ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ ಅಧ್ಯಕ್ಷರಾದ ನಿತಿನ್ ಕರ್ಕೇರ ಇವರ ನೇತೃತ್ವದಲ್ಲಿ , ಕೇಂದ್ರ ಸಮಿತಿಯ ಮಾಜಿ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರು ಹಾಗೂ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಮೋಹನ್ ಮಾಡೂರ್ ಇವರ ಮಾರ್ಗದರ್ಶನದಡಿಯಲ್ಲಿ ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕಿ ಅಶ್ವಿತಾ ಹರೀಶ್ ಕುಂಪಲ ಅವರ ಸಂಘಟನೆಯೊಂದಿಗೆ ಒಟ್ಟು 54 ಯಾತ್ರಾರ್ಥಿಗಳ ತಂಡ ದಿನಾಂಕ 30.04.2026ನೇ ಗುರುವಾರ ಸಂಜೆ 5.20ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಶಿವಗಿರಿ ಕ್ಷೇತ್ರಕ್ಕೆ ಪ್ರಯಾಣ ಆರಂಭಿಸಿತು.

ದಿನಾಂಕ 01.05.2026 ಶುಕ್ರವಾರ
ಬೆಳಿಗ್ಗೆ ನಿತ್ಯ ಕರ್ಮಾದಿಗಳನ್ನು ಪೂರೈಸಿ ಶಿವಗಿರಿ ಮಠದಲ್ಲಿ ಗುರು ಪೂಜೆ ಸಲ್ಲಿಸಿ, ಗುರುಗಳು ಮತ್ತು ಶಾರದಾ ಮಾತೆಯ ಅನುಗ್ರಹ ಪಡೆದ ನಂತರ ಬೆಳಗ್ಗಿನ ಉಪಹಾರ ಸೇವಿಸಿದೆವು. ಅಲ್ಲಿಂದ ಗುರುಗಳ ಜನ್ಮಸ್ಥಳ ಚೆoಬಳತಿಗೆ ಹೊರಟು ಮಧ್ಯಾಹ್ನ ಕುನ್ನುಪಾರಂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಾಪೂಜೆಯಲ್ಲಿ ಪಾಲ್ಗೊಂಡು ನಂತರ ಮಠದಲ್ಲಿ ಅನ್ನ ಪ್ರಸಾದ ಸ್ವೀಕರಿಸಿದೆವು.
ಸಂಜೆ ಕನ್ಯಾಕುಮಾರಿ ತಲುಪಿ ಬೋಟಿಂಗ್ ಮೂಲಕ ವಿವೇಕಾನಂದ ರಾಕ್ ವೀಕ್ಷಣೆ ಮಾಡಿ ಅಲ್ಲಿನ ಕಡಲ ಆರ್ಭಟ, ತಂಗಾಳಿಯ ಸವಿಯೊಂದಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದೆವು. ನಂತರ ಕನ್ಯಾಕುಮಾರಿ ದೇವಿ ಹಾಗೂ ದೇವಿಯ ಮೂಗುತಿ ದರ್ಶನದ ಭಾಗ್ಯ ಪಡೆದು, ರಾತ್ರಿ 8. 30 ಕ್ಕೆ ಮರುತ್ವಮಲೆ ಆಶ್ರಮದಲ್ಲಿ ಭೋಜನವನ್ನು ಸ್ವೀಕರಿಸಿ, ವಿಶ್ರಾಂತಿ ಪಡೆದೆವು.
ದಿನಾಂಕ 02-05-2026 ಶನಿವಾರ ಬೆಳಿಗ್ಗೆ 5.30ಕ್ಕೆ ಮಠದಲ್ಲಿ ನಡೆಯುವ ಸತ್ಸಂಗದಲ್ಲಿ ಭಾಗವಹಿಸಿ, ಗುರು ಪೂಜೆ ಸಲ್ಲಿಸಿ ಅಲ್ಲಿಂದ 6.00 ಗಂಟೆಗೆ ಸರಿಯಾಗಿ ಗುರುಗಳು ತಪಸ್ಸು ಮಾಡಿದ ಮರುತ್ವಮಲೆ ಬೆಟ್ಟಕ್ಕೆ ನಮ್ಮೆಲ್ಲ ಯಾತ್ರಾರ್ಥಿಗಳು ಬಹಳ ಉತ್ಸಾಹದಿಂದ ಬೆಟ್ಟವನ್ನು ಹತ್ತಿ ಗುರುಗಳು ತಪಸ್ಸು ಮಾಡಿದ ಗುಹೆಯ ದರ್ಶನ ಪಡೆದು ಪುನೀತರಾದೆವು.
ಬೆಟ್ಟದಿಂದ ಇಳಿದು, ಬೆಳಗಿನ ಉಪಹಾರದ ನಂತರ ಗುರುಗಳು ಸ್ಥಾಪಿಸಿದ ಪ್ರಪ್ರಥಮ ದೇವಸ್ಥಾನ ಅರವಿಪುರದ ಶಿವನ ದರ್ಶನ, ನೆಯ್ಯಾರು ನದಿ ವೀಕ್ಷಣೆ, ಮತ್ತು ಗುರು ಪೂಜೆ ಸಲ್ಲಿಸಿ, ಅನ್ನಪ್ರಸಾದ ಸೇವನೆ ನಂತರ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಅಲ್ಲಿ ಅನಂತ ಪದ್ಮನಾಭ ದೇವರನ್ನು ದರ್ಶನ ಮಾಡಿ ಸಂಜೆ 6.30 ಕ್ಕೆ ತಿರುವನಂತಪುರಂ ರೈಲ್ವೆ ನಿಲ್ದಾಣದಿಂದ ಮಂಗಳೂರಿಗೆ ಪ್ರಯಾಣಿಸಿ ದಿನಾಂಕ 03-05-2026 ಆದಿತ್ಯವಾರ ಬೆಳಿಗ್ಗೆ 8.00 ಗಂಟೆಗೆ ಸರಿಯಾಗಿ ಮಂಗಳೂರು ತಲುಪಿದಾಗ ಎಲ್ಲ ಯಾತ್ರಾರ್ಥಿಗಳ ಮುಖದಲ್ಲಿ ಈ ಜಗತ್ತು ಕಂಡಿರುವ ಓರ್ವ ಶ್ರೇಷ್ಠ ದಾರ್ಶನಿಕನ ಜನ್ಮಸ್ಥಳವನ್ನು ಕಣ್ಣಾರೆ ಕಂಡು ಪುಳಕಿತರಾದ ಧನ್ಯತಾ ಭಾವ ಮೂಡಿತ್ತು.


