ಒಂದು ತುಂಡು ಉಪ್ಪಿನಕಾಯಿ ಇದ್ದರೂ ಸಾಕು ಮೃಷ್ಟಾನ್ನ ಎದುರಿಗೆದೆಯೆನ್ನುವಷ್ಟೇ ಖುಷಿಯಿಂದ ಗಂಜಿ ಅನ್ನವನ್ನುಂಡು ತಿಂದು ತೇಗುತ್ತಿದ್ದವರು ನಮ್ಮ ನಿಮ್ಮವರ ನಡುವೆ ಹಲವರಿರಬಹುದು. ಕಣಿವೆ, ಬೆಟ್ಟ ಗುಡ್ಡ, ನದಿ ಹಳ್ಳ, ಕಾಡುಬಯಲುಗಳೋ… ಆಯಾಸ ನೋವಿನರಿವಿಲ್ಲದೆ ಬರಿಗಾಲಿನ ನಡಿಗೆಯೋಡಾಟದಲ್ಲಿ ಕಲ್ಲು ಮುಳ್ಳುಗಳ ಗೊಡವೆ ಯಾರಿಗಾದರೂ ಇದ್ದಿತ್ತೆ?…..! ಎಡೆ ಬಿಡದ ದುಡಿಮೆಯಿದ್ದರೂ ನಿತ್ಯದ ಪಾಳಿಗೆ ಸಾಕಾಗದೆ, ಹೊಟೇಲು ಗೂಡಂಗಡಿ ದಿನಸಿ ಅಂಗಡಿಗಳಲ್ಲೆಲ್ಲಾ ಸಾಲ ಮಾಡದೆ ಇರುವವರು ಆ ದಿನಗಳಲ್ಲಿ ವಿರಳವೆನ್ನಬಹುದು.
ಊರಿಗೂರೇ ಬದಲಾಗಿದೆ
ಕಾಲ ಮಾತ್ರವಲ್ಲ ಊರಿಗೂರೇ ಬದಲಾಗಿದೆ. ಮೊದಲೆಲ್ಲಾ ಮುಂಬಯಿಂದ ಊರಿಗೆ ಬರುವವರು ಪಾರ್ಲೇಜಿ ಬಿಸ್ಕತ್ತು ತಂದರೂ ಖುಷಿಯಿಂದ ಸ್ವೀಕರಿಸಿ ತಿನ್ನುತ್ತಿದ್ದವರು ಈವಾಗ ಪಾರ್ಲೇಜಿ ಬಿಸ್ಕತ್ತೇನಾದರೂ ಕೊಟ್ರೆ, ಅಷ್ಟು ದೂರದ ಮುಂಬೈಯಿಂದ ಬರುವ ನೀವು ನಾಯಿ ತಿನ್ನೋ ಬಿಸ್ಕತ್ತು ತಂದಿದ್ದಾ ಎಂದು ಪಟಾರನೆ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಎಲ್ಲಾ ಊರಲ್ಲೇ ಸಿಗುತ್ತಲ್ವಾ ಮುಂಬೈಯಿಂದ ಹೊತ್ಕೊಂಡು ಹೋಗೋ ಉಸಾಬರಿ ಬೇಡ ಅಂದ್ಕೊಂಡು, ಬೇಕರಿಗೆ ಹೋಗಿ ಒಳ್ಳೆ ಕ್ವಾಲಿಟಿ ಸ್ವೀಟ್ ಕೊಂಡೋದ್ರೂ….., ಇಲ್ಲಿ ಸಿಗುವಂತದ್ದೆಲ್ಲಾ ನಮಗ್ಯಾಕೆ, ಮುಂಬಯಿಂದ ಬರೋರು ಊರಿನ ತಿಂಡಿ ಕೋಡೋದಾ? ಮುಂಬಯಿಯಲ್ಲಿ ಅಷ್ಟೂ ಗತಿಕೇಡಾ. ಎಲ್ಲದಕ್ಕೂ ಒಂದೊಂದು ಕಮೆಂಟ್ ಇದ್ದೇ ಇರುತ್ತದೆ.
ಚೌಕಾಶಿ ಬೇಡ ಮುಂಬೈ ಅಲ್ಲಮ್ಮಾ..
ಎಲ್ಲಾದರೂ ಮಾರ್ಕೆಟಿಗೆ ಹೋದ ಸಂದರ್ಭದಲ್ಲಿ ಖರೀದಿ ಮಾಡುವಾಗ ಬೆಲೆ ಜಾಸ್ತಿ ಅನಿಸಿದ್ದಲ್ಲಿ ಸ್ವಲ್ಪ ಚೌಕಾಶಿ ಮಾಡಿದರೆ ಸಾಕು, (ಎಂಚಿನ ಕುರೆ ಕಟ್ಟುನು ಮಾರಾಯ ಮುಂಬಯಿಡ್ ಈತ್ಲಾ ಬರಗಾಲನಾ) ಯಾಕೆ ಇಷ್ಟು ಜಿಪುಣತನ ಕೇಳಿದಷ್ಟು ಹಣ ಕೊಟಿಬಿಡ್ಬಾರ್ದಾ. ಈ ಮಾತು ಕೇಳಿದಾಗಲಂತೂ ನನ್ನಂತಹ ಮುಂಬಯಿ ವಲಸಿಗರಿಗೆ ಸೋಜಿಗವೆನಿಸದಿರದು. ಊರಿನ ಕೆಲವರಲ್ಲಿ ಹಣದ ಬಗ್ಗೆ ಇಷ್ಟೊಂದು ತಾತ್ಸಾರ ಭಾವನೆ ಉಂಟಾಗಲು ಪರೋಕ್ಷವಾಗಿ ಮುಂಬಯಿಗರೇ ಕಾರಣವಾಗಿರುವರೆಂದರೆ ಅತಿಶಯೋಕ್ತಿಯೆನಿಸುವು ದಿಲ್ಲ. ಎಳೆ ವಯಸ್ಸಿನಲ್ಲಿಯೇ ಊರು ಬಿಟ್ಟು ನೆಲೆಯಿಲ್ಲದೆ ಅಲೆದಾಡಿ ಎಲ್ಲೋ ಒಂದೆಡೆ ಕೆಲಸಕ್ಕಿದ್ದುಕೊಂಡು ಅಲ್ಲಿ ಸಿಕ್ಕಷ್ಟನ್ನೇ ತಿಂದು, ಪೇಪರ್ ಅಥವಾ ಗೋಣಿಚೀಲವನ್ನು ಹಾಸಿ ಹೊಟೇಲಿನ ಎದುರು ಅಥವಾ ರಸ್ತೆ ಬದಿಯಲ್ಲಿ ಪ್ಲ್ಯಾಟ್ ಫಾರ್ಮ್‌ನಲ್ಲಿ ಮಲಗಿದವರು ಅದೆಷ್ಟೋ ಜನ. ಎಲ್ಲಾದರೂ ಹೊರಗಡೆ ಹೋದಾಗ ಹೊಟೇಲಿಗೆ ಹೋದರೆ ’ಸುಮ್ನೆ ಯಾಕೆ ಹಣ ಖರ್ಚು’ ಅಂದ್ಕೊಂಡು, ಕ್ಯಾಂಟೀನಿನಲ್ಲಿ ಸಿಗುವಂತ ವಡಪಾವನ್ನೇ ತಿಂದುಕೊಂಡು, ಊರಲ್ಲಿರುವ ನಮ್ಮವರು ಖುಷಿಯಾಗಿರಬೇಕು, ದೈವದೇವರುಗಳ ನೆಲೆಯನ್ನು ರೂಢಿಗೊಳಿಸಬೇಕು, ಗುಡಿಸಲಿನ ಕನಸು ನನಸಾಗಬೇಕು, ಸಹೋದರಿಯರಿಗೆಲ್ಲ ಮದುವೆ ಮಾಡಬೇಕೆಂಬ ಅದೆಷ್ಟೋ ಜವಾಬ್ದಾರಿಗಳನ್ನು ಹೊತ್ತುಕೊಂಡವರೇ ಹೆಚ್ಚು. ಶ್ರಮವಹಿಸಿ ಗಳಿಸಿದ ಪೈಸೆ ಪೈಸೆಗಳನ್ನೂ ಲೆಕ್ಕ ಹಾಕಿ ಖರ್ಚು ಮಾಡಿ, ಕೂಡಿಟ್ಟ ಹಣ ಎಲ್ಲಿಯೂ ಪೋಲಾಗಬಾರದೆಂಬ ಕಾಳಜಿ, ಮನಸ್ಸಿನ ಮೂಲೆಯಲ್ಲಿರುವುದರಿಂದ ಒಂದಿಷ್ಟು ಚೌಕಾಶಿ ಮಾಡುವುದು ಅನಿವಾರ್ಯ. ಯಾಕೆಂದರೆ ಮುಂಬಯಿಗೆ ಹೋಲಿಕೆ ಮಾಡಿದರೆ, ತರಕಾರಿಯಿಂದ ಹಿಡಿದು ಬಟ್ಟೆಬರೆಗಳ ವರೆಗೆ ಊರಲ್ಲಿ ಸಿಗುವಂತಹ ಎಲ್ಲಾ ವಸ್ತುಗಳೂ ದುಬಾರಿ. ಊರಲ್ಲಿ ೧೦೦ ರೂಪಾಯಿಗೆ ಸಿಗುವಂತಹ ತರಕಾರಿ ಮುಂಬೈಯಲ್ಲಿ ಮೂವತ್ತು ರೂಪಾಯಿಗೆ ಸಿಗುತ್ತದೆ. ಇಲ್ಲಿ ನಾವು ಯಾವ ವಸ್ತುವನ್ನು ಖರೀದಿಸುವಾಗಲೂ ಎಲ್ಲ ಸರಿಯಾಗಿದೆಯೋ ಇಲ್ವೊ ಅಂತ ತಿರ್ಗಾಮುರ್ಗಾ ಮಾಡಿ ನೋಡಿ ಬೇಕಾದದ್ದನ್ನೇ ಕೊಂಡುಕೊಳ್ಳುತ್ತೇವೆ. ಆದರೆ ಊರಲ್ಲಿ ಹಾಗೇನಾದರೂ ಮಾಡಿದಲ್ಲಿ ’ಇದು ಮುಂಬಯಿ ಅಲ್ಲಮ್ಮ, ಇಲ್ಲಿ ನಾವು ಕೊಟ್ಟದ್ದನ್ನೇ ತಗೋಬೇಕು’ ಅಂತ ಖಡಾಖಂಡಿತವಾಗಿ ಹೇಳಿ ಬಿಡುತ್ತಾರೆ. ಒಂದು ರೀತಿಯಲ್ಲಿ ಅವರದ್ದೂ ತಪ್ಪಿಲ್ಲ. ನಷ್ಟ ಮಾಡಿಕೊಂಡು ವ್ಯಾಪಾರ ನಡೆಸಿದರೆ ತನ್ನನೇ ಅವಲಂಬಿಸಿದವರ ಪಾಡೇನು…!
ಅದೇ ಹಳೇ ಸೀರೇನಾ….
ಕಳೆದ ವರ್ಷ ಊರಿಗೆ ಹೋದಾಗ ಉಟ್ಟ ಸೀರೆಯನ್ನೇನಾದರೂ ಈ ಬಾರಿ ಉಟ್ಟಿರೆಂದರೆ, ನಿಮಗೆ ನೆನಪಿರುತ್ತೋ ಬಿಡುತ್ತೋ, ಆದರೆ ಊರವರಿಗೆ ಸರಿಯಾಗಿ ನೆನಪಿರುತ್ತದೆ. ಈ ಸಲ ನೀನು ಹೊಸ ಸೀರೆ ತಗೊಂಡಿಲ್ವಾ ಅಥವಾ ಈ ಸೀರೆ ಕಳೆದ ಸಲನೂ ಉಟ್ಟಿದ್ದೆ ಒಂಚೂರು ಹಾಳಾಗಿಲ್ಲ ನೋಡು ಅಂತ ಇಂಡೈರೆಕ್ಟ್ ಆಗಿ ಹೇಳಿ ಬಿಡುತ್ತಾರೆ. ಊರಲ್ಲಿ ಓಲ್ಡ್ ಫ್ಯಾಷನ್ ನ್ಯೂ ಫ್ಯಾಷನ್ ಮತ್ತೊಂದು ಕಿರಿಕಿರಿ. ಈ ವರ್ಷ ಒಂದಾದ್ರೆ ಬರೋ ವರ್ಷ ಇನ್ನೊಂದು. ಅರೆ ಈ ಸೀರೆನಾ, ಇದು ಓಲ್ಡ್ ಫ್ಯಾಷನ್ನು ಈವಾಗ ಯಾರೂ ಉಡಲ್ಲ ಅಂತ ತಟ್ಟನೆ ಹೇಳಿ ಬಿಡ್ತಾರೆ. ಆದ್ರೆ ಮುಂಬಯಿಯಲ್ಲಿ ಹಾಗಲ್ಲ. ನಾವು ಮಾಡಿದ್ದೇ ಫ್ಯಾಷನ್. ಯಾರೂ ನೋಡೋ, ಕೇಳೋ ಗೋಜಿಗೆ ಹೋಗೋದಿಲ್ಲ. ಊರಲ್ಲಿ ನಾವು ತೊಡೊ ಆಭರಣಗಳ ಮೇಲೂ ಗಮನವಿರುತ್ತದೆ. ಒಂದು ವೇಳೆ ಈಗಿನ ಫ್ಯಾಶನ್ ಅಂದ್ಕೊಂಡು ಆರ್ಟಿಫಿಷ್ಯಲ್ ಧರಿಸ್ಕೊಂಡ್ರಿ ಅಂತ ಇಟ್ಕೊಳ್ಳಿ, ತುಂಬಾ ಲಾಸ್ ಇರ್ಬೇಕು. ಎಲ್ಲಾ ಚಿನ್ನ ಮಾರಿದ್ರೋ ಏನೋ, ಅವಳ ಕುತ್ತಿಗೆಯಲ್ಲಿ ಒಂದು ತುಂಡು ಚಿನ್ನ ಇಲ್ಲ. ಹೆಸರಿಗೆ ಮಾತ್ರ ಮುಂಬಯಿ. ಅವರ ಒಳಗುಟ್ಟು ಯಾರಿಗೆ ಗೊತ್ತಾಗುತ್ತದೆ ಅಂತ ಹಿಂದಿನಿಂದ ಗುಸುಗುಸು ಮಾತಾಡ್ಕೋತಾರೆ. ಈ ವಿಷಯದಲ್ಲಿ ಅಮ್ಚಿ ಮುಂಬಯಿ ಎಷ್ಟೋ ವಾಸಿ. ನೀವು ಹೇಗೇ ಇರಿ ಅದು ಯಾರಿಗೂ ಬೇಕಾಗಿಲ್ಲ. ಅವರವರಷ್ಟಕ್ಕೆ ಅವರು ಬಿಜಿಯಾಗಿರುತ್ತಾರೆ. ನಾವೂ ನಮಗೆ ಬೇಕಾದ ರೀತಿಯಲ್ಲಿ ಒಂಚೂರು ಅಳುಕಿಲ್ಲದೆ ಆರಾಮವಾಗಿ ಸುತ್ತಾಡುತ್ತೇವೆ.
– ಅನಿತಾ ಪಿ. ಪೂಜಾರಿ ತಾಕೊಡೆ
ade hale seerena..
Very nice