ಪಾಡ್ದನದಲ್ಲಿ ಸರಿಸಾಟಿಯಿಲ್ಲದ ಬಂಟರೆಂದು ಕರೆಯಲ್ಪಟ್ಟಿರುವ ಬೈದರ್ಕಳರೆಂದು ಆರಾಧಿಸಲ್ಪಡುತ್ತಿರುವ ಅವಳಿ ವೀರ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯತಿ. ತುಳುನಾಡಿನ ಪಾರಂಪರಿಕ ನಾಟಿವೈದ್ಯ ಪದ್ಧತಿಯ ಮೂಲ ಪುರುಷೆಯಾಗಿ ಇತಿಹಾಸದಲ್ಲಿ ಮಹತ್ತರ ಗೌರವದ ಸ್ಥಾನ ಪಡೆದುಕೊಂಡಿದ್ದಾಳೆ. ತುಳು ಮೌಖಿಕ ಸಾಹಿತ್ಯವಾದ ಪಾಡ್ದನದ ಕಥೆಯಲ್ಲಿ ದೇಯಿಯು ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಹುಟ್ಟಿಕೊಂಡವಳೆಂದು ಹೇಳಿದೆ. ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪಡುಮಲೆಯ ಪೆಜನಾರ ದಂಪತಿಗಳು (ದೇಯಿಯು ಹುಟ್ಟಿದ ಪೆಜನಾರರ ಕೂವೆ ತೋಟಮನೆಯು ಈಗಲೂ ಇದೆ. ಇವರು ಕರಾಡ ಬ್ರಾಹ್ಮಣರಾಗಿರುವರು. ಕರಾಡ ಬ್ರಾಹ್ಮಣರು 12-14 ಶತಮಾನದಲ್ಲಿ ತುಳುನಾಡಿಗೆ ವಲಸೆ ಬಂದಿರುವರು. ನಾಟ ಪಂಥದ ಕಟ್ಟಾ ಅನುಯಾಯಿಗಳಾಗಿದ್ದ ಬಿಲ್ಲವರಿಗೂ ಕರಾಡ ಬ್ರಾಹ್ಮಣರಿಗೂ ಅನ್ಯೋನ್ಯ ಸಂಬಂಧವಿತ್ತು.) ಈ ಮಗುವನ್ನು ಕಂಡು ತಮಗೆ ದೇವರು ಕರುಣಿಸಿದ ವರಪ್ರಸಾದವೆಮದು ಭಾವಿಸಿ ಮಗುವಿಗೆ ಸ್ವರ್ಣಕೇದಗೆ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಸಾಕಿ ಸಲಹುವರು. ಅವಿದ್ಯಾವಂತರಾಗಿದ್ದ ನಿಷ್ಕಲ್ಮಶ ನಡೆನುಡಿಯ ಜನಪದರು ದೇಯಿಯ ಹುಟ್ಟಿನ ಬಗ್ಗೆ ಅತಿಮಾನುಷ ಕಲ್ಪನೆಯ ಕಥೆಯನ್ನು ಹೆಣೆದಿದ್ದಾರೆ. ಇಂತಹ ಕಲ್ಪನೆಯ ಕಥೆಯನ್ನು ನಾವು ಪುರಾಣ ಹಾಗೂ ಇತಿಹಾಸಗಳಲ್ಲಿ ಕಾಣಬಹುದು. ತುಳುನಾಡ ಸಿರಿಯ ಪಾಡ್ದನದಲ್ಲಿ ಸಿರಿಯ ತಂದೆ ಬಿರ್ಮು ಆಳ್ವರಿಗೆ ಪ್ರಸಾದ ರೂಪದಲ್ಲಿ ದೊರೆತ ಅಡಕೆ ಹೂವಿನಿಂದ (ಪಿಂಗಾರ) ಸಿರಿಯು ಹುಟ್ಟಿದಳೆಂದು ಹೇಳಿದೆ.
ಜಾತೀಯ ಪದ್ಧತಿ ಅತ್ಯಂತ ವ್ಯವಸ್ಥಿತವಾಗಿ ಆಚರಣೆಯಲ್ಲಿದ್ದರೂ ಜಾತೀಯ ತಾರತಮ್ಯಗಳಿಲ್ಲದೇ ಪರಸ್ಪರ ಸಹಕಾರ ಪ್ರೀತಿ ಮಮತೆಗಳ ಮಾನವೀಯ ಮೌಲ್ಯಗಳು ಸಹಜವಾಗಿದ್ದ ಅಂದಿನ ಕಾಲದಲ್ಲಿ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪೆಜನಾರ ದಂಪತಿಗಳು ತಮಗೆ ಅತ್ಯಂತ ಆತ್ಮೀಯರಾಗಿದ್ದ ಬಿಲ್ಲವ ಕುಟುಂಬದ ಓರ್ವ ಕನ್ಯೆಯನ್ನು ದತ್ತು ಪಡೆದುಕೊಂಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆ ಕಾಲಘಟ್ಟದಲ್ಲಿ ಮದುವೆಯಾಗದೆ ಉಳಿದ ಕನ್ಯೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುವ ಯಾವುದೇ ಕಥೆ ತುಳುನಾಡಿನ ಇತಿಹಾಸದಲ್ಲಿ ದೊರೆಯುವುದಿಲ್ಲ. ದೇಯಿಬೈದ್ಯೆತಿಯ ಕೂವೆ ತೋಟ ಮನೆಯಿಂದ ಆಕೆಯನ್ನು ಬಿಟ್ಟ ಸಂಕಮಲೆ ಕಾಡಿನ ಪ್ರದೇಶಕ್ಕೆ ಇರುವ ದೂರ ಕೇವಲ ಒಂದರಿಂದ ಒಂದೂವರೆ ಕಿ.ಮೀ. ಅಲ್ಪ ಅಂತರವಾಗಿರುವುದು ಕಥೆಗೆ ಹೋಲಿಕೆಯಾಗುವುದಿಲ್ಲ. (ಪಾಡ್ದನದಲ್ಲಿ ಸುವರ್ಣ ಕೇದಗೆಯು ತನ್ನ ತಂದೆಯಾದ ಪೆಜನಾರರ ಜೊತೆಯಲ್ಲಿ ನಡೆದು ಸುಸ್ತಾಗಿ ಮರದ ನೆರಳಿನಲ್ಲಿ ಗಾಢನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಆಕೆಯನ್ನು ಬಿಟ್ಟು ಹೋಗುವರೆಂದು ಹೇಳಿದೆ. ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿದ್ದು ಯಾವಾಗ ಆಕೆಯ ಆಭರಣಗಳನ್ನು ತೆಗೆಯುವ ಅವಶ್ಯಕತೆ ಇತ್ತೇ. ತಾವು ಪ್ರೀತಿಯಿಂದ ಸಾಕಿ ಸಲಹಿದ ಒಬ್ಬಳೇ ಮಗಳನ್ನು ಕಾಡಿನಲ್ಲಿ ಬಿಟ್ಟುಬರುವ ಕ್ರೂರ ಮನಸ್ಸು ಪೆಜನಾರ ದಂಪತಿಗಳಿಗೆ ಬರಲು ಸಾಧ್ಯವೇ ಅದರ ಬದಲು ಅವರು ಜೊತೆಗೆ ಕೆರೆಗೋ ಬಾವಿಗೋ ಹಾರುತ್ತಿದ್ದರು.) ಆದುದರಿಂದ ಅವರು ಉದ್ದೇಶಪೂರ್ವಕವಾಗಿಯೇ ಸಾಯನ ಬೈದ್ಯನ ಮೂಲಕ ಕಾಂತಣ ಬೈದನಿಗೆ ಮದುವೆ ಮಾಡಿಕೊಟ್ಟಿರುವ ಸಾಧ್ಯತೆಯಿದೆ. ಪಾಡ್ದನದಲ್ಲಿ ದೇಯಿಯ ಮದುವೆಯ ವಿವರವಿದೆ. ಈ ಸಂದರ್ಭದಲ್ಲಿ ಹೆಣ್ಣು ನೋಡಲು ಬಂದವರು ಸಂಪ್ರದಾಯದಂತೆ ಹುಟ್ಟು ಕಟ್ಟು ಹಾಗೂ ಗೋತ್ರದ ಬಗ್ಗೆ ಕೇಳಿದಾಗ (ಬರಿಬಂದ್ರ) ದೇಯಿಯು ಗೋಡೆಯನ್ನು ತನ್ನ ಉಗುರಿನಿಂದ ಗೀರಿ ತನ್ನದು ಕಿರೋಡಿಬನ್ನಾಕುಲೆ ಬರಿಯೆಂದು ಹೇಳುವಳು. ಕಿರೋಡಿ ಬನ್ನಾಕುಲೆ ಬರಿ ದೇಯಿಯ ಹುಟ್ಟಿಗಿಂತ ಮೊದಲೇ ತುಳುನಾಡಿನಲ್ಲಿ ಪ್ರಚಲಿತದಲ್ಲಿತ್ತು. ಪಡುಮಲೆ ಬೀಡಿಗೆ ಗಡು ಇಟ್ಟು ಎಣ್ಮೂರಿಗೆ ಪಯಣ ಬೆಳೆಸಿದ ಕೋಟಿ ಚೆನ್ನಯರು ತಮ್ಮ ಹಿರಿಯ ಸಹೋದರಿ ಕಿನ್ನಿದಾರುವಿನ ಮನೆಗೆ ಹೋಗುತ್ತಾರೆ. ನೀರು ಸ್ವೀಕರಿಸುವ ಮೊದಲು ಆಕೆಯ ಹುಟ್ಟುಕಟ್ಟು (ಬರಿಬಂದ್ರ) ಗೋತ್ರ ಕೇಳುತ್ತಾರೆ. ಆಗ ಕಿನ್ನಿದಾರು ತನ್ನ ಬರಿಯ ಬಗ್ಗೆ
ಮೂಡಾಯಿ ದೇಸೊಡು ಮಾಬು ಬನ್ನಾಲ್
ಪಡ್ಡಾಯಿ ದೇಸೊಡು ಉಪ್ಪಿ ಬನ್ನಾಲ್
ಬಡಕಾಯಿ ದೇಸೊಡು ಬಾಗೇಟ್ಯಾನ್ನಾಲ್
ತೆನ್‍ಕಾಯಿ ದೇಸೊಡು ಕಿರೋಡಿಬನ್ನಾಲ್
ಎಂಬುದಾಗಿ ಕರೆಯುತ್ತಾರೆ ಎಂದೂ ತನ್ನ ತಾಯಿ ದೇಯಿಬೈದ್ಯೆತಿ ತಂದೆ ಕಾಂತಣ ಬೈದ್ಯ, ಮಾವ ಸಾಯನಬೈದ್ಯ, ತನ್ನನ್ನು ಸಣ್ಣ ಪ್ರಾಯದಲ್ಲಿಯೇ ಪಯ್ಯಬೈದ್ಯರಿಗೆ ಮದುವೆಮಾಡಿ ಕೊಟ್ಟಿದ್ದರು. ಸಾಯನ ಬೈದ್ಯರ ಸಹೋದರಿಯಾದ ನನ್ನ ತಾಯಿ ದೇಯಿಬೈದ್ಯೆತಿಯ ಅಕಾಲ ಮರಣದ ಬಳಿಕ ನನ್ನ ತಂದೆ ಕಾಂತಣ ಬೈದ್ಯರು ಎರಡನೇ ಮದುವೆಯಾದರು. ನನ್ನ ಚಿಕ್ಕ ತಾಯಿಯ ಮಕ್ಕಳು ಕೋಟಿ ಚೆನ್ನಯರು ಅಂಥವರು ಹಿಂದೆ ಹುಟ್ಟಿಲ್ಲವಂತೆ ಮುಂದೆ ಹುಟ್ಟಲಿಕ್ಕಿಲ್ಲವಂತೆ ಎಂದು ಹೇಳುತ್ತಾಳೆ.
ಮುಂದೆ ಪಾಡ್ದನದಲ್ಲಿ ಪೆರುಮಲೆ ಬಲ್ಲಾಳರ ಮೃಗಬೇಟೆಯ ವಿವರವಿದೆ. ಬೇಟೆಯ ಸಂದರ್ಭದಲ್ಲಿ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ಚುಚ್ಚಿ ನಂಜು ಏರಿ ಗಾಯವಾಗಿ, ಗಾಯ ಬಳಿತು ವೃಣವಾಗಿ ಬಲ್ಲಾಳರು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುವರು. ಮೊದಲು ಅಮ್ಮಣ್ಣ ಬನ್ನಾಯನು ಬಿರ್ಮಣ ಬೈದ್ಯನಿಗೆ ಮಂತ್ರಿಸಿ ಚಿಕಿತ್ಸೆ ನೀಡಲು ಹೇಳುತ್ತಾನೆ. ಆದರೆ ಈ ಚಿಕಿತ್ಸೆ ಫಲಕಾರಿಯಾಗದೆ ಬಲ್ಲಾಳರ ಕಾಲಿನ ಗಾಯ ಉಲ್ಬಣವಾಗುತ್ತದೆ. ಬಲ್ಲಾಳರು ಆಹಾರ ಸೇವಿಸಲಾರದೆ ನಿದ್ದೆಯಿಲ್ಲದೆ ನೋವಿನಿಂದ ಸಾವು ಬದುಕಿನ ಮಧ್ಯೆ ಒದ್ದಾಡುತ್ತಾರೆ. ಆಗ ಅರಸರು ಚಿಕಿತ್ಸೆಗಾಗಿ ಸಾಯನ ಬೈದ್ಯರನ್ನು ಕರೆ ತರಲು ಚಾವಡಿ ಸಂಕಯ್ಯ ಮತ್ತು ಬೂಡಿನ ಬೊಮ್ಮಯ್ಯರನ್ನು ಕಳುಹಿಸುತ್ತಾರೆ. ಆಗ ಸಾಯನಬೈದ್ಯರು ತನಗೆ ಪ್ರಾಯವಾಗಿದ. ಕಣ್ಣು ಸರೀ ಕಾಣುವುದಿಲ್ಲ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನನ್ನ ತಂಗಿ ದೇಯಿ ಚಿಕಿತ್ಸೆ ನೀಡಲು ಸಮರ್ಥಳು ಎಂದಾಗ ಅವರು ದೇಯಿಯ ಮನೆಗೆ ಹೋಗಿ ಆಕೆಯಲ್ಲಿ ಕೇಳಿದಾಗ ಆಕೆ ತಾನು ತುಂಬು ಗರ್ಭಿಣಿ ನನಗೆ ನನ್ನ ಪಾದವನ್ನು ನೋಡಲಾಗುತ್ತಿಲ್ಲ. ನಡೆದುಕೊಂಡು ಬರಲು ಸಾಧ್ಯವಿಲ್ಲ ಎನ್ನುವಳು. ದೇಯಿಯ ಸ್ಥಿತಿಯನ್ನು ಅರ್ಥಮಾಡಿಕೊಂಡ ಬಲ್ಲಾಳರು ಆಕೆಯನ್ನು ಕರೆತರಲು ತಮ್ಮ ಸ್ವಂತ ದಂಡಿಗೆಯನ್ನು ಹೊರುವ ಬೋಯಿಗಳೊಂದಿಗೆ ಸತ್ತಿಗೆ ಸಮೇತ ಕಳುಹಿಸಿಕೊಡುವರು.
ಸತ್ಯ ದಂಡಿಗೆ ಬರುವಾಗ ತನ್ನ ಗಂಡ ಕಾಂತಣ್ಣ ಬೈದ್ಯರ ತಲೆಕೂದಲು ತೊಳೆಯುತ್ತಿದ್ದ ದೇಯಿಯು ನೆಟ್ಟಿಗೆ ನಿಂತು ನೋಡುವಾಗ ದಂಡಿಗೆ ಕಾಣುವುದು. ಆಕೆ ಗಂಡನಲ್ಲಿ ಹೇಳಿ ದಂಡನ್ನು ಮೊಗಸಾಲೆಯಲ್ಲಿ ಇಳಿಸುವಳು. ದಂಡಿಗೆಯ ಬೋಯಿಗಳಿಗೆ ಅಡುಗೆಗೆ ಬೇಕಾದ ವಸ್ತುಗಳನ್ನು ಹಾಲು ತುಪ್ಪವನ್ನು ಕೊಡಿಸುವಳು. ಪಾತ್ರೆ ಪಗಡೆಗಳನ್ನು ಕೊಡಿಸುವಳು. ಆಕೆ ಬಾರೋಡಿ ಬಾರೋಡಿ ಎಂದು ಕೆಲಸದ ಆಳನ್ನು ಕರೆಯುವಳು ಹಾಗೂ ಗುಡ್ಡೆಗೆ ಹೋಗಿ ಹನ್ನೆರಡು ಹಿಡಿ ಬೇರುಮದ್ದು ಅಗೆದು ತರಲು ಹೇಳುವಳು. ಸಪ್ಪೋಡಿ ಸಪ್ಪೋಡಿ ಎಂದೂ ಯೆಲ್ಲೋಡಿ ಯೆಲ್ಲೋಡಿ ಎಂದೂ ಆಳುಗಳನ್ನು ಕರೆದು ಮದ್ದಿನ ಗಿಡದ ಎಲೆಯ ಚಿಗುರುಗಳನ್ನು ತರಿಸಿ ಅದನ್ನು ಹಿಡಿ ಮಾಡಿ ಕಟ್ಟಿ ಅದನ್ನು ದಂಡಿಗೆಗೆ ಕಟ್ಟುವಳು. ಕೆಲಸದ ಆಳುಗಳನ್ನು ಕೂಗಿ ಕರೆದು ಅರಸರ ದಂಡಿಗೆಯ ಬೋಯಿಗಳ ಊಟ ಉಪಚಾರ ಆಯಿತೇ ಎಂದು ವಿಚಾರಿಸುವಳು. ಊಟದ ಬಳಿಕ ಅವರಿಗೆ ವೀಳ್ಯ ಅಡಿಕೆಯನ್ನು ಬೆಳ್ಳಿಯ ಹರಿವಾಣದಲ್ಲಿಟ್ಟು ಕೊಡುವಳು. ಅಟ್ಟಕ್ಕೆ ಏಣಿ ಇಟ್ಟು ತೆಂಗಿನಕಾಯಿ ತೆಗೆಸಿ ಅವರ ಸಿಪ್ಪೆ ಕೀಳಿಸಿ ಬಾಳೆ ಎಲೆಯಲ್ಲಿ ತೆಂಗಿನಕಾಯಿ ಅಡಿಕೆ, ವೀಳ್ಯವನ್ನು ದಂಡಿಗೆಯಲ್ಲಿ ಕಾಣಿಕೆ ಇಡುವಳು ದೇವರಲ್ಲಿ ಪ್ರಾರ್ಥಿಸಿ ಅರಮನೆಗೆ ಹೊರಡುವಳು.
ದಂಡಿಗೆಯ ಮುಂಭಾಗದಲ್ಲಿ ಸತ್ತಿಗೆ (ಛತ್ರ) ಹೋಗಲಿ ಅದರ ಹಿಂಭಾಗದಲ್ಲಿ ದಂಡಿಗೆ ಹೋಗಲಿ ದಂಡಿಗೆಯ ಹಿಂದೆ ನೀವು ಹೋಗಿ (ಕಾಂತಣ್ಣ ಬೈದ್ಯರು) ನಿಮ್ಮ ಹಿಂದಿನಿಂದ ನಾನು ಬರುತ್ತೇನೆ. ದೇಯಿಯ ಹಿಂದಿನಿಂದ ಮಾವ ಸಾಯನಬೈದ್ಯರು ಬರುತ್ತಾರೆ ಎಂದು ಹೇಳುವಳು. ಅವರು ಪಡುಮಲೆ ಬೀಡಿಗೆ ತಲುಪುವರು. ಸಾಯನಬೈದ್ಯ ಹಾಗೂ ಕಾಂತಣ ಬೈದ್ಯರು ಅರಮನೆಗೆ ಹೋಗಿ ಬಲ್ಲಾಳರಿಗೆ ಪ್ರಣಾಮ ಸಲ್ಲಿಸುವರು. ಆಗ ಬಲ್ಲಾಳರು ತನ್ನನ್ನು ತನ್ನ ತಾಯಿಗಿಂಡ್ಯ ಗಿಳಿರಾಮ ದೆಯ್ಯಾರ್ ಹೊತ್ತು ಸಾಕಿ ಸಲಹಿದರು. ಇಂದು ನಾನು ದೇಯಿಯ ಹೊಟ್ಟೆಯಿಂದ ಮರು ಜನ್ಮ ಪಡೆಯುತ್ತೇನೆ ಎಂದು ಭಾವಿಸುತ್ತೇನೆ. ದೇಯಿಯು ಬಂದು ನನ್ನ ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಿ ನನ್ನನ್ನು ಬದುಕಿಸಲಿ ಎಂದು ಕಣ್ಣೀರು ಸುರಿಸುವರು. ದೇಯಿಯು ಬೀಡಿಗೆ ಆಗಮಿಸಿ ಕುಲದೈವವಾದ ಕೆಮ್ಮಲಜೆ ಬೆರ್ಮರನ್ನು ಸ್ಮರಿಸಿ ಮಂತ್ರಿಸಿ ಬಲ್ಲಾಳರಿಗೆ ರಕ್ಷೆಯ ನೂಲು ಕಟ್ಟಿ ಚಿಕಿತ್ಸೆ ಪ್ರಾರಂಭಿಸುವಳು.
ಬೀಡಿನ ಕೆಲಸದವರನ್ನು ಕರೆದು ಕಷಾಯಕ್ಕೆ ನೀರು ಇಡಿಸುವಳು. ಕಾಲಿನ ಗಾಯ ತೊಳೆಸುವಳು. ಸೊಪ್ಪಿನಲ್ಲಿ ತಣಿಸುವಳು. ಮಂತ್ರ ಉಚ್ಛರಿಸುವಳು. ಬೇರನ್ನು ಅರೆದು ಕುಡಿಸೊಪ್ಪಿನ ಲೇಪ ಹಚ್ಚುವಳು. ದಿನದಿಂದ ದಿನಕ್ಕೆ ದೇಹದ ಊತ ಕಡಿಮೆಯಾಗುತ್ತಾ ಬಂದು ಸೊಂಟಕ್ಕೆ ಇಳಿಯಿತು. ಸೊಂಟದಿಂದ ಮೊಣಕಾಲಿಗೆ ಬಂತು. ಮೊಣಕಾಲಿನಿಂದ ಪಾದಕ್ಕೆ ಬಂತು. ಪಾದದಿಂದ ಇಳಿದು ಭೂಮಿಗಾಯಿತು. ಮದ್ದು ಹಾಗೂ ಪಥ್ಯ ಫಲಿಸಿತು. ಗಾಯ ಮಾಸಿ ಮಾಂಸ ತುಂಬಿತು. ಅರಸರು ಎದ್ದು ಕುಳಿತರು. ಎದ್ದು ನಡೆದಾಡಿದರು. ಸಂತೋಷದಿಂದ ತನಗೆ ಮರುಜನ್ಮ ನೀಡಿದ ದೇಯಿಗೆ ಬಂಗಾರದ ಮೇಂದಲೆ ಕಿವಿಗೆ ಬುಗುಡಿ, ಮೂಗಿಗೆ ಮುಳ್ಳು ಕೊಪ್ಪೆ ಎಂಬ ಆಭರಣ ಕೈಬಳೆ (ಬಾಜಿಬಂದ) ಮೊದಲಾದ ಆಭರಣಗಳನ್ನು ಬಹುಮಾನವಾಗಿ ನೀಡುವರು. ಉಳಿದದ್ದನ್ನು ಇನ್ನು ಮುಂದಕ್ಕೆ ಹುಟ್ಟಲಿರುವ ಮಕ್ಕಳಿಗೆ ನೀಡುತ್ತೇನೆ. ಹೆಣ್ಣು ಮಗುವಾದರೆ ನಿನಗೆ ನೀಡಿದಂತೆ ಗೌರವ ಸನ್ಮಾನ ನೀಡುತ್ತೇನೆ, ಗಂಡು ಮಗುವಾದರೆ ಅವರಿಗೆ ಬೇಕಾದ ಅನುಕೂಲತೆ ಕಲ್ಪಿಸಿ ದುಡಿಯಲು ಕಂಬಳದ ಗದ್ದೆ ನೀಡುತ್ತೇನೆ ಎಂದು ವಾಗ್ದಾನ ನೀಡುವರು.
ತನಗೆ ಮನೆಗೆ ಹೋಗಲು ಅನುಮತಿ ನೀಡಬೇಕೆಂದ ದೇಯಿಗೆ ಬಲ್ಲಾಳರು ನೀನು ಇವತ್ತಿನವರೆಗೆ ರಾತ್ರಿಯ ನಿದ್ದೆಯನ್ನು ಹಸಿವನ್ನು ಬಿಟ್ಟು ನನಗೆ ಚಿಕಿತ್ಸೆ ನೀಡಿರುವಿ. ನನ್ನ ಸತ್ಕಾರವನ್ನು ಸ್ವೀಕರಿಸಿ ಹೋಗು ಎನ್ನುವರು. ತುಂಬು ಗರ್ಭಿಣಿ ದೇಯಿಗೆ ಭರ್ಜರಿ ಔತಣದ ಊಟ ಏರ್ಪಡಿಸುವರು. ಸಾಯನ ಹಾಗೂ ಕಾಂತಣ ಬೈದ್ಯರೊಂದಿಗೆ ಮಧ್ಯದಲ್ಲಿ ಕುಳ್ಳಿರಿಸಿ ಔತಣ ಬಡಿಸುವರು. (ಮಜ್ಜಿಗೆ ಸೇರಿಸಿ ಇನ್ನೂರು ಬಗೆ, ಹುಳಿ ಸೇರಿಸಿ ಮುನ್ನೂರು ಬಗೆ, ತೆಂಗಿನಕಾಯಿ ಸೇರಿಸಿ ಸಾವಿರ ಬಗೆ ಆಯಿತು. ಕಂಚಿರ ಹುಳಿನಾರಂಗಕಾಯಿ, ಕಣಿಲೆ, ಕಾನಡೆ, ಮಾಪಲದ ಉಪ್ಪಿನಕಾಯಿ, ಅಡ್ಯೆ, ಪಂಚದಡ್ಯೆ, ಎಣ್ಣೆ ಬಣ್ಣದ ಚಕ್ಕುಲಿ ಇತ್ಯಾದಿ) ತುಪ್ಪದಲ್ಲಿ ತಿನ್ನಿಸಿ ಹಾಲಿನಲ್ಲಿ ಕೈ ತೊಳೆಸುವರು. ಬಗೆಬಗೆಯ ಆಭರಣಗಳನ್ನು ಕಾಣಿಕೆಯಾಗಿ ನೀಡುವರು (ಸೇಜಿಪಾಲ್). ದೇಯಿಯನ್ನುಗೌರವದಿಂದ ಕಳುಹಿಸಿಕೊಡುವರು ಜೊತೆಗೆ ಆಳುಗಳನ್ನು ಕಳುಹಿಸುವರು.
ಆಕೆ ತಿಮ್ಮಪ್ಪ ನಾಯ್ಕನ ಮನೆ ದಾಟಿ ಬೂಡುಸಮ್ಮನ ಗಡಿದಾಟಿ ಮುಗುಳಿ ಸಾಂತಯ್ಯನ ಮನೆಯ ಬಳಿ ಬರುವಾಗ ಹೆರಿಗೆ ನೋವು ಕಾಣಿಸಿತು. ಆಕೆಯನ್ನು ಬೀಡಿಗೆ ಕರೆತರುವರು. ಬಲ್ಲಾಳರು ಆಕೆಯೊಂದಿಗೆ ತನ್ನ ನೂತನ ಬೀಡಿನಲ್ಲಿ ಹೆರಿಗೆ ನಡೆಯಲಿ ಎಂದಾಗ ದೇಯಿಯು ಅರಮನೆಯಲ್ಲಿ ತಾನು ಹೆತ್ತರೆ ಬೀಡಿನ ಚಾಕರಿಯವಳಿಗೆ ಹುಟ್ಟಿದ ಮಕ್ಕಳೆಂದು ಲೇವಡಿ ಮಾಡಿಯಾರು ಆದುದರಿಂದ ಇಲ್ಲಿ ಹೆರಲಾರೆ ಎನ್ನುವಳು. ಆಕೆಯ ಸತ್ಯನಿಷ್ಠುರ ಮಾತಿಗೆ ಒಪ್ಪಿದ ಬಲ್ಲಾಳರು ತನ್ನ ಒಕ್ಕಲಾದ ಬಿರ್ಮಣ ಬೈದ್ಯನ ಮನೆಯನ್ನು ತೆರವುಗೊಳಿಸಿ ಅಲ್ಲಿ ಹೆರಿಗೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವರು. ಸಹಾಯಕಿಯರನ್ನು ನೇಮಿಸಿ ಹೆಸರಾಂತ ಸೂಲಗಿತ್ತಿ ಬೊಂಬೆ ಮದರುವನ್ನು ಕರೆಸುವರು. ದೇಯಿಯು ತನ್ನ ಸುಖ ಪ್ರಸವಕ್ಕಾಗಿ ಕೆಮ್ಮಲಜೆ ಬೆರ್ಮರಿಗೆ ಹುಂಡಿಕಾಣಿಕೆ (ಪುಂಡಿಪಣವು) ಹರಕೆ ಹೇಳಿಕೊಳ್ಳುವಳು. ಒಂದರ ನಂತರ ಒಂದರಂತೆ ಅವಳಿ ಮಕ್ಕಳಿಗೆ ಜನ್ಮ ನೀಡುವಳು. ಮೂರನೆಯ ದಿವಸದ ಹೆರಿಗೆ ಸೂತಕ ಕಳೆದು ಏಳನೇ ದಿವಸದ ಸೂತಕ ಕಳೆದು ಹದಿನಾರನೆಯ ದಿವಸದ ಹಿರಿಯ ಸೂತಕ ಕಳೆದು ನಲ್ವತ್ತನೆಯ ದಿವಸ ದೇವರ ನೀರು ತರಿಸಿ ಸ್ನಾನ ಮಾಡಿಸುವರು. ದೇಯಿ ದೇವಾಲಯಕ್ಕೆ ಹೋಗಿ ಗಂಧ ಪ್ರಸಾದ ಸ್ವೀಕರಿಸಿ ಮಕ್ಕಳಿಗೆ ಹಾಕುವಳು. ತೊಟ್ಟಿಲು ನಾಮಕರಣ ಮುಹೂರ್ತಕ್ಕೆ ಬಲ್ಲಾಳರು ಸತ್ತಿಗೆ ಸಮೇತ ದಂಡಿಗೆಯಲ್ಲಿ ದೇಯಿಯ ಮನೆಗೆ ಆಗಮಿಸುವರು. ಸಾರೋಳಿ ಸೈಮಂಜೆ ಕಟ್ಟೆಯಲ್ಲಿ ದಂಡಿನಿಂದ ಇಳಿದು ಚಾವಡಿಯಲ್ಲಿ ಮುಕ್ಕಳಿಗೆಯಲ್ಲಿ ಆಸೀನರಾಗುವರು. ದೇಯಿಯಿಂದ ಗೌರವ ಕಾಣಿಕೆ ಸ್ವೀಕರಿಸುವರು. ಮೊದಲು ಹುಟ್ಟಿದ ಮಗುವನ್ನು ಮಾವ ಸಾಯನ ಬೈದ್ಯರು ಎರಡನೆಯ ಮಗುವನ್ನು ತಂದೆ ಕಾಂತಣ್ಣ ಬೈದ್ಯರು ಅಡಕೆಯ ಹಾಳೆಯಲ್ಲಿ ಹಿಡಿದುಕೊಂಡು ಬರುವರು. ಬಲ್ಲಾಳರು ಮೊದಲು ಹುಟ್ಟಿದ ಮಗುವಿಗೆ ಕೋಟೇಶ್ವರ ದೇವರ ಸ್ಮರಣೆಯಲ್ಲಿ ದೇವಸ್ಥಾನದ ಹೆಸರು ಇರುವವರೆಗೆ ಶಾಶ್ವತವಾಗಿ ಇರುವಂತೆ ಕೋಟಿ ಎಂದೂ ಎರಡನೇ ಮಗುವಿಗೆ ಚೆನ್ನಗೇಶ್ವರ ದೇವರ ಸ್ಮರಣೆಯಲ್ಲಿ ಚೆನ್ನಯ ಎಂದೂ ನಾಮಕರಣ ಮಾಡುವರು. ಹಲಸಿನ ಮರದ ತೊಟ್ಟಿಲು ತಯಾರಿಸಿ ಮಕ್ಕಳಿಗೆ ಆಭರಣ ನೀಡಿ ಹರಸುವರು.
ಹಸಿ ಬಾಣಂತಿ ದೇಯಿಯು ಮಕ್ಕಳ ಬಟ್ಟೆ ಒಗೆಯಲು ಸಮೀಪದ ಕೆರೆಗೆ ಹೋಗಿ ಬಟ್ಟೆ ಒಗೆಯುತ್ತಿದ್ದಾಗ ಗೆಂದಾಲೆ ತೆಂಗಿನ ಮರದ ಸೋಗೆ ಆಕೆಯ ತಲೆಯ ಮೇಲೆ ಬೀಳುವುದು. ಇದನ್ನು ಮುರ್ಕೊತ್ತು ಮುರ್ಕಬೈದ್ಯನು ನೋಡಿ ಬಲ್ಲಾಳರಿಗೆ ತಿಳಿಸುವನು. ಆಕೆಯನ್ನು ಹೊತ್ತು ಮನೆಗೆ ಸಾಗಿಸುವರು. ಕಣ್ಣು ಬಿಡಿಸಿ ಎಲ್ಲರನ್ನೂ ನೋಡಿದ ದೇಯಿಯು ತನ್ನ ಪತಿ ಕಾಂತಣ ಬೈದ್ಯರಲ್ಲಿ ತನ್ನ ಆಯುಷ್ಯ ಮುಗಿಯಿತು. ನನಗೆ ದೇವರ ಅಪ್ಪಣೆಯಾಗಿದೆ. ನನ್ನ ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ಕಣ್ಣೀರಿಡುವಳು. ಸಮಾಧಾನಪಡಿಸಿದ ಪಡುಮಲೆ ಬಲ್ಲಾಳರಲ್ಲಿ ತನಗೆ ಸಿರಿಗಿಂಡೆಯಲ್ಲಿ (ಸಣ್ಣಪಾತ್ರೆ) ತುಳಸಿ ನೀರು ಬಿಡಲು ಹೇಳುವಳು. ಎಲ್ಲರ ಸಮ್ಮುಖದಲ್ಲಿ ಕಾಯ ಬಿಟ್ಟು ಮಾಯ ಸೇರುವಳು. ಆಕೆಯನ್ನು ಅಸನಂದ ಕೋಡಯ ಸುಡುವ ಗದ್ದೆಯಲ್ಲಿ ಕಾಷ್ಟ ಸಿದ್ಧಪಡಿಸಿ 60 ಕಟ್ಟು ಗಂಧದಲ್ಲಿ ಎಣ್ಣೆ ಹಾಗೂ ತುಪ್ಪದಲ್ಲಿ ಸುಡುವರು. ಮೂರನೆಯ ದಿವಸದ ಕ್ರಿಯೆ ಐದನೆಯ ದಿವಸದ ದೂಪೆ (ಬೊಣ್ಯ ಒಪ್ಪ ಮಲ್ಪುನಿ) ಮಾಡುವರು. ಹರಿನಾರನೆಯ ದಿವಸದ ಸದ್ಗತಿ ನೆರವೇರಿಸುವರು. ಪಾಡ್ದನದಲ್ಲಿ ಹೇಳುವಂತೆ ಮೊಲೆಹಾಲು ಕುಡಿಯುವ ಕಾಲಕ್ಕೆ ತಾಯಿ ದೇಯಿಬೈದ್ಯತಿ ವಿಧಿವಶವಾಗುವಳು. ಅನ್ನ ಉಣ್ಣುವ ಕಾಲಕ್ಕ ತಂದ ಕಾಂತಣ ಬೈದ್ಯ ಕಾಲವಶವಾಗುವನು. ಮುಂದೆ ಮಕ್ಕಳ ರಕ್ಷಣೆ ಪಾಲನೆಯ ವ್ಯವಸ್ಥೆಯನ್ನು ಅರಸು ಬಲ್ಲಾಳರು ಸಾಯನ ಬೈದ್ಯರಿಗೆ ಒಪ್ಪಿಸಿ ಮಕ್ಕಳ ಪಾಲನೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವರು.
ದೇಯಿಯ ಅವಸಾನದ ಬಗ್ಗೆ ಕೆಲವರು ಆಕೆಯನ್ನು ವ್ಯವಸ್ಥಿತವಾಗಿ ಕೆರೆಗೆ ದೂಡಿ ಹತ್ಯೆ ಮಾಡಲಾಯಿತೆಂದು ಹೇಳುತ್ತಾರೆ. ಎ.ಸಿ. ಬರ್ನೆಲ್‍ರವರ ಕೋಟಿಚೆನ್ನಯ ಪಾಡ್ದನದಲ್ಲಿ ಅಮ್ಮಣ್ಣ ಬೈದ್ಯ ಹಾಗೂ ಬಿರ್ಮಣ ಬೈದ್ಯರು ಒಟ್ಟಾಗಿ ಮಾಟಮಂತ್ರದಿಂದ ದೇಯಿಯನ್ನು ಕೊಲ್ಲುವರೆಂದು ಬರೆದಿದ್ದಾರೆ. (ನೋಡಿ ಪುಟ 51 The devil worship of the tuluvas by late A.C. Burnell 1894-1897)
ರಾಮಾಯಣದ ಸೀತೆಯಂತೆ ತುಳುನಾಡಿನ ಚರಿತ್ರೆಯಲ್ಲಿ ದೇಯಿಯು ಮಹತ್ವದ ಸ್ಥಾನ ಪಡೆದವಳು. ಬೈದರ್ಕಳರ ಆರಾಧನೆಯಲ್ಲಿ ಕೋಟಿ ಚೆನ್ನಯರ ಸೋದರಿಯೆಂದು ಪರಿಗಣಿಸಲ್ಪಟ್ಟ ಮಾಯಾಂದಾಲ್ ಆರಾಧನೆಯಲ್ಲಿ ಸ್ಥಾನ ಪಡೆದರೆ ತಾಯಿ ದೇಯಿ ಹಾಗೂ ಕಿನ್ನಿದಾರು ವಿವಂಚಿತರಾಗುವುದು ವಿಪರ್ಯಾಸವೆನಿಸುತ್ತದೆ. ಇದಕ್ಕೆ ಅಪವಾದವಾಗಿ ಮಂಗಳೂರಿನ ಕಂಕನಾಡಿ ಗರಡಿಯಲ್ಲಿ ಇತ್ತೀಚೆಗೆ ದೇಯಿಯ ಗುಡಿ ಹಾಗೂ ಬಿಂಬ ನಿರ್ಮಾಣಗೊಂಡು ಆರಾಧನೆ ಸಲ್ಲುತ್ತಿದೆ.
ದೇಯಿಯ ಕಥೆಯ ಉದ್ದಕ್ಕೂ ತುಳುನಾಡಿನ ಮಣ್ಣಿನ ವಿಶಿಷ್ಟ ಸಂಪ್ರದಾಯ ಆಚರಣೆಗಳು ಮುಖ್ಯವಾಗಿ ಮಾತೃಪ್ರಧಾನ ಕುಟುಂಬ ಪದ್ಧತಿಯ ಅಮೂಲ್ಯ ಅಂಶಗಳು ಹಾಸುಹೊಕ್ಕಾಗಿರುವುದು. ಮಾವ ಸಾಯನ ಬೈದ್ಯನ ಪ್ರಾಧಾನ್ಯತೆ ದೇಯಿಯ ಯಜಮಾನ್ತಿಗೆ ವಿಶೇಷ ಮೆರುಗು ನೀಡುವುದು. ಪ್ರಸ್ತುತ ದೇಯಿಬೈದ್ಯೆತಿಯ ಗೆಜ್ಜೆಗಿರಿನಂದನ ಹಿತ್ಲು ಮನೆಯಲ್ಲಿ ವಾಸವಾಗಿರುವ ಲೀಲಾವತಿಯವರು ನಾಟಿ ವೈದ್ಯ ಚಿಕಿತ್ಸೆ ನೀಡುತ್ತಿರುವುದು ದೇಯಿಯ ಅನುಗ್ರಹ ಮಾತ್ರದಿಂದ ಹಾಗೂ ಆಕೆಯ ಸ್ಮರಣೆಗಾಗಿ ಎಂಬುದಾಗಿ ವಿನಮ್ರಪೂರ್ವಕವಾಗಿ ಹೇಳಿಕೊಳ್ಳುತ್ತಿದ್ದಾರೆ.
– ರಮಾನಾಥ ಕೋಟೆಕಾರ್
“ಸಾಯಿಕೃಪಾ” ಬೀರಿ ಕೋಟೆಕಾರ್, ಮಂಗಳೂರು
ವಿಮರ್ಶಾತ್ಮಕ ಲೇಖನ.. ಲೇಖಕರಿಗೆ ಧನ್ಯವಾದಗಳು.