ತುಳುನಾಡಿನ ಜನರ ಎಲ್ಲ ಆಚರಣೆ ಮತ್ತು ಆಹಾರ ಪದ್ಧತಿಗಳು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿರುವ ವಿಷಯವಲ್ಲ. ಅದು ಸರ್ವಕಾಲಿಕ ಸತ್ಯವನ್ನು ಒಳಗೊಂಡ ಒಂದು ಪವಿತ್ರ ಸಂಸ್ಕøತಿ ಎಂದು ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಹೇಳಿದರು.
ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಬಿಲ್ಲವ ಸಮಾಜ ಸೇವಾಸಂಘದಲ್ಲಿ ಜರಗಿದ 15ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಟಿ ಕೆಟ್ಟ ದಿನಗಳ ಒಂದು ಮಾಸ ಎಂದು ಪ್ರತಿಬಿಂಬಿಸಲಾಗುತ್ತಿದೆ. ಆಟಿ ತಿಂಗಳು ಅತ್ಯಂತ ಶ್ರೇಷ್ಠ ತಿಂಗಳು ಆಗಿರುವುದಲ್ಲದೆ ಉತ್ತಮ ಕಾರ್ಯಗಳಿಗೆ ಸೂಕ್ತವಾದ ಕಾಲವು ಆಗಿರುವ ಸತ್ಯವನ್ನು ತಿಳಿಸುವ ಕೆಲಸ ಆಗಬೇಕಾಗಿದೆ ಸುಜ್ಞಾನವನ್ನು ಕೊಡುವ ಕಷ್ಟ ಕಾರ್ಪಣ್ಯಗಳನ್ನು ರೋಗರುಜಿನಗಳನ್ನು ದೂರಕರಿಸಬಲ್ಲ ಕಾಲವಾಗಿದೆ ಎಂದರು. ಸಮಾರಂಭವನ್ನು ಉದ್ಘಾಟಿಸಿದ ಕಾಂತಬಾರೆ – ಬೂದಬಾರೆ ಜನ್ಮ ಕ್ಷೇತ್ರದ ಅಧ್ಯಕ್ಷ ದಾಮೋಧರ ದಂಡಕೇರಿ ಯುವವಾಹಿನಿಯ ಮೂಲಕ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ನಿತ್ಯ ನೂತನವಾಗಿ ಮೂಡಿ ಬರಲಿ. ಯುವ ಶಕ್ತಿಯ ಬೆಳವಣಿಗೆ ಮತ್ತು ಯುವಕ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವಲ್ಲಿ ಸದಾ ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲಿ ಎಂದು ಹಾರೈಸಿದರು
ಇತಿಹಾಸದ ಮೆಲುಕು
ನಮ್ಮ ಹಿರಿಯರಿಂದ ನಮಗೆ ಬರಬೇಕಾದ ಅನೇಕ ವಿಚಾರಗಳ ಬಗ್ಗೆ ಅರಿವಿನ ಜತೆಗೆ ಇತರರನ್ನು ಪ್ರೀತಿಯಿಂದ ಕಂಡು ಕೂಡಿ ಸೇರಿ ಬದುಕುವ ಉತ್ತಮ ಕ್ರಮದ ಚಿಂತನೆಯ ಮೂಲಕ ತನ್ನ ಬದುಕಿನ ಸುಮಾರು ನಾಲ್ಕು ದಶಕಗಳ ಕಾಲದ ಹಿಂದಿನ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಅವಕಾಶ ಅಪೂರ್ವ ಅವಕಾಶ ಈ ಕಾರ್ಯಕ್ರಮದ ಮೂಲಕ ನಡೆದಿದೆ ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಆಟಿದ ತಮ್ಮಣ
ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ ಅವರನ್ನು ಆಟಿದ ತಮ್ಮನ ಗೌರವವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಯುವವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಇಲ್ಲಿಯ ಕಾರ್ಯಕ್ರಮಗಳಲ್ಲಿ ಸರ್ವ ಜಾತಿಯ ಜನರ ಸೇರುವಿಕೆಯಿಂದ ಸಾಮರಸ್ಯ ಎದ್ದು ಕಾಣುತ್ತಿದೆ ಮಾತ್ರವಲ್ಲ ಧಾರ್ಮಿಕ ಆಚರಣೆಗಳ ತಿರುಳನ್ನು ತಿಳಿಯುವ ಒಂದು ವೇದಿಕೆಯನ್ನು ನಿರಂತರವಾಗಿ ಒದಗಿಸಿದೆ ಎಂದು ಹೇಳಿದರು.
ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷರಾದ ರಕ್ಷಿತಾ ಯೋಗೀಶ್ ಕೋಟ್ಯಾನ್ ಸ್ವಾಗತಿಸಿದರು. ಪೂರ್ವಧ್ಯಕ್ಷ ಚೇತನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿದರು.
ಆಕರ್ಷಕ ವೇದಿಕೆ
ಸುಮಾರು 300ಕ್ಕೂ ಮಿಕ್ಕಿದ ತೆಂಗಿನ ಗರಿಗಳ ದಂಡು (ಕೊತ್ತಳಿಗೆ) ಹಾಗೂ ಗೊರಂಬು, ಗೆರಟೆ ಮತ್ತು ಬೈ ಹುಲ್ಲಿನಿಂದ ತಯಾರಿಸಿದ ವೇದಿಕೆ ಮತ್ತು ಪೋಡಿಯಂ ನೆರೆದ ಸುಮಾರು ಎರಡು ಸಾವಿರಕ್ಕೂ ಮಿಕ್ಕಿದ ಜನರನ್ನು ವಿಶೇಷವಾಗಿ ಆಕರ್ಷಿಸಿತ್ತು.
ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ
ರಾಜೇಶ್ ಪ್ರಭು ಕೈಬೆರಳು ಹಾಗೂ ಬಾಯಿ ಮತ್ತು ಕಾಲಿನಿಂದ ತೆಂಗಿನ ಸಿಪ್ಪೆಯನ್ನು ಸುಲಿಯುವ ಪ್ರದರ್ಶನ ಜನರನ್ನು ಆಕರ್ಷಿಸಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್ ಮತ್ತು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಭಾಗವಹಿಸಿ ಗೌರವವನ್ನು ಸ್ವೀಕರಿಸಿದರು. ವೇದಿಕೆಯಲ್ಲಿ ಮೂಲ್ಕಿ ಘಟಕದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಭರತೇಶ್ ಮಟ್ಟು ಮತ್ತು ಸುನೀತಾ ದಾಮೋಧರ್ ಕೇಂದ್ರ ಸಮಿತಿಯ ನಿಯೋಜಿತ ಸಲಹೆಗಾರ ವಿಶ್ವನಾಥ್ ಉಪಸ್ಥಿತರಿದ್ದರು. ಸುಗಂದಿ ಸತೀಶ್, ಚಿತ್ರಾ ಸುವರ್ಣ ಪ್ರಾರ್ಥಿಸಿದರು.ಸತೀಶ್ ಕಿಲ್ಪಾಡಿ ವಂದಿಸಿದರು. ಮಾಜಿ ಅಧ್ಯಕ್ಷರುಗಳಾದ ನರೇಂದ್ರ ಕೆರೆಕಾಡು, ಉದಯ ಅಮೀನ್ ಮಟ್ಟು, ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು.
ವರದಿ : ನರೇಂದ್ರ ಕೆರೆಕಾಡು
ಚಿತ್ರ : ಸುವರ್ಣ ಸ್ಟುಡಿಯೋ ಮೂಲ್ಕಿ
——————————
Atidaporlu thoovaraporlu