ನವೀನತೆಯ ಯುಗದಲ್ಲಿ ನಾವು ಇಂದು ಗೆಜ್ಜೆಕತ್ತಿಯನ್ನು ಕೇವಲ ಮದುವೆಯ ಸಮಯದಲ್ಲಿ ಮಾತ್ರ ಮದುಮಗಳ ಕೈಯಲ್ಲಿ ಇರುವುದನ್ನು ಗಮನಿಸಿರಬಹುದು ಆದರೆ ಈ ಗೆಜ್ಜೆಕತ್ತಿಯ ಮಹತ್ವ ಇದರಿಂದಲು ಆಚೆಗಿದೆ. ಅದೊಂದು ಅಧಿಕಾರದ ಸಂಕೇತ ಅದೇ ರೀತಿ ರಕ್ಷಣೆಯ ಸಂಕೇತವು ಹೌದು.
ಹಿಂದಿನ ಕಾಲದಲ್ಲಿ ಹೆಣ್ಣು ಪ್ರಾಯಕ್ಕೆ ಬಂದಾಗ ತಾಯಿಯಾದವಳು ಮಗಳ ಕೈಯಲ್ಲಿ ಯಾವತ್ತು ಇರುವಂತೆ ಸಣ್ಣ ಕತ್ತಿಯನ್ನು ನೀಡುತ್ತಿದ್ದಳು. ಸಣ್ಣ ಹಿಡಿಯಿರುವ ಇದು ತುದಿಯಲ್ಲಿ ಅರ್ಧ ಚಂದ್ರಾಕೃತಿಯ ರಚನೆಯಿದ್ದು ಹಿಡಿಯ ತುದಿಯಲ್ಲಿ ಅಲಂಕಾರಕ್ಕಾಗಿ ಸಣ್ಣ ಗೆಜ್ಜೆಗಳು ಇರುತ್ತದೆ. ಇದೊಂದು ಆತ್ಮ ರಕ್ಷಣೆ ಮತ್ತು ಪ್ರಾಣ ರಕ್ಷಣೆಯ ಸಂಕೇತವಾಗಿ ಆಕೆ ಯಾವತ್ತು ಅದನ್ನು ಸೊಂಟದಲ್ಲೆ ಇಟ್ಟುಕೊಳ್ಳುತ್ತಿದ್ದಳು. ಇಂದು ನಾವು ಹೆಣ್ಣುಮಕ್ಕಳ ಸ್ವ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರೆ ಹಿರಿಯರು ಅದನ್ನು ಗೆಜ್ಜೆಕತ್ತಿ ನೀಡುವ ಮೂಲಕ ಮಾಡಿ ತೋರಿಸಿದ್ದರು. ಅಂದರೆ ಅವರ ಅಲೋಚನೆಗಳು ಮಾತಿನ ಮೂಲಕವಲ್ಲ ಬದಲಾಗಿ ಅನುಷ್ಠಾನಕ್ಕೆ ಬರುತ್ತಿದ್ದವು. ಅದೇ ರೀತಿ ಮಗಳು ಪ್ರಾಯಕ್ಕೆ ಬಂದು ಮದುವೆಯಾದಾಗ ತಾಯಿಯು ತನ್ನ ಮನೆಯ ಅಧಿಕಾರ ಹಸ್ತಾಂತರವು ಕೂಡ ಗೆಜ್ಜೆಕತ್ತಿಯನ್ನು ನೀಡುವುದರ ಮೂಲಕ ಆಗುತ್ತಿತ್ತು.
ತುಳುನಾಡಿನಲ್ಲಿ ಮಾತೃಪ್ರಧಾನ ಕುಟುಂಬವಿದ್ದು ಇಲ್ಲಿ ತಾಯಿಯಿಂದ ಮಗಳಿಗೆ ಆಸ್ತಿ ಪರಭಾರೆಯಾಗುತ್ತಿದ್ದು ಇಲ್ಲಿ ಮನೆ ಅಳಿಯ ಎಂಬ ಸಂಪ್ರಧಾಯವೆ ಹೆಚ್ಚಾಗಿತ್ತು. ಆದುದರಿಂದ ಎಲ್ಲಾ ಆಸ್ತಿಗಳ ಅಧಿಕಾರ ಹೆಣ್ಣಿಗೆ ಬರುತ್ತಿತ್ತು ಆದುದರಿಂದ ತಾಯಿಯು ಮಗಳ ಮದುವೆಯ ನಂತರ ತನ್ನ ಅಧಿಕಾರವನ್ನು ಆಕೆಗೆ ಬಿಟ್ಟುಕೊಡುತ್ತಿದ್ದಳು. ಇಲ್ಲಿ ಹೆಣ್ಣು ಗಂಡಿನ ಅಡಿಯಾಳಾಗದೆ ಗಂಡಿನ ಸಹಾಯದಿಂದ ಅಧಿಕಾರ ಚಲಾವಣೆ ಮಾಡುತ್ತಿದ್ದಳು. ಇವತ್ತಿಗು ಕೂಡ ತುಳುನಾಡಿನ ಅಳಿಯ ಕಟ್ಟಿನ ಕುಟುಂಬಗಳ ಆಸ್ತಿ ಪತ್ರವನ್ನು ನೋಡಿದರೆ ಅಲ್ಲಿ ಆಸ್ತಿಯ ಪಟ್ಟೆ ಇರುವುದು ಹೆಣ್ಣಿನ ಹೆಸರಿನಲ್ಲಿ ಅದೇ ರೀತಿ ಆಕೆಯ ನಂತರ ಆಕೆಯ ದೊಡ್ಡ ಮಗಳ ಹೆಸರಿಗೆ ಅದು ನಮೂದಿಸಲ್ಪಡುತ್ತಿತ್ತು. ಇಲ್ಲಿ ಹೆಣ್ಣಿಗಿರುವ ಅಧಿಕಾರವನ್ನು ಸೂಚಿಸುತ್ತಿತ್ತು.
ಗೆಜ್ಜೆಕತ್ತಿಯ ಉಲ್ಲೇಖ ದೇಯಿ ಬೈದೆತಿಯ ಕಥಾನಕದಲ್ಲಿ ಬರುತ್ತದೆ. ದೇಯಿ ಬೈದೆತಿಯು ಪೆರುಮಲೆ ಬಲ್ಲಾಳ ಕುಜುಂಬ ಮುದ್ಯನಿಗೆ ಔಷದೋಪಚಾರ ಮಾಡಲು ಹೊರಟಾಗ ಅತ್ತಿಗೆ ಸೊನ್ನೆ ಸೋಮಿ ಬೈದೆತಿಯು ಗೆಜ್ಜೆಕತ್ತಿ ಕೊಟ್ಟು ಮಗಳೆ ನಿನ್ನ ಮಾನ ಪ್ರಾಣವು ಈ ಗೆಜ್ಜೆಕತ್ತಿಯಲ್ಲಿ ಇದೆ ನಿನ್ನೊಂದಿಗೆ ನಾವಿಲ್ಲ ಈ ಗೆಜ್ಜೆಕತ್ತಿ ಇರುತ್ತದೆ ಎಂದು ಹೇಳುತ್ತಾಳೆ. ಅಂದರೆ ಅಂದಿನ ಕಾಲದಲ್ಲಿ ಅದು ಅಷ್ಟು ಮಹತ್ವವನ್ನು ಪಡೆಯುತ್ತಿತ್ತು. ಅದೇ ರೀತಿ ಬಾಣಂತಿ ತಾಯಿ ಬಹಿರ್ದೆಸೆಗೆ ಹೊರಗೆ ಹೋಗುವಾಗ ಆಕೆಯ ಕೈಯಲ್ಲಿ ಗೆಜ್ಜೆಕತ್ತಿ ಇರುತ್ತಿತ್ತು. ಇದು ಆಕೆಯನ್ನು ದುಷ್ಟ ಶಕ್ತಿ ಮತ್ತು ಗಾಳಿ ಸೋಂಕಿನಿಂದ ಕಾಪಾಡುತ್ತದೆ ಎನ್ನುವ ಬಲವಾದ ನಂಬಿಕೆಯಿಂದ. ಇದಕ್ಕೆ ಉದಾಹರಣೆಯಾಗಿ ಇಂದಿಗು ಕೂಡ ದೇಯಿ ಬೈದೆತಿ ಮತ್ತು ಮಾಯಂದಾಲ್ ( ಮಾಣಿಬಾಲೆ) ಶಕ್ತಿಗಳ ನೇಮದ ಸಮಯದಲ್ಲಿ ಆಯುಧವನ್ನಾಗಿ ಗೆಜ್ಜೆಕತ್ತಿಯನ್ನೆ ನೀಡುವುದು ಕಾರಣ ಅವರಿಬ್ಬರು ಬಾಣಂತಿ ಎನ್ನುವ ನಂಬಿಕೆಯಿಂದ.
ಹೆಣ್ಣು ಪ್ರಾಯಕ್ಕೆ ಬಂದಾಗಲೆ ಆಕೆಯ ಪ್ರಾಣ ಮತ್ತು ಮಾನ ರಕ್ಷಣೆಗಾಗಿ ಕೊಡುತ್ತಿದ್ದು ಇಂದು ಕೇವಲ ಮದುವೆಯ ಸಮಯದಲ್ಲಿ ಮತ್ತು ದೈವಗಳ ಆಯುಧವಾಗಿ ಸೀಮಿತ ಚೌಕಟ್ಟಿನಲ್ಲಿ ಹುದುಗಿ ಹೋಗಿದೆ. ಹಿರಿಯರ ನಂಬಿಕೆಗಳು ಬುಡಮೇಲಾಗಿದೆ ಹೊಸತ್ತನ್ನು ಹುಡುಕುವ ತವಕ ಯುವಜನತೆಗೆ ಅದರ ಧಾವಂತದಲ್ಲಿ ಹಳೆಯ ನಂಬಿಕೆಗಳು ಮಕ್ಕಡೆ ಮಲಗಿಕೊಂಡಿದೆ. ಹಿರಿಯರ ದೂರದೃಷ್ಟಿಯ ಅಲೋಚನೆಗಳು ಮೂಡನಂಬಿಕೆಯ ಬೇಲಿಯಲ್ಲಿ ಬಂಧಿಯಾಗಿದೆ. ಹಿರಿಯರ ನಂಬಿಕೆಗಳಿಗೆ ಮರುಜೀವ ನೀಡುವವರು ಯಾರೋ ಕಾದು ನೋಡಬೇಕಿದೆ.
Samskrithi sandesh chennagide