ಸಂಪಾದಕರ ಮಾತು
ಪ್ರೀತಿಯ ವಾಚಕರೇ,
ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವು ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇವೆ. ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ವಿಮರ್ಷಿಸೋಣ.
ಮೌಲ್ಯಾಧಾರಿತ, ಸ್ವಾವಲಂಬನೆಯ, ಸರ್ವತೋಮುಖ ಅಭಿವೃದ್ಧಿಯ ಸಾಮಾಜಿಕ, ಪ್ರಾಕೃತಿಕ ಹಾಗೂ ಜೀವನ ಶಿಕ್ಷಣಗಳನ್ನು ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣದಲ್ಲೇ ಕಲಿಯಬೇಕು. ಮಕ್ಕಳು ವಾಸಿಸುವ ಮನೆ, ಮೇಲೆ ಹೇಳಿರುವ ಶಿಕ್ಷಣಗಳನ್ನು ಮನೆಗಳಲ್ಲಿ ನೋಡಿ, ಕಲಿಯುವ ಮನೆಯಾಗಬೇಕು. ತಾಯಿ-ತಂದೆ, ಹಿರಿಯರು ಮಕ್ಕಳಿಗೆ ಮೇಲೆ ಹೇಳಿರುವ ವಿವಿಧ ರೀತಿಯ ಶಿಕ್ಷಣದ ವಿಚಾರಗಳ ಬಗ್ಗೆ ಸದಾ ಭೋದಿಸುತ್ತಿರಬೇಕು.
ಹಳ್ಳಿಯಲ್ಲಿ ಬೆಳೆಯುತ್ತಿರುವ ಮಗುವಿಗೆ ಪಾಲಕರು, ಮನೆಯ ಹಿರಿಯರು ಈ ಮೇಲೆ ಹೇಳಿರುವ ವಿಚಾರಗಳನ್ನು ತಿಳಿಸುವ ಜೊತೆಗೆ ಇವುಗಳನ್ನು ದಿನನಿತ್ಯ ಪಾಲಿಸುತ್ತಿರುತ್ತಾರೆ. ಆದರೆ ಪಟ್ಟಣದ ಬಹಳಷ್ಟು ಮಕ್ಕಳಿಗೆ ತಮ್ಮ ತಮ್ಮ ಮನೆಗಳು ಕಲಿಯುವ ಮನೆಗಳಾಗಿರುವುದಿಲ್ಲ. ತಂದೆ-ತಾಯಂದಿರು ತಮ್ಮ ಮಕ್ಕಳ ಜೊತೆ ಮನೆಯಲ್ಲಿ ಈ ವಿಚಾರಗಳ ಬಗ್ಗೆ ಭೋದಿಸುವುದು ಬಹಳ ವಿರಳ. ಈ ಮಕ್ಕಳಿಗೆ ತಮ್ಮ ಭೂಮಿಯ ಮಹತ್ವ ಗೊತ್ತಿಲ್ಲ. ಆಹಾರ, ದವಸ ಧಾನ್ಯಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬುದರ ಪರಿವೆಯೇ ಇಲ್ಲ. ಕೇವಲ ಹಣದಿಂದಲೇ ಈ ಎಲ್ಲವನ್ನು ಕೊಂಡುಕೊಳ್ಳಬಹುದು ಎಂದು ಭಾವಿಸಿದ್ದಾರೆ. ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಈ ವಿಚಾರಗಳನ್ನು ಹೇಳಿಕೊಡಲು ಅವರಿಗೆ ಸಮಯವೇ ಇರುವುದಿಲ್ಲ. ಮಕ್ಕಳಿಗೆ ಮನೆ ಎಂದರೆ ಪೋಷಕರು ಹಣ ಕೊಡುತ್ತಾರೆ, ಕೇಳಿದ್ದನ್ನು ಕೊಡಿಸುತ್ತಾರೆ ಮತ್ತು ಕೇವಲ ಆಶ್ರಯದ ಸ್ಥಳವಾಗಿರುತ್ತದೆ. ಈ ಮನೆಗಳು ವಾಣಿಜ್ಯ ಸ್ವರೂಪ ಪಡೆದುಕೊಂಡಿವೆಯೇ ಹೊರತು, ಕಲಿಯುವ ನಂದಗೋಕುಲಗಳಾಗಿರುವುದಿಲ್ಲ.
ಮಾರ್ಚ್ ತಿಂಗಳು ಬಂತೆಂದರೆ ಮಕ್ಕಳ ಮನಸ್ಸು ಭಯದಿಂದ, ಒತ್ತಡದಿಂದ ಕಂಪಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಪೋಷಕರು ತಂದೆ-ತಾಯಂದಿರು ತಮ್ಮ ಮಕ್ಕಳ ವಿದ್ಯಾರ್ಜನೆಯಲ್ಲಿ ಬರೇ ಅಧಿಕ ಅಂಕ ಪಡೆಯುವುದಕ್ಕೋಸ್ಕರ ಒತ್ತಡ ಹೇರುವುದು ತಪ್ಪು. ಇದರಿಂದ ಮಕ್ಕಳ ಮನಸ್ಸಿಗೆ ಆಘಾತ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಓದಿದ್ದನ್ನು ಮರೆಯುವ ಸಾಧ್ಯತೆ ಹೆಚ್ಚು. ಶಾಲಾ ಪರೀಕ್ಷೆಯ ಪಾಸು-ಫೈಲುಗಳ ಬಗ್ಗೆ ಚಿಂತಿಸದೇ, ಪರೀಕ್ಷಾ ಸಿದ್ಧತೆಗಾಗಿ ಹೆಚ್ಚಿನ ನಿಗಾ ವಹಿಸುವುದು ತಂದೆ-ತಾಯಂದಿರ ಆದ್ಯ ಕರ್ತವ್ಯವಾಗಬೇಕು. ಮಕ್ಕಳ ಸಾಮರ್ಥ್ಯವನ್ನು ಸಂಶಯದಿಂದ ಕಾಣದೆ, ಸಾಧ್ಯವಾದಷ್ಟು ಒಳ್ಳೆಯ ಮಾತುಗಳನ್ನಾಡಿ, ’ನಿನ್ನಿಂದ ಸಾಧ್ಯವಿಲ್ಲ’ ಎನ್ನದೆ, ನೀನು ಮನಸ್ಸು ಮಾಡಿದರೆ ಸಕಲವೂ ಸಾಧ್ಯ ಎಂದು ಹುರಿದುಂಬಿಸಬೇಕು. ಈಗಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುವುದರಿಂದ ಏನೇ ಹೇಳಬೇಕಾದರೂ ಬಹಳ ಎಚ್ಚರಿಕೆಯಿಂದ ತಿಳಿಸುವುದು ಸೂಕ್ತ. ಮನೆಯ ಒಳಗಿನ ಕೆಲಸದಲ್ಲಿಯೂ ತಮ್ಮ ಜೊತೆ ಮಕ್ಕಳನ್ನು ಸೇರಿಸಿಕೊಂಡರೆ ಮಕ್ಕಳ ಮನಸ್ಸನ್ನು ಹಗುರವಾಗಿಡುವುದರ ಜೊತೆಗೆ ಒತ್ತಡಕ್ಕೆ ಒಳಗಾಗದಂತೆ ಓದಬಹುದು. ಶಾಂತ ಚಿತ್ತದಿಂದ ಓದಿದರೆ ಓದಿದ್ದನ್ನು ವೇಗವಾಗಿ, ಸರಿಯಾಗಿ ಗ್ರಹಿಸಲು ಸಾಧ್ಯ. ಪರೀಕ್ಷಾ ಸಂದರ್ಭದಲ್ಲಿ ತಂದೆ-ತಾಯಿ, ಪೋಷಕರು ಮಕ್ಕಳ ಜೊತೆ ಎಷ್ಟು ಹೊಂದಿಕೊಳ್ಳುತ್ತಾರೋ ಅಥವಾ ಬೆರೆತುಕೊಳ್ಳುತ್ತಾರೋ, ಮಕ್ಕಳ ಮನಸ್ಸು ಅಷ್ಟೇ ಹಗುರವಾಗುತ್ತದೆ. ಒತ್ತಡದಿಂದ ಹೊರಬಂದು ಪರೀಕ್ಷೆ ಬರೆಯಲು ಮನಸ್ಸು ಸ್ವಚ್ಛವಾಗಿರುತ್ತದೆ. ಮನೆಯ ವಾತಾವರಣವೂ ಹಿತವಾಗಿರುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರೆ ಅವರು ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಬಲ್ಲರು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬಲ್ಲರು. ಸುಶಿಕ್ಷಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮುವರು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ, ನಾಯಕರಾಗಿ ಮೂಡಿ ಬರಲು ಸಾಧ್ಯವಾಗಬಲ್ಲರು.
ಈ ನಿಟ್ಟಿನಲ್ಲಿ ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಆತ್ಮವಿಶ್ವಾಸ, ಇಂದ್ರಿಯ ನಿಗ್ರಹ ಶಕ್ತಿ ಮತ್ತು ನಮ್ಮ ಸಮಾಜ ಎಂಬ ಆಶಯ ಲೇಖನ ಮುಖಾಂತರ ಯುವ ಸಮಾಜಕ್ಕೆ ಕಿವಿಮಾತು ಹೇಳಿರುವ ಪ್ರಾಧ್ಯಾಪಕ ರಾಕೇಶ್ ಕುಮಾರ್ ಇವರಿಗೆ ಯುವ ಸಿಂಚನ ಬಳಗದ ವಂದನೆಗಳು. ಈ ಸಂಚಿಕೆಯಲ್ಲಿ ಘಟಕಗಳು ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳ ವರದಿಯನ್ನು ನಿಮಗೆ ನೀಡುತ್ತಿದ್ದೇವೆ. ಒಮ್ಮೆ ಕಣ್ಣಾಡಿಸಿ ಅಭಿಪ್ರಾಯ ತಿಳಿಸಿ.
– ಕಾರ್ಯನಿರ್ವಾಹಕ ಸಂಪಾದಕ
Very aptly said by the editor. Thank you Gangadhar for your precious contribution to Yuvavahini.