ಹದಿನೆಂಟು, ಹತ್ತೊಂಭತ್ತನೇ ಶತಮಾನಗಳಲ್ಲಿ ಕೇರಳದ ಸಮಾಜ ಅಜ್ಞಾನ, ಅಂಧಶ್ರದ್ಧೆಗಳ ಅಂಧಕಾರದಲ್ಲಿ ಮುಳುಗಿತ್ತು. ಕೆಳವರ್ಗದವರಿಗೆ ಮೇಲ್ವರ್ಗದವರ ಹಿಂಸೆ, ಕಿರುಕುಳಗಳಿಂದಾಗಿ ಬದುಕುವುದೇ ಕಷ್ಟವಾಗಿತ್ತು. ಆ ಕಾಲದ ಜಾತಿ ವ್ಯವಸ್ಥೆಯ ಕ್ರೂರತೆಯಿಂದ ಪಾರಾಗಲು ದಲಿತರು ಮತಾಂತರಕ್ಕೆ ಮುಂದಾಗುತ್ತಿದ್ದರು. ಅಂತಹ ವಿಲಕ್ಷಣ ಕಾಲಘಟ್ಟದಲ್ಲಿ ಜನ್ಮತಾಳಿದ ನಾರಾಯಣ ಗುರು ಎಳವೆಯಲ್ಲೇ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ಕಂಡು ಮರುಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ದೀನದಲಿತರ ಸೇವೆ, ಶುಶ್ರೂಷೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ ತಾಯಿ-ತಂದೆ ನಿಧನರಾದ ಮೇಲೆ ಹುಟ್ಟಿದೂರಿಗೆ ವಿದಾಯ ಹೇಳಿ ಪರಿವ್ರಾಜಕರಾಗಿ ಸಂಚಾರಕ್ಕೆ ತೊಡಗುವ ಗುರು, ಸಮಾಜದ ದೀನ ದಲಿತರ ಕಷ್ಟ ಕಾರ್ಪಣ್ಯಗಳನ್ನು, ಅವರ ಜತೆಗಿದ್ದು ಹತ್ತಿರದಿಂದ ಕಾಣುತ್ತಾರೆ. ಅವರ ದುಃಖ-ದುಮ್ಮಾನಗಳನ್ನು ದೂರ ಮಾಡುವ ಹಂಬಲದಿಂದ ಚಿಂತನೆಗೆ ತೊಡಗುತ್ತಾರೆ. ಆಗಿನ ಅವರ ಆಧ್ಯಾತ್ಮದ ಒಲವು, ಧ್ಯಾನ, ಯೋಗ, ತಪಸ್ಸು ಎಲ್ಲ ಈ ಚಿಂತನೆಯ ಪರಿಣಾಮ. ಮುಂದೆ ಮರುತ್ವಮಲೆಯಲ್ಲಿ ತಪಸ್ಸಿದ್ಧಿಯಾದೊಡನೆ, ಸಮಾಜ ಸುಧಾರಣಾ ಯೋಜನೆಯ ರೂಪುರೇಷೆಗಳನ್ನು ಕಲ್ಪಿಸುತ್ತ ಮತ್ತೆ ಸಂಚಾರಕ್ಕೆ ತೊಡಗುತ್ತಾರೆ. ಕಾಲ್ನಡಿಗೆಯಲ್ಲೇ ದೀರ್ಘ ಪ್ರಯಾಣ ಮಾಡಿ, ಪ್ರಕೃತಿ ಮನೋಹರ ತಾಣವಾದ ನೈಯಾರ್ ನದೀ ತೀರದ ಅರವೀಪುರವನ್ನು ತಲುಪುತ್ತಾರೆ. ಅಲ್ಲಿ ಸ್ವತಃ ಸ್ಥಾಪಿಸಿದ ಮೊದಲ ಈಳವ ದೇವಸ್ಥಾನದಿಂದ ಆರಂಭವಾಗುತ್ತದೆ, ನಾರಾಯಣ ಗುರುಗಳ ಸಮಾಜ ಸುಧಾರಣೆಯ ಚಳವಳಿ. ದಲಿತ ವರ್ಗವನ್ನು ವ್ಯವಸ್ಥಿತವಾಗಿ ಸಂಘಟಿಸಿ ಸದೃಢರನ್ನಾಗಿಸುವ ಉಪಾಯವನ್ನು ಗುರು ಅಲ್ಲಿ ಕಂಡುಕೊಳ್ಳುತ್ತಾರೆ. ದೇವರ ಆರಾಧನಾ ಸ್ಥಳಗಳಲ್ಲಿ ಜನರನ್ನು ಸಂಘಟಿಸುವುದು ಅವರಿಗೆ ಸುಲಭವೆನ್ನಿಸುತ್ತದೆ.
ಆ ಕಾಲದಲ್ಲಿ ಕೇರಳದ ದಲಿತರಿಗೆ ದೇವಸ್ಥಾನ ಪ್ರವೇಶವಿರಲಿಲ್ಲ. ಮಾತ್ರವಲ್ಲ ದೇವಸ್ಥಾನದ ಎದುರಿನ ರಸ್ತೆಯಲ್ಲೂ ಅವರು ನಡೆದಾಡುವಂತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ‘ದೇವಸ್ಥಾನಕ್ಕೆ ಪ್ರವೇಶವಿಲ್ಲವೆಂದು ಚಿಂತಿಸದಿರಿ. ನಿಮಗಾಗಿಯೇ ಒಂದು ದೇವಸ್ಥಾನ ನಿರ್ಮಿಸೋಣ. ಅಲ್ಲಿ ಭಕ್ತರು, ಪೂಜಾರಿಗಳು ಎಲ್ಲ ನೀವೇ’ ಎಂದು ಗುರು ನುಡಿದಾಗ ಸಹಸ್ರಾರು ವರ್ಷಗಳಿಂದ ದೇವಸ್ಥಾನದ ಗೋಪುರಗಳನ್ನಷ್ಟೇ ದೂರದಿಂದ ನೋಡುತ್ತಿದ್ದ ದಲಿತ ಜನರಿಗೆ ಹೇಗಾಗಬೇಕು! ಅವರಲ್ಲಿ ವಿದ್ಯುತ್ ಸಂಚಾರವಾದಂತಾಯಿತು.
1888 ರಲ್ಲಿ ಅರವೀಪುರದಲ್ಲಿ ಶಿವರಾತ್ರಿಯಂದು ಗುರು ನೆರವೇರಿಸಿದ ಈಳವ ಶಿವ ಪ್ರತಿಷ್ಠೆ ಒಂದು ಕ್ರಾಂತಿಕಾರಕ ಪರಿವರ್ತನೆ. ಸಾವಿರಾರು ವರ್ಷಗಳಿಂದ ಪರಂಪರಾಗತವಾಗಿ ಬೆಳೆದು ಬಂದಿದ್ದ ಜಾತೀಯತೆಯೆಂಬ ವೃಕ್ಷವೇ ಅಲುಗಾಡುತ್ತದೆ. ಈ ಐತಿಹಾಸಿಕ ಘಟನೆಯಿಂದ ನಾರಾಯಣ ಗುರುಗಳು ದೇಶದ ಸಮಸ್ತ ದಲಿತ ವರ್ಗದ ಗಮನ ಸೆಳೆಯುತ್ತಾರೆ; ಅವರ ಮನ ಗೆಲ್ಲುತ್ತಾರೆ. ನಂತರ, ರಾಜ್ಯದ ವಿವಿಧೆಡೆ ಜನರ ಅಪೇಕ್ಷೆಯ ಮೇರೆಗೆ ಅವರು ಸ್ಥಾಪಿಸಿದ ದೇವಸ್ಥಾನಗಳು ಅವರ್ಣೀಯರ ಸಂಘಟನೆಗೆ ನೆರವಾದವು. ಯಾವುದೇ ಕ್ರಾಂತಿಕಾರಿ ಯೋಜನೆಯ ಅನುಷ್ಠಾನಕ್ಕೆ ಸಂಘಟನೆ ಮುಖ್ಯವಾಗುತ್ತದೆ. ಗುರು ಅದನ್ನು ಯಶಸ್ವಿಯಾಗಿ ಸಾಧಿಸಿದರು. ಮುಂದೆ ಅದನ್ನೇ ಅವರು ಸಂದೇಶ ರೂಪದಲ್ಲಿ ಹೇಳಿದ್ದಾರೆ. ‘ಸಂಘಟನೆಯಿಂದ ಬಲಯುತರಾಗಿರಿ.’ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ನೆಲೆಯಲ್ಲಿ ಸಮಸ್ತ ಅವರ್ಣೀಯರನ್ನು ಸಂಘಟಿಸಿದ್ದು ಅವರ ಸಮಾಜ ಸುಧಾರಣೆಯ ಕಾರ್ಯತಂತ್ರದ ಮೊದಲ ಹಂತ. ಅದರ ನಂತರದ ಮಹತ್ಕಾರ್ಯವೇನೆಂದರೆ ಭೂತ-ಪ್ರೇತಗಳ ಆರಾಧನೆಯಲ್ಲಿ ತೊಡಗಿ, ತಾಮಸ ಪದ್ಧತಿಯಲ್ಲಿ ಕುರಿ ಕೋಳಿ ಬಲಿಕೊಡುತ್ತಿದ್ದ ಕೆಳವರ್ಗದ ಜನರನ್ನು ಅದರಿಂದ ಮುಕ್ತರನ್ನಾಗಿಸಿದ್ದು, ಸಾತ್ವಿಕ ಪೂಜೆಗೆ ಪರಿವರ್ತಿಸಿದ್ದು. ಇದರಿಂದಾಗಿ ಪ್ರಾಣಿ ಬಲಿ ನಿಂತಿತಲ್ಲದೆ, ಮದ್ಯಪಾನಿಗಳಿಗೆ ಅದನ್ನು ವರ್ಜಿಸುವುದೂ ಅನಿವಾರ್‍ಯವಾಯಿತು.
‘ಹೆಂಡ ಉತ್ಪಾದಿಸಬೇಡಿ, ಮಾರಬೇಡಿ, ಕುಡಿಯಬೇಡಿ’ ಇದು ಗುರು ನೀಡಿದ ಸಂದೇಶ. ಆದರೆ ಅದನ್ನೇ ವೃತ್ತಿಯನ್ನಾಗಿ ಮಾಡಿ ಜೀವನ ಸಾಗಿಸುವವರು ಹೇಗೆ ಬದುಕುವುದು ಎಂಬ ಪ್ರಶ್ನೆ ಎದುರಾದಾಗ ಮನೆಗಳಲ್ಲೇ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವುದಲ್ಲವೇ ಎಂದು ಸಲಹೆ ನೀಡುತ್ತಾರೆ ಗುರು. ಮುಖ್ಯವಾಗಿ ತೆಂಗಿನ ನಾರಿನಿಂದ ಹಗ್ಗ ತಯಾರಿಸುವ ಕೈಗಾರಿಕೆ. ಗುರು ಸಲಹೆಯಂತೆ ಆರಂಭವಾದ ಈ ಕೈಗಾರಿಕೆ ಇಂದು ಕೇರಳದ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ!
ದೇವಸ್ಥಾನಗಳನ್ನು ಸ್ಥಾಪಿಸಿ ದಲಿತ ಸಂಘಟನೆಯನ್ನು ಬಲಪಡಿಸಿದ ಗುರು ದಲಿತರಿಗೆ ಶಿಕ್ಷಣದ ಮಹತ್ತ್ವನ್ನು ಬೋಧಿಸುತ್ತಾರೆ. ‘ದೇವಸ್ಥಾನಗಳು ಆರಾಧನಾ ಸ್ಥಳಗಳಿದ್ದಂತೆ ಅಧ್ಯಯನ ಕೇಂದ್ರಗಳೂ ಆಗಬೇಕು. ದೇವಸ್ಥಾನದ ಆವರಣದಲ್ಲಿ ಉದ್ಯಾನವನ, ವಾಚನಾಲಯಗಳೂ ಇರಬೇಕು. ಅದು ಜ್ಞಾನ ಕೇಂದ್ರವೂ ಆಗಬೇಕು. ಅಲ್ಲಿನ ಪರಿಸರವನ್ನು ಸ್ವಚ್ಛವಾಗಿರಿಸಬೇಕು. ಶುದ್ಧ ಗಾಳಿ, ಸ್ವಚ್ಛ ಪರಿಸರ ಅಧ್ಯಯನಕ್ಕೆ, ಜ್ಞಾನಾರ್ಜನೆಗೆ ಅನುಕೂಲ. ಶುಚಿತ್ವವನ್ನು ಸರಿಯಾಗಿ ಪಾಲಿಸಿದರೆ ಅಸ್ಪೃಶ್ಯತೆ ತಾನಾಗಿಯೇ ತೊಲಗುತ್ತದೆ. ಮನೆ, ಮನಸ್ಸು ಎರಡೂ ಶುಚಿಯಾಗಿರಬೇಕು. ವಿದ್ಯೆಯಿಂದ ಸ್ವಾಭಿಮಾನ, ಆರ್ಥಿಕ ಧೈರ್ಯ ಅಧಿಕವಾಗುತ್ತದೆ. ಉದ್ಯೋಗಿಯಾಗಿ ಸ್ವತಂತ್ರ ಜೀವನ ನಡೆಸಬಹುದು. ಜೀತದಾಳುಗಳಾಗಿ ಸವರ್ಣೀಯರಿಂದ ಶೋಷಣೆಗೆ ಒಳಗಾಗಬೇಕಾಗಿಲ್ಲ ಎಂದು ಬೋಧಿಸಿದ ಗುರುಗಳು ‘ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂದು ಸಾರುತ್ತ ಸಮಾಜ ಸುಧಾರಣಾ ಯೋಜನೆಯ ಎರಡನೇ ಹಂತದಲ್ಲಿ ಶಿಕ್ಷಣ ಪ್ರಸಾರಕ್ಕೆ ಆದ್ಯತೆ ನೀಡುತ್ತಾರೆ.
ಆ ಕಾಲದಲ್ಲಿ ಗುರುಗಳ ಸಮಾಜ ಹಿತ ಕಾರ್‍ಯಗಳಿಗೆ, ಶಿಕ್ಷಣ ಪ್ರಸಾರಕ್ಕೆ ನೆರವು ನೀಡುತ್ತಿದ್ದ ಈಳವ ಜನಾಂಗದ ಮುಂದಾಳು ಡಾ. ಪಲ್ಪು ಅವುಗಳ ಸೂಕ್ತ ಅನುಷ್ಠಾನಕ್ಕೆ ಒಂದು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಸಲಹೆ ನೀಡುತ್ತಾರೆ. ಗುರುಗಳ ಸಮ್ಮತಿ ಪಡೆದು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ(ಎಸ್‌ಎನ್‌ಡಿಪಿ) ಎಂಬ ಸಂಸ್ಥೆಯನ್ನು 1903 ರಲ್ಲಿ ಹುಟ್ಟು ಹಾಕಲಾಗುತ್ತದೆ. ಈಳವ ಸಮಾಜದ ಪ್ರಗತಿಗೆ ಸಂಬಂಧಿಸಿ ಶಿಕ್ಷಣ, ಕೃಷಿ, ಗುಡಿ ಕೈಗಾರಿಕೆಗಳ ಅಭಿವೃದ್ಧಿ ಮತ್ತು ದಲಿತರಿಗೆ ಅಧ್ಯಾತ್ಮ ಶಿಕ್ಷಣವನ್ನು ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶಗಳು. ಇದರ ಮೂಲಕ ಗುರುಗಳ ಸಮಾಜ ಸುಧಾರಣೆಯ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಡಾ. ಪಲ್ಪು ಮತ್ತು ಗುರುಗಳ ಆಪ್ತ ಶಿಷ್ಯ ಮಲಯಾಳಂ ಮಹಾಕವಿ ಕುಮಾರನ್ ಆಶಾನ್ ಶ್ರಮಿಸುತ್ತಾರೆ. ಈ ಸಂಸ್ಥೆಯ ವತಿಯಿಂದ ಅವರ ಅನುಯಾಯಿಗಳು ಕೇರಳದ ಬೇರೆ ಬೇರೆ ಊರುಗಳಿಗೆ ಸಂಚರಿಸಿ ಗುರು ಸಂದೇಶಗಳನ್ನು ಪ್ರಚಾರ ಮಾಡುತ್ತಾರೆ. ಇಂದಿನಂತೆ ಸಮೂಹ ಮಾಧ್ಯಮಗಳು, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಆ ದಿನಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ ಪ್ರಚಾರ ಕಾರ್ಯ ನಡೆಸಬೇಕಿತ್ತು. ಗುರುಗಳಂತೂ ಚಿಕ್ಕಂದಿನಿಂದಲೂ ಕೇರಳದ ಉದ್ದಗಲವನ್ನು ಕಾಲ್ನಡಿಗೆಯಿಂದಲೇ ನೋಡುತ್ತ ಬಂದವರಾಗಿದ್ದಾರೆ.
ಸಮಾಜದಲ್ಲಿ ಆಗ ಪ್ರಚಲಿತವಿದ್ದ ಕೆಲವು ದುಷ್ಟ ಪದ್ಧತಿಗಳ ನಿರ್ಮೂಲನೆ ಗುರುವಿಗೆ ಅನಿವಾರ್ಯವೆನಿಸುತ್ತದೆ. 1904ರಲ್ಲಿ ಪರವೂರ್ ಎಂಬಲ್ಲಿ ಗುರುಗಳ ಅಧ್ಯಕ್ಷತೆಯಲ್ಲಿ ಈಳವರ ದೊಡ್ಡದೊಂದು ಸಭೆ ಜರುಗುತ್ತದೆ. ಈ ಸಭೆಯಲ್ಲಿ ಸಮಾಜದ ಕ್ರೂರ ಪದ್ಧತಿಗಳಾದ ತಾಳಿಕೆಟ್ಟು, ತಿರಂಡುಕುಳಿ, ಪುಲಿಕುಡಿ ಮುಂತಾದವುಗಳನ್ನು ನಿಲ್ಲಿಸಬೇಕೆಂದೂ ಸಮಾಜದಲ್ಲಿ ನಡೆಯುವ ಮದುವೆ ಸಮಾರಂಭಗಳು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜರುಗುವಂತಾಗಬೇಕು ಎಂದೂ ಗುರು ಕರೆ ನೀಡುತ್ತಾರೆ.
ಅಂದಿನ ಕೆಲವು ಆಚರಣೆಗಳು ಅನಾವಶ್ಯಕ ಮತ್ತು ಅರ್ಥಹೀನವಾಗಿದ್ದವು. ಅದರ ನಿರ್ವಹಣೆಗೆ ತುಂಬ ಹಣ ಖರ್ಚು ಮಾಡುತ್ತಿದ್ದರು. ಅದೊಂದು ಪ್ರತಿಷ್ಠೆಯ ಸಮಾರಂಭವೆನಿಸುತ್ತಿತ್ತು. ಅದರಿಂದಾಗಿ ಬಡವರು ಸಾಲದ ಹೊರೆ ಹೊತ್ತು ಜೀವನವಿಡೀ ಕೊರಗಬೇಕಾಗುತ್ತಿತ್ತು. ಈ ಅನಿಷ್ಠ ಪದ್ಧತಿಯನ್ನು ವಿರೋಧಿಸುವವರೂ ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ. ಆದರೆ ಗುರು ಧೈರ್ಯದಿಂದ ಆ ಪ್ರಯತ್ನಕ್ಕೆ ತೊಡಗುತ್ತಾರೆ. ಅದರಲ್ಲಿ ಯಶಸ್ಸನ್ನೂ ಪಡೆಯುತ್ತಾರೆ.
ಈಳವ ಸಮಾಜದಲ್ಲಿ ಅಂದು ಪ್ರಚಲಿತವಿದ್ದ ಮದುವೆಯ ವಿಧಿ ವಿಧಾನಗಳಲ್ಲೂ ಗುರು ಪರಿವರ್ತನೆಗಳನ್ನು ಬಯಸುತ್ತಾರೆ. ಹೆಚ್ಚು ಖರ್ಚಿಲ್ಲದೆ ಸರಳವಾಗಿ ಮದುವೆ ನೆರವೇರಿಸುವಂತೆ ಸಲಹೆ ನೀಡುತ್ತಾರೆ. ಗೌಜಿ, ಗದ್ದಲ, ಆಡಂಬರಗಳ ಅಗತ್ಯವಿಲ್ಲ. ವಧುವರರು ಅವರ ಸಂಬಂಧಿಕರು, ಹಿತೈಷಿಗಳೆಂದು ಒಟ್ಟು ಹತ್ತು ಜನ ಕೂಡಿದರೆ ಸಾಕು. ಯಾಕೆಂದರೆ ಬಡವರು ಸಾಲ ಮಾಡಿ ವಿಜೃಂಭಣೆಯಿಂದ ಮದುವೆ ನೆರವೇರಿಸಿ ಮುಂದೆ ಸಾಲ ತೀರಿಸಲಾಗದೆ ಜೀವನವಿಡೀ ಕೊರಗುವ ಪರಿಸ್ಥಿತಿ ಬರಕೂಡದೆಂಬುದು ಗುರುಗಳ ಆಶಯ. ಯಾವುದೇ ಸಮಾರಂಭಗಳಲ್ಲಿ ಗೌಜಿ, ಗದ್ದಲ, ಆಡಂಬರ, ದುಂದುವೆಚ್ಚ ಇವೆಲ್ಲ ಗುರುಗಳಿಗೆ ಹಿಡಿಸುತ್ತಿರಲಿಲ್ಲ. ಹಾಗೆ ಖರ್ಚು ಮಾಡುವ ಹಣವನ್ನು ಉಳಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅಥವಾ ಬೇರೆ ಯಾವುದಾದರೂ ಸಮಾಜೋಪಯೋಗಿ ಕಾರ್‍ಯಗಳಿಗೆ ವಿನಿಯೋಗಿಸಬೇಕೆಂಬುದು ಅವರ ಅಭಿಮತ.
ಅವರ ಈ ಸಮಾಜ ಸುಧಾರಣೆಯ ಕಾರ್ಯಕ್ರಮದ ಅನುಷ್ಠಾನ ತುಂಬ ಯಶಸ್ವಿಯಾಗಲು ಬೆಂಬಲಿಗರಾಗಿ ಕೆಲವು ನಿಷ್ಠಾವಂತ ಅನುಯಾಯಿಗಳು ಅವರ ಜತೆಗಿದ್ದರು. ಅವರಲ್ಲಿ ಪ್ರಮುಖರಾದವರು ಡಾ. ಪಲ್ಪು, ಅವರ ಅಣ್ಣ ವೇಲು, ಕವಿ ಕುಮಾರನ್ ಆಶಾನ್, ಸತ್ಯವೃತನ್, ಸಿ.ವಿ.ಕುಂಜುರಾಮನ್ ಮುಂತಾದವರು. ಮುಂದೆ ಟಿ.ಕೆ.ಮಾಧವನ್, ಸಹೋದರ ಅಯ್ಯಪ್ಪನ್ ಮುಂತಾದವರು ಸೇರಿಕೊಂಡು ಗುರುಗಳ ಸುಧಾರಣಾವಾದಿ ಚಳುವಳಿಗೆ ಹೊಸ ಆಯಾಮಗಳನ್ನು ಜೋಡಿಸಿರುತ್ತಾರೆ. ವರ್ಣ, ವರ್ಗಭೇದಗಳ ನಿವಾರಣೆಗಾಗಿ ಸಹಭೋಜನ ಅಂತರ್ಜಾತಿ ವಿವಾಹಗಳೂ ಚಳವಳಿಯಲ್ಲಿ ಸೇರಿಕೊಳ್ಳುತ್ತವೆ.
ಗುರುಗಳ ಸಮಾಜ ಸುಧಾರಣೆಯ ಚಳುವಳಿ ಒಂದು ಕ್ರಾಂತಿಕಾರಿ ಚಳುವಳಿಯಾಗಿದ್ದರೂ ಕೂಡ ಇದು ಹಿಂಸಾಚಾರಕ್ಕೆ, ಘರ್ಷಣೆಗೆ ಕಾರಣವಾಗಲಿಲ್ಲ. ಇದಕ್ಕೆ ಕಾರಣ ಗುರುಗಳ ಚತುರ ಕಾರ್ಯವೈಖರಿ ಮತ್ತು ಶಾಂತವಾಗಿ ಸಮಸ್ಯೆಗಳನ್ನು ಪರಿಹರಿಸುವ ರೀತಿ. ಶಸ್ತ್ರ ಹಿಡಿಯದೆ, ಶಸ್ತ್ರಧಾರಿಗಳಾದ ಎದುರಾಳಿಗಳನ್ನು ನಿಶಸ್ತ್ರಗೊಳಿಸುವ ವಾಕ್ಚಾತುರ್ಯತೆ. ಉದಾಹರಣೆಗೆ – ಅವರು ಅರವೀಪುರದಲ್ಲಿ ಶಿವಪ್ರತಿಷ್ಠೆ ಮಾಡಿದ್ದನ್ನು ಕೇಳಿ ಕೇರಳದ ಮೇಲ್ಜಾತಿಯ ನಂಬೂದ್ರಿಯೊಬ್ಬ ಜಗಳಕ್ಕೆ ಅಣಿಯಾಗಿ ಬಂದು ಕೇಳುತ್ತಾನೆ ‘ನಿನಗೆ ದೇವರನ್ನು ಪ್ರತಿಷ್ಠೆ ಮಾಡುವ ಹಕ್ಕು ಎಲ್ಲಿಂದ ಬಂತು?’ ಅದಕ್ಕೆ ಗುರು ಶಾಂತವಾಗಿ ಉತ್ತರಿಸುತ್ತಾರೆ: ‘ನಾನು ಸ್ಥಾಪಿಸಿದ್ದು ನಮ್ಮ ಈಳವ ಶಿವನನ್ನು. ಆ ಹಕ್ಕು ನಮಗಿದೆ’ ಮರು ಮಾತಿಲ್ಲದೆ ಅವನು ಹೊರಟು ಹೋಗುತ್ತಾನೆ. ಹೀಗೆ ಶಾಂತರಾಗಿ ಅವರು ಸಮಸ್ಯೆಗಳನ್ನು ಬಗೆ ಹರಿಸಿದ ಅನೇಕ ಉದಾಹರಣೆಗಳಿವೆ.
ಶಾಂತಿಯಿಂದ, ಪ್ರೀತಿಯಿಂದ ಅವರು ಸಮಾಜದಲ್ಲಿ ಸಾಮರಸ್ಯವನ್ನುಂಟು ಮಾಡಲು ಪ್ರಯತ್ನಿಸಿದರು. ಅವರ್ಣೀಯರ ಮೇಲೆ ಸವರ್ಣೀಯರು ನಡೆಸಿದ ದಬ್ಬಾಳಿಕೆಗಾಗಿ ಸವರ್ಣೀಯರನ್ನು ಅವರು ದ್ವೇಷ ಭಾವದಿಂದ ಕಾಣಲಿಲ್ಲ. ತಮ್ಮ ಸಮಾಜಹಿತ ಸತ್ಕಾರ್ಯಗಳಿಂದ ಅವರಲ್ಲಿ ವಿವೇಚನೆಯನ್ನು ಮೂಡಿಸಿ ಅವರ ಮನ ಗೆಲ್ಲಲು ಪ್ರಯತ್ನಿಸಿದರು. ಮುಂದೆ ಸವರ್ಣೀಯರೂ ಸಮಾಜ ಸುಧಾರಣಾ ಕಾರ್ಯದಲ್ಲಿ ನೆರವಾಗಿ ಗುರುಗಳ ಅನುಯಾಯಿಗಳಾದ ನಿದರ್ಶನಗಳಿವೆ. ಗುರು ಬಯಸಿದ್ದು ವರ್ಗ, ವರ್ಣಭೇದವಿಲ್ಲದ ಸಮಾಜ ನಿರ್ಮಾಣ. ಅವರ ಪ್ರಕಾರ ‘ಜಾತಿ-ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು.
ಸಮಾಜದ ಕೆಳವರ್ಗದವರ, ಶೋಷಿತರ, ದುರ್ಬಲರ ಉದ್ಧಾರ ಗುರುಗಳ ಜೀವನದ ಗುರಿಯಾಗಿತ್ತು. ಅವರು ಮೂಢ ನಂಬಿಕೆಗಳನ್ನು ಕಂದಾಚಾರಗಳನ್ನು ನಿರ್ಮೂಲನೆಗೊಳಿಸಿದರು. ಅವರ ಸಾತ್ವಿಕ ಆರಾಧನೆಗೆ ದೇವಸ್ಥಾನ ಸ್ಥಾಪಿಸಿದರು. ಅವರಿಗೆ ಶಿಕ್ಷಣದಿಂದ ಜ್ಞಾನದ ಬೆಳಕನ್ನು ನೀಡಿ, ಸ್ವತಂತ್ರರನ್ನಾಗಿಸಿ, ಪ್ರಗತಿಯ ಪಥದಲ್ಲಿ ಮುನ್ನಡೆಸಲು ಸರ್ವವಿಧದಲ್ಲೂ ಪ್ರಯತ್ನಿಸಿದರು. ನಾಲ್ಕು ದಶಕಗಳ ಅವಧಿಯಲ್ಲಿ ಅವರು ಕೇರಳ ಸಮಾಜದಲ್ಲಿ ಉಂಟು ಮಾಡಿದ ಪರಿವರ್ತನೆ ನಿಜಕ್ಕೂ ಅದ್ಭುತವೇ. ಈ ಪವಾಡವನ್ನು ಸಾಧಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎಂದು ಯೋಚಿಸುತ್ತ ಹೋದರೆ ನಮ್ಮ ಗಮನಕ್ಕೆ ಬರುವುದು ಅವರು ಈ ಯೋಜನೆಗೆ ರೂಪಿಸಿದ ಕಾರ್ಯತಂತ್ರ. ಬಹಳ ಚಿಂತನೆ ನಡೆಸಿ ವ್ಯವಸ್ಥಿತವಾಗಿ ರೂಪಿಸಿದ ಕಾರ್ಯತಂತ್ರ ಮತ್ತು ಅಷ್ಟೇ ಸಮರ್ಥವಾಗಿ ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಿದ ರೀತಿ. ಮೇಲಾಗಿ ಅವರ ಮೇರು ವ್ಯಕ್ತಿತ್ವ ಮತ್ತು ಅವರ ಜತೆಗಿದ್ದ ನಿಷ್ಠಾವಂತ ಪ್ರಭಾವಶಾಲಿ ಅನುಯಾಯಿಗಳು. ಹಾಗೇ ಅವರ ನಾಯಕತ್ವದಿಂದ ಪ್ರಭಾವಿತರಾಗಿ ಸ್ಪಂದಿಸಿದ ಅಂದಿನ ದಲಿತ ಸಮಾಜ ಕೂಡಾ ಗುರುಗಳ ಸಮಾಜ ಪರಿವರ್ತನೆಯ ಯಶಸ್ಸಿಗೆ ಕಾರಣವಾಗಿತ್ತು.
ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದ ವರ್ಣರಹಿತ, ವರ್ಗರಹಿತ ಸಮಾಜದ ನಿರ್ಮಾಣಕ್ಕೆ ನಾರಾಯಣ ಗುರು ನೂರು ವರ್ಷಗಳ ಹಿಂದೆಯೇ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಆದರೆ ಇಂದು, ನಮ್ಮ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸಾಚಾರ, ಕೋಮು ಗಲಭೆಗಳು ಮತ್ತೆ ತಲೆಯೆತ್ತುತ್ತಲಿವೆ. ಇಂದಿನ ಈ ಹದಗೆಟ್ಟ, ಕಲುಷಿತ ವಾತಾವರಣದಲ್ಲಿ ನಾರಾಯಣ ಗುರುಗಳು ನೀಡಿದ ಸಂದೇಶಗಳು, ನೀತಿ ಬೋಧನೆಗಳು ಅತ್ಯಂತ ಪ್ರಸ್ತುತ. ಅವರ ‘ಜಾತಿ ಒಂದೇ ಧರ್ಮ ಒಂದೇ ದೇವರೊಬ್ಬನೇ’ ಎಂಬ ಸಂದೇಶ ಸಾರ್ವಕಾಲಿಕ.
Like