ವೃದ್ಧಾಪ್ಯ ಅಥವಾ ಮುದಿತನ ಎನ್ನುವುದು ಒಂದು ಪ್ರಾಯ ಸಹಜ ಸ್ಥಿತಿ. ಮೂವತ್ತರಾಚೆ ಮುಪ್ಪು’ ಎನ್ನುವ ಮಾತೊಂದಿದೆ. ಆದರೆ ಅದನ್ನು ತಕ್ಷಣ ಒಪ್ಪಿಕೊಳ್ಳದಿರುವುದೇ ಕ್ಷೇಮ. ಮುಪ್ಪು ಎನ್ನುವುದು ಒಂದು ಮನಸ್ಥಿತಿ. ಹಾಗಾಗಿ ಮೂವತ್ತಕ್ಕೇ ಮುಪ್ಪು ಎಂದುಕೊಂಡರೆ ಅದು ಆಗಲೇ ಹತ್ತಿರವಾಗಬಹುದು. ಮನಸ್ಸಿನಲ್ಲಿ ಸದುದ್ದೇಶವಿದ್ದು ಸನ್ಮಾರ್ಗದಲ್ಲಿ ಸದಾ ಪ್ರಯತ್ನಶೀಲರಾದರೆ ಮುಪ್ಪನ್ನು ಮುಂದೂಡ ಬಹುದೆನ್ನುವ ಅಭಿಪ್ರಾಯವೂ ಇದೆ. ಆದರೂ ನಮ್ಮ ದೇಹವೆನ್ನುವ ರಕ್ತ ಮೂಳೆ ಮಾಂಸಯುಕ್ತ ಜಟಿಲಾತಿಜಟಿಲ ಯಂತ್ರ ದಿನದಿನವೂ ಸವೆಯುತ್ತಾ ದುರ್ಬಲಗೊಳ್ಳುತ್ತಾ ಮುಪ್ಪಿನೆಡೆಗೆ ನಿಧಾನವಾಗಿಯಾದರೂ ಸಾಗುತ್ತಲೇ ಇರುತ್ತದೆ. ದೀರ್ಘಾಯುಷ್ಯದ ಯೋಗವಂತರಿಗೆ ಈ ಸ್ಥಿತಿಯ ಇತಿಮಿತಿಗಳ ಅನುಭವವಾಗುತ್ತದೆ. ಅನುಭವಕ್ಕಷ್ಟೇ ವೇದ್ಯವಾಗುವ ಸ್ಥಿತಿಗಳಲ್ಲಿ ಇದೂ ಒಂದು. ಹಣ್ಣೆಲೆಯನ್ನು ಕಂಡು ಚಿಗುರೆಲೆ ಅಪಹಾಸ್ಯ ಮಾಡುತ್ತದಂತೆ. ಅದರ ಪಾಡು ಚಿಗುರೆಲೆಗೆ ತಿಳಿಯುವುದು ಅದು ಹಣ್ಣೆಲೆಯಾದಾಗಲೇ!
ಮುದಿತನದ ಮುಂದುವರಿಕೆಯ ಸ್ಥಿತಿಯಲ್ಲಿ ಅಸಹಾಯಕತೆಯ ಸವಾಲುಗಳೇ ಹೆಚ್ಚು. ಈ ಸವಾಲುಗಳಿಗೂ ಕೌಟುಂಬಿಕ, ಮಾನಸಿಕ, ಭಾವನಾತ್ಮಕ, ಆರ್ಥಿಕ, ವೈದ್ಯಕೀಯ ನೆಲೆಯ ಹಲವು ಆಯಾಮ ಗಳಿರುತ್ತವೆ. ಆಧುನಿಕ ಕಾಲದಲ್ಲಿ ಸರಾಸರಿ ಆಯುಷ್ಯ ಹೆಚ್ಚಿದೆ ಎನ್ನುತ್ತಾರೆ. ಆದರೆ ಆಧುನಿಕತೆಯ ಉದ್ವೇಗದ ಬದುಕಿನಲ್ಲಿ ಈ ಪ್ರಕ್ರೀಯೆ ಚುರುಕಾಗುವುದೂ ನಿಜವೆ. ಕೂದಲು ನರೆತಾಗಲೇ ಕಾಡುವ ಹೆದರಿಕೆ ಇದರ ವೇಗಕ್ಕೆ ಪೂರಕವಾಗುತ್ತದೆ. ಬದುಕು ಒಂದು ಆಹ್ವಾನ. ಅದನ್ನು ಇನ್ನಷ್ಟು ಅನುಭವಿಸುವ ಆಸೆ ಎಲ್ಲರಿಗೂ ಸಹಜವೇ. ಈ ದಿನಗಳಲ್ಲಿ ಅಂಗಾಂಗ ದುರ್ಬಲತೆಗಳನ್ನು ಬಹುಬಗೆಯ ಔಷಧಗಳಿಂದ ನಿಭಾಯಿಸಿಕೊಳ್ಳುತ್ತಾ ಬದುಕುತ್ತಿರುವ ವೃದ್ಧರ ಸಂಖ್ಯೆ ಹೆಚ್ಚುತ್ತಲೇ ಇದೆ.
ವಯಸ್ಸು ಹೆಚ್ಚಿದಂತೆ ದೇಹ ಎಂಬ ಯಂತ್ರ ನಿಧಾನಕ್ಕೆ ಸವೆಯುವುದು, ಒಳಗಿನ ದ್ರವಗಳ ಸ್ರವಿಸುವಿಕೆ ಸೊರಗುವುದು, ಪಂಚೇಂದ್ರಿಯಗಳ ಲವಲವಿಕೆ ಇಳಿಮುಖವಾಗುವುದು, ಬುದ್ಧಿ ತೀಕ್ಷ್ಣತೆ ಕಡಿಮೆಯಾಗುವುದು, ಜವಾಬ್ದಾರಿ ಬೇಕಿಲ್ಲದ ನಿರಾಳತೆಯನ್ನು ಬಯಸುವುದು, ಮಗುವಿನಂತಹ ಮುಗ್ಧತೆ ಆವರಿಸಿಕೊಳ್ಳುವುದು.. ಇಂಥವುಗಳೆಲ್ಲ ಸಹಜವೆ! ಇದರೊಂದಿಗೆ ಕುಟುಂಬಿಕರ ಅಸಡ್ಡೆಗಳಿಂದ ಪ್ರಚೋದಿತವಾಗುವ ಸಿಟ್ಟು ಸೆಡಕುಗಳಂತಹ ಉದ್ವೇಗಗಳೂ ಸೇರಿಕೊಂಡರೆ ಅಂಥವರ ಬದುಕು ಅವರಿಗೂ, ಪರಿವಾರಕ್ಕೂ ಸಮಸ್ಯೆಯಾಗುವುದೇ ಹೆಚ್ಚು. ಮರೆವು, ಪಾರ್ಶ್ವವಾಯು… ಇಂತಹ ರೋಗಗಳಂತೂ ಮುದಿತನಕ್ಕೆ ಬಹುದೊಡ್ಡ ಸಮಸ್ಯೆಯೆ.
ಸರಿಯಾಗಿ ವಿವೇಚಿಸಿದರೆ ಹಿರಿಯರು ಸಮಾಜದ ಆಸ್ತಿ. ತಮ್ಮ ಬದುಕಿನ ಅನುಭವದ ಆಧಾರದಲ್ಲಿ ಕಿರಿಯರ ನಡೆಯನ್ನು ತಿದ್ದಬಲ್ಲಂತಹ ಆಪ್ತರು. ಹಿಂದಿನ ಕೂಡುಕುಟುಂಬಗಳಲ್ಲಿ ವಯೋವೃದ್ಧರ ಸ್ಥಾನಮಾನಗಳು ಚೆನ್ನಾಗಿಯೇ ಇದ್ದವು. ಮನೆಮಕ್ಕಳ ಲಾಲನೆಪಾಲನೆ, ಮೇಲ್ವಿಚಾರಣೆ, ಮಾರ್ಗದರ್ಶನಗಳಲ್ಲಿ ಹಿರಿಯರೂ ಮುಖ್ಯರಾಗುತ್ತಿದ್ದರು. ಅವರೂ ಕುಟುಂಬದ ಒಟ್ಟು ಹಿತಕ್ಕೆ ತಮ್ಮಿಂದಾದ ಸಲಹೆ ಸಹಕಾರಗಳನ್ನೀಯುತ್ತಾ ಮನೆಮಂದಿಗೆ ಒಂದಲ ಒಂದು ಬಗೆಯಲ್ಲಿ ಬೇಕೆನಿಸುತಿದ್ದರು. ಹೀಗೆ ತಾವು ಕುಟುಂಬದ ಅವಿಭಾಜ್ಯ ಅಂಗವೆಂಬ ಎಣಿಕೆಯಲ್ಲಿ ಕೊನೆಯವರೆಗೂ ಆರೋಗ್ಯವಂತರಾಗಿ, ಕ್ರಿಯಾಶೀಲರಾಗಿ ಉಳಿಯುವ ಸಾಧ್ಯತೆ ಇತ್ತು. ಯಾರಲ್ಲೂ ದ್ವೇಷವಿಲ್ಲದೆ, ನಕ್ಕುನಗುವ ಅವಕಾಶಕ್ಕಾಗಿ ಹಾತೊರೆಯುವ ಅಜ್ಜಅಜ್ಜಿಯರಿಂದ ಕತೆ ಕೇಳಿ ಹಿಗ್ಗುವ ಅವಕಾಶವನ್ನು ಮೊಮ್ಮಕ್ಕಳು, ಮರಿಮಕ್ಕಳು ಆಶಿಸುವ ಕಾಲವೊಂದಿತ್ತು. ಹಿರಿಯರ ಹೆಗಲೇರುವುದನ್ನು, ಕೈಹಿಡಿದು ನಡೆದಾಡುವುದನ್ನು ಕಿರಿಯರು ಇಷ್ಟ ಪಡುವ ಕಾಲವೂ ಇತ್ತು. ಕಾಲಗತಿಯಲ್ಲಿ ಇವೆಲ್ಲ ಹಳೆಯ ಕಾಲದ ಭಾವಭಾಗಗಳೆನ್ನಿಸಿವೆ. ಕೂಡುಕುಟುಂಬಗಳಲ್ಲಿ ಮುಪ್ಪು ಪೀಡಿತರ ಸೇವೆ, ಸುಶ್ರೂಷೆಗಳೆಲ್ಲ ಮನೆಮಂದಿಯ ಪಾಲುದಾರಿಕೆಯಲ್ಲಿ ಲಗುವೆನಿಸುತಿತ್ತು.
ವೃದ್ಧರು ಕಂಗಾಲುಗೊಳ್ಳುವ ಪರಿಸ್ಥಿತಿ ನಿರ್ಮಾಣವಾದುದು ಇತ್ತೀಚೆಗಿನ ದಿನಗಳಲ್ಲಿ. ಮುಖ್ಯ ಕಾರಣ ವಿಭಕ್ತವಾದ ಕುಟುಂಬಗಳು.. ಅದರಲ್ಲೂ ಅಪ್ಪ – ಅಮ್ಮ – ಮಕ್ಕಳು’ ಎನ್ನುವ ಸಂಕುಚಿತ ಕುಟುಂಬ ವ್ಯವಸ್ಥೆ ತೀವ್ರಗತಿ ಪಡೆದಾಗ ವೃದ್ಧರ ಸ್ಥಾನ ಮಾನದ ಸ್ಥಿತಿ ಚಿಂತಾತ್ಮಕವೇ! ವಿದ್ಯೆ ಮತ್ತು ಉದ್ಯೋಗಾವಕಾಶಗಳಿಂದ ನಗರಗಳಲ್ಲಿ ಜನಸಂಖ್ಯಾ ಸ್ಫೋಟವಾಗುತಿದ್ದು ಎಲ್ಲ ಸೌಲಭ್ಯಗಳ ನಡುವೆಯೂ ನಗರಗಳು ರೂಕ್ಷವೆನಿಸುತ್ತಿವೆ. ಬರಬರುತ್ತಾ ಹಳ್ಳಿಗಳೂ ನಗರ ಮಾದರಿಗೆ ಜೋತುಕೊಳ್ಳುತ್ತಿವೆ. ಕಿರುಕುಟುಂಬಗಳೇ ಹೆಚ್ಚುತ್ತಿವೆ. ಕೃಷಿಯನ್ನೇ ನೆಚ್ಚಿದ ಕುಟುಂಬಗಳು ಪರಂಪರಾಗತ ಕೃಷಿಯಿಂದ ದೂರ ಸರಿಯುತ್ತಿವೆ. ಹಿರಿಯರ ಮಾರ್ಗದರ್ಶನದ ಮಾತುಗಳು ಅಪ್ರಸ್ತುತವೆನಿಸುತ್ತಿವೆ. ಹಿರಿಯರ ಅಲೋಚನೆಗಳೂ ಹಳಸಲು ಎನಿಸುತ್ತಿವೆ. ಹಿರಿಯರ ಹಿತನುಡಿಗಳನ್ನು ಆಲಿಸಲು, ಅನುಸರಿಸಲು ಸಮಯವೂ ಇಲ್ಲ. ಶ್ರದ್ಧೆಯೂ ಇಲ್ಲ. ಬದುಕುವ ಅತ್ಯಾಧುನಿಕ ಶೈಲಿಗದು ಒಗ್ಗುವುದೂ ಇಲ್ಲ. ಹಳ್ಳಿಗಳಲ್ಲೂ ಸಂಪರ್ಕ ಜಾಲಗಳು, ದೂರದರ್ಶನದ ಬಹುಬಗೆಯ ಮನೋರಂಜನೆಗಳು ಲಭ್ಯವಿರುವಾಗ ಪುಟ್ಟ ಮಕ್ಕಳಿಗಾದರೂ ಹಿರಿಯರ ಹಾಡು, ಕತೆಗಳ ಅನಿವಾರ್ಯತೆಯಿಲ್ಲ.
ನಗರಗಳಂತೂ ಯಂತ್ರತಂತ್ರ ನವೀನತೆಯಿಂದ ವೃದ್ಧರನ್ನು ದೂರ ಇಡುವುದಕ್ಕೇ ಯೋಗ್ಯವಾಗುತ್ತಿವೆ. ಹಣವಂತ ವೃದ್ಧರನ್ನೂ ತಬ್ಬಿಬ್ಬುಗೊಳಿಸುವಷ್ಟು ಸಂಕೀರ್ಣಗೊಳ್ಳುತ್ತಿವೆ. ಬಹುಬಗೆಯ ಕಾಯಿಲೆಗಳು, ರೋಗ ಶೋಧ ಪರೀಕ್ಷೆಗಳು, ಹತ್ತಾರು ಬಗೆಯ ಔಷಧಗಳು, ಆಸ್ಪತ್ರೆಯಲ್ಲಿ ದಾಖಲು, ತೀವ್ರನಿಗಾ ಕೊಠಡಿಗಳಲ್ಲಿ ವಿಶೇಷ ಚಿಕಿತ್ಸೆ ಇತ್ಯಾದಿಗಳೆಡೆಯಲ್ಲಿ ನಲುಗುತ್ತಾ ಬದುಕುವ ಪಾಡು. ಕಿರುಕುಟುಂಬಗಳಲ್ಲಿ ಗಂಡ ಹೆಂಡತಿ ಉದ್ಯೋಗವಂತರಾದರೆ, ವಿದೇಶವಾಸಿಗಳಾಗಲು ಆಸಕ್ತರಾದರೆ, ವೃತ್ತಿಪರ ಭಡ್ತಿಯ ತುಡಿತದವರಾದರೆ, ವ್ಯಕ್ತಿ ಸ್ವಾತಂತ್ರ್ಯ ಮೌಲ್ಯಕ್ಕೆ ಅಂಟಿಕೊಂಡವರಾದರೆ, ದುರ್ಬಲ ತಂದೆತಾಯಂದಿರ ಪಾಲನೆ ಹೊರಲಾಗದ ಹೊರೆಯೆನಿಸುತ್ತದೆ. ಅದಕ್ಕಾಗಿಆಧುನಿಕ ಪರಿಹಾರಕ್ರಮವಾಗಿ ವೃದ್ಧಾಶ್ರಮಗಳನ್ನು ನೆಚ್ಚಿಕೊಳ್ಳುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಹಿರಿಯರೇ ಇರುವ ಶ್ರೀಮಂತರ ಮನೆಗಳು ದರೋಡೆ, ಕೊಲೆದಂಧೆಗಳ ತಾಣವಾಗುತ್ತಿರುವ ಸುದ್ದಿಗಳಿಂದ ವೃದ್ಧಾಶ್ರಮದತ್ತಣ ಶ್ರೀಮಂತ ವೃದ್ಧರ ಸರದಿ ಬೆಳೆಯುತ್ತಿದೆ. ಈ ಆಶ್ರಮಗಳು ಅದ್ವೇಷ್ಟಾ ಸರ್ವಭೂತಾನಾಂ’ ಎಂಬಂತೆ ವೃದ್ಧರ ಕಾಳಜಿಯಿಂದ ಕಾರ್ಯ ನಿರ್ವಹಿಸಿದರೆ ವೃದ್ಧರು ಅಲ್ಲೂ ನೆಮ್ಮದಿಯಲ್ಲಿರಬಹುದು. ವೃದ್ಧರಿಗಿರುವ ಆಸೆಯಾದರೂ ಸೀಮಿತವೆ. ಅಸಹ್ಯ ಪಡದೆ ಪ್ರೀತಿಸುವ ಸಹಚಾರಿಗಳು.. ನೋವಿಲ್ಲದ ಸಾವು ಅಷ್ಟೆ ತಾನೆ?
ಆದರೂ ಮಾನವೀಯತೆಯತ್ತಚಿಂತನೆ ಹರಿಸಿದರೆ ವೃದ್ಧರ ಹೊಣೆ ಹೊರುವುದು ಮಾನವೀಯಗುಣವೇ. ಹಣ್ಣೆಲೆಗೂಅದರದೇ ಸ್ಥಾನಮಾನ ಇರಬೇಕು. ಮನೆಮಂದಿ ಈ ಬಗ್ಗೆ ಎಳೆಯರಿಗೆ ಮಾದರಿಯಾಗಬೇಕು. ಇಲ್ಲವಾದರೆ ಅಜ್ಜನನ್ನು ಮುಪ್ಪಿನಲ್ಲಿ ಕಾಡಿಗಟ್ಟಿದ ಅಪ್ಪನನ್ನು ಕಾಡಿಗಟ್ಟುವ ದೂರಾಲೋಚನೆಯನ್ನು ಮಗ ಮಾಡಿಕೊಳ್ಳುವುದು ನಿಶ್ಚಯ.