ತುಳುನಾಡಿನಾದ್ಯಂತ ನಡೆಯುತ್ತಿರುವ ಆಟಿಡೊಂಜಿ ದಿನ,ಕೆಸರ್ ಡ್ ಒಂಜಿ ದಿನ ಮುಂತಾದ ಕಾರ್ಯಕ್ರಮಗಳನ್ನು ಸಡಗರ, ಸಂಭ್ರಮದಿಂದ ಮಾಡುತ್ತಿದ್ದೇವೆ.. ಈ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಿರದೆ, ನಮ್ಮ ವಿರಾಮದ ವೇಳೆಯಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ. ಕೃಷಿ ಚಟುವಟಿಕೆಗಳಿಗೆ ನಾವು ಮೈಯೊಡ್ಡಿದರೆ, ನಮ್ಮ ಆರೋಗ್ಯವೃದ್ಧಿಯಾಗುವುದು.ಕೃಷಿಕರಾಗಿ ಬದುಕಿದ ನಮ್ಮ ಗುರುಹಿರಿಯರ ಆರೋಗ್ಯದ ಗುಟ್ಟು ಇದೇ ಎಂದು ಅಡ್ವೆ ರವೀಂದ್ರ ಪೂಜಾರಿಯವರು ತಿಳಿಸಿದರು.
ಅವರು ದಿನಾಂಕ 13-08-2017 ಆದಿತ್ಯವಾರದಂದು ಅಡ್ವೆ ಆನಂದಿ ಸಭಾಭವನದಲ್ಲಿ ಯುವವಾಹಿನಿ(ರಿ.) ಅಡ್ವೆ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ “ಆಟಿದ ತಮ್ಮನ” ಸ್ವೀಕರಿಸಿ ಮಾತನಾಡಿದರು.ಅಡ್ವೆ ಬ್ರಹ್ಮಬೈದರ್ಕಳ ಸೇವಾ ಸಮಿತಿಯ ಅಧ್ಯಕ್ಷರಾದ
ಶ್ರೀ ಸುಂದರ ಯು. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರುಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು
“ಆಟಿದ ಮದಿಪು” ನೀಡಿದ ಡಾ. ಗಣೇಶ್ ಅಮೀನ್ ಸಂಕಮಾರ್ ಆಟಿ ತಿಂಗಳು ಎಂದರೆ ಕೃಷಿ ಚಟುವಟಿಕೆಗಳಿಗೆ ವಿರಾಮ ತಿಂಗಳು. ಕುಟುಂಬ ಸದಸ್ಯರು ತಮ್ಮ ಹಿರಿಯರ ಮನೆಯಲ್ಲಿ ಎಲ್ಲರೂ ಒಟ್ಟು ಸೇರಿ ಮುಂದಿನ ಯೋಜನೆಯನ್ನು ರೂಪಿಸುವ ಪ್ರಮುಖ ತಿಂಗಳು ಆಟಿ. ಈ ತಿಂಗಳಲ್ಲಿ ದೇಹಕ್ಕೆ ತಂಪು ನೀಡಿ ಆರೋಗ್ಯ ವೃದ್ಧಿಸುವ, ಭೂಮಿತಾಯಿಯ ಮಡಿಲಲ್ಲಿ ಬೆಳೆಯುವ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು ತಿಂದು ಕಳೆಯುವ ತಿಂಗಳು ಇದಾಗಿದ್ದು, ಆ ಕಷ್ಟದ ದಿನಗಳಲ್ಲಿ ಕೂಡ ಕುಟುಂಬದವರೊಂದಿಗೆ ಸೇರಿ ಸಖೀ ಜೀವನವನ್ನು ನಮ್ಮ ಹಿರಿಯರು ನಡೆಸಿದ್ದಾರೆ.
ಮುಖ್ಯ ಅತಿಥಿ ಶ್ರೀ ರವಿ ಪವಾರ್ ಇನ್ಸ್‍ಪೆಕ್ಟರ್ ಮಂಗಳೂರು ಬಂದರು ಠಾಣೆ ಇವರು ಮಾತನಾಡುತ್ತಾ ಈ ಗ್ರಾಮೀಣ ಪ್ರದೇಶದಲ್ಲಿ ಯುವ ಜನತೆ ಒಟ್ಟಾಗಿ ಇಂತಹ ಆಟಿದೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದು ಶ್ಲಾಘನೀಯ. ವಿದ್ಯೆಗೆ ಮಹತ್ವ ನೀಡಿ, ಹೆತ್ತವರಿಗೆ ಋಣಿಯಾಗಿರಬೇಕು. ಸಮಾಜದಲ್ಲಿ ಯುವ ಜನರು ದಾರಿ ತಪ್ಪದಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ರವಿ ಪವಾರ್ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ರಾಮ ಪೂಜಾರಿ ಮತ್ತು ಶ್ರೀ ತಮ್ಮಣ ಪೂಜಾರಿ ಇವರುಗಳನ್ನು ಅಭಿನಂದಿಸಲಾಯಿತು
ಪಡುಬಿದ್ರಿ ಕಂಚಿನಡ್ಕ ಸಾರ್ವಜನಿಕ ಸ್ಮಶಾನದಲ್ಲಿ ಅದೆಷ್ಟೋ ವರ್ಷಗಳಿಂದ ಹೆಣ ಸುಡುತ್ತಾ ಸಾರ್ಥಕ ಜೀವನ ನಡೆಸಿದ ಮಹಿಳೆ ಶ್ರೀಮತಿ ಸುಗುಣ ಮೂಲ್ಯೆದಿ ಹಾಗೂ ಮಣ್ಣಿನ ಮೂರ್ತಿಗಳಿಗೆ ಜೀವ ನೀಡುತ್ತಾ ತನ್ನ ಕಿರು ವಯಸ್ಸಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿರುವ ಬಾಲ ಯುವ ಪ್ರತಿಭೆ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಲಾರೆನ್ಸ್ ಪಿಂಟೋ ಇವರನ್ನು ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮಣ್ ಸಾಲ್ಯಾನ್ ಹಾಗೂ ಶ್ರೀ ನವೀನ್‍ಚಂದ್ರ ಜೆ. ಶೆಟ್ಟಿಯವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .ಸಮಾರಂಭದಲ್ಲಿ ಅಮೃತವರ್ಷಿಣಿ ಮಹಿಳಾ ವೃಂದ ಅಡ್ವೆ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಶ್ರೀ ನವೀನ್‍ಚಂದ್ರ ಸುವರ್ಣರವರು ಪ್ರಸ್ತಾವನೆ ಮಾಡಿದರು .ಯುವವಾಹಿನಿ (ರಿ) ಅಡ್ವೆ ಘಟಕದ ಅಧ್ಯಕ್ಷರಾದ ಭಾಸ್ಕರ ಆರ್. ಸಾಲ್ಯಾನ್ ಸ್ವಾಗತಿಸಿದರು. ಶಿಕ್ಷಕ ವಿನೇಶ್ ಸಾಂತೂರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಶ್ರೀಧರ ಟಿ. ಪೂಜಾರಿ ಧನ್ಯವಾದ ಅರ್ಪಿಸಿದರು.