ಪರಿವರ್ತನೆ ಜಗದ ನಿಯಮ ಎಂದು ಶ್ರೀಕೃಷ್ಣ ಗೀತೆಯಲ್ಲ್ಲಿ ಸಾರಿದ ಮಾತು ಪ್ರಸಕ್ತ ದಿನದಲ್ಲೂ ಉಲ್ಲೇಖನೀಯ. ಒಂದು ಯುಗವಿತ್ತು ಅಲ್ಲಿ ದೇವತೆಗಳಿಗೊಂದು ಲೋಕ, ರಾಕ್ಷಸರಿಗೊಂದು ಲೋಕವಿತ್ತು. ಅದೇ ಸ್ವರ್ಗ ಮತ್ತು ನರಕ. ಬಳಿಕ ಯುಗ ಪರಿವರ್ತನೆಯಾಯಿತು. ಇಲ್ಲ್ಲಿ ದೇವಮಾನವರೂ ರಾಕ್ಷಸರು ಒಂದೇ ಲೋಕದಲ್ಲಿದ್ದರು. ಆದರೆ ದೂರದೂರವಿದ್ದರು. ಅದೇ ರಾಮ ಮತ್ತು ರಾವಣರಿದ್ದಂತೆ. ಬಳಿಕ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವಮಾನವ ರಾಕ್ಷಸ ಒಂದೇ ಕುಟುಂಬಕ್ಕೆ ಬಂದರು. ಅಂದರೆ ಶ್ರೀಕೃಷ್ಣ-ಕಂಸ ಇದ್ದಂತೆ. ಇದೀಗ ಮತ್ತೊಂದು ಯುಗ ಪರಿವರ್ತನೆಯಾಯಿತು. ಇಲ್ಲಿ ದೇವ ಮತ್ತು ರಾಕ್ಷಸ ಒಬ್ಬರೊಳಗೆ ಒಬ್ಬರು ಎನ್ನುವಂತಾಗಿದೆ. ಅಂದರೆ ಒಂದೇ ಮಾನವನೊಳಗೆ ಎರಡು ಮುಖಗಳಿವೆ. ಇಲ್ಲಿ ಎರಡೂ ಒಬ್ಬರಲ್ಲಿಯೇ ಇದ್ದರೂ ನಾವು ಪ್ರತಿಬಿಂಬಿಸುವುದು ನಮ್ಮ ವ್ಯಕ್ತಿತ್ವ ಆಧರಿಸಿದ ಮುಖವನ್ನು. ಹೀಗಾಗಿ ಒಂದೇ ವಿಚಾರ ಎರಡು ಅಭಿಪ್ರಾಯಗಳನ್ನು ಉಂಟುಮಾಡುತ್ತದೆ. ಹಾಗಾಗಿಯೇ ಸಾಕಷ್ಟು ವಿಚಾರಗಳು ಇಂದಿಗೂ ಜಿಜ್ಞಾಸೆಯನ್ನು ಸೃಷ್ಠಿಸುತ್ತಲೇ ಇದೆ. ಅದರಲ್ಲಿ ಬಹಳ ಮುಖ್ಯವಾದುದು ಯುವತಿಯರ ವಸ್ತ್ರ.
ಕಾಲ ಬದಲಾಗಿದೆ ಸ್ವಾಮಿ, ಯುವಜನತೆ ಪಾಶ್ಚಾತ್ಯ ವ್ಯಾಮೋಹಕ್ಕೆ ಮೊರೆ ಹೋಗಿ ಸಂಸ್ಕೃತಿ ಹಾಳಾಗಿದೆ. ಜೀನ್ಸ್, ಫ್ರಾಕ್, ಸ್ಕರ್ಟ್ ತೊಟ್ಟು ಒಡಾಡುತ್ತಿರುವ ವಿದ್ಯಾರ್ಥಿಗಳಿಂದ ಅಥವಾ ಹುಡುಗಿಯರಿಂದ ಸಂಸ್ಕೃತಿಗೆ ಧಕ್ಕೆ. ಯಾವುದೋ ಒಂದು ಕಾರ್ಯಕ್ರಮದಲ್ಲಿ ಒಂದು ಸಂಪನ್ಮೂಲ ವ್ಯಕ್ತಿಯಿಂದ ಹೀಗೆ ಮಾತುಗಳು ಭಾಷಣದ ಮೂಲಕ ಬರುತ್ತಲೇ ಇತ್ತು. ಹುಚ್ಚು ಹಿಡಿಸುವಷ್ಟು ಮನಸ್ಸು ಅಲ್ಲೋಲ ಕಲ್ಲೋಲ. ಅಯ್ಯೋ ಹೀಗೂ ಇದೀಯಾ? ಭಯವಾಗತೊಡಗಿತು.ಅಲ್ಲಿಂದ ಎದ್ದು ಹೊರ ಬಂದೆ. ಕಿವಿಯಲ್ಲಿ ಅದೇ ಆ ಭಾಷಣದ ಮಾತುಗಳು ಗುಯ್‌ಗುಡತೊಡಗಿತು. ನಾವು ಬದಲಾಗಿದ್ದೇವಾ? ಎಲ್ಲಿ? ಹೇಗೆ? ಏಕೆ? ಹೌದು ಬದಲಾವಣೆ ಮನುಜಧರ್ಮ. ಆದರೆ ಬದಲಾವಣೆಯ ಪರಿಕಲ್ಪನೆಗೆ ಈ ಭಾಷಣದ ಮಾತು ಸಮಂಜಸವೇ? ಸೀರೆ ಉಡುತ್ತಿದ್ದ ಸಂಸ್ಕೃತಿ ನಮ್ಮದು ಈಗ ಜೀನ್ಸ್ ತೊಟ್ಟು ಹುಡುಗಿಯರು ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಅನ್ನೋ ಮಾತು ಅದೆಷ್ಟು ಸಮಂಜಸ. ಈ ವೈವಿದ್ಯಮಯವಾದ ವಸ್ತ್ರಗಳಿಂದ ಸಂಸ್ಕೃತಿ ಹಾಳಾಗಿದೆ ಅಂದರೆ ಒಪ್ಪಲು ಸಾಧ್ಯವೇ?
ನಮ್ಮ ಸಂಸ್ಕೃತಿಯ ಗಟ್ಟಿತನ ಇಷ್ಟೇನಾ? ಪೂಜ್ಯನೀಯ ಎಂದೆನಿಸಿದ ನಮ್ಮ ಸಂಸ್ಕೃತಿ ಬೆರಳೆಣಿಕೆಯ, ವಿದ್ಯೆಗಾಗಿ ವಲಸೆ ಬಂದ ಪರದೇಶದ ವಿದ್ಯಾರ್ಥಿಗಳಿಂದ ಬದಲಿಸಲು ಸಾಧ್ಯವೇ? ಇಂತಹ ಭಾಷಣಗಳು ಕೆಲವೊಂದು ಕೆಟ್ಟ ಪರಿಣಾಮ ಬೀರದಿರುವುದೇ? ಕೇವಲ ವಸ್ತ್ರದಿಂದ ನಮ್ಮ ಸಂಸ್ಕೃತಿಯನ್ನು ಅಳೆಯುವಂತಿದ್ದರೆ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ಓಟ, ಕಬಡ್ಡಿ, ಭಾರ ಎತ್ತುವಿಕೆ ಕ್ರೀಡಾಳುಗಳಿಗೂ ಇದೂ ಅನ್ವಯಿಸುವುದೇ? ಒಂದೊಮ್ಮೆ ಯೋಚಿಸಬೇಕಾದುದೆ? ಕೆಲವೊಂದು ಸಾಂಪ್ರದಾಯಿಕ ಕೆಲಸ ಕಾರ್ಯಗಳಿಗೆ ಅದಕ್ಕನುಗುಣವಾಗಿ ವಸ್ತ್ರ ಸೂಕ್ತವೇ ಸರಿ. ಅಂದ ಮಾತ್ರಕ್ಕೆ ಇಂದು ಚಾಲ್ತಿಯಲ್ಲಿರುವ ಜೀನ್ಸ್, ಸಂಸ್ಕೃತಿಯನ್ನು ಕೆಡಿಸುತ್ತದೆ ಅನ್ನೋದು ಸುಳ್ಳು.
ನಮ್ಮ ದೇಹವನ್ನು ಮುಚ್ಚುವಂತಹ ಯಾವುದೇ ಬಟ್ಟೆ ಧರಿಸುವುದರಲ್ಲಿ ತಪ್ಪಿಲ್ಲ ಅನ್ನಬಹುದಲ್ವೆ? ಇಂದಿನ ಯಾಂತ್ರಿಕ ಬದುಕಿನಲ್ಲಿ, ಪರೀಕ್ಷಾತ್ಮಕ ಹುದ್ದೆಗಳಿಗೆ ಕೆಲವೊಂದು ಡ್ರೆಸ್ ಕೋಡ್‌ಗಳು ಸೂಕ್ತವೇ ಸರಿ. ಉದಾಹರಣೆಗೆ ಕೆಲವೊಂದು ಪೆಟ್ರೋಕೆಮಿಕಲ್ಸ್ ಉದ್ದಿಮೆಗಳಲ್ಲಿ ನೌಕರರು ಜೀನ್ಸ್ ಪ್ಯಾಂಟ್ ಹಾಗೂ ಕಾಟನ್ ಟಾಪ್ ಧರಿಸಿದರೆ ರಕ್ಷಣೆಗೆ ಸೂಕ್ತ. ಇಂತಹ ಕ್ಷೇತ್ರಗಳಲ್ಲಿ ಸೀರೆ ನಿಶಿದ್ಧ. ಇದನ್ನು ಸಂಸ್ಕೃತಿಗೆ ಮಾರಕ ಅಂದರೆ ಎಷ್ಟು ಸರಿ?
ಹೌದು ಸ್ನೇಹಿತರೇ, ಮಾಡುವ ಕಾರ್ಯದಲ್ಲಿ ನೋಡುವ ನೋಟವೂ ಅಷ್ಟೇ ಮುಖ್ಯವಾಗಿರುತ್ತದೆ. ಸಂಸ್ಕೃತಿಗೆ ಮಾರಕವಾಗದಂತೆ ದೇಹ ಮುಚ್ಚುವ ವಸ್ತ್ರಕ್ಕೆ ಸೈ ಅನ್ನೋಣ.
ಅಶ್ಲೀಲವೆಂದು ಕಂಡು ಬಂದಲ್ಲಿ ನೇರವಾಗಿ ಖಂಡಿಸೋಣ. ನಮ್ಮ ಸಂಸ್ಕೃತಿ ಪೂಜ್ಯನೀಯವಾದದ್ದು. ಇಲ್ಲಿ ಅಪವಾದಗಳು ನಡೆದಿದ್ದರೂ, ನಡೆದರೂ ಅದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಾರದು. ಯಾಕೆಂದರೆ ನಮ್ಮ ಕೈಬೆರಳುಗಳು ಒಂದೇ ಸಮನಾಗಿ ಇಲ್ಲದಿದ್ದರೂ ಒಟ್ಟಾದ ಬೆರಳುಗಳಿಂದ ನಾವು ಮಾಡದಿರುವುದೇನು ಹೇಳಿ? ಆದ್ದರಿಂದ ಸಮಾಜದಲ್ಲಿ ಒಳಿತು ಕೆಡುಕುಗಳನ್ನು ಒಟ್ಟು ಮಾಡಿ ಎಲ್ಲವನ್ನೂ ಒಳಿತಾಗಿಸೋಣವೆನ್ನುವುದೇ ನಮ್ಮ ಆಶಯ
Good word