ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಭೂಮಿ ಕೇರಳದ ಶಿವಗಿರಿಗೆ ಯಾತ್ರೆಯನ್ನು ಅ. 11ರಿಂದ ಅ. 14ರವರೆಗೆ ಹಮ್ಮಿಕೊಳ್ಳಲಾಗಿತ್ತು.
ಅ. 11ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 49 ಭಕ್ತರನ್ನು ಒಳಗೊಂಡ ಯಾತ್ರಾರ್ಥಿಗಳ ತಂಡ ಹೊರಟು, ಮರುದಿನ ಬೆಳಗ್ಗೆ ಶಿವಗಿರಿ ತಲುಪಿ ಶಾರದಾ ಮಠ, ವೈದಿಕ ಮಠ ಮತ್ತು ಗುರು ಸಮಾಧಿಯನ್ನು ವೀಕ್ಷಿಸಿತು. ಬೆಳಗಿನ ಉಪಹಾರದ ನಂತರ ಚಂಬಲಂತಿಯಲ್ಲಿ ಗುರುಗಳ ಜನ್ಮಗ್ರಹ ದರ್ಶನ ಪಡೆದ ಯಾತ್ರಾರ್ಥಿಗಳು, ಬಳಿಕ ಗುರುಗಳು ಸ್ಥಾಪಿಸಿದ ಮೂರನೇ ದೇವಸ್ಥಾನವಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಅಲ್ಲಿ ಆಶ್ರಮದಲ್ಲಿ ನಡೆದ ಗುರು ಪೂಜೆಯಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನದ ಅನ್ನಪ್ರಸಾದವನ್ನು ಸೇವಿಸಿದರು. ನಂತರ ಕನ್ಯಾಕುಮಾರಿಯತ್ತ ಪ್ರಯಾಣ ಬೆಳೆಸಿ ಸ್ವಾಮಿ ವಿವೇಕಾನಂದ ರಾಕ್ ವೀಕ್ಷಣೆ ಹಾಗೂ ಕನ್ಯಾಕುಮಾರಿ ದೇವಿಯ ದರ್ಶನ ಪಡೆದರು.
ಮರುತಮಲೆ ಆಶ್ರಮದಲ್ಲಿ ರಾತ್ರಿಯ ವಿಶ್ರಾಂತಿ ಮಾಡಿದ ಯಾತ್ರಾರ್ಥಿಗಳು ಮರುದಿನ ಬೆಳಗ್ಗೆ ಸತ್ಸಂಗದಲ್ಲಿ ಭಾಗವಹಿಸಿ, ಮರುತಮಲೆ ಬೆಟ್ಟ ಏರಿ ಗುರುಗಳ ತಪೋಭೂಮಿ ಗುಹೆಯ ದರ್ಶನ ಪಡೆದುಕೊಂಡರು. ಬೆಳಗಿನ ಉಪಹಾರದ ನಂತರ ತಂಡವು ಅರವಿಪುರಂಗೆ ತೆರಳಿ ನೇಯರ್ ನದಿ ಹಾಗೂ ನಾರಾಯಣ ಗುರುಗಳು ಸ್ಥಾಪಿಸಿದ ಮೊದಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನ್ನಪ್ರಸಾದ ಸೇವನೆ ಮಾಡಿತು.
ಅರವಿಪುರಂನ ನಂತರ ತಂಡವು ಕೇರಳದ ಪ್ರಸಿದ್ಧ ಕವಿ ಕುಮಾರ ಆಶಾನ್ ಮ್ಯೂಸಿಯಂಗೆ ಭೇಟಿ ನೀಡಿ ಅವರ ಜೀವನ ಕುರಿತ ಮಾಹಿತಿಗಳನ್ನು ತಿಳಿದುಕೊಂಡಿತು. ಕೊನೆಗೆ ಕೊಲತುಕೆರೆ ಕ್ಷೇತ್ರದ ದರ್ಶನದ ಬಳಿಕ ತ್ರಿವೇಂಡ್ರಮ್ ರೈಲ್ವೆ ನಿಲ್ದಾಣದಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿತು.
ಯಾತ್ರಾರ್ಥಿಗಳು ಈ ಯಾತ್ರೆಯು ಅವರಿಗೆ ನಾರಾಯಣ ಗುರುಗಳ ಆದರ್ಶಗಳು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಬಗ್ಗೆ ಆಳವಾದ ಅರಿವು ಮೂಡಿಸಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾತ್ರೆಯ ಮಾರ್ಗದರ್ಶಕರಾದ ರಾಮಚಂದ್ರ ಪೂಜಾರಿಯವರು ಗುರುಗಳ ಜೀವನ ಹಾಗೂ ತತ್ತ್ವಚಿಂತನೆಗಳ ಕುರಿತು ಮನಮುಟ್ಟುವ ರೀತಿ ಮಾಹಿತಿಗಳನ್ನು ನೀಡಿದರು. ಸಂಚಾಲಕರಾದ ಯತೀಶ್ ಪೂಜಾರಿ ಹಾಗೂ ಸಹಸಂಚಾಲಕರಾದ ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಯಾತ್ರೆಯು ಶ್ರದ್ಧಾ-ಭಕ್ತಿಯಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.


