ಫೆ. 19 ರಂದು ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು.
ಕ್ಷೇತ್ರದ ಆದಿ ದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಗುರು ಸಾಯನ ಬೈದ್ಯರು-ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಕೋಟಿ-ಚೆನ್ನಯ ಮೂಲಸ್ಥಾನ ಗರಡಿ, ಮಾತೆ ದೇಯಿ ಬೈದ್ಯೆತಿ ಮಹಾಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಮೊದಲಾದ ಶ್ರದ್ಧಾ ಬಿಂದುಗಳ ಪುನರುತ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಲೋಕೇಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 8.13 ರ ಶುಭ ಮುಹೂರ್ತದಲ್ಲಿ ನಡೆಯಿತು.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು ಸೇರಿದಂತೆ ಬೆಂಗಳೂರು, ಬೆಳಗಾವಿ, ಗೋವಾ, ಮುಂಬೈ, ಗುಜರಾತ್, ಪೂನಾ, ದೆಹಲಿ ಮತ್ತು ವಿದೇಶದ ಕೊಲ್ಲಿ ರಾಷ್ಟ್ರಗಳಿಂದ ಭಕ್ತ ಸಾಗರ ಹರಿದು ಬಂದಿದ್ದು, ಮೂವತ್ತೂ ಸಾವಿರಕ್ಕೂ ಅಧಿಕ ಭಕ್ತರ ಸಮಾಗಮದೊಂದಿಗೆ ಗೆಜ್ಜೆಗಿರಿ ಕ್ಷೇತ್ರ ಇತಿಹಾಸ ಬರೆಯಿತು.