ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.
ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು ಪ್ರಭುಗಳು ” , “ ವಿಪ್ಲವ ” ಅವರ ಮೊದಲ ಕಾದಂಬರಿ ” ನೆತ್ತರಗಾನ “, ” ಭಗವಂತನ ಆತ್ಮ ಕಥೆ ” , ” ಕರ್ಮ ” , “ ಅಖಂಡಬ್ರಹ್ಮಚಾರಿಗಳು “- ಹೀಗೆ ಒಂದೊಂದು ಮೈಲುಗಲ್ಲುಗಳು. ಮತ್ತೆ ಹೆಸರಿಸಬಹುದಾದ ಕಾದಂಬರಿಗಳು : ಮಿಯಾಂಕಾಮತ್, ಗಗನ ಕಾಮಿಗಳು,ಹೋಮಾದೇವಿ,ಹಂಸಕ್ಷೀರ,ಭೂಮಿ, ಈ ಪರಿಯಬದುಕು, ಭಟ್ಕಳದಿಂದ ಬೆಂಗಳೂರಿಗೆ, ಕಪ್ಪು ಸಮುದ್ರ – ಮುಂತಾದವುಗಳು .
ಅವರ ನಿರ್ದೇಶನದ ” ಕೋಟಿ- ಚೆನ್ನಯ ” ಚಿತ್ರ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ” ಡೊಂಕು ಬಾಲದ ನಾಯಕರು ” ರಾಜಕೀಯ ವಿಡಂಬನಾತ್ಮಕ ನಾಟಕ. ಆ ಕಾಲದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು!
” ಕರಾವಳಿ ” ಕಾದಂಬರಿ ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಕ್ರಾಂತಿಯನ್ನೇ ಮಾಡಿತು. ಮತೀಯ ಘರ್ಷಣೆಗೆ ಕಾರಣವಾಯಿತು. ” ಕರಾವಳಿ ” ಚಿತ್ರ – ಉಡುಪಿ ಮತ್ತು ದಕ್ಷಿಣ ಕನ್ನಡ ಅವಳಿ ಜಿಲ್ಲೆಗಳಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣಲಿಲ್ಲ!
ಯಾವುದೇ ಒಂದು ಸಂಸ್ಥೆಯಲ್ಲಿ, ಯಾವುದೇ ಒಂದು ಉದ್ಯೋಗದಲ್ಲಿ ಸರಿಯಾಗಿ ನಿಲ್ಲುತ್ತಿರಲಿಲ್ಲ .ವಿಶುಕುಮಾರ್ ಯಾಕೆ ಹೀಗೆ – ಇಂಥ ವಿವಾದದ ಸುಳಿಯಲ್ಲಿ ಸಿಕ್ಕುತ್ತಾರೆ ? ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಬಹುಮುಖ ಪ್ರತಿಭಾವಂತ. ಕಾದಂಬರಿಗಾರ, ಚಲನಚಿತ್ರ ನಿರ್ಮಾಪಕ, ನಟ, ನಿರ್ದೇಶಕ, ನಾಟಕಕಾರ, ರಂಗಕರ್ಮಿ ,ಯಕ್ಷಗಾನ ಕಲಾವಿದ, ಹಾಡುಗಾರ, ನಾಟ್ಯವನ್ನು ಕಲಿತವರು, ಪತ್ರಕರ್ತ, ಒಬ್ಬ ಸರಕಾರಿ ಅಧಿಕಾರಿ- ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅಪ್ಪಟ ರಾಜಕಾರಣಿ. ಇವೆಲ್ಲವನ್ನು ತನ್ನ ಕೇವಲ 49 ವರ್ಷದಲ್ಲಿ ಮಾಡಿ ಮುಗಿಸಿದರು!
ಇವರ ಸಾಧನೆಯನ್ನು ವಿಶ್ಲೇಷಿಸುತ್ತಾ ಮೇಲುಕು ಹಾಕುವುದೇ ಈ ಲೇಖನ ಮಾಲೆಯ ಉದ್ದೇಶ. ನಮ್ಮ ಯುವ ಪೀಳಿಗೆಗೆ ಇವರೊಂದು ಮಾದರಿ ಆಗ ಬಲ್ಲರೆಂದು ನಮ್ಮ ಅಭಿಪ್ರಾಯ.
ವಿಶುಕುಮಾರ್ ರ ಹಿನ್ನಲೆ ಏನು?
ವಿಶುಕುಮಾರ್ ಹುಟ್ಟಿದ್ದು ಒಬ್ಬ ಕಲಾರಸಿಕನ ಮನೆತನದಲ್ಲಿ- ಆ ಕಾಲದಲ್ಲಿ ಬೋಳೂರು ದೋಗ್ರ ಪೂಜಾರಿ ಚಿರಪರಿಚಿತ ಹೆಸರು. ಹವ್ಯಾಸಿ ಯಕ್ಷಗಾನ ಕಲಾವಿದ. ಅವರ ಬಣ್ಣದ ವೇಷವನ್ನು ನೋಡಿದ ಹಿರಿಯರು ಈಗಲೂ ಮೆಚ್ಚಿಕೊಳ್ಳುತ್ತಾರೆ. ೧೯೨೪ ರಲ್ಲಿ ” ಶ್ರೀ ಗೋಕರ್ಣನಾಥ ಯಕ್ಷಗಾನ ಮಂಡಳಿ” ಕಟ್ಟಿದ್ದರು. ಅದು ಕೆಲವು ವರ್ಷ ನಡೆಯಿತು. ಈ ನಡುವೆ ಮತ್ತೊಂದು ಮೇಳವನ್ನು 1925 ರಲ್ಲಿ ” ಜಗದಂಬಿಕಾ ಯಕ್ಷಗಾನ ಮಂಡಳಿ ” ಊರ್ವ – ಇದನ್ನು ಸ್ಥಾಪಿಸಿದರು. ಈ ಮೇಳವನ್ನು ಈಗಲೂ ಬೇರೆಯವರು ನಡೆಸಿಕೊಂಡು ಹೋಗುತ್ತಿದ್ದಾರೆ.
ದೋಗ್ರ ಪೂಜಾರಿ ಕಲಿತದ್ದು ಬರೀ ಎರಡನೇ ತರಗತಿ! ಅಪಾರ ಜ್ಞಾನವಂತ, ವಿನಯವಂತ, ಉದಾರಿ. ಅವರು ಬದುಕಿಗೆ ಬೋಳೂರು ಸುಲ್ತಾನ್ ಬತ್ತೇರಿ ನದಿ ದಡ(ಫಲ್ಗುಣಿ- ಗರುಪುರ) ದಲ್ಲಿ ” ನಿಸರ್ಗ ಫಲಾಹಾರ ಮಂದಿರ ” ಊಟ- ತಿಂಡಿ ಹೋಟೆಲ್ ನಡೆಸುತ್ತಿದ್ದರು. ಈಗ ಈ ಜಾಗ ಪ್ರವಾಸ ತಾಣಕ್ಕೆ ಸೇರಿದೆ.
ದೋಗ್ರ ಪೂಜಾರಿ ಅವರನ್ನು ಜ್ಞಾನವಂತ ಹಾಗೂ ಉದಾರಿ ಯಾಕೆಂದು ಈ ಮಾತು ಹೇಳ್ತೇವೆಂದರೆ- ಅವರ ಹೋಟೆಲ್ ನಲ್ಲಿ ಹುಡುಗರಿಗೆ ಯಕ್ಷಗಾನ ಹಾಗೂ ತಾಳೆ ಮದ್ದಳೆ ಕಲಿಸುತ್ತಿದ್ದರು. ಕಲಿಕೆಯ ಜತೆಗೆ ಆ ಹುಡುಗರಿಗೆ ತಿಂಡಿ- ಕಾಫಿ ಕೂಡ ಕೊಡುತ್ತಿದ್ದರು! ಹೋಟೆಲ್ ಪಕ್ಕದ ಖಾಲಿ ಜಾಗದಲ್ಲಿ ” ಯುನೈಟ್ ಸ್ಪೋಟ್ಸ್ ಕ್ಲಬ್ ” ನವರು ನಾಟಕದ ಪ್ರಾಕ್ಟೀಸು ಮಾಡುತ್ತಿದ್ದರು. ಇದು ” ದೋಗ್ರ ಮೇಳ” ದ ಕತೆಯಾದರೆ, ಕಳೆದ ೩೬ ವರ್ಷಗಳಿಂದ ” ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರ ” ಎಂಬ ಹೆಸರಿನಲ್ಲಿ ಪ್ರಶಸ್ತಿ ಪ್ರದಾನವನ್ನು ಅವರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ಆ ದಿನ ಯಕ್ಷಗಾನ ತಾಳೆ ಮದ್ದಳೆ ಕೂಡ ನಡೆಯುತ್ತಿದೆ .ಈಗ ಅದರ ಯಜಮಾನಿಕೆಯನ್ನು ಬಿ. ದಾಮೋದರ ನಿಸರ್ಗ ನೋಡಿಕೊಳ್ಳುತ್ತಿದ್ದಾರೆ.
ಇಂಥ ಪುಣ್ಯ ವಂಥನಿಗೆ 1937 ಮಾರ್ಚಿ 4 ರಂದು ವಿಶುಕುಮಾರ್ ಹಿರಿಮಗನಾಗಿ ಜನಿಸಿದರು . ತಾಯಿಯ ಹೆಸರು ಚಂದ್ರಾವತಿ. ದೋಗ್ರ ಪೂಜಾರಿ ದಂಪತಿಗೆ ಒಟ್ಟು ಹತ್ತು ಮಂದಿ ಮಕ್ಕಳು. ಆರು ಮಂದಿ ಗಂಡು ಮಕ್ಕಳು. ನಾಲ್ಕು ಮಂದಿ ಹೆಣ್ಣು ಮಕ್ಕಳು.
ವಿಶುಕುಮಾರ್ ಅವರ ಮೂಲ ಹೆಸರು ವಿಶ್ವನಾಥ. ಅನಂತರದವರು: ಮಧುಕುಮಾರ್, ಪುರುಷೋತ್ತಮ, ದಾಮೋದರ, ಯದುವೀರ ಮತ್ತು ದೇವೇಂದ್ರ. ಹೆಣ್ಣು ಮಕ್ಕಳಲ್ಲಿ ಹಿರಿಯವರು ವೇದಾವತಿ , ಉಮಾವತಿ, ಸುಗಂಧಿ ಮತ್ತು ಸುಮತಿ. ಸುಗಂಧಿ ಮತ್ತು ಸುಮತಿ ಅವಳಿ – ಜವಳಿ ಮಕ್ಕಳು. ಪುರುಷೋತ್ತಮ ಮತ್ತು ವೇದಾವತಿ ಈಗಿಲ್ಲ.
ಇವರಲ್ಲಿ ಮಧುಕುಮಾರ್ ಯಕ್ಷಗಾನ ಭಾಗವತಿಕೆ ಮತ್ತು ಪ್ರಸಂಗ ಕರ್ತ, ಪುರುಷೋತ್ತಮ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ ಹಾಗೂ ಅಭಿನಯಿಸಿದ್ದಾರೆ. ದಾಮೋದರ್ ಕಂಟ್ರಾಕ್ಟರ್ – ಸಾಹಿತ್ಯ,ಸಂಘ-ಸಂಸ್ಥೆಗಳಲ್ಲಿ ತೊಡಗಿದ್ದಾರೆ. ಯದುವೀರ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ . ದೇವೇಂದ್ರ ಕೂಡ ಕಂಟ್ರಾಕ್ಟರ್ ಆಗಿದ್ದಾರೆ .
ಅಳಿಯ ಸಂತಾನ ಕುಟುಂಬ:
ದೋಗ್ರ ಪೂಜಾರಿ ಮತ್ತು ಕೇಂದ್ರದ ಮಾಜಿ ಸಚಿವ ಕಾಂಗ್ರೇಸ್ ನಾಯಕ ಜನಾರ್ಧನ ಪೂಜಾರಿ ಒಂದೇ ಕುಟುಂಬ. ದೋಗ್ರ ಪೂಜಾರಿ ಅವರ ಅಣ್ಣನ ಮಗ ಜನಾರ್ಧನ ಪೂಜಾರಿ. ಅಳಿಯ ಸಂತಾನವಾದುದರಿಂದ ಅವರ ಕುಟುಂಬಕ್ಕೆ ೬೨ ಮುಡಿ ಗೇಣಿ ಬರುವ ವರ್ಗದಾರರು. ಕವರು ಪಾಲು ಪ್ರಕಾರ ದೋಗ್ರ ಪೂಜಾರಿ ಅವರಿಗೆ ೧೦ ಮುಡಿ ಗೇಣಿ ಬರುವ ಜಾಗವಾದರೆ, ಜನಾರ್ಧನ ಪೂಜಾರಿ ತಂದೆಯವರಿಗೆ ೧೨ ಮುಡಿ ಗೇಣಿ ಬರುವ ಸ್ಥಳ . ಈ ಗೇಣಿ ಬರುವ ಸ್ಥಳ ಮರೋಳಿ ಗ್ರಾಮದಲ್ಲಿದೆ. ದೋಗ್ರ ಪೂಜಾರಿ ಮನೆ ಇರುವುದೇ ಮರೋಳಿ ಗ್ರಾಮದಲ್ಲಿ. ಆ ಮನೆಯಲ್ಲಿ ಈಗ ದಾಮೋದರ ನಿಸರ್ಗ ಇದ್ದಾರೆ.
ಇದು ವಿಶುಕುಮಾರ್ ರ ಕುಟುಂಬದ ಹಿನ್ನಲೆ.
ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...
ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...
ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...
ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...