ಮೂಡುಬಿದಿರೆ, ಜೂನ್ 23: ಯುವವಾಹಿನಿ (ರಿ.) ಮೂಡುಬಿದರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದರೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ 5 ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿ ಕಾರ್ಯಕ್ರಮವು ಮಂಗಳವಾರ ಮೂಡುಬಿದರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ಉದ್ಘಾಟನೆಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕರಾದ ಶಂಕರ್ ಕೋಟ್ಯಾನ್ ಅವರು ಮಾತನಾಡಿ, “ಹೊಲಿಗೆ ಕಲಿತ ಮಹಿಳೆಯರು ಸೀರೆ ಗೊಂಡೆ ಹಾಕುವಂತಹ ಕೌಶಲ್ಯವನ್ನು ರೂಢಿಸಿಕೊಂಡು ಸ್ವ ಉದ್ಯೋಗ ಕೈಗೊಂಡರೆ, ಅವರು ಆರ್ಥಿಕವಾಗಿ ಇನ್ನಷ್ಟು ಸಬಲರಾಗುವ ಜೊತೆಗೆ ತಮ್ಮ ಕುಟುಂಬದ ಖರ್ಚು-ವೆಚ್ಚಗಳನ್ನು ಸಮರ್ಥವಾಗಿ ನಿಭಾಯಿಸಲು ಸಹಾಯವಾಗುತ್ತದೆ” ಎಂದು ಹೇಳಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಅವರು ತರಬೇತಿಯ ನಿಯಮಾವಳಿಗಳ ಬಗ್ಗೆ ವಿವರಿಸಿ, ಕೌಶಲ್ಯ ತರಬೇತಿಗಳು ಮಹಿಳೆಯರಿಗೆ ಸ್ವ ಉದ್ಯೋಗದತ್ತ ಹೆಜ್ಜೆಯಿಡಲು ಶಕ್ತಿ ನೀಡುತ್ತವೆ. ಮಹಿಳೆಯರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ಅವರು ತರಬೇತಿಯಲ್ಲಿ ಭಾಗವಹಿಸಿರುವ ಮಹಿಳೆಯರಿಗೆ ಶುಭ ಹಾರೈಸಿದರು.ವೇದಿಕೆಯಲ್ಲಿ ಯುವವಾಹಿನಿ (ರಿ.) ಮೂಡುಬಿದರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮೀ, ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್, ಅಮೂಲ್ಯ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ಲತೇಶ್ ಬಿ. ಉಪಸ್ಥಿತರಿದ್ದರು. ವೀಚೀಸ್ ಕೌಶಲ್ಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಜೆನಿಫರ್ ಕಾರ್ಯಕ್ರಮ ನಿರೂಪಿಸಿದರು. ಸುಮಲತಾ ಸ್ವಾಗತಿಸಿ, ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಧನ್ಯವಾದ ಸಲ್ಲಿಸಿದರು. ಮೂಡುಬಿದರೆ ವ್ಯಾಪ್ತಿಯ 35 ಮಹಿಳೆಯರು ಈ 5 ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.


