ಆಟಿ ತಿಂಗಳ ಆಚರಣೆಯು ಪರಿಪೂರ್ಣವಾದ ವೈಜ್ಞಾನಿಕ ವಿಷಯಗಳಿಂದ ಕೂಡಿದ್ದು, ಇದರ ಬಗ್ಗೆ ಜನರಲ್ಲಿರುವ ಮೌಢ್ಯವನ್ನು ಸೂಕ್ತ ತಿಳಿವಳಿಕೆ ನೀಡುವ ಮೂಲಕ ನಿವಾರಿಸ ಬೇಕು. ಅದರಲ್ಲಿರುವ ಉತ್ತಮ ಅಂಶಗಳನ್ನು ಬೆಳೆಸಿಕೊಂಡು ಬರುವುದು ಒಳಿತು ಎಂದು ಹಿರಿಯ ಶಿಕ್ಷಕ ಹಾಗೂ ಪತ್ರಕರ್ತ ವಾಮನ ಇಡ್ಯಾ ಹೇಳಿದರು.
ಅವರು ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಜರಗಿದ 14 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಆಚರಣೆಯಲ್ಲಿ ಅಡಗಿರುವ ಮೌಢ್ಯಗಳ ಅಂಶಗಳನ್ನು ಸರಿಪಡಿಸಿಕೊಂಡು ಮುಖ್ಯವಾಗಿ ಯುವಜನರಲ್ಲಿ ತಿಳುವಳಿಕೆಯನ್ನು ಮೂಡಿಸಿ ತುಳು ಭಾಷೆಯೊಂದಿಗೆ ತುಳು ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮತ್ತಷ್ಟು ಆಗಬೇಕಾಗಿದೆ ಎಂದು ಅವರು ಹೇಳಿದರು.
ಆಟಿ ತಿಂಗಳಲ್ಲಿ ತುಳುನಾಡಿನ ಪುರಾತನ ಸಂಸ್ಕಾರಗಳಲ್ಲಿ ಒಂದಾದ (ಮಾರಿ ಓಡಿಸುವ) ಕಾರ್ಯಕ್ರಮದ ವಿಧಿವಿಧಾನಗಳ ಮೂಲಕ ಈ ಬಾರಿಯ ’ಆಟಿಡೊಂಜಿ ದಿನ’ವನ್ನು ವಿಶಿಷ್ಟ ರೀತಿಯಲ್ಲಿ ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಚೇರ್‌ಮ್ಯಾನ್ ಜಯ ಸಿ. ಸುವರ್ಣ ಉದ್ಘಾಟಿಸಿದರು.
ತುಳುನಾಡಿನ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ಮೂಲ್ಕಿ ಯುವವಾಹಿನಿ ನಡೆಸುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಇತರ ಸಂಸ್ಥೆಗಳಿಗೆ ಆದರ್ಶವೆಂಬಂತೆ ನಡೆಸುತ್ತಿದೆ. ಇದು ಮುಂಬಯಿಯ ತುಳು ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ಜಯ ಸಿ. ಸುವರ್ಣ ಹೇಳಿದರು.
ಘಟಕದ ಅಧ್ಯಕ್ಷ ಚೇತನ್ ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ. ಸಾಲ್ಯಾನ್, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮತ್ತು ಮುಂಬಯಿ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅತಿಥಿಗಳಾಗಿದ್ದರು.
ಮುಂಬಯಿ, ಗುಜರಾತ್ ಮತ್ತು ಕತಾರ್ ಮುಂತಾದೆಡೆಗಳಿಂದ ಬಂದ ಅತಿಥಿಗಳನ್ನು ಗೌರವಿಸಲಾಯಿತು.
ಕಲಾವಿದರ ಹಾಗೂ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರಿಗೆ ’ಆಟಿದ ತಮ್ಮನ’ ಗೌರವ ನೀಡಿ ಸಮ್ಮಾನಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ದೀಕ್ಷಾ ಸುವರ್ಣ ಮತ್ತು ದಿವಾಕರ್ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು. ಉದಯ ಅಮೀನ್ ಮಟ್ಟು ಮತ್ತು ವಿಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರ್ವಹಿಸಿದರು.
ಡೋಲು ತಂಡದ ದುನಿಪು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ತಿಂಗಳ ವಿವಿಧ ಖಾದ್ಯಗಳು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.
Samsukrthiya kanaja yuvavahiniya karyakrama