ಬಂಟ್ವಾಳ : ಡಿಸೆಂಬರ್ 7 ಮತ್ತು 8 ರಂದು ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ತುಕರಾಮ ಪೂಜಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಸದಸ್ಯರು ಪ್ರೊ.ತುಕರಾಮ ಪೂಜಾರಿ ಯವರನ್ನು ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ದಿನಾಂಕ 14-11-18 ರಂದು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತಾನಾಡಿದ ಪ್ರೊ.ತುಕರಾಮ ಪೂಜಾರಿ ಯುವವಾಹಿನಿ ಸದಸ್ಯರು ನೀಡಿದ ಅಭಿನಂದನೆ, ಪ್ರೀತಿ ತನಗೆ ಇನ್ನಷ್ಟು ಸ್ಪೂರ್ತಿ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಎಮ್. ಉಪಾಧ್ಯಕ್ಷ ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ, ಜತೆ ಕಾರ್ಯದರ್ಶಿ ರಚನಾ ಕರ್ಕೇರ, ಸಲಹೆಗಾರ ರಾದ ಬಿ.ತಮ್ಮಯ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ರಾಮಚಂದ್ರ ಸುವರ್ಣ, ಬಿ.ದಿರೇಂದ್ರ, ಬಿ.ಶ್ರೀಧರ ಅಮೀನ್, ನಾಗೇಶ್ ಪೊನ್ನೋಡಿ, ಸದಸ್ಯರಾದ ಸುಂದರ ಪೂಜಾರಿ ಬೊಳಂಗಡಿ, ನಾರಾಯಣ ಅಮೀನ್, ಪ್ರಜಿತ್, ಸ್ನೇಹ ಸುರೇಶ್, ಮಲ್ಲಿಕಾ ಪಚ್ಚಿನಡ್ಕ, ಭವಾನಿ ಎನ್.ಅಮೀನ್, ಮತ್ತಿತರರು ಉಪಸ್ಥಿತರಿದ್ದರು.
ಇತಿಹಾಸ ಎಂದರೆ ಕೇವಲ ರಾಜಮಹಾರಾಜರ ಕಥೆಯಲ್ಲ, ಅತಿ ಸಾಮಾನ್ಯವಾಗಿ ಬದುಕಿದ ಮನುಷ್ಯನಿಗೂ ಸಾಂಸ್ಕೃತಿಕ, ಜಾನಪದ ಹಿನ್ನಲೆಯಿದೆ. ಈ ಅಂಶವನ್ನು ಇಟ್ಟುಕೊಂಡೇ ಬಂಟ್ವಾಳದ ಪ್ರೊ.ತುಕರಾಮ ಪೂಜಾರಿ ಮತ್ತು ಆಶಲತಾ ಸುವರ್ಣ ದಂಪತಿ ತಮ್ಮ ಮನೆಯಂಗಳದಲ್ಲೇ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಆರಂಭಿಸಿದರು.
ನಮ್ಮ ಹಿರಿಯರು ಉಪಯೋಗಿಸಿದ, ಸಾಮಾನ್ಯರ ಕಣ್ಣಿಗೆ ಅತಿ ಸಾಮಾನ್ಯ ಎನಿಸುವಂತಹ ವಸ್ತುಗಳನ್ನು ಊರುರು ತಿರುಗಿ ಸಂಗ್ರಹಿಸಿದರು. ಮೊದಲು ಎಸ್.ವಿ.ಎಸ್ ಕಾಲೇಜಿನಲ್ಲಿಟ್ಟಿದ್ದ ಪುಟ್ಟ ಸಂಗ್ರಹ ದೊಡ್ಡದಾಯಿತು. ಈ ಸಂದರ್ಭ ಪೂಜಾರಿಯವರು ತಮ್ಮ ಮನೆಯಲ್ಲೇ ವಸ್ತುಗಳನ್ನು ರಾಶಿ ಹಾಕಿದರು. ಅದಕ್ಕೊಂದು ಸ್ವರೂಪ ಕೊಡಲು ತೀರ್ಮಾನಿಸಿ, ತಮ್ಮ ಪುಟ್ಟ ಜಾಗದಲ್ಲೇ ಮ್ಯುಸಿಯಮ್ ಕಟ್ಟಿದರು. ಜತೆಗೆ ಅಂದದ ಗ್ಯಾಲರಿ, ನಾಣ್ಯ ಶಾಸ್ತ್ರ ಹಾಗೂ ತುಳು ಅಧ್ಯಯನ ಆಸಕ್ತರಿಗೆ ಲೈಬ್ರರಿ ನಿರ್ಮಾಣವಾಯಿತು.
ಒಂದಿಡೀ ಅಕಾಡೆಮಿ, ಸರಕಾರದ ತಂಡ ಮಾಡಬೇಕಾದ ಕೆಲಸವನ್ನು ಮಾಡುತ್ತಿರುವ ಬಿ.ಸಿ.ರೋಡಿನ ಸಂಚಯಗಿರಿ ನಿವಾಸಿ ತಾಲೂಕಿನ ಹೆಮ್ಮೆಯ ಪ್ರೊ.ತುಕರಾಮ ಪೂಜಾರಿ ಈ ಬಾರಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಮಾನ್ಯ ವ್ಯಕ್ತಿಗಳ ಬಗ್ಗೆ ದಾಖಲೆಗಳು ಇರುವುದಿಲ್ಲ. ಅಂದರೆ ಶೇ.80 ರಿಂದ ಶೇ.90 ರಷ್ಟು ಜನರ ಇತಿಹಾಸ ನಮಗೆ ಗೊತ್ತಿರುವುದಿಲ್ಲ. ಭೌತಿಕ ಮತ್ತು ಪರಿಕರಗಳ ಸಂಗ್ರಹಕ್ಕೆ ಹೊರಟಾಗ ತುಕರಾಮ ಪೂಜಾರಿ ಆಯ್ಕೆ ಮಾಡಿದ್ದೇ ಜನಸಾಮಾನ್ಯರ ಬದುಕಿನ ನೋಟವನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ, ಈ ಪೀಳಿಗೆ ನೊಡದೇ ಇರುವ ನಮ್ಮ ಹಿರಿಯ ನಾಗರಿಕರು ಬಳಸಿರಬಹುದಾದ, ನಮ್ಮ ನಿಮ್ಮ ಹಿಂದಿನ ತಲೆಮಾರು ತಮ್ಮ ದೈನಂದಿನ ಬದುಕಿನಲ್ಲಿ ಬಳಸಿರುವ ವಸ್ತುಗಳು ಇಲ್ಲಿವೆ. ಇವೇ ಸಮಗ್ರ ತುಳು ಬದುಕು. ಜನರಿಗೆ ಅಧ್ಯಯನಕಾರರಿಗೆ, ಸಂಶೋಧಕರಿಗೆ ಇದರ ಸ್ವಷ್ಠ ಚಿತ್ರಣ, ಮಾಹಿತಿ ದೊರಕಬೇಕು ಎಂಬುದು ಮೂಲ ಉದ್ದೇಶ. ಹೀಗಾಗಿ ಹಳೆಯ ಪರಿಕರಗಳನ್ನು ಸಂಗ್ರಹಿಸಲು ತುಕರಾಮ ಪೂಜಾರಿ ಯವರಿಗೆ ವರ್ಷಗಳೇ ತಗಲಿವೆ. ಈ. ಶ್ರಮದ ಫಲವಾಗಿ ಇಂದು ವಸ್ತು ಸಂಗ್ರಹಾಲಯ ಎದ್ದು ನಿಂತಿದೆ.
ಪ್ರತಿಯೊಂದು ವಸ್ತುವನ್ನೂ ಅಧ್ಯಯನ ಮಾಡಿ ಅನುಭವಿಸಿ ಅದರ ಮಹತ್ವವನ್ನು ಅರಿಯಬೇಕು, ಒಂದು ಅಕಾಡೆಮಿ ಏನು ಮಾಡಬೇಕೋ ಅದೆಲ್ಲಾ ಇಲ್ಲಿದೆ ಪ್ರತಿಯೊಂದು ವಸ್ತುವಿನ ಹಿನ್ನೆಲೆ, ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಈಗಿನ ತಲೆಮಾರು ಮಾಡಿದರೆ ದಶಕಗಳ ಶ್ರಮ ಸಾರ್ಥಕ್ಯ ಪಡೆಯುತ್ತದೆ.