ಯುವವಾಹಿನಿಯ 29 ನೇ ವಾರ್ಷಿಕ ಸಮಾವೇಶ ದಾಖಲೆಯ ಪುಟ ಸೇರುವ ಮೂಲಕ ಉಡುಪಿ ಯುವವಾಹಿನಿಯ ಶಕ್ತಿ ಅನಾವರಣಗೊಂಡಿದೆ. ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಮೂಲಕ ಉಡುಪಿ ಯುವವಾಹಿನಿ ಪುಣ್ಯದ ಕಾರ್ಯ ಮಾಡುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 23.042017 ನೇ ಆದಿತ್ಯವಾರ ಉಡುಪಿಯ ಜಗನ್ನಾಥ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಉಡುಪಿ ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಬಿಲ್ಲವ ಸಮಾಜ ಬಲಿಷ್ಠವಾಗುತ್ತಿದೆ. ಇದರಲ್ಲಿ ಕಳೆದ 29 ವರ್ಷಗಳ ಯುವವಾಹಿನಿಯ ಶ್ರಮ ಅಡಕವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ನಾರಾಯಣಗುರು ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ಅಭಿಪ್ರಾಯಪಟ್ಟರು.
ಉಡುಪಿ ಯುವವಾಹಿನಿ ಸಲಹೆಗಾರರಾದ ತಾರನಾಥ ಎಚ್. ಬಿ., ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್, ಮಹಿಳಾ ಸಂಚಾಲಕಿ ಸುಜಾತ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿದರು.
ಉಡುಪಿ ಯುವವಾಹಿನಿ ಅಧ್ಯಕ್ಷರಾದ ಗಣೇಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
2017-18 ನೇ ಸಾಲಿನ ಅಧ್ಯಕ್ಷರಾಗಿದ್ದ ರಮೇಶ್ ಕುಮಾರ್, ಕಾರ್ಯದರ್ಶಿಯಾಗಿ ಭಾರತಿ ಬಿ. ಸುವರ್ಣ, ಮಹಿಳಾ ಸಂಚಾಲಕಿಯಾಗಿ ಸುಶ್ಮಿತಾ ಗಿರಿರಾಜ್ ಮತ್ತಿತರರು ಸಂಘಟನೆಯನ್ನು ಸಮರ್ಪಕವಾಗಿ ಮುನ್ನಡೆಸುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಎಲ್ಲರ ನಿರೀಕ್ಷೆಯಂತೆ ಹಾಗೂ ಸರ್ವರ ಸಹಕಾರದಿಂದ ಉಡುಪಿ ಯುವವಾಹಿನಿಯನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ನೂತನ ಅಧ್ಯಕ್ಷ ರಮೇಶ್ ಕುಮಾರ್ ತಿಳಿಸಿದರು.
ಅಮಿತಾಂಜಲಿ ಕಿರಣ್ ಹಾಗೂ ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕೋಟ್ಯಾನ್ ಧನ್ಯವಾದ ನೀಡಿದರು.