ಅಡ್ವೆ ಅಗಸ್ಟ್ 29 : ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಪುಟಾಣಿ ಮಕ್ಕಳಿಗಾಗಿ ಆಯೋಜಿಸಿದ್ದ ‘ಮುದ್ದುಕೃಷ್ಣ ಸ್ಪರ್ಧೆ–2026’ ಕಾರ್ಯಕ್ರಮವು ಆಗಸ್ಟ್ 29ರಂದು ಅಡ್ವೆ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದಿಂದ ನಡೆಯಿತು.

ಅಂಗನವಾಡಿ ಕಾರ್ಯಕರ್ತೆಯರಾದ ಲತಾ ಅಶೋಕ್ ಹಾಗೂ ಅಂಬಿಕಾ ಸುರೇಶ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯುವವಾಹಿನಿ (ರಿ.) ಅಡ್ವೆ ಘಟಕದ ಕಾರ್ಯದರ್ಶಿ ಅಕ್ಷಯ ಸುವರ್ಣ, ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಪುಟಾಣಿ ಮಕ್ಕಳಿಗಾಗಿ ವಿವಿಧ ವಿಭಾಗಗಳಲ್ಲಿ ಮುದ್ದುಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಯಿತು. ಮಕ್ಕಳು ಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮಿಂಚಿ, ತಮ್ಮ ಮುಗ್ಧ ಅಭಿನಯ ಹಾಗೂ ಪ್ರತಿಭೆಯ ಮೂಲಕ ನೆರೆದಿದ್ದವರ ಗಮನ ಸೆಳೆದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಬಂಧುಗಳು, ಮಕ್ಕಳ ಪೋಷಕರು ಹಾಗೂ ಉಪಸ್ಥಿತರಿದ್ದವರಿಗೆ ಅಂಗನವಾಡಿ ಕಾರ್ಯಕರ್ತೆ ಲತಾ ಅಶೋಕ್ ಧನ್ಯವಾದ ಸಮರ್ಪಿಸಿದರು. ಬಳಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.


