ಮೂಡುಬಿದಿರೆ : “ಯಶಸ್ಸು ಎಂಬುದು ಒಂದು ದಿನದಲ್ಲಿ ಸಿಗುವುದಿಲ್ಲ. ಶ್ರಮ, ಶಿಸ್ತು ಹಾಗೂ ನಿರಂತರ ಪ್ರಯತ್ನಗಳ ಮೂಲಕ ಮಾತ್ರ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಬಹುದು” ಎಂದು ಡಾ. ಎಂ. ಮೋಹನ್ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆ ಅವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ದ್ವಿತೀಯ ಮಾರ್ಗದರ್ಶನ ಶಿಬಿರವು ಮೇ 4ರಂದು ಆಳ್ವಾಸ್ ಕಚೇರಿಯಲ್ಲಿ ನಡೆಯಿತು.
ಶಿಬಿರದಲ್ಲಿ ಎಸ್.ಎಸ್.ಎಲ್.ಸಿ ವಿಭಾಗದ 10 ಮಂದಿ ಹಾಗೂ ಪಿಯುಸಿ ವಿಭಾಗದ 4 ಮಂದಿ ಸೇರಿದಂತೆ ಒಟ್ಟು 14 ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಮೋಹನ್ ಆಳ್ವ ಅವರು ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಆಯ್ಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಸಮಯದ ಸಮರ್ಪಕ ನಿರ್ವಹಣೆ, ಗುರಿ ಸ್ಥಾಪನೆ ಹಾಗೂ ಆತ್ಮವಿಶ್ವಾಸ ವೃದ್ಧಿ ಕುರಿತಂತೆ ಪರಿಣಾಮಕಾರಿ ಮಾರ್ಗದರ್ಶನ ನೀಡಿದರು.
“ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶೇಷ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ನಿರಂತರ ಅಭ್ಯಾಸದ ಮೂಲಕ ಬೆಳೆಸಿದರೆ ಜೀವನದಲ್ಲಿ ದೊಡ್ಡ ಸಾಧನೆ ಸಾಧ್ಯ” ಎಂದು ಅವರು ಹೇಳಿದರು. ಜೊತೆಗೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ವ್ಯಕ್ತಿತ್ವ ವಿಕಾಸ, ಸಂವಹನ ಕೌಶಲ್ಯ ಹಾಗೂ ಜೀವನ ಮೌಲ್ಯಗಳ ಅರಿವು ಕೂಡ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಲಭ್ಯವಿರುವ ಆಧುನಿಕ ಶಿಕ್ಷಣ ಸೌಲಭ್ಯಗಳು, ವಸತಿ ವ್ಯವಸ್ಥೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸಹಾಯಧನ ಸೌಲಭ್ಯಗಳೂ ಲಭ್ಯವಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ನೇರವಾಗಿ ಕೇಳಿ ಸ್ಪಷ್ಟನೆ ಪಡೆದರು. ಡಾ. ಮೋಹನ್ ಆಳ್ವ ಅವರ ಪ್ರೇರಣಾದಾಯಕ ಮಾತುಗಳಿಂದ ಪ್ರಭಾವಿತರಾದ ವಿದ್ಯಾರ್ಥಿಗಳು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಆಸಕ್ತಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರೂ ಭಾಗವಹಿಸಿ ಮಕ್ಕಳ ಭವಿಷ್ಯದ ಕುರಿತಂತೆ ತಜ್ಞರಿಂದ ಮಾರ್ಗದರ್ಶನ ಪಡೆದರು. ಈ ಸಂದರ್ಭದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ., ಅಶೋಕ್ ಕೇಮಾರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


