ಯುವವಾಹಿನಿ(ರಿ)ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳು, ನಿರ್ದೇಶಕರು,ಸಂಘಟನಾ ಕಾರ್ಯದರ್ಶಿಗಳು,ಎಲ್ಲಾ ಘಟಕಗಳ ಅಧ್ಯಕ್ಷರುಗಳ ಹಾಗೂ ಕಾರ್ಯದರ್ಶಿಗಳ ಸಮಾಗಮ
“ಅವಲೋಕನ”
ನಮ್ಮ ಮಾತು-ನಿಮ್ಮ ಮಾತು
ಎಂಬ ವಿಶೇಷ ಸಮಾಲೋಚನಾ ಸಭೆಯು ತಾರೀಕು 01-09-2019 ನೇ ಆದಿತ್ಯವಾರ ಬೆಳಿಗ್ಗೆ 9 ಘಂಟೆಯಿಂದ ಮಧ್ಯಾಹ್ನ 2 ಘಂಟೆಯ ವರೆಗೆ ಸಸಿಹಿತ್ಲು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಬಹಳ ಅರ್ಥಪೂರ್ಣವಾಗಿ ಜರಗಿತು.
ಬೆಳಿಗ್ಗೆ 9:45 ಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿಯವರು ದೀಪ ಬೆಳಗಿಸಿ ಉಧ್ಘಾಟನೆ ಮಾಡಿ ಶುಭಾಶಯದ ನುಡಿಗಳನ್ನಾಡಿ ನಿರ್ಗಮಿಸಿದರು.
“ಅವಲೋಕನ” ಈ ವಿಶೇಷ ಸಮಾಲೋಚನಾ ಸಭೆಯಲ್ಲಿ ವೇದಿಕೆಯಲ್ಲಿ ಕೇಂದ್ರ ಸಮಿತಿಯ ಜೊತೆಕಾರ್ಯದರ್ಶಿ ರಾಜೇಶ್ ಬಂಟ್ವಾಳ ರವರು ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರನ್ನು ಸಭೆಗೆ ಸ್ವಾಗತಿಸಿದರು,ಕೇಂದ್ರ ಸಮಿತಿಯ ಅಧ್ಯಕ್ಷರು “ಅವಲೋಕನ” ದ ಪ್ರಥಮ ಆವೃತ್ತಿಯ ಸಭೆಗೆ ಆಗಮಿಸಿದ ಕೇಂದ್ರ ಸಮಿತಿಯ ಪದಾಧಿಕಾರಿಗಳು,ನಿರ್ದೇಶಕರುಗಳು,ಸಂಘಟನಾ ಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಕ್ರಮವಾಗಿ ಮುಂದಿನ ಒಂದು ವರ್ಷ ನಮ್ಮ ಸಂಸ್ಥೆಯನ್ನು ಹೊಸ ಹುರುಪಿನೊಂದಿಗೆ ಮುನ್ನಡೆಸುವ ಉದ್ದೇಶ ಹಾಗೂ ರೂಪುರೇಷೆಗಳನ್ನು ಜವಾಬ್ದಾರಿತ ಸ್ಥಾನದಲ್ಲಿರುವ ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಿಗೆ ಹಾಗೂ ಸಂಘಟನಾ ಕಾರ್ಯದರ್ಶಿಗಳಿಗೆ ಎಳೆ ಎಳೆಯಾಗಿ ವಿವರಿಸಿ ನವ ಸ್ಪೂರ್ತಿಯನ್ನು ಮೈದುಂಬಿಸಿದರು.ವಿವಿಧ ವಿಚಾರಗಳ ಬಗ್ಗೆ ವಿವಿಧ ನಿರ್ದೇಶಕರುಗಳು ಆರೋಗ್ಯಯುತ ವಿಚಾರಗಳನ್ನು ಸಭೆಯ ಮುಂದಿಟ್ಟರು,ಪ್ರತಿಯೊಂದು ವಿಚಾರಗಳಿಗೂ ಮುಕ್ತ ಮನಸ್ಸಿನ ತಂಡವು ಏಕತೆಯ ನಿರ್ಧಾರಕ್ಕೆ ಪಣತೊಟ್ಟಿತು.
ಸಭೆಯು ಮುಂದುವರಿಯುತ್ತಲೇ ಘಂಟೆ 11:45 ಕ್ಕೆ ಸರಿಯಾಗಿ “ಅವಲೋಕನ” ದ ದ್ವಿತೀಯ ಆವೃತ್ತಿ ಯ ಸಮಾಲೋಚನಾ ಸಭೆಗೆ ಅಧ್ಯಕ್ಷರ ಆಮಂತ್ರಣಕ್ಕೆ ಸ್ಪಂದಿಸಿ ಆಗಮಿಸಿದ ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳನ್ನು ಕೇಂದ್ರ ಸಮಿತಿಯ ಅಧ್ಯಕ್ಷರು ಸಭೆಗೆ ಬರಮಾಡಿದರು. ಸಭೆಯಲ್ಲಿ ಆಸೀನರಾದ ಎಲ್ಲಾ ಘಟಕಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರು ಮುಂದಿನ ಒಂದು ವರ್ಷ ಸಂಸ್ಥೆಯೊಂದಿಗೆ ನಮ್ಮ ಒಮ್ಮತದ ನಡೆಯ ಬಗ್ಗೆ ಕೆಲವು ವಿಚಾರಗಳನ್ನು ಘಟಕಗಳ ಅಧ್ಯಕ್ಷರುಗಳು-ಕಾರ್ಯದರ್ಶಿಗಳ ಮುಂದಿಟ್ಟರು ಅದಕ್ಕೆ ಪೂರಕವಾದ ಅಭಿಪ್ರಾಯಗಳನ್ನು ಘಟಕಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳಿಂದ ಪಡೆದರು.
ಸುದೀರ್ಘವಾದ ಸಮಾಲೋಚನಾ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಕೇಂದ್ರ ಸಮಿತಿಯ ಪದಾಧಿಕಾರಿಗಳು,ನಿರ್ದೇಶಕರುಗಳು,ಸಂಘಟನಾ ಕಾರ್ಯದರ್ಶಿಗಳು ವಿವಿಧ ಘಟಕಗಳ ಅಧ್ಯಕ್ಷರು-ಕಾರ್ಯದರ್ಶಿಗಳ ಸಮಾಗಮದೊಂದಿಗೆ ಕೇಂದ್ರ ಸಮಿತಿಯ ಅಧ್ಯಕ್ಷರ ಸಮಕ್ಷಮದಲ್ಲಿ ಮುಂದಿನ ಒಂದು ವರ್ಷದ ಅವಧಿಯ ಚಿಂತನೆಗಳು ಮಂಥನವಾದವು.
ಅರ್ಥಪೂರ್ಣವಾದ ಸಮಾಲೋಚನಾ ಸಭೆಯ ವೇದಿಕೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಉಪಸ್ಥಿತಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.ದ್ವಿತೀಯ ಉಪಾಧ್ಯಕ್ಷರಾದ ಉದಯ್ ಅಮೀನ್ ಮಟ್ಟು ರವರು ಉಪಸ್ಥಿತರಿದ್ದರು.
ವಿಶೇಷ ಸಮಾಲೋಚನಾ ಸಭೆ “ಅವಲೋಕನ” ವು ನಮ್ಮ ಹೆಮ್ಮೆಯ ಸಂಸ್ಥೆ ಯುವವಾಹಿನಿ ಯೊಂದಿಗೆ ‘ನಮ್ಮೆಲ್ಲರ ಚಿತ್ತ- ಯಶಸ್ಸಿನತ್ತ’ ಎಂಬಂತೆ ಮೂಡಿ ಬಂತು. “ಅವಲೋಕನ” ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ) ಸಸಿಹಿತ್ಲು ಘಟಕದ ಆತಿಥ್ಯವು ಎಲ್ಲರ ಮನ ಮುದಗೊಳಿಸಿತು. ಸಸಿಹಿತ್ಲು ಘಟಕದ ಸರ್ವಸದಸ್ಯರ ಅಚ್ಚುಕಟ್ಟಾದ ವ್ಯವಸ್ಥೆ ,ಶಿಸ್ತು ಬಧ್ಧತೆ ಬಹಳ ಆಕರ್ಷಣೀಯವಾಗಿತ್ತು.
ಸಮಾಲೋಚನಾ ಸಭೆಯಲ್ಲಿ ಅಂತಿಮವಾಗಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್.ಎಸ್.ಆರ್ ರವರು ಸಮಾಲೋಚನಾ ಸಭೆಗೆ ಆಗಮಿಸಿದ ಸರ್ವರಿಗೂ ಕೃತಜ್ಞತೆಯನ್ನು ಅರ್ಪಿಸುವುದರೊಂದಿಗೆ ಸಭೆಯಲ್ಲಿ ನಮ್ಮೊಳಗೆ ಅರಳಿದ ಚಿಂತನೆಗಳನ್ನು ನಾವೆಲ್ಲ ಜೊತೆಯಾಗಿ ನಮ್ಮೀ ಹೆಮ್ಮೆಯ ಸಂಸ್ಥೆಯಲ್ಲಿ ಅನುಷ್ಠಾನಗೊಳಿಸೋಣ ಎಂದು ತಿಳಿಸುವುದರ ಜೊತೆಗೆ ವಂದನಾರ್ಷಣೆಗೈದು ಸಭೆಯನ್ನು ಮುಕ್ತಾಯಗೊಳಿಸಲಾಯಿತು.