ಕಲಿಯಲು ಮನಸ್ಸಿದ್ದರೂ ಬಡತನವು ಬಿಡುವುದಿಲ್ಲ. ಎಲ್ಲಾ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಕಾಣಬಹುದು. ಈ ಸಂದರ್ಭದಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಂದ ಅಥವಾ ಸರಕಾರದಿಂದ ಕೊಡಲ್ಪಡುವ ಸವಲತ್ತುಗಳನ್ನು ಪಡೆಯಲು ವಿದ್ಯಾರ್ಥಿಗಳು ಹಿಂಜರಿಯದೆ ಮುಂದೆ ಬಂದು ವಿದ್ಯಾಭ್ಯಾಸವನ್ನು ಮುಂದುವರೆಸಿ ಸಮಾಜದ ಉತ್ತಮ ಸ್ಥಾನದಲ್ಲಿ ನಿಲ್ಲುವಂತಾಗಬೇಕು ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಹೇಳಿದರು.
ದಿನಾಂಕ:13.08.2017 ರಂದು ಯುವವಾಹಿನಿ(ರಿ) ಪುತ್ತೂರು ಘಟಕದ ಆಶ್ರಯದಲ್ಲಿಬೆಳಿಗ್ಗೆ ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಶೈಕ್ಷಣಿಕ ಸವಲತ್ತುಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯೆ, ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯೋದ್ಧೇಶವನ್ನಿಟ್ಟುಕೊಂಡು ಯಾವುದೇ ಜಾತಿ-ಮತ-ರಾಜಕೀಯವಿಲ್ಲದೆ ಯುವವಾಹಿನಿ ಘಟಕವು ಕೆಲಸ ಮಾಡುತ್ತಿದೆ. ವಿದ್ಯೆಗೆ ಒತ್ತು ನೀಡುವುದಲ್ಲದೆ ವ್ಯಕ್ತಿತ್ವ ವಿಕಸನ, ನಾಯಕತ್ವ ಶಿಬಿರಗಳಂತಹ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಬೆಳವಣಿಗೆಗೋಸ್ಕರ ನೀಡುತ್ತಾ ಬಂದಿದೆ ಎಂದ ಅವರು ವಿದ್ಯಾರ್ಥಿಗಳು ಪೋಷಕರನ್ನು ಅವಲಂಭಿಸಬೇಕು. ಆದರೆ ಸ್ವಾವಲಂಭಿಯಾಗಿ ಮೊಬೈಲ್, ವಾಟ್ಸಫ್ ಮೂಲಕ ಸಮಯವನ್ನು ವ್ಯರ್ಥಮಾಡಿಕೊಳ್ಳುವ ಬದಲು ಸ್ಪಷ್ಟವಾದ ಗುರಿ ಮತ್ತು ಉದ್ಧೇಶವನ್ನಿಟ್ಟುಕೊಂಡು ಅಂತರ್ಜಾಲದಲ್ಲಾಗಲಿ ಅಥವಾ ದಿನಪತ್ರಿಕೆಗಳಲ್ಲಾಗಲಿ ಶೈಕ್ಷಣಿಕ ವಿಭಾಗಕ್ಕೆ ಸಂಬಂಧಪಟ್ಟ ಸವಲತ್ತುಗಳ ಬಗ್ಗೆ ಮಾಹಿತಿ ಬಂದಾಗ ಅದನ್ನು ಪಡೆದು ಅರ್ಜಿಯನ್ನು ಹಾಕುವಂತಾಗಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿರವರು ಮಾತನಾಡಿ, ವಿದ್ಯೆಗೆ ಸಂಬಂಧಪಟ್ಟ ಪ್ರಥಮ ಕಾರ್ಯಕ್ರಮ ಇದಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರ ಸಹಕಾರ, ಬಿಲ್ಲವ ಮಹಿಳಾ ವೇದಿಕೆ, ಬಿಲ್ಲವ ವಿದ್ಯಾರ್ಥಿ ಸಂಘ ಹಾಗೂ ಯುವವಾಹಿನಿ ಸದಸ್ಯರ ಪ್ರೋತ್ಸಾಹ ನಿರಂತರವಾಗಿ ಸಿಗುತ್ತಿದ್ದು ಖಾಸಗಿ ಅಥವಾ ಸರಕಾರದಿಂದ ಸಿಗುವ ಶೈಕ್ಷಣಿಕ ಸವಲತ್ತುಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಅರಿಯುವಂತಾಗಬೇಕು ಎಂದು ಅವರು ಹೇಳಿದರು.
ಬಾಕ್ಸ್
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಸವಲತ್ತುಗಳನ್ನು ಪಡೆಯಲು ಜಾತಿ, ಅಂಕಗಳು ಮತ್ತು ಆದಾಯ ಪ್ರಮುಖ ಪಾತ್ರ ವಹಿಸುತ್ತದೆ ಮಾತ್ರವಲ್ಲದೆ ಇವುಗಳ ಮೇಲೆ ಪ್ರತಿಯೊಂದು ವಿದ್ಯಾರ್ಥಿವೇತನವು ಅಡಕವಾಗಿರುತ್ತದೆ. ಜಾತಿ ಪ್ರಮಾಣ ಪತ್ರವನ್ನು ವ್ಯಕ್ತಿಯು ಬದುಕುವವರೆಗೆ ಅಂದರೆ ಜೀವನ ಪರ್ಯಂತ ನೀಡಬಹುದು. ಅದಕ್ಕೆ ವ್ಯಾಲಿಡಿಟಿ ಇಲ್ಲ. ಆದರೆ ಆದಾಯ ಪ್ರಮಾಣ ಪತ್ರಕ್ಕೆ ಕೇವಲ ಐದೇ ವರ್ಷದ ವ್ಯಾಲಿಡಿಟಿ ಇರುವಂತಹುದು. ಅದನ್ನು ಪ್ರತಿ ಐದು ವರ್ಷಕ್ಕೊಮ್ಮೆ ರಿನೀವಲ್ ಮಾಡಬೇಕಾಗುತ್ತದೆ. ತಿಂಗಳ ರಜಾ ದಿನಗಳನ್ನು ಬಿಟ್ಟು ಉಳಿದ 22 ದಿನಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆಯಾ ಇಲಾಖೆ ನೀಡಬೇಕಾಗುತ್ತದೆ. 28 ವಿವಿಧ ಬಗೆಯ ವಿದ್ಯಾರ್ಥಿವೇತನ ಮತ್ತು ಎರಡು ರೀತಿಯ ವಿದ್ಯಾಭ್ಯಾಸ ಸಾಲವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ವಿದ್ಯಾರ್ಥಿವೇತನ ಸಿಗದಿದ್ದಾಗ ಅದನ್ನು ಅಲ್ಲಿಗೆ ನಿಲ್ಲಿಸಿಬಿಡದೇ ನಿರಂತರವಾಗಿ ಪಡೆಯುವ ತವಕವಿರಬೇಕು.
-ಶರತ್ ಆಳ್ವ ಕರಿಂಕ, ಸಂಪನ್ಮೂಲ ವ್ಯಕ್ತಿ, ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ ಮತ್ತು ಡೆವಲಪ್‍ಮೆಂಟ್, ಪುತ್ತೂರು
ಸರಕಾರ ಮತ್ತು ಖಾಸಗಿ ಸಂಘ-ಸಂಸ್ಥೆಗಳಿಂದ 10ನೇ ತರಗತಿ ಮೇಲ್ಪಟ್ಟು ವಿದ್ಯಾರ್ಜನೆ ಮಾಡುವವರಿಗೆ ಸಿಗುವಂತಹ ಎಲ್ಲಾ ರೀತಿಯ ವಿದ್ಯಾರ್ಥಿವೇತನ ಮತ್ತು ಸವಲತ್ತುಗಳ ಸಂಪೂರ್ಣ ಮಾಹಿತಿಯ ಜೊತೆಗೆ ವಿದ್ಯಾರ್ಥಿವೇತನ ಮತ್ತು ಸವಲತ್ತುಗಳಿಗೆ ಅರ್ಜಿ ಮತ್ತು ವಿವರಗಳನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಶರತ್ ಆಳ್ವರವರು ಸ್ಥಳದಲ್ಲೇ ಮಾಹಿತಿ ನೀಡಿದರು. ವಿವಿಧ ಸಮುದಾಯದ 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.