ಉದಯವಾಣಿ ಪತ್ರಿಕೆಯ ಪ್ರಾರಂಭದ ದಿನದಿಂದಲೇ ವಿಶುಕುಮಾರ್ ಅವರು ” ಶ್ರೀಸಾಮಾನ್ಯರು ಮಹಾನುಭಾವರು” ಅಂಕಣ ಬರೆಯುತ್ತಿದ್ದರು. ಅದು ತುಂಬಾ ಜನಪ್ರಿಯ ಕಾಲಂ ಆಗಿತ್ತು. ಅವರ ಬರಹ ತೀಕ್ಷಣತೆಯಿಂದ ಕೂಡಿತ್ತು. ಸೂಕ್ಷ್ಮ ಒಳನೋಟ , ಸಮಗ್ರ ಮಾಹಿತಿ ಹಾಗೂ ನಿರ್ಭೀತಿಯಿಂದ ಕೂಡಿತ್ತು.
ಅವರು ಯಾರ ಮೂಲಾಜಿಗೂ ಒಲಿಯುತ್ತಿರಲಿಲ್ಲ. ತಮಗೆ ಅನ್ನಿಸಿದನ್ನು ಬರೆಯುತ್ತಿದ್ದರು. ಎಲ್ಲವೂ ನೇರ. ವಿಶುಕುಮಾರ್ ರ ಆಲೋಚನೆಗಳನ್ನು ಟೀಕಿಸುವವರು ಕೂಡ ಅವರ ಅಂಕಣ ಓದುತ್ತಿದ್ದರು. ಇವರ ಬರವಣಿಗೆಯನ್ನು ” ಪೈ ಫ್ಯಾಮಿಲಿ” ಮೆಚ್ಚಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ವಾರಪತ್ರಿಕೆಯ ಆಲೋಚನೆ ಕೂಡ ಮೂಡಿ ಬಂದಿರುವುದು.
ಆಗಿನ ರಾಜ್ಯ ಮಟ್ಟದ ದಿನ ಪತ್ರಿಕೆಯ ಮಾಲೀಕರು ಒಂದು ದಿನ ಪತ್ರಿಕೆ , ವಾರ ಪತ್ರಿಕೆ ಹಾಗೂ ತಿಂಗಳ ಪತ್ರಿಕೆ ನಡೆಸುವ ಪದ್ಧತಿ. ಹಾಗಾಗಿ ಉದಯವಾಣಿ ಬಳಗವೂ ಕೂಡ ಹಿಂದೆ ಬೀಳಲಿಲ್ಲ.
ಆಗ ಯೋಚನೆ ಬಂದದ್ದೇ ವಾರ ಪತ್ರಿಕೆಗೆ ಯಾರು ಸಂಪಾದಕರಾಗಬೇಕೆಂಬುದು. ಮೊದಲ ಹೆಸರು ಬಂದದ್ದೇ ವಿಶುಕುಮಾರ್ ಅವರದು. ನಂತರ ಸಂತೋಷಕುಮಾರ ಗುಲ್ವಾಡಿಯವರದು. ಆಗ ಗುಲ್ವಾಡಿಯವರು ಬಾಂಬೆಯಲ್ಲಿ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು.
ಇವರಿಬ್ಬರ ಹೆಸರಿನ ಪೈಪೋಟಿಯಲ್ಲಿ ಉದಯವಾಣಿಯ ದೀಪಾವಳಿ ಸಂಚಿಕೆ ಪ್ರಾಯೋಗಿಕವಾಗಿ ಮೂಡಿ ಬಂದದ್ದು ಎಂದು ಸೂಕ್ಷ್ಮದ ಎಳೆಯನ್ನು ವಿವರಿಸಿದರು ವಿಶುಕುಮಾರ್. ಒಂದು ಸಂಚಿಕೆ ಗುಲ್ವಾಡಿ ಹೆಸರಿನಲ್ಲಿ ಬಂದರೆ, ಮತ್ತೊಂದು ಸಂಚಿಕೆಗೆ ವಿಶುಕುಮಾರ್ ಸಂಪಾದಕರಾಗಿದ್ದರು.
ಕಡೆಗೂ ಒಲಿದು ಬಂದದ್ದು ಗಲ್ವಾಡಿ ಪಾಲಿಗೆ-” ತುಪ್ಪ ಜಾರಿ ಬಿದ್ದದ್ದು ಗುಲ್ವಾಡಿ ತಟ್ಟೆಗೆ ” ಎಂದು ನಕ್ಕರು ವಿಶುಕುಮಾರ್.
” ಸ್ವಲ್ಪ ತೂಕವೂ ಗುಲ್ವಾಡಿ ಅವರಿಗೆ ಜಾಸ್ತಿ ಇತ್ತು. ಕಾರಣ ಪೈ ಬಳಗ ಮತ್ತು ಗುಲ್ವಾಡಿ ಒಂದು ವರ್ಗದವರು ತಾನೇ ” ಎಂದರು.
ಇಲ್ಲಿ ಈಗ ಈ ಬರಹಗಾರ ಯೋಚಿಸಬೇಕಾಗಿದೆ. ವಿಶುಕುಮಾರ್ ಮತ್ತು ಬರಹಗಾರನೊಡನೆ ಮಾತುಕತೆ ನಡೆದ್ದದ್ದು ೧೯೭೮ ರ ಸಮಯದಲ್ಲಿ! ಈಗ ಈ ಭಟ್ಟಿಳಿಸಬೇಕಾಗಿದೆ. ಈ ಬರವಣಿಗೆ ನಡೆಯುತ್ತಿರುವುದು ೨೦೧೬ ರಲ್ಲಿ! ವ್ಯತ್ಯಾಸ ತುಂಬಾ ಬದಲಾವಣೆಗಳು ನಡೆದಿವೆ! ಮಣಿಪಾಲದ ಸುವರ್ಣನದಿಯಲ್ಲಿ ಈ ನಡುವೆ ಬೇಕಾದಷ್ಟು ಮಳೆಗಾಲದ ನೀರು ಹರಿದಿವೆ.
1993-94 ರಲ್ಲಿ ಈ ಬರಹಗಾರ ಉದಯವಾಣಿಯಲ್ಲಿ ಉಪಂಪಾದಕನಾಗಿ ಕೆಲಸಕ್ಕೆ ಸೇರಿದ್ದಾನೆ. ಸುಮಾರು ೧೪ ವರ್ಷ ಆ ಸಂಸ್ಥೆಯಲ್ಲಿ ದುಡಿದ – ಪೈ ಫ್ಯಾಮಿಲಿಯ ಅನುಭವವಿದೆ. ಒಂದಳತೆಗೆ ವಿಶುಕುಮಾರ್ ರ ಮಾತು ಒಪ್ಪಿದ್ದರೂ ಪೂರ್ಣ ಒಪ್ಪುವ ಹಾಗಿಲ್ಲ.
” ಪ್ರತಿಭೆಗೆ ಪೈ ಫ್ಯಾಮಿಲಿಯಲ್ಲಿ ಬೆಲೆಯಿದೆ. ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ವ್ಯಕ್ತಿಯನ್ನು ಒಂದಳತೆಗೆ ಅಲ್ಲಾಡಿಸಿ ನೋಡಿ ಬಿಡುತ್ತಾರೆ ಪೈ ಫ್ಯಾಮಿಲಿ. ಅವರಿಗೆ ನಂಬಿಕೆ ಬಂದರೆ, ಮತ್ತೆ ಆ ವ್ಯಕ್ತಿಯ ತಂಟೆಗೆ ಆ ಕುಟುಂಬ ಬರುವುದಿಲ್ಲ. ಯಾರು ಏನೇ ಆ ವ್ಯಕ್ತಿಯ ಮೇಲೆ ದೂರು ಕೊಟ್ಟರೂ , ಅದನ್ನು ಕೇಳುತ್ತಾರೆ. ಆದರೆ ಆಕ್ಷನ್ ತೆಗೆದುಕೊಳ್ಳುವುದಿಲ್ಲ . ಆದರೆ ಆ ವ್ಯಕ್ತಿ ಬೇಡವೆಂದು ಕಂಡು ಬಂದರೆ, ಒಂದು ಸಣ್ಣ ತಪ್ಪು ಸಿಕ್ಕಿ ಬಿದ್ದರೂ ಸಾಕು. ಆತನನ್ನು ಕೆಲಸದಿಂದ ತೆಗೆದು ಬಿಡುತ್ತಾರೆ. ಅಲ್ಲದೆ – ಅವರು ತಮ್ಮ ಬಳಗದ ಜನವನ್ನೇ ನಂಬುವುದಿಲ್ಲ. ಯಾವ ವರ್ಗದ ಜನರೇ ಇರಲಿ. ಪ್ರತಿಭಾವಂತರನ್ನು ನಂಬುತ್ತಾರೆ. ಆ ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗಿಗಳು ಜಾತಿ- ಭೇದವಿಲ್ಲದೆ ಕೆಳವರ್ಗದಿಂದ ಹಿಡಿದು ಉನ್ನತ ಹುದ್ದೆಯಲ್ಲಿ ದುಡಿಯುತ್ತಿದ್ದಾರೆ ” – ಇದು ಈ ಬರಹಗಾರನ ಮಾತು. ಅಲ್ಲಿ ದುಡಿಯುವ ಉದ್ಯೋಗಿಗಳು ಸಾಕ್ಷಿ .
ಇನ್ನು ವಿಶುಕುಮಾರ್ – ಬಂಡಾಯ ಬರಹಗಾರ. ಕಾಂಟ್ರವರ್ಸಿಗಳೇ ಹೆಚ್ಚು. ಪ್ರತೀ ಹೆಜ್ಜೆಗಳು …ಕೋರ್ಟು ಮೆಟ್ಟಿಲುಗಳು ಹತ್ತುವ ಸಂಭವಗಳೇ ಅಧಿಕ. ಆ ಭಯ ಪೈ ಫ್ಯಾಮಿಲಿಗೆ ಇದ್ದೇ ಇದೆ. ಹಾಗಾಗಿ ” ತರಂಗ” ಸಂಪಾದಕನಾಗುವ ಚಾನ್ಸ್ ತಪ್ಪಿದ್ದು ಈ ಹಿನ್ನಲೆ. ಗುಲ್ವಾಡಿ ಪಾಲಿಗೆ ಜಾರಿದ ತುಪ್ಪದ ಕತೆ!
– ರವಿರಾಜ ಅಜ್ರಿ
22.08.2006