುವ ಮಹಿಳಾ ಉಪಸಮಿತಿಗಳೂ ಇವೆ. ಆದರೆ, ಮಹಿಳಾ ಹೋರಾಟಗಳಿಗೆ ಇನ್ನೂ ಶಕ್ತಿಯೇ ಬಂದಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯ. ನಮ್ಮ ಮಹಿಳಾ ಸಂಘಟನೆಗಳು ಆಟಿಡೊಂಜಿ ದಿನ, ವರಮಹಾಲಕ್ಷ್ಮೀ ಪೂಜೆ, ಸತ್ಯನಾರಾಯಣಕಲ್ಪೋಕ್ತ, ಅನ್ನ ಸಂತರ್ಪಣೆ ದಿನ ಅನ್ನ ಸಾರು ಬಡಿಸಲು, ಮೆರವಣಿಗೆಗೆ ಕಲಶ ಕನ್ನಡಿ ಹಿಡಿಯಲು, ಒಂದೆರಡು ಕಡೆ ಚೆಂಡೆ ಬಾರಿಸಲು, ಸ್ವಸಹಾಯ ಸಂಘದ ಸಮಾವೇಶಗಳಿಗೆ ಸಮವಸ್ತ್ರ ಧರಿಸಿಕೊಂಡು ಹೋಗಲು ಮಾತ್ರವೇ ಸೀಮಿತವಾಗುತ್ತಿದ್ದಾರೆ. ಈ ಮಾತು ಸ್ವಲ್ಪ ಕಹಿ ಎನಿಸಿದರೂ ಸತ್ಯ ಎನ್ನುವುದನ್ನೂ ನಾವು ಒಪ್ಪಿಕೊಳ್ಳಲೇಬೇಕು ಅಲ್ಲವೆ.
ಸ್ನೇಹಿತರೇ ನೀವೇ ಹೇಳಿ ನಾನು ಹೇಳಿದ್ದಕ್ಕಿಂತ ಒಂದೆರಡು ಕೆಲಸ ಆಚೀಚೆ ನಡೆದಿರಬಹುದು ಅದನ್ನು ಬಿಟ್ಟು ಬೇರೆನಾದರೂ ನಾವು ಸಾಧಿಸಿದ್ದೇವೆಯೇ ಎನ್ನುವ ಒಂದು ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಂಡು ಅದಕ್ಕೆ ಪ್ರಮಾಣಿಕವಾಗಿ ಉತ್ತರ ಹುಡುಕುವ ಪ್ರಯತ್ನ ನಡೆಸಿದಾಗ ಸತ್ಯ ತಿಳಿಯುತ್ತದೆ ಅಲ್ಲವೆ. ಪುರುಷರು ಮಹಿಳೆಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ಎಲ್ಲದರಲ್ಲೂ ಸಮಾನವಾದ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಪ್ರತಿಯೊಂದು ಕೆಲಸದಲ್ಲೂ ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗ ನಮ್ಮ ಮಹಿಳೆಯರ ಸಾಧನೆ ಏಕೆ ಶೂನ್ಯ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.
ಬಿಲ್ಲವರಲ್ಲಿ ರಾಜಕೀಯ ಬಲ ತುಂಬಾ ಕಡಿಮೆ ಇದೆ, ಪ್ರತಿ ಬಾರಿ ರಾಜಕೀಯದಲ್ಲಿ ನಾವು ಹೊಡೆತ ತಿನ್ನುತ್ತಲೇ ಬರುತ್ತಿದ್ದೇವೆ. ಈ ಹೊಡೆತ ನೀಡಿದವರಲ್ಲಿ ಮಹಿಳೆಯರ ಪಾತ್ರ ಇಲ್ಲ ಎನ್ನಲು ಸಾಧ್ಯವಿದೆಯೇ? ನಮಗೆ ಪ್ರತಿಸ್ಪರ್ಧಿಯಾದ ಮತ್ತೊಂದು ಸಮುದಾಯವನ್ನು ನೋಡಿ ಅಲ್ಲಿ ಗ್ರಾಮ ಪಂಚಾಯತ್‌ನಿಂದ ಹಿಡಿದು ವಿಧಾನ ಸಭೆಯವರೆಗೆ ಸ್ಪರ್ಧಿಸಿ ಗೆದ್ದ ಎಷ್ಟು ಮಂದಿ ಮಹಿಳೆಯರಿಲ್ಲ? ರಾಜಕೀಯವಾಗಿ ಗುರುತಿಸಿಕೊಂಡು ಸಕ್ರಿಯವಾಗಿರುವ ಮಹಿಳೆಯರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ರಾಜಕೀಯವಾಗಿ, ಸಾಮಾಜಿಕವಾಗಿ ವಾದ ಮಂಡಿಸಬಲ್ಲ ಎಷ್ಟು ಹೆಣ್ಣು ಧ್ವನಿಗಳು ನಮ್ಮಲ್ಲಿ ಇದೆ. ಸಮುದಾಯ ಸಂಘಟನೆಯ ಮುಖ್ಯ ಸ್ಥಾನಕ್ಕೆ ಎಷ್ಟು ಮಂದಿ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ? ಅವರದ್ದು ಮಹಿಳಾ ಸಮಿತಿ ಮತ್ತು ಉಪಸಮಿತಿಯ ನಾಯಕತ್ವ ಮಾತ್ರ.
ನಮ್ಮಲ್ಲಿ ಐಎಎಸ್, ಐಪಿಎಸ್ ಕಲಿತ ಮಹಿಳೆಯರು ಎಷ್ಟಿದ್ದಾರೆ? ಒಂದೋ ಎರಡೋ ಮೂರೋ ಅಷ್ಟೇ ಅದೂ ಇಡೀ ಭಾರತ ದೇಶದಲ್ಲಿ, ವೈದ್ಯರಾಗಿ, ಇಂಜಿನಿಯರಾಗಿ, ವಕೀಲರಾಗಿ, ಸಾಧನೆ ಮೆರೆದವರಿದ್ದಾರೆಯೇ? ಸಾಹಿತಿಗಳಾಗಿ ಮೇರು ಪರ್ವತ ಏರಿದ್ದವರು ಮಾತ್ರ ನಮ್ಮಲ್ಲಿ ಅಧಿಕವಾಗಿದ್ದಾರೆ. ಸ್ನೇಹಿತರೇ ಇದನ್ನೆಲ್ಲ ನಾವು ಎಷ್ಟು ಬಾರಿ ಯೋಚಿಸುತ್ತೇವೆ ಹೇಳಿ? ಒಮ್ಮೆಯೂ ಯೋಚಿಸುವುದಿಲ್ಲ! ಒಂದೇ ಒಂದು ಬಾರಿ ಆಟಿಯ ಕೂಟದ, ಸತ್ಯನಾರಾಯಣ ಪೂಜೆಯ, ಮೆರವಣಿಗೆಗಳ ಕಲಶ ಕನ್ನಡಿಯ ಚರ್ಚೆ ಬದಿಗಿರಿಸಿ ಈ ಬಗ್ಗೆ ನಾವು ಚರ್ಚಿಸೋಣವೇ ಹೇಳಿ.
ಸ್ನೇಹಿತರೇ ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯೂ ಸೇರಿ 28 ಪೊಲೀಸ್ ಠಾಣೆಗಳಿವೆ. ಪ್ರತಿಯೊಂದು ಠಾಣೆಯಲ್ಲೂ ಯುವತಿಯರು ನಾಪತ್ತೆಯಾಗುತ್ತಿರುವ ವರ್ಷಕ್ಕೆ ಹತ್ತು ಪ್ರಕರಣಗಳು ದಾಖಲುಗೊಳ್ಳುತ್ತಲೇ ಇರುತ್ತದೆ. ಈ ಪೈಕಿ ಬಿಲ್ಲವರ ಯುವತಿಯರ ಪಾಲೇ ಅಧಿಕ ಎನ್ನುವುದನ್ನು ನೀವು ಒಪ್ಪುತ್ತೀರಾ? ಒಪ್ಪಲೇಬೇಕು. ಬೇರೆ ಸಮುದಾಯದವರ ಜೊತೆ ಪರಾರಿಯಾಗುವವರಲ್ಲಿ ನಮ್ಮ ಹೆಣ್ಣುಮಕ್ಕಳೇ ಅಧಿಕ. ಅದಕ್ಕೆ ಕಾರಣ ನಮ್ಮಲ್ಲಿ ಜಾಗೃತಿಯ ಕೊರತೆ ಇದೆ, ಸಂಘಟನೆಯ ಕೊರತೆ ಇದೆ, ಸಮಾಜದಲ್ಲಿ ಅಂಚಿನಲ್ಲಿರುವವರನ್ನು ನಾವಿನ್ನೂ ತಲುಪಲೇ ಇಲ್ಲ. ಜೀವಂತವಾಗಿರುವ ಬಡತನ, ವರದಕ್ಷಿಣೆ ಸಮಸ್ಯೆ, ನಮ್ಮ ಹೆಣ್ಣುಮಕ್ಕಳನ್ನು ದಾರಿತಪ್ಪಿಸುತ್ತಿದೆ. ಹುಡುಗನ ಆಮಿಷಗಳಿಗೆ ಬಲು ಬೇಗನೇ ಬಲಿಯಾಗಿ, ಬದುಕನ್ನೇ ನರಕ ಸದೃಶ ಮಾಡುತ್ತಿದ್ದಾರೆ. ಸ್ನೇಹಿತರೇ ಇದನ್ನು ನಾವು ಬದಲುಗೊಳಿಸಬೇಕು, ಅದಕ್ಕಾಗಿ ನಾವು ಕಂಕಣ ತೊಡಬೇಕು, ಪರಿವರ್ತನೆ ಎನ್ನುವುದು ಹೆಣ್ಣಿನಿಂದಲೇ ಆರಂಭಗೊಂಡಿದ್ದು. ಆಕೆಯಿಂದಲೇ ಮುಂದುವರಿಯಬೇಕು. ಇಂದು ವಿದ್ಯೆ ಎಲ್ಲರೂ ನೀಡುತ್ತಾರೆ. ಎಷ್ಟೋ ಕಷ್ಟವಾದರೂ ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುತ್ತಾರೆ. ನಾವು ಕೊಡುವ ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಏನನ್ನೂ ಸಾಧಿಸದು. ಅದನ್ನು ಬದಿಗಿರಿಸೋಣ, ಬಿಲ್ಲವ ಮಹಿಳೆ ಸಂಘಟನಾತ್ಮಕವಾಗಿ ಹೋರಾಡಬೇಕು. ನಿಮಗೆ ತಿಳಿದಿದೆಯಲ್ಲವೇ ಪಶ್ಚಿಮ ಬಂಗಾಳದಲ್ಲಿ ಗುಲಾಬಿ ಗ್ಯಾಂಗ್ ಎನ್ನುವ ಮಹಿಳಾ ಸಂಘಟನೆ ತನ್ನ ರಕ್ಷಣೆಯನ್ನು, ತನ್ನವರ ಬದುಕನ್ನು ರೂಪಿಸುವ ಕೆಲಸ ಮಾಡಿದೆ. ಇಂದು ಗುಲಾಬಿ ಗ್ಯಾಂಗಿಗೆ ಇಡೀ ಪಶ್ಚಿಮ ಬಂಗಾಳವೇ ಥರಥರ ನಡುಗುತ್ತದೆ. ಗುಲಾಬಿ ಸೀರೆ ಉಟ್ಟ ಮಹಿಳೆ ಎದುರಿಗೆ ಬಂದರೆ ಎಂಥ ಗಟ್ಟಿಗನೂ ಬೆಚ್ಚಿ ಬೀಳುತ್ತಾನೆ. ಹೀಗಾಗಿ ಅಲ್ಲಿ ಅನಾಚಾರ ಹತೋಟಿಗೆ ಬಂದಿದೆ. ನಾವು ಮತ್ತೊಂದು ಗುಲಾಬಿ, ನೀಲಿ, ಬಿಳಿಯ ಗ್ಯಾಂಗ್ ಕಟ್ಟುವ ಎಂದು ನಾನು ತಿಳಿಸುತ್ತಿಲ್ಲ. ಬದಲಾಗಿ ಅಂತಹ ಹೋರಾಟ ಮನೋಭಾವ ನಮ್ಮಲ್ಲಿ ಬರಬೇಕು. ಸಂಘಟನೆ ಕಾರ್ಯಕ್ಕೆ ಸೀಮಿತವಾಗದೆ ಸಾಧನೆಗೆ ಒತ್ತು ನೀಡಬೇಕು. ಸಾಮಾಜಿಕವಾದ ಒಂದು ಪರಿವರ್ತನೆಯನ್ನು ವರುಷಕ್ಕೆ ಒಂದು ತಂದರೆ ಸಾಕು ಸಂಘಟನೆಗೆ ಅರ್ಥ ಬರುತ್ತದೆ. ಇದಷ್ಟೇ ನನ್ನ ಕಾಳಜಿ.
ಇವನದ್ದು ಅದೇ ರಾಗ ಅದೇ ಹಾಡು ಎಂದು ನೀವು ಮೂಗು ಮುರಿಯಬಹುದು. ಇವನಿಗೆ ಈ ವಿಷಯ ಬಿಟ್ಟು ಮತ್ತೊಂದು ವಿಷಯ ಏತಕ್ಕೆ ಸಿಗುತ್ತಿಲ್ಲ ಎಂದು ದೂರಬಹುದು. ಇವನಿಗೆ ಈ ಒಂದು ವಿಷಯವನ್ನು ಹೊರತು ಪಡಿಸಿದರೆ ಮತ್ತೊಂದು ವಿಷಯ ಇಲ್ಲ ಎಂದು ಅಂದುಕೊಳ್ಳಬಹುದು. ಹೌದು! ಎಂದೆಂದಿಗೂ ನನ್ನನ್ನು ಕಾಡುತ್ತಿರುವ ಆತಂಕ ಇದೊಂದೇ. ನಮ್ಮ ಸಮಾಜವನ್ನು ಇಂದು ಕಾಡುತ್ತಿರುವ ಕೋಟಲೆಯೂ ಇದೇ. ಯಾವುದೇ ವೃತ್ತಪತ್ರಿಕೆಯನ್ನು ತಿರುವಿ ಹಾಕಿ ನೋಡಿ. ಅಲ್ಲೊಂದು ಮೂಲೆಯಲ್ಲಿ ನಾಪತ್ತೆ ಎನ್ನುವ ಕಾಲಂ ಇರುತ್ತದೆ. ಅದರಲ್ಲಿ ಆ ದಿನ ನಾಪತ್ತೆಯಾದವರ ವಿವರ ಇರುತ್ತದೆ. ಅದರಲ್ಲಿ ಕನಿಷ್ಠ ಒಂದಾದರೂ ಬಿಲ್ಲವ ಯುವತಿ ಇದ್ದೇ ಇದ್ದಾಳೆ. ಯಾವುದೇ ಕ್ರೈಮ್ ಪತ್ರಿಕೆಯನ್ನು ತಿರುವಿ ಹಾಕಿ. ಅಲ್ಲೊಂದು ಕೊಲೆ, ಇಲ್ಲೊಂದು ದಾಂಧಲೆ, ಅಲ್ಲೊಂದು ಲೂಟಿ, ಇಲ್ಲೊಂದು ಕಾಳಗದ ಸುದ್ದಿ ಇದ್ದೇ ಇರುತ್ತದೆ. ಅದರಲ್ಲಿ ಇರುವವರು ಶೇಕಡಾ 90 ಮಂದಿ ಇರುವವರು ಬಿಲ್ಲವ ಯುವಕರೇ!
ಈಗ ಹೇಳಿ ನಮ್ಮ ಸಮಾಜಕ್ಕೆ ಇವೆರಡಕ್ಕಿಂತ ದೊಡ್ಡದಾದ ಕೇಡು ಮತ್ತೊಂದು ಇದೆಯೇ? 162 ವರುಷಗಳ ಹಿಂದೆ ತಾಂಡವವಾಡುತ್ತಿದ್ದ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಜನ್ಮ ತಳೆದು ಬಂದರು. ತನ್ನ ಶಾಂತಿ ಮಂತ್ರ ಮತ್ತು ತನ್ನದೇ ಆದ ಕಾಯಕದಿಂದ ಅಸ್ಪೃಶ್ಯತೆಯನ್ನು ತೊಡೆದು ಹಾಕಿದರು. ಇಂದು ಬಿಲ್ಲವರನ್ನು ಅಸ್ಪೃಶ್ಯರಂತೆ ಕಾಣುವ ಸಂದರ್ಭಗಳೇ ಇಲ್ಲ ಎನ್ನ ಬಹುದು. ಹಾಗೆಂದು ಬಿಲ್ಲವರ ಮೇಲಿನ ದಾಳಿಗಳಾಗಲಿ, ಬಿಲ್ಲವರನ್ನು ದಾಸ್ಯರನ್ನಾಗಿ ಮಾಡಿಕೊಳ್ಳುವ ಯತ್ನಗಳಾಗಲಿ ಯಾವುದೂ ನಿಂತಿಲ್ಲ. ಬಿಲ್ಲವರ ತಂಕತಾಕತ್ತು, ನಿಷ್ಠೆ ನಂಬಿಕೆಗಳೇ ಅವರನ್ನು ಸೆಟೆದು ನಿಲ್ಲುವಂತೆ ಮಾಡಿ, ಮತ್ತೊಬ್ಬರ ಅಡಿಯಾಳಾಗಿ ಮಾಡುತ್ತಿದೆ. ಪರಿಣಾಮ ಅಧಿಕಾರ ಶಾಹಿಗಳು ಕಾಲಲ್ಲಿ ತೋರಿಸಿದ್ದನ್ನು ನಾವು ಕೈಯಲ್ಲಿ ಮಾಡುವಷ್ಟರ ಮಟ್ಟಿಗೆ ಬೆಳೆದು ಬಂದಿದ್ದೇವೆ.
ಒಂದು ಊರಲ್ಲಿ ಚಿನ್ನದ ಅಂಗಡಿ ಮತ್ತು ಕಬ್ಬಿಣದ ಅಂಗಡಿ ಅಕ್ಕ ಪಕ್ಕದಲ್ಲಿತ್ತು. ಒಂದು ದಿನ ಚಿನ್ನದ ತುಂಡೊಂದು ಕಬ್ಬಿಣದ ಅಂಗಡಿಯ ಮುಂದೆ ಬಿತ್ತು. ಇದನ್ನು ಗಮನಿಸಿದ ಕಬ್ಬಿಣ, ಚಿನ್ನದ ಬಳಿ ಕೇಳಿತು, ‘ಚಿನ್ನಕ್ಕ ಚಿನ್ನಕ್ಕ ನೀನೇಕೆ ಇಲ್ಲಿ ಬಂದು ಬಿದ್ದಿದ್ದೀಯ?’ ಅದಕ್ಕೆ ಚಿನ್ನ ಹೇಳಿತು, ‘ನನಗೆ ಆಗ್ತಿಲ್ಲ, ಅಲ್ಲಿ ನನ್ನನ್ನು ಬಡಿಯುತ್ತಿದ್ದಾರೆ. ಆ ಹೊಡೆತ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿತು.’ ಇದಕ್ಕೆ ಕಬ್ಬಿಣ ನಕ್ಕು ಹೇಳತ್ತೆ, ‘ಚಿನ್ನಕ್ಕ ಸರಿಯಾಗಿ ಗಮನಿಸು, ನಿನ್ನನ್ನು ಅಲ್ಲಿ ಯಾರೋ ಬಡಿಯುತ್ತಿದ್ದಾರೆ. ಆದರೆ ನನ್ನನ್ನು ನೋಡು, ಇಲ್ಲಿ ನನ್ನವರೇ ಬಡಿಯುತ್ತಿದ್ದಾರೆ. (ಚಿನ್ನವನ್ನು ಕಬ್ಬಿಣದಿಂದ ಬಡಿಯುತ್ತಾರೆ, ಆದರೆ ಕಬ್ಬಿಣವನ್ನು ಕಬ್ಬಿಣದಿಂದಲೇ ಬಡಿಯುತ್ತಾರೆ) ಅಷ್ಟೇ ಅಲ್ಲ ಚಿನ್ನಕ್ಕ, ನಿನ್ನನ್ನು ಬೇರೆಯವರು ಎಷ್ಟು ಬಡಿಯುತ್ತಾರೋ ನೀನು ಅಷ್ಟು ಬೆಳ್ಳಗಾಗುತ್ತಿ ಅಂದರೆ ಮಡಿಯಾಗುತ್ತಿ, ಆದರೆ ನನ್ನನ್ನು ನನ್ನವರು ಎಷ್ಟು ಬಡಿಯುತ್ತಾರೋ ನಾನು ಅಷ್ಟು ಪುಡಿಯಾಗುತ್ತೇನೆ’ ಎಂದಿತು. ಹೌದು ನಮ್ಮಲ್ಲಿಯೂ ಇಂದು ಅದೇ ಆಗುತ್ತಿದೆ. ನಮ್ಮ ಸಮುದಾಯ ಚಿನ್ನದಂತೆ ನಮ್ಮನ್ನು ಬೇರೆಯವರು ಎಷ್ಟು ಬಡಿಯುತ್ತಾರೋ ನಾವಷ್ಟು ಗಟ್ಟಿಯಾಗುತ್ತೇವೆ ಮತ್ತು ಬೆಳ್ಳಗಾಗುತ್ತೇವೆ. ಆದರೆ ಕಬ್ಬಿಣದಂತೆ ನಮ್ಮನ್ನು ನಮ್ಮವರು ಹೊಡೆದರೆ ನಾವು ಒಡೆದು ಹೋಗುತ್ತೇವೆ. ಬೆಲೆ ಕಳೆದುಕೊಳ್ಳುತ್ತೇವೆ. ಸಮುದಾಯ ಸಭೆಯಲ್ಲಿ ಮಾತನಾಡುವ ರಾಜಕೀಯ ನಾಯಕರು ರಾಜಕೀಯ ಸಭೆಯಲ್ಲಿ ಬಿಲ್ಲವ ಸಮುದಾಯವನ್ನೇ ದೂಷಿಸಿ ಮಾತನಾಡುತ್ತಾರೆ. ಪಕ್ಷ ನನ್ನ ರಕ್ತ, ಮೊದಲು ಪಕ್ಷ ಮತ್ತೆ ಜಾತಿ ಎನ್ನುತ್ತಾರೆ. ಆದರೆ ಅದೇ ಬೇರೆ ಸಮುದಾಯದವರು ತೋರಿಕೆಗೆ ಪಕ್ಷ ಎಂದರೂ ಬಳಿಕ ತೆರೆಯ ಮರೆಯಲ್ಲ್ಲಿ ಎಲ್ಲರೂ ಒಂದಾಗಿ ತಮ್ಮ ಜಾತಿಯಾತನನ್ನು ಗೆಲ್ಲಿಸುತ್ತಾರೆ. ಎಲ್ಲಿ ಏನೇ ಅವಕಾಶ ಇದ್ದರೂ ಇತರ ಜಾತಿಯವರು ಅದನ್ನು ತಮ್ಮ ಸಮುದಾಯದವನಿಗೆ ನೀಡುತ್ತಾರೆ. ಆದರೆ ನಮ್ಮವರೇ ನಮ್ಮವರನ್ನು ದೂರ ಇರಿಸಿ ಮತ್ತೊಂದು ಸಮುದಾಯದವನಿಗೆ ನೀಡುತ್ತಾರೆ. ಈ ಕಾರಣದಿಂದಲೇ ನಾವು ಇದ್ದಲ್ಲಿಯೇ ಇದ್ದೇವೆ. ಅವರು ಎಲ್ಲಾ ಕಡೆ ಅವಕಾಶ ಪಡೆದು ಬೆಳೆಯುತ್ತಿದ್ದಾರೆ. ಬಂಧುಗಳೇ ಬದಲಾವಣೆಗೆ ಇದು ಸೂಕ್ತ ಕಾಲ. ನಾನು, ನನ್ನ ಸಮಾಜ, ನನ್ನ ಸಮುದಾಯ ಅಷ್ಟನ್ನು ವೈಯಕ್ತಿಕವಾಗಿ ನಾವು ಯೋಚಿಸುವ, ನನ್ನ ಸಮಾಜಕ್ಕೆ ನನ್ನ ಸೇವೆ ಎಂದು ಚಿಂತಿಸುವ, ಆವಾಗ ನಮ್ಮ ಸಮಾಜ ಗಟ್ಟಿಗೊಳ್ಳುತ್ತದೆ ಎನ್ನುವುದೇ ನಮ್ಮ ಆಶಯ.
very nice article sir.ee vichàra enna manasdla ithnd unden sari malpare sadya undu namma saghatanerd.