ಬೆಳ್ತಂಗಡಿ, ಆಗಸ್ಟ್ 15: ತುಳುನಾಡಿನ ಸಮೃದ್ಧ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಅನನ್ಯ ಆಹಾರ ಪದ್ಧತಿಯನ್ನು ಪರಿಚಯಿಸುವ ‘ಆಟಿದ ನೆಂಪು’ ಕಾರ್ಯಕ್ರಮವು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು. ಘಟಕದ ಅಧ್ಯಕ್ಷೆ ಲೀಲಾವತಿ ಪಣಕಜೆ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಅವರು ಸಾಂಪ್ರದಾಯಿಕ ಲಾಟನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳ ಆಚರಣೆಗಳು, ಸಂಪ್ರದಾಯಗಳು ಹಾಗೂ ಅವುಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಬೆಳ್ತಂಗಡಿಯಲ್ಲಿ ಆಟಿದ ದಿನ ಕಾರ್ಯಕ್ರಮವನ್ನು ಮೊಟ್ಟಮೊದಲು ಆರಂಭಿಸಿದ ಕೀರ್ತಿ ಬಿಲ್ಲವ ಮಹಿಳಾ ವೇದಿಕೆಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಿಲ್ಲವ ವೇದಿಕೆಯ ಅಧ್ಯಕ್ಷ ಹಾಗೂ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್ ಅವರು ಆಟಿ ತಿಂಗಳಲ್ಲಿ ಸೇವಿಸುವ ಸಾಂಪ್ರದಾಯಿಕ ತಿನಿಸುಗಳ ಆರೋಗ್ಯಕರ ಗುಣ, ಅವುಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಹಾಗೂ ತುಳುನಾಡಿನ ಆಚಾರ-ವಿಚಾರಗಳ ಕುರಿತು ಮಾಹಿತಿ ನೀಡಿದರು. ತುಳುನಾಡಿನ ಕೃಷಿ ಪದ್ಧತಿಯ ಬಗ್ಗೆಯೂ ವಿವರಿಸಿದ ಅವರು, ತುಳು ಭಾಷೆಗೆ ವಿಶೇಷ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ಮಾತನಾಡಿ, ಆಟಿ ತಿಂಗಳ ವಿಶೇಷತೆಗಳು ಹಾಗೂ ವಿವಿಧ ಸಮುದಾಯಗಳಲ್ಲಿ ಈ ಮಾಸದ ಆಹಾರ ಪದ್ಧತಿಯ ಆಚರಣೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮುಂಡಾಜೆ ಸಂಚಾಲನ ಸಮಿತಿಯ ಆತಿಥ್ಯದಲ್ಲಿ ಆಗಸ್ಟ್ 30ರಂದು ನಡೆಯಲಿರುವ ‘ಬಿರ್ವೇರೆ ಗೊಬ್ಬು ಕೆಸರುದ ಕಂಡಡ್’ ಕಾರ್ಯಕ್ರಮದ ಕರಪತ್ರವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ಲೀಲಾವತಿ ಪಣಕಜೆ ಅವರು, ಆಟಿದ ನೆಂಪು ಕಾರ್ಯಕ್ರಮವು ಸಮಾಜದ ಬಾಂಧವರನ್ನು ಒಗ್ಗೂಡಿಸುವುದರೊಂದಿಗೆ ಪರಸ್ಪರ ಬಾಂಧವ್ಯ ವೃದ್ಧಿಸಲು ಹಾಗೂ ಯುವ ಪೀಳಿಗೆಗೆ ತುಳು ಭಾಷೆ, ಸಂಪ್ರದಾಯ ಮತ್ತು ಆಚಾರ-ವಿಚಾರಗಳನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದರು.
ಕುಮಾರಿ ಕೃತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಹಿಳಾ ಸಂಚಾಲನ ಸಮಿತಿಯ ಸಂಚಾಲಕಿ ಪ್ರಮೀಳಾ ಮಾಲೂರು ಸ್ವಾಗತಿಸಿದರು. ಸೇವಂತಿ ನಿರಂಜನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಘಟಕದ ಸಂಘಟನಾ ಕಾರ್ಯದರ್ಶಿ ಕೇಶವ ಮುಂಡಾಜೆ ಅವರ ನೇತೃತ್ವದಲ್ಲಿ ನಡೆದ ಆಕರ್ಷಕ ಸ್ಪರ್ಧೆಗಳು ಹಾಗೂ ಪ್ರಚಾರ ನಿರ್ದೇಶಕ ಜಿತೇಶ್ ಬೆಳ್ತಂಗಡಿ ಅವರ ನೇತೃತ್ವದ ನೃತ್ಯ ಪ್ರದರ್ಶನ ಸಭಿಕರ ಗಮನ ಸೆಳೆಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಘಟಕದ ಪದಾಧಿಕಾರಿಗಳು ಆಟಿ ತಿಂಗಳಿನ ಸುಮಾರು 42 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದ್ದು, ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ. ಬಳಂಜ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಕಾನರ್ಪ, ಮಹಿಳಾ ಸಂಚಾಲನ ಸಮಿತಿ ಸಂಚಾಲಕಿ ಪ್ರಮೀಳಾ ಮಾಲೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸುಧಾಮಣಿ ರಮಾನಂದ ಸಾಲಿಯಾನ್ ಹಾಗೂ ಜಿತಿಕ್ಷ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಶಾಂಭವಿ ಮುಂಡೂರು ವಂದಿಸಿದರು.


