ಬದುಕು ಆಧುನೀಕತೆಯತ್ತ ಹೊರಳುತ್ತಿದೆ. ಗತವೈಭವದ ಸಂದಿ ಪಾಡ್ದನಗಳು ನೇಪಥ್ಯಕ್ಕೆ ಸರಿಯುತ್ತಿದೆ. ತುಳುವ ಆಚಾರ-ವಿಚಾರ, ಹಿರಿಮೆ-ಗರಿಮೆಗಳು ಸದ್ದಡಗಿಸಿ ಮೂಕವಾಗಿದೆಯೆನೋ ಎನ್ನುವಂತಹ ದಿನಗಳಲ್ಲಿಯೇ, ಸಂದಿ ಹೋದ ಕಾಲವನ್ನು ಮರುಕಳಿಸುವಂತೆ ಮಾಡಿ, ಸತ್ಯದ ಹೊಳಪ ಲೇಪನವನ್ನು ನೀಡುತ್ತಾ, ನಿತ್ಯ-ನಿರಂತರ ಗುಪ್ತಗಾಮಿನಿಯಾಗಿ ಹರಿಯುತ್ತಾ, ತನ್ನೊಂದಿಗೆ ತುಳುವ ಮಣ್ಣಿನ ಸತ್ವ-ಸಾರ, ಬಿರುವ ಸಮುದಾಯದ ಯುವಜನತೆಯ ಪ್ರತಿಭಾ ಕೌಶಲ್ಯವನ್ನು ಒಗ್ಗೂಡಿಸಿಕೊಂಡು, ಎಲ್ಲೋ ಮರೆಯಾಗಿ ಹೋಗುತ್ತಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿ, ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಸಾಧನಾಲೋಕಕ್ಕೆ ಪರಿಚಯಿಸಿಕೊಂಡು ಸಾಧನೆಯ ಮೇರುಶಿಖರದ ಅನಂತತೆಯ ಪಥದತ್ತ ಸಾಗಿಬರುತ್ತಿರುವ ಹೆಮ್ಮೆಯ ಸಂಘಟನೆ “ಯುವವಾಹಿನಿ”.
ಸಾಂಸ್ಕ್ರತಿಕ – ಸಂಸ್ಕ್ರತಿ , ಆಚರಣೆ-ಆಚಾರಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಾ ಸದ್ದಿಲ್ಲದೆ ಸತತ 30 ವರ್ಷಗಳಿಂದ ಸಮಾಜಹಿತ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ, ಶಿಸ್ತು, ಅಚ್ಚುಕಟ್ಟುತನ, ಸಮಯ ಪಾಲನೆಗೆ ಇನ್ನೊಂದು ಹೆಸರೇ ಯುವವಾಹಿನಿಯ ಯುವ ಸಂಘಟನೆ ಎನ್ನುವಷ್ಟರ ಮಟ್ಟಿಗೆ, ಯುವಜನತೆಯನ್ನು ಒಗ್ಗೂಡಿಸಿ ಅವರಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು, ಕಾರ್ಯದಕ್ಷತೆಯಿಂದ, ನೈಪುಣ್ಯತೆಯಿಂದ ಮುನ್ನುಗ್ಗುತ್ತಾ ತನ್ನದೇ ಆದಂತಹ ಇತಿಹಾಸವೊಂದನ್ನು ನಿರ್ಮಿಸ ಹೊರಟಿರುವುದು ನಿಜಕ್ಕೂ ಶ್ಲಾಘನೀಯ.
ತುಳುವ ಮಣ್ಣಿನ ಸತ್ವ-ಸಾರವನ್ನು ನಾಲ್ದೆಸೆಯಲ್ಲೂ ಪಸರಿಸುತ್ತಾ, ಯುವಸಂಘಟನೆಯ ಕಾರ್ಯಗಳಿಂದ ಜನಮನ್ನಣೆ ಪಡೆಯುತ್ತಾ ಬಂದಿರುವ ಯುವವಾಹಿನಿಯು ಬಿ.ಸಿ.ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ವಿನೂತನ ಶೈಲಿಯ “ಡೆನ್ನಾನ.. ಡೆನ್ನನ -2018” ಎಂಬ ಶೀರ್ಷಿಕೆಯಡಿಯಲ್ಲಿ ವಿಶಿಷ್ಟವಾದ ಅಂತರ್‍ಘಟಕ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸಿ ಎಲ್ಲಾ ಘಟಕಗಳ ಸದಸ್ಯರೊಳಗೆ ಹುದುಗಿರುವ ಕಲಾ ಕೌಶಲ್ಯವನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸಿಕೊಟ್ಟಿತು.
ವಿಶಿಷ್ಟವಾದ ಶೈಲಿಯಲ್ಲಿ ಸ್ವಾಗತಿಸುತ್ತಿದ್ದ ದ್ವಾರಗಳು, 28 ಘಟಕಗಳ ಹೆಸರನ್ನು ಹೊಂದಿದ್ದ ‘ಸತ್ತಿಗೆ’ ಎಂಬ ಪರಿಕಲ್ಪನೆಯಡಿಯಲ್ಲಿ ಮೂಡಿಬಂದಿದ್ದ ಆಕರ್ಷಕ ಕೊಡೆಗಳು, ಸಾಂಪ್ರಾದಾಯಿಕ ಶೈಲಿಯಲ್ಲಿ ಅತಿಥಿಗಳನ್ನು ಬರಮಾಡಿಕೊಂಡ ರೀತಿ, ಯುವವಾಹಿನಿಯ ಧ್ವಜದ ಆರೋಹಣದ ಮೂಲಕ ಕಾರ್ಯಕ್ರಮವು ಇನ್ನಷ್ಟು ಮೆರುಗನ್ನು ಪಡೆದವು. ಕಣ್ಣು ಹಾಯಿಸಿದಲ್ಲಿ ತುಳುವ ದೈವ, ಭೂತಾರಾಧನೆಯ ಅನಾವರಣ, ಸಂಸ್ಕ್ರತಿ ಜಾನಪದೀಯ ಸೊಗಡಿನ ತನನ ಕಲಾರಸಿಕರ ಮನವನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾದವು.
28 ಘಟಕಗಳ ನಡುವಿನ ಸಾಂಸ್ಕøತಿಕ ಸ್ಪರ್ಧೆಯಲ್ಲಿ, ತುಳುವ ನಾಡಿನ ಸ್ವರ್ಣ ಕೇದಗೆ ದೇಯಿ ಬೈದೆತಿಯಾದ ಕಥಾಹಂದರವನ್ನು ಕಲಾರಸಿಕರಿಗೆ ಉಣಬಡಿಸಿದ ಮೂಡುಬಿದಿರೆಯ ಯುವವಾಹಿನಿಯ ಘಟಕವು ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಯಿತು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದು ಎಂದರೆ ರಾಜೇಶ್ ಸುವರ್ಣ ಮತ್ತು ದಿನೇಶ್ ಸುವರ್ಣ ಇವರ ಪರಿಕಲ್ಪನೆಯಲ್ಲಿ, ಎಚ್.ಕೆ. ನೈನಾಡ್‍ರವರ ಸಾಹಿತ್ಯದಲ್ಲಿ, ಭಾಸ್ಕರ್‍ರಾವ್ ಬಿ.ಸಿ.ರೋಡ್ ಕಂಠಸಿರಿಯಲ್ಲಿ ಮೂಡಿಬಂದಂತಹ ‘ಯುವವಾಹಿನಿಯೇ…ಬಿರುವೆರೆ ಯುವ ಸಂಘಟನೆ” ಎಂಬ ಹಾಡು. ಕೇಳಿದಷ್ಟು ಕಿವಿಯಲ್ಲಿ ರಿಂಗಣಿಸುವ ಸದ್ದಿಲ್ಲದೆ ಮನದಲ್ಲಿ ಧ್ವನಿಸುವ ಹಾಡಾಗಿ ಕಲಾರಸಿಕರ ಮನತಣಿಸಿ, ‘ಡೆನ್ನಾನಾ-ಡೆನ್ನಾನಾ’ದ ಕಂಪನ್ನು ಜಾಗರೂಕತೆಯಿಂದ ನೆನಪಬುತ್ತಿಯಲ್ಲಿರಿಸುವಲ್ಲಿ ಸಫಲವಾಯಿತು.
ಕಳೆದ 10 ವರ್ಷಗಳಿಂದ ಯುವವಾಹಿನಿಯು ಕೊಡುತ್ತಾ ಬಂದಿರುವ ‘ವಿಶುಕುಮಾರ್ ಪ್ರಶಸ್ತಿ’ ಮತ್ತು ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಹಿತಿಗಳಿಗೆ ದಾರಿದೀಪವಾಗುತ್ತಿದೆ. ನಾನು 2016ರ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡವಳಾಗಿದ್ದು, ಯುವವಾಹಿನಿಯು ನನ್ನ ಸಾಹಿತ್ಯ- ಸಾಂಸ್ಕ್ರತಿಕ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ. ನನ್ನಂತೆಯೇ ಎಲ್ಲೋ ಸರಿದುಹೋಗಿರುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ನಿಜಕ್ಕೂ ಯುವವಾಹಿನಿಯು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಇನ್ನಷ್ಟು ಪ್ರತಿಭೆಗಳು ಕಲಾ ಲೋಕದ ಬೆಳಕ ಕಾಣುವಂತಾಗಬೇಕು. ಯುವಸಿಂಚನದ ಮೂಲಕ ಲೇಖನವನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ನಿರಂತರವಾಗಿ ನನ್ನ ಸಾಹಿತ್ಯಾಭಿರುಚಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ರಾಜೇಶ್ ಸುವರ್ಣ, ಬಿ. ತಮ್ಮಯ ಇವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಒಟ್ಟಾರೆಯಾಗಿ ಯುವವಾಹಿನಿಯ ಅರಿವು ನಿತ್ಯನಿರಂತರ ವಾಗಿರಲಿ. ಆ ಮೂಲಕ ಯುವಸಂಘಟನೆಗಳ ಸಾಲಿನಲ್ಲಿ ಯುವವಾಹಿನಿಯು ತನ್ನದೇ ಆದಂತಹ ವಿಭಿನ್ನತೆಗೆ ಮಾದರಿಯಾಗಲಿ.. ಸಮಾಜಮುಖಿ ಕಾರ್ಯಗಳಿಂದ ತನ್ನದೇ ಆದಂತಹ ಇತಿಹಾಸವನ್ನು ಸೃಷ್ಟಿಸಲಿ ಎಂಬುದೇ ನನ್ನ ಆಶಯ.