ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿ ದೈಹಿಕವಾಗಿ ಬಲಾಡ್ಯರು ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮಾನವ ಧನಾತ್ಮಕ ಮತ್ತು ಋಣಾತ್ಮಕವೂ ಆದ ಚಿಂತನೆ ಮತ್ತು ಗುಣಗಳ ವಿಭಿನ್ನ ರೀತಿಯ ಸಂಕೇತ ತನ್ನಲ್ಲಿರುವ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಗೌರವ ಪಡೆದುಕೊಳ್ಳುತ್ತಾರೆ. ಇಂತಹ ಗುಣವಂತರನ್ನು ಸಮಾಜ ಅರಸಿಕೊಂಡು ಬರುತ್ತದೆ, ಆದ್ದರಿಂದ ಮನಸ್ಸು ಮನಸ್ಸುಗಳ ಮಧ್ಯೆ ಸೇತುವೆ ನಿರ್ಮಾಣದ ಕಾರ್ಯ ನಾವು ಮಾಡಬೇಕಾಗಿದೆ ಎಂದು ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಅಭಿಪ್ರಾಯಪಟ್ಟರು.
ಅವರು 16.04.2017 ರಂದು ಮಂಗಳೂರು ಮಲ್ಲಿಕಟ್ಟೆ ಸುಮಸದನದಲ್ಲಿ ಜರುಗಿದ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ಮಹಿಳಾ ಘಟಕದ ಸಾಲು ಸಾಲು ಸಮಾಜಮುಖಿ ಕಾರ್ಯಕ್ರಮಗಳು ಮಹಿಳೆಯರ ಯಶಸ್ವೀ ಸಂಘಟನೆಗೆ ಸಾಕ್ಷಿಯಾಗಿದೆ ಎಂದು ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾದ್ಯಕ್ಷೆ ಹಾಗೂ ಬಿಜೆಪಿ ದ.ಕ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ನಮಿತಾ ಶ್ಯಾಮ್ ತಿಳಿಸಿದರು.
ಉರ್ವ ಕೆನರಾ ಹೈಯರ್ ಪ್ರೈಮರಿ ಸ್ಕೂಲ್ ಶಿಕ್ಷಕಿ ಶ್ರೀಮತಿ ಧನ್ಯಾ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್ ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಸುಪ್ರೀತಾ ಪೂಜಾರಿ ನೇತೃತ್ವದ ಮಂಗಳೂರು ಮಹಿಳಾ ಯುವವಾಹಿನಿಯ 2017-18 ನೇ ಸಾಲಿನ ಪದಾಧಿಕಾರಿಗಳ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮಂಗಳೂರು ಮಹಿಳಾ ಯುವವಾಹಿನಿ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮಂಗಳೂರು ಮಹಿಳಾ ಯುವವಾಹಿನಿಯ ಸಲಹೆಗಾರರಾದ ಅಶೋಕ್ ಕುಮಾರ್, ಟಿ.ಶಂಕರ ಸುವರ್ಣ ಹಾಗೂ ವಿವಿಧ ಯುವವಾಹಿನಿ ಘಟಕಗಳ ಪದಾದಿಕಾರಿಗಳು ಯಶಸ್ವೀ ಕಾರ್ಯಕ್ರಮ ನೀಡಿದ ವಿದ್ಯಾ ರಾಕೇಶ್ ತಂಡವನ್ನು ಅಭಿನಂದಿಸಿ ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು.
ನಿರ್ಗಮನ ಅಧ್ಯಕ್ಷೆ ವಿದ್ಯಾ ರಾಕೇಶ್ ನೂತನ ಅಧ್ಯಕ್ಷೆ ಸುಪ್ರಿತಾ ಪೂಜಾರಿ ಇವರಿಗೆ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರಿಸಿದರು. ವಿದ್ಯಾ ರಾಕೇಶ್ ಸ್ವಾಗತಿಸಿದರು. ಮಹಿಳಾ ಯುವವಾಹಿನಿಯ ಮಾಜಿ ಅಧ್ಯಕ್ಷೆ ರೋಹಿಣಿ ಪ್ರಾಸ್ತಾವಿಕ ಮಾಡಿದರು, ನೂತನ ಕಾರ್ಯದರ್ಶಿ ಸುನಿತಾ ಧನ್ಯವಾದ ನೀಡಿದರು. ಶುಭಾ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು