ಬಂಟ್ವಾಳ : ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ ನಮ್ಮ ದೃಷ್ಟಿ ಗುರಿಯ ಸಾಧನೆಯ ಕಡೆಗೆ ಇರಬೇಕು. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರುಗಳು ರೂಪುಗೊಳ್ಳುತ್ತಾರೆ. ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆ ಯಾಗುತ್ತೆ ಎಂಬ ನಂಬಿಕೆ ಅವರಲ್ಲಿತ್ತು. ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದು ಅವರು ಕರೆನೀಡಿದರು. ನಾರಾಯಣ ಗುರು ಓರ್ವ ದಾರ್ಶನಿಕ. ವಿದ್ಯೆಯು ಸತ್ಯ, ನ್ಯಾಯದ ಹುಡುಕಾಟ. ಮಾತ್ರವಲ್ಲ ವೈಜ್ಞಾನಿಕ, ವೈಚಾರಿಕ ಚಿಂತನೆಗಳಿಂದ ವ್ಯಕ್ತಿಯು ಬೌದ್ಧಿಕ ದಾಸ್ಯದಿಂದ ಬಿಡುಗಡೆ ಯಾಗಬೇಕು ಎಂದು ನಾರಾಯಣ ಗುರು ಚಳವಳಿಗಳನ್ನು ರೂಪಿಸಿದರು. ಇಂದಿನ ಹೊಸ ತಲೆಮಾರು ಅನುಕೂಲ ಮತ್ತು ಅನಾನುಕೂಲ ಎರಡರ ಮಧ್ಯೆ ಬದುಕುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಜೀವನ ರೂಪಿಸುವ ಸ್ಥಿತಿ ಇಂದು ಇಲ್ಲ. ಲಾಭದಾಯಕ ಹುದ್ದೆಯನ್ನು ಪಡೆಯುವ ಕಡೆಗೆ ನಡೆಯುತ್ತಿದ್ದಾರೆ. ಆಸಕ್ತಿಗೆ ಅನುಸಾರವಾಗಿ ಬದುಕುವ ವೇದಿಕೆಯನ್ನು ಮನುಷ್ಯ ಸೃಷ್ಟಿಸಿಕೊಳ್ಳಬೇಕಾಗಿದೆ. ಸಾಹಿತ್ಯ, ಸಮಾಜ ವಿಜ್ಞಾನ ಇವುಗಳ ಓದು ವರ್ತಮಾನದಲ್ಲಿ ಅಗತ್ಯವಾದುದು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ ಪಟ್ಟರು.
ಅವರು ಬಂಟ್ವಾಳದ ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ತರಬೇತಿಯ ರಾಷ್ಟ್ರೀಯ ಕಾರ್ಯಾಗಾರ ಅನ್ವೇಷಣಾ -2017ರಲ್ಲಿ “ನಾರಾಯಣ ಗುರು ಚಿಂತನೆ ಮತ್ತು ಸಂಘಟನೆ” ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಚಳವಳಿಗೆ ಮೂರು ಘಟಕಗಳಿರುತ್ತವೆ. ಮುಖ್ಯವಾಗಿ ಸಿದ್ಧಾಂತ, ಕಾರ್ಯಕ್ರಮಗಳು ಮತ್ತು ಹೋರಾಟ.ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ಹೋರಾಟವೂ ವ್ಯರ್ಥ. ಈ ದೃಷ್ಟಿಯಿಂದ ನಾರಾಯಣ ಗುರು ಚಳವಳಿ ಅರ್ಥಪೂರ್ಣ ಹೋರಾಟ. ಮೂಢನಂಬಿಕೆ, ಕಂದಾಚಾರ, ಜಾತೀಯತೆಯಿಂದ ತೊಳಲಾಡುತ್ತಿದ್ದ ಸಮಾಜವನ್ನು ಹೋರಾಟದ ಮೂಲಕ ಹೊಸಬೆಳಕನ್ನು ತೋರಿಸಿದವರು ನಾರಾಯಣ ಗುರು.
ನಾರಾಯಣ ಗುರುಗಳದ್ದು ಏಕವ್ಯಕ್ತಿ ಚಳವಳಿ ಯಲ್ಲ. ನಾರಾಯಣ ಗುರುಗಳ ಜೊತೆಗೆ ಡಾ.ಪಲ್ಪು, ಮತ್ತು ಕವಿ ಕುಮಾರನ್ ಆಶನ್ ಇದ್ದರು. ಈ ಮೂವರು ಯುವಕರು ರೂಪಿಸಿದ ಚಳವಳಿ ನಾರಾಯಣ ಗುರು ಚಳವಳಿಯಾಗಿತ್ತು. ಹಾಗಾಗಿಯೇ ಇದು ಯುವಜನರ ಚಳವಳಿಯಾಗಿ ರೂಪುಗೊಂಡಿತ್ತು. ನಾರಾಯಣ ಗುರುಗಳದ್ದು ಸಂಘರ್ಷದ ಹಾದಿಯ ಹೋರಾಟವಲ್ಲ, ಅದು ಸೌಹಾರ್ದ ದ ದಾರಿಯಾಗಿತ್ತು. ಸಾಮಾಜಿಕ ಚಳವಳಿಯ ಜೊತೆಗೆ ಗ್ರಂಥಾಲಯ, ಕೈಗಾರಿಕೆ ಮುಂತಾದ ಬದಲಾವಣೆ ಯನ್ನೂ ಮಾಡುತ್ತಾರೆ. ಸರಳ ಬದುಕು; ಸರಳ ವಿವಾಹ ಹೀಗೆ ಸರಳತೆಯನ್ನೇ ಮೌಲ್ಯ ವನ್ನಾಗಿಸಿದ ನಾರಾಯಣ ಗುರುಗಳು ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಬದುಕನ್ನು ಕಲಿಸುತ್ತಾರೆ. ವರ್ತಮಾನದಲ್ಲಿ ಕಾಡುತ್ತಿರುವ ನಿರುದ್ಯೋಗ, ಮೂಢನಂಬಿಕೆ ಮತ್ತು ದುಶ್ಚಟ ಇವೇ ಮೊದಲಾದ ಸಮಸ್ಯೆಗಳಿಗೆ ನಾರಾಯಣ ಗುರು ಚಿಂತನೆಯಲ್ಲಿ ಪರಿಹಾರವಿದೆ ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಜೇಸಿ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್, ವೃತ್ತಿ ಮಾರ್ಗದರ್ಶನ ಬಗ್ಗೆ ತರಬೇತುದಾರರಾದ ಅಭಿಜಿತ್ ಕರ್ಕೇರಾ, ಉದ್ಯೋಗಾವಕಾಶಗಳು ಹಾಗೂ ಪೂರ್ವ ಸಿದ್ದತೆಯ ಬಗ್ಗೆ ಸರ್ವಜ್ಞ IAS ಅಕಾಡೆಮಿಯ ಸುರೇಶ್ ಎಮ್ ಎಸ್, ಬ್ಯಾಂಕಿಂಗ್ ಅವಕಾಶಗಳ ಬಗ್ಗೆ ಬಂಟ್ವಾಳ ವಿಜಯಾ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್ ತರಬೇತಿ ನೀಡಿದರು.ಜಿಲ್ಲೆಯ ವಿವಿಧ ಕಾಲೇಜುಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವುದು ಕಾರ್ಯಾಗಾರದ ವೈಶಿಷ್ಟ್ಯವಾಗಿತ್ತು
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, LCR ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ರೋಹಿನಾಥ್ ಪಾದೆ, ಬಂಟ್ವಾಳ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಾಸು ಪೂಜಾರಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಲೋಕೇಶ್ ಸುವರ್ಣ, ಉಪಾಧ್ಯಕ್ಷರಾದ ಗಣೇಶ್ ಪೂಂಜರೆಕೋಡಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ. ಕಾರ್ಯದರ್ಶಿ ದಿನೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕಿರಣ್ ರಾಜ್ ವಂದಿಸಿದರು. ಅನ್ವೇಷಣಾ ಕಾರ್ಯಾಗಾರದ ಸಂಯೋಜಕ ಚೇತನ್ ಎಂ., ಕಾರ್ಯಕ್ರಮ ನಿರ್ವಹಿಸಿದರು.