ದೇವರು ಕೊಟ್ಟ ಪ್ರತಿಭೆಯನ್ನು ಆಧರಿಸಿ ಬರಮಾಡಿಕೊಳ್ಳದೇ ಅವಕಾಶ ಇಲ್ಲ ಎಂದು ಹಲುಬುವವರೇ ಅಧಿಕವಾಗಿರುವ ಇಂದಿನ ದಿನದಲ್ಲಿ ತನ್ನೊಳಗೆ ದೇವರಿತ್ತ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸೀಮಿತವಾದ ಅವಕಾಶಗಳನ್ನೆ ಬಳಸಿಕೊಂಡು ಬೆಳೆಯುವವರು ತೀರಾ ವಿರಳ ಎನ್ನಬಹುದು.
ಅಂತಹ ಪ್ರತಿಭೆಗಳ ಸಾಲಿನಲ್ಲಿ ಬರುವವರೇ ಕಿರಣ್ ಕುಮಾರ್ ಕೊಕುಡೆ. ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಸಮೀಪದ ಕೊಕುಡೆ ನಿವಾಸಿಯಾಗಿರುವ ಕಿರಣ್‌ಕುಮಾರ್ 21 ರ ಹರೆಯದ ಯುವಕ. ಆದರೆ ಅವರು ಮೆರೆದ ಸಾಧನೆ ಮಾತ್ರ ೫೦ರ ಹಿರಿಯರೂ ನಾಚಬೇಕು ಎನ್ನುವಂತಹ ಸಾಧನೆ. ಸಾಹಿತ್ಯ ರಂಗದಲ್ಲಿ ಉತ್ತಮ ಭವಿಷ್ಯವನ್ನು ಹೊಂದುವ ಎಲ್ಲಾ ಲಕ್ಷಣಗಳಿರುವ ಕಿರಣ್‌ಕುಮಾರ್ ನಾಟಕ ರಚನೆಕಾರರಾಗಿಯೇ ಚಿರಪರಿಚಿತರು. ಈಗಾಗಲೇ ಅವರು ಬರೆದಿರುವ ’ಅಂಚಿನ ಎಂಚಿನ’ ಮತ್ತು ’ದಾದನಾ ಉಪ್ಪೊಡು’ ಎಂಬ ಎರಡು ತುಳು ನಾಟಕಗಳು ಹಲವಾರು ಕಡೆ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದುಕೊಂಡಿವೆ. ಅದೇ ರೀತಿ ’ದಾದಂದೆ ಗೊತ್ತಾಪುಜಿ’ ಮತ್ತು ’ನಂಬುನೆಂಚ’ ಎರಡು ನಾಟಕಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಉತ್ತಮವಾದ ಸಾಮಾಜಿಕ ಸಂದೇಶ ನೀಡುವ ಕಥೆಗಳನ್ನು ನಾಟಕದ ಮೂಲಕ ಹೆಣೆಯುತ್ತಾ ಪರಿವರ್ತನೆಗಾಗಿ ಹಂಬಲಿಸುವ ಇವರ ಗುಣವನ್ನು ಮೆಚ್ಚಲೇ ಬೇಕಾಗಿದೆ. ಇದೇ ಕಾರಣದಿಂದ ಇವರನ್ನು ಹಲವಾರು ಸಂಸ್ಥೆಗಳು ಗೌರವಿಸಿವೆ. ಯುವ ಬರಹಗಾರ ಕಿರಣ್ ಕುಮಾರ್ ಇವರ ಗೆಲ್ಲ್ ಎನ್ನುವ ಕೃತಿ ಹಸ್ತಪ್ರತಿ ರೂಪದಲ್ಲಿದೆ. ಹಲವಾರು ನಾಟಕ, ರೂಪಕಗಳಿಗೆ ಗೀತೆ ರಚನೆಯನ್ನು ಮಾಡಿ ಮಿಂಚಿದ್ದಾರೆ. ವಿವಿಧ ಶಾಲಾ ಕಾಲೇಜುಗಳಿಗೆ ರೂಪಕ, ತುಳು ಜಾನಪದ ರೂಪಕ ರಚಿಸಿ ನಿರ್ದೇಶಿಸಿರುವಲ್ಲಿಯೂ ಇವರ ಪ್ರತಿಭೆ ಅಡಕವಾಗಿದೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಂಡಿದೆ. ಇಂತಹ ಯುವ ಪ್ರತಿಭೆಯನ್ನು ’ಪ್ರಭಾಕರ ನೀರುಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲು ಯುವವಾಹಿನಿ ಸಂತೋಷಪಡುತ್ತಿದೆ.