ಆಧುನೀಕರಣ ಪ್ರಭಾವದಿಂದ ತಂತ್ರಜ್ಞಾನದ ಒಳಿತುಗಳಂತೆ ಕೆಡುಕುಗಳು ಉಂಟಾಗಿ ಯುವ ಸಮುದಾಯದ ಮೇಲೆ ಅದರ ಪರಿಣಾಮ ಪ್ರಖರವಾಗಿದೆ. ಹೆತ್ತವರು ಉತ್ತಮವಾಗಿ ಶಿಶು ಆರೈಕೆಯೊಂದಿಗೆ ಮಕ್ಕಳ ಮೇಲೆ ಯಾವುದೇ ಕೆಟ್ಟ ಪ್ರಭಾವ ಆಗದಂತೆ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ನಾರಾಯಣಗುರುವರ್ಯರಂತ ಮಹನೀಯರ ತತ್ವಾದರ್ಶಗಳನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂಜ, ಕುತ್ಯಾರು ಬ್ರಹ್ಮಬೈದರ್ಕಳ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಉಮೇಶ್ ಕೋಟ್ಯಾನ್ ತಿಳಿಸಿದರು.
ಅವರು ಪಡುಬಿದ್ರಿ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ನಾರಾಯಣಗುರುಗಳ 89 ನೇ ಪುಣ್ಯತಿಥಿ ಪ್ರಯುಕ್ತ ದಿನಾಂಕ 21.09.2017ರಂದು ಜರುಗಿದ ತುಳುನಾಡ ಆರಾಧನೆ- ಆಶಯ – ಸ್ವರೂಪ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಾನಪದ ಸಂಶೋಧಕರಾದ ಬನ್ನಂಜೆ ಬಾಬು ಅಮೀನ್ ಮಾತನಾಡಿ ತುಳುನಾಡಿನ ಸಂಪ್ರದಾಯ, ನಂಬಿಕೆಗಳು ಆಡಂಬರದ ಪ್ರಭಾವಕ್ಕೆ ಒಳಗಾಗುತ್ತಿದೆ. ಕೆಲವು ಆಚರಣೆಗಳು ನಶಿಸುವತ್ತ ಸಾಗಿದೆ. ತುಳುನಾಡಿನಲ್ಲಿ ಪಂಚವರ್ಣವೆಂದರೆ ಕೊರಗ, ಮುಂಡಾಲ, ಬಿಲ್ಲವ, ಮೊಗವೀರ, ಬಂಟ ಜಾತಿಗಳಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಮಾತನಾಡಿ ನಾಗಾರಾಧನೆ ಮತ್ತು ದೈವಾರಾಧನೆ ತುಳುವರ ಭಾಗವಾಗಿದ್ದು ಈ ಸಂಸ್ಕೃತಿಯು ಕೇವಲ ತುಳುನಾಡಿಗೆ ಸೀಮಿತವಲ್ಲ ಎಂದರು. ಸಂಪನ್ಮೂಲ ವ್ಯಕ್ತಿ ಮೂಡಬಿದ್ರೆಯ ಅರ್ಚಕರಾದ ಶಿವಾನಂದ ಶಾಂತಿ ಮಾತನಾಡಿ ಅಂದು ಮೂರ್ತಿಗಾಗಿ ದೇವಸ್ಥಾನ ಇಂದು ದೇವಸ್ಥಾನಕ್ಕಾಗಿ ಮೂರ್ತಿ ನಿರ್ಮಿಸುವ ಹಂತಕ್ಕೆ ಬಂದಿದ್ದೇವೆ. ಗುರುಚಿಂತನೆಗಳೊಂದಿಗೆ ಶೈಕ್ಷಣಿಕವಾಗಿ ಮುಂದುವರಿದಾಗ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದರು. ವಿಚಾರಗೋಷ್ಠಿಯನ್ನು ನಿರ್ವಹಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಅರ್ಥಧಾರಿ ಭಾಸ್ಕರ್ ಕೆ.ಪಡುಬಿದ್ರಿ ಮಾತನಾಡಿ ತುಳುನಾಡಿನ ಜನರು ತಮ್ಮನ್ನು ರಕ್ಷಿಸುವ ಶಕ್ತಿಗಳನ್ನು ಭೂತ ಎಂಬ ಪದದಿಂದ ಬಳಸುವ ರೂಢಿಯಿತ್ತು ಕಾಲಕ್ರಮೇಣ ದೈವ ಪದದ ಬಳಕೆ ಚಾಲ್ತಿಗೆ ಬಂತು. ಇವೆರಡು ಒಂದೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಗಳು ಮನಸ್ಸು ಮಾಡಿದರೆ ಯುವ ಸಮುದಾಯವು ದಾರಿ ತಪ್ಪುವುದನ್ನು ತಪ್ಪಿಸಬಹುದು. ಸಂಘಟನೆಗಳು ಇಂತಹ ವಿಚಾರಗೊಷ್ಠಿಗಳನ್ನು ಏರ್ಪಡಿಸುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ತಿಳಿಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ ಪಡುಬಿದ್ರಿ ಘಟಕದ ಸಲಹೆಗಾರರಾದ ರಾಜೀವ್ ಪೂಜಾರಿ, ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ನಿಖಿಲ್ ಪೂಜಾರಿ ಉಪಸ್ಥಿತರಿದ್ದರು. ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಸ್ವಾಗತಿಸಿ, ಪಡುಬಿದ್ರಿ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ ಪ್ರಸ್ತಾವಿಸಿದರು. ಯುವವಾಹಿನಿ ಪಡುಬಿದ್ರೆ ಘಟಕದ ಕಾರ್ಯದರ್ಶಿ ನಿಶ್ಮಿತ ಪಿ. ಯಚ್ ಮತ್ತು ಸುಜಾತ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಉತ್ತಮ ಕಾರ್ಯಕ್ರಮ