ವಿದ್ಯೆ, ಉದ್ಯೋಗ ಮತ್ತು ಸಂಪರ್ಕವೆಂಬ ನಾರಾಯಣ ಗುರುಗಳ ತತ್ವದಂತೆ ಯುವವಾಹಿನಿ ಸದಸ್ಯರು ಕೆಲಸ ಮಾಡುತ್ತಿದ್ದು ಜನರ ಅನಿಸಿಕೆ ಹಾಗೂ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಯುವವಾಹಿನಿ ಯಂತೆ ಪ್ರತಿಯೊಂದು ಸಂಘಟನೆಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಂಘಟನೆಗಳಿಗೆ ನಿಜವಾದ ಅರ್ಥ ಹಾಗೂ ಬೆಲೆ ಸಿಗುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಸಂತೋಷ್ ಕುಮಾರ್‌ರವರು ಹೇಳಿದರು.
ಅವರು ಜು. 24 ರಂದು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ 2016-17 ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿ ಮಾತನಾಡಿದರು. ಯುವವಾಹಿನಿ ಸಂಸ್ಥೆಯು ಶಿಸ್ತುಬದ್ಧ ಸಂಸ್ಥೆಯಾಗಿದ್ದು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ, ಸಹಕರಿಸುತ್ತಾ ಯುವಜನತೆ ಮುಂದೆ ಬರುವಲ್ಲಿ ಪ್ರೋತ್ಸಾಹ ನೀಡಿ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದೆ. 22 ಘಟಕಗಳ ಪೈಕಿ ಪುತ್ತೂರು ಯುವವಾಹಿನಿ ಘಟಕವು ಕಾರ್ಯಕ್ರಮವನ್ನು ಏರ್ಪಡಿಸುವಾಗ ಸಭಾಂಗಣವೇ ಕಿಕ್ಕಿರಿದು ತುಂಬಿ ತುಳುಕಾಡುವುದನ್ನು ನಾನು ಎಲ್ಲಿಯೂ ನೋಡಿಲ್ಲ ಎಂದ ಅವರು ಈ ನಿಟ್ಟಿನಲ್ಲಿ ಯಶಸ್ವಿ ನಾಯಕ ಶಶಿಧರ್ ಕಿನ್ನಿಮಜಲುರವರ ಅಧ್ಯಕ್ಷತೆಯಲ್ಲಿ ಸಮಾಜ ಬಾಂಧವರ ನಿರೀಕ್ಷೆಯನ್ನೂ ಮೀರಿ ಕಳೆದ ವರ್ಷ ದಾಖಲೆಯ, ಫಲದಾಯಕ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಂಘಟನೆಗಳು ಯುವಸಮುದಾಯವನ್ನು ಒಗ್ಗೂಡಿಸಿ, ನಾಯಕತ್ವ ಗುಣವನ್ನು ಬೆಳೆಸಿ – ಜಯಂತ್ ನಡುಬೈಲು
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ, ಬಿಲ್ಲವ ಸಮಾಜ ಯುವಕರ ಕೂಟವಾಗಿದೆ. ಕೂಟದ ಮುಖಾಂತರ ಯುವಕರು ನಾಯಕತ್ವವನ್ನು ಹೊಂದುವಂತರಾಗ ಬೇಕು. 51 ಗ್ರಾಮ ಸಮಿತಿಗಳಲ್ಲೂ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಯುವಸಮುದಾಯ ಮುಂದೆ ಬರಬೇಕು ಎಂದ ಅವರು ಪ್ರಸ್ತುತ ಯುವವಾಹಿನಿ ಸಂಘಟನೆಯು ಹೆಮ್ಮರವಾಗಿ ಬೆಳೆದಿದೆ. ಯುವಸಮುದಾಯ ಸಂಘಟನೆಯಲ್ಲಿ ಗುರುತಿಸಿಕೊಂಡು ಪರಸ್ಪರ ಸಂಪರ್ಕ ದಲ್ಲಿದ್ದಾಗ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಪ್ರಾಪ್ತಿಯಾಗುವುದು. ಸಂಘಟನೆಗಳು ಯುವಸಮುದಾಯ ಅನ್ಯ ದಾರಿಯನ್ನು ಹಿಡಿಯದಂತೆ ಒಗ್ಗೂಡಿಸಿ ಅವರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಸಂಘಟನೆ ಮೂಲಕ ಅನುಭವ ಪಡೆದುಕೊಳ್ಳಿ-ಶಶಿಧರ್ ಕಿನ್ನಿಮಜಲು
ನಿರ್ಗಮನ ಅಧ್ಯಕ್ಷ ಶಶಿಧರ್ ಕಿನ್ನಮಜಲುರವರು ಮಾತನಾಡಿ, ಗ್ರಾಮ ಸಮಿತಿಯಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಯವವಾಹಿನಿ ಸಂಘಟನೆಯಲ್ಲಿ ಸೇರಿಸಿ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಿ ಸಮಾಜಮುಖಿ ಚಿಂತನೆಯನ್ನು ಮನಸ್ಸಿನಲ್ಲಿ ಭಿತ್ತಿದವರು ಜಯಂತ್ ನಡುಬೈಲುರರು. ವ್ಯಕ್ತಿ ಸಮಾಜದ ಶಕ್ತಿ, ಸಮಾಜದಲ್ಲಿ ಬೆಳಕಾಗಲು ಸಂಘಟನೆ ಬಹಳ ಮುಖ್ಯವಾಗಿದೆ. ಸಮಾಜ ಬಾಂಧವರು ಕೇವಲ ಹೆಸರಿಗಷ್ಟೇ ಸಂಘಟನೆಯಲ್ಲಿ ಸೇರದೆ ಸಂಘಟನೆಯ ಮೂಲಕ ಅಭಿವೃದ್ಧಿಯ ಅನುಭವವನ್ನು ಪಡೆದುಕೊಂಡು ಹೋಗುವಂತೆ ಆಗಬೇಕು ಎಂದು ಹೇಳಿ ತನ್ನ ಅಧ್ಯಕ್ಷ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಸ್ಮರಿಸಿ, ಮುಂದಿನ ಅಧ್ಯಕ್ಷರ ತಂಡಕ್ಕೆ ಶುಭ ಕೋರಿದರು.
ರಾಜ್ಯದಲ್ಲೇ ಪುತ್ತೂರು ಯುವವಾಹಿನಿ ಸಂಘ ಮಾದರಿಯಾಗಿದೆ-ಜಯಶ್ರೀ ಪೆರಿಯಡ್ಕ
ಮುಖ್ಯ ಅತಿಥಿ ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪೆರಿಯಡ್ಕರವರು ಮಾತನಾಡಿ, ನನಗೆ ನೂರು ಜನ ಯುವಕರನ್ನು ಕೊಡಿ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ರವರು ಹೇಳಿದ ಮಾತಿಗೆ ಪೂರಕವಾಗಿ ಇಂದು ಯುವಕರ ಶಕ್ತಿ ಏನಿದೆ ಎಂಬುದನ್ನು ತೋರಿಸಿಕೊಟ್ಟಿರುವ ಪುತ್ತೂರು ಯವವಾಹಿನಿ ಘಟಕ ರಾಜ್ಯ ಮಟ್ಟದಲ್ಲೇ ಮಾದರಿ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದರು.
ಪದಗ್ರಹಣ ಸ್ವೀಕರಿಸಿದ ನೂತನ ಅಧ್ಯಕ್ಷ ಜಯಂತ್ ಪೂಜಾರಿ ಕೆಂಗುಡೇಲುರವರು ಮಾತನಾಡಿ, ತನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿದ ಸಂಸ್ಥೆ ಬಿಲ್ಲವ ಸಂಘ ಹಾಗೂ ಯುವವಾಹಿನಿ ಮತ್ತು ಜಯಂತ್ ನಡುಬೈಲು ಹಾಗೂ ಶಶಿಧರ್ ಕಿನ್ನಿಮಜಲುರವರು. ಅನುಭವದ ಕೊರತೆ ಯಿದೆ ಎಂದು ನನಗೆ ಹುದ್ದೆ ಬೇಡವೆಂದಿದ್ದೆ. ಆದರೆ ಜಯಂತ್ ನಡು ಬೈಲುರವರು ಅವಕಾಶ ಬಂದಾಗ ತೆಗೆದುಕೊಳ್ಳಬೇಕು. ಮುಂದೆ ಅವಕಾಶ ಬೇಕೆಂದಾಗ ಸಿಗೋದಿಲ್ಲ ಎಂದು ಹೇಳಿದ್ದರು. ಎಲ್ಲರ ಸಹಕಾರದಿಂದ ಸಂಘಟನೆಯನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತೇನೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ ವಿಜೇತರಾದ ಮುಕ್ರಂಪಾಡಿ ನಿವಾಸಿ ರಜತ್ ಕುಮಾರ್ ಎನ್.ಎಸ್.ರವರನ್ನು ಅತಿಥಿ ಗಣ್ಯರು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತರ ಪರಿಚಯವನ್ನು ಘಟಕದ ಮಾಜಿ ಅಧ್ಯಕ್ಷ ಜಯಂತ್ ಬಾಯಾರುರವರು ನೀಡಿದರು. ವೇದಿಕೆಯಲ್ಲಿ ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಮಿತ್ ಪರ್ಪುಂಜ ಉಪಸ್ಥಿತರಿದ್ದರು. ಲಹರಿ ಪ್ರಾರ್ಥಿಸಿದರು. ಘಟಕದ ಸಂಚಾಲಕ ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಉದಯ ಕೋಲಾಡಿ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಜಯಂತ್ ಪೂಜಾರಿ ಕೆಂಗುಡೇಲು ವರದಿ ವಾಚಿಸಿದರು. ಕೇಶವ ಪೂಜಾರಿ ಮುರ, ಬಾಲಕೃಷ್ಣ ಪಲ್ಲತ್ತಾರು, ವಿಶಾಲಾಕ್ಷಿ ಬನ್ನೂರು, ವಿಶ್ವಜಿತ್ ಅಮ್ಮುಂಜ, ಅವಿನಾಶ್, ನಾರಾಯಣ ಪೂಜಾರಿ ಕುರಿಕ್ಕಾರರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ದೇವಿಕಾ ಬನ್ನೂರು ಹಾಗೂ ವಿಮಲ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.