ಯುವವಾಹಿನಿ ಸಂಘಟನೆಯು ಅಮೃತವಾಹಿನಿಯಾಗಿ ಹರಿಯುತ್ತಾ ಬಂದು ಇದೀಗ ರಜತ ಮಹೋತ್ಸವಕ್ಕೆ ಕಾಲಿರಿಸಿದ ಈ ಶುಭ ಸಮಯದಲ್ಲಿ ನನ್ನ ಮನದಾಳದ ಮಾತನ್ನು ಅಕ್ಷರ ರೂಪದಲ್ಲಿ ಬರೆಯುವಾಗ ಮನತುಂಬಿ ನಿಲ್ಲುತ್ತದೆ. ಉಕ್ಕೇರುವ ಸಂತಸದಿಂದ ಲೇಖನಿ ಒಂದು ಕ್ಷಣ ನಿಂತು ಮತ್ತೆ ಮುನ್ನಡೆಯುತ್ತಿದೆ. ಅಂದರೆ ಸಂಘಟನೆ ಒಂದು ಸಾಮಾಜಿಕ ಶಕ್ತಿ ಹೌದು. ಆದರೆ ಒಂದು ಸಂಘಟನೆ ಇಪ್ಪತ್ತೈದು ವರ್ಷದ ಯೌವನಕ್ಕೆ ಕಾಲಿರಿಸುವುದೆಂದರೆ ಅದು ಅಷ್ಟು ಸುಲಭದ ಮಾತೇನೂ ಅಲ್ಲ. ಅಷ್ಟೊಂದು ಸಾಮಾಜಿಕ ಚಿಂತನೆಯ ಮನಸ್ಸು, ನಿಷ್ಠೆ, ಒಗ್ಗಟ್ಟು, ಆತ್ಮಬಲ, ಮಾನವೀಯ ಗುಣ ಮುಂತಾದ ಉತ್ತಮ ಗುಣಗಳು ಸದಸ್ಯರಲ್ಲಿ ಇದ್ದಾಗ ಮಾತ್ರ ಸಂಘ ಸಂಸ್ಥೆಗಳು ದೀರ್ಘಕಾಲ ಬಾಳಿ ಸಾಮಾಜಿಕವಾದ ಮೌಲಿಕ ಸೇವೆ ನೀಡುತ್ತದೆ. ಈ ಮೌಲಿಕ ಮೂಲಭೂತ ಸತ್ಯ ಸತ್ವಗಳನ್ನು ಯುವವಾಹಿನಿ ಸಂಘಟನೆಯು ಅನುಷ್ಠಾನಗೊಳಿಸುತ್ತಾ ಬಂದಿದೆ ಎನ್ನಲು ಬಹಳ ಸಂತೋಷವಾಗುತ್ತದೆ.
ಯುವವಾಹಿನಿ ತನ್ನ ಹುಟ್ಟಿನಿಂದಲೂ ಸಾಮಾಜಿಕ ಚಿಂತನೆಯ ಅತ್ಯುತ್ತಮ ಸೇವೆಗಳನ್ನು ನೀಡುತ್ತಾ ಬಂದು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆಯೂ ಗಮನಹರಿಸಿ ಉಳಿಸಿ ಬೆಳೆಸುತ್ತಾ ಬಂದಿದೆ. ತನ್ನ ಶಾಖೆಗಳನ್ನು ವಿಸ್ತಾರಗೊಳಿಸಿ ಅಲ್ಲಲ್ಲಿ ಸಾಮಾಜಿಕ ಚಿಂತನೆಯ ಸತ್ಕಾರ್ಯ, ಲಿಂಗ ಭೇದ, ಜಾತೀಯತೆಯ ಕರಿ ನೆರಳಿಗೆ ಒಳಗಾಗದೆ ಮಾಡುತ್ತಲೇ ಬಂದಿರುವುದು ಅಭಿನಂದನೀಯ. ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ, ಇನ್ನು ಶ್ರೇಷ್ಠ ಬರಹಗಾರರಾಗಿ, ಯುವ ಜನಾಂಗದ ಮಾರ್ಗದರ್ಶಿಯಾಗಿ ತನ್ನ ದೇಹ ಸವೆಯಿಸಿದ, ಸನ್ಮಾನ್ಯ ದಿ| ವಿಶುಕುಮಾರ್‌ರವರ ಹೆಸರಿನಲ್ಲಿ ’ದತ್ತಿ ನಿಧಿ’ಯನ್ನು ಹುಟ್ಟು ಹಾಕಿ ಆ ಮಹಾನ್ ಸಾಹಿತಿಯ ಹೆಸರನ್ನು ಜೀವಂತವಾಗುಳಿಸಿ, ಮುಂದಿನ ಜನಾಂಗಕ್ಕೆ ಪ್ರೋತ್ಸಾಹ ತುಂಬಿದ್ದು, ಅಲ್ಲದೆ ಸಿಂಚನ ಮಾಸ ಪತ್ರಿಕೆಯ ಮೂಲಕ, ತಮ್ಮ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ, ಹಾಗೂ ಬರಹಗಾರರಿಗೆ ಪ್ರೋತ್ಸಾಹ ನೀಡುವ, ಜ್ಞಾನಾರ್ಜನೆಯ ಗೊಂಚಲು ನಿಜವಾಗಿಯೂ ಅತ್ಯುತ್ತಮವಾಗಿದೆ. ಹೀಗೆ ಹಲವು ಹತ್ತು ರೀತಿಯಲ್ಲಿ ಸಾಮಾಜಿಕ ಉನ್ನತಿಗಾಗಿ ತೊಡಗಿಸಿಕೊಂಡು ಇದೀಗ ಇಪ್ಪತ್ತೈದನೆಯ ವಯಸ್ಸಿಗೆ ಕಾಲಿರಿಸಿದ ಯುವವಾಹಿನಿ ಒಂದು ಆದರ್ಶನೀಯ ಯುವ ಸಂಘಟನೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.
ಇನ್ನು ಮುಂದಿನ ಹೆಜ್ಜೆಯೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ರಾಷ್ಟ್ರದ ಹಿತರಕ್ಷಣೆ, ಪಾಲನೆ, ಪೋಷಣೆಯಲ್ಲಿ ಪ್ರಜೆಗಳೆಲ್ಲರ ಪಾಲಿದೆ. ಈ ಪ್ರಜ್ಞೆಯನ್ನು ಪ್ರಜೆಗಳೆಲ್ಲರೂ ಅರಿತುಕೊಂಡು ದೇಶದ ಆಡಳಿತ ವ್ಯವಸ್ಥೆ ಹದಗೆಟ್ಟಾಗ ಸಕ್ರಿಯವಾಗಿ ಭಾಗವಹಿಸಿ ಸರಿಪಡಿಸಬೇಕಾಗಿದೆ. ಆಡಳಿತ ಕ್ಷೇತ್ರದಲ್ಲಿ ಇಂದು ತುಂಬಿರುವ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಪಾರ್ಟಿ ಕಲಹ, ಮೋಸ, ವಂಚನೆ, ಸ್ವಪ್ರತಿಷ್ಠೆ, ಸ್ವಾರ್ಥ, ಪ್ರಜೆಗಳ ತೆರಿಗೆ ಹಣವನ್ನು ಜನಹಿತಕ್ಕಾಗಿ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರಾಮಾಣಿಕವಾಗಿ ಬಳಸದೆ ನಯ ವಂಚನೆಯಿಂದ ತಮ್ಮ ಕೌಟುಂಬಿಕ ಸುಖ, ಸವಲತ್ತು, ಮುಂದಿನ ಪೀಳಿಗೆಗಾಗಿ ಸಂಗ್ರಹಿಸುವುದು, ಬಳಸುವುದು ಇತ್ಯಾದಿ ವಂಚನೆಗಳು ಇಂದು ಸರ್ವ ಸಾಮಾನ್ಯವಾಗಿದೆ. ಆದ್ದರಿಂದ ಇಂದು ನಮ್ಮ ರಾಜ್ಯ ಸಭೆ, ಲೋಕಸಭೆ, ವಿಧಾನ ಸೌಧಗಳು ಜನಪ್ರತಿನಿಧಿಗಳ ಕದನದ ಕಳವಾಗಿ ಜನತೆಗೆ ನ್ಯಾಯೋಚಿತ ಪ್ರಾಮಾಣಿಕ ಸೇವೆ ಸಿಗದಿರುವುದನ್ನು ನಾವೆಲ್ಲಾ ಅರಿತಿದ್ದೇವೆ. ಪ್ರಜೆಗಳು ಜಾಗೃತರಾಗಿ ಎಚ್ಚೆತ್ತುಕೊಂಡರೆ, ಇಂತಹ ಹೀನ ಸ್ಥಿತಿಗತಿ ತುಂಬಿರುವ ಆಡಳಿತ ಕ್ಷೇತ್ರವನ್ನು ಸರಿ ಪಡಿಸಲು ಸಾಧ್ಯವಿದೆ. ಮುಖ್ಯವಾಗಿ ನಮ್ಮ ದೇಶದ ಯುವ ಸಂಘಟನೆಗಳು ಈ ನಿಟ್ಟಿನಲ್ಲೂ ಭಾಗವಹಿಸಿ, ದೇಶ ಭಕ್ತಿಯ ಪ್ರಜ್ಞೆಯನ್ನು ಬೆಳೆಸಿಕೊಂಡು ಆಡಳಿತ ವ್ಯವಸ್ಥೆಯನ್ನು ಸರಿ ಪಡಿಸಬೇಕು.
ಯುವ ಜನಾಂಗ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಗುನಗುತ್ತಾ ಗಲ್ಲು ಕಂಭಕ್ಕೇರಿದ ವೀರ ಭಗತ್‌ಸಿಂಗ್, ರಾಜಗುರು, ಸುಖದೇವ್‌ರಂತೆ ಹಾಗೂ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಧರ್ಮಕ್ಕೆ ಧಕ್ಕೆ ಬಂದಾಗ, ಸರ್ವಧರ್ಮ ಸಮ್ಮೇಳನ ಚಿಕಾಗೋದಲ್ಲಿ ನಡೆದಾಗ, ಅಲ್ಲಿ ಭಾರತದ ಧರ್ಮ ಸಂಸ್ಕೃತಿಯ ಬಗ್ಗೆ ಎತ್ತಿ ಹಿಡಿದು ಮಾತಾಡಿ ’ಜನಮನ’ ಗೆದ್ದ ಯುವ ಸನ್ಯಾಸಿ ಸ್ವಾಮೀ ವಿವೇಕಾನಂದರು, ಹಾಗೇ ಭಾರತದಲ್ಲಿ ಬೀಡು ಬಿಟ್ಟ ಜಾತೀಯತೆ, ಸ್ತ್ರೀಶೋಷಣೆ, ಅಂಧವಿಶ್ವಾಸ ಮುಂತಾದ ಸಮಾಜ ಬಾಹಿರ ಅಮಾನವೀಯ ಪದ್ಧತಿಗಳ ಬಗ್ಗೆ ಬೆಳಕು ಚೆಲ್ಲಿ ಅದನ್ನು ಸಂಪೂರ್ಣ ನಿರ್ನಾಮ ಮಾಡಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ ಸತ್ಕಾರ್ಯ ಇಡೀ ವಿಶ್ವಕ್ಕೇ ಮಾದರಿ. ಅವರ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎನ್ನುವ ಮಾನವೀಯ ಮೂಲಭೂತ ತತ್ವ ಚಿಂತನೆಯನ್ನು ಇಡೀ ವಿಶ್ವವೇ ಮಾನ್ಯತೆ ನೀಡಿದೆ. ಹೀಗೆ ಇಂತಹ ಮಹಾನ್ ಸಾಧಕ ಸ್ತ್ರೀಪುರುಷರ ಮಾರ್ಗದರ್ಶನದ ದಿವ್ಯ ಜ್ಯೋತಿಯ ಮುಂಬೆಳಕಿನಲ್ಲಿ ನಮ್ಮ ಯುವಜನಾಂಗ ಮುನ್ನಡೆಯಲಿ, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯದೆ ಉಳಿಸಲಿ, ಬೆಳೆಸಲಿ. ಯುವವಾಹಿನಿ ಸಾಮಾಜಿಕ ಚಿಂತನೆಯ ತನ್ನ ಅತ್ಯುತ್ತಮ ಕಾರ್ಯಕ್ರಮಗಳಿಂದ ಹೀಗೆಯೇ ಮುನ್ನಡೆಯುತ್ತಾ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎನ್ನುವ ಶುಭಹಾರೈಕೆಗಳು. ಹಾಗೂ ಸರ್ವಸದಸ್ಯರಿಗೂ ಅಭಿನಂದನೆಗಳು.