ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಜಾತಿ ಸಂಘಟನೆಗಳಿಗೊಂದು ವಿಶೇಷ ಬಲ ಬಂದಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಹೀಗೆ ಜಾತಿ ಸಂಘಟನೆ ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ಸರಿಯಲ್ಲ ಎಂದು ವಾದಿಸುವವರ ತರ್ಕ ಏನೇ ಇರಲಿ. ಅವರ ತರ್ಕವನ್ನು ಗೌರವಿಸುತ್ತಾ ಜಾತಿ ಸಂಘಟನೆಗಳು ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಗಟ್ಟಿಗೊಳ್ಳುತ್ತಿರುವುದಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಜಾತಿ ವಿನಾಶಕ್ಕಾಗಿ ಶತಮಾನಗಳಿಂದ ನಮ್ಮ ನಾಡಿನ ಮಹಾಪುರುಷರೆಲ್ಲಾ ಸಾಕಷ್ಟು ಚಿಂತನೆ, ಬೋಧನೆಗಳನ್ನು ಮಾಡಿದರೂ ಅದರ ಬೇರನ್ನು ಕೀಳಲು ಸಾಧ್ಯವಾಗಲಿಲ್ಲ. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷೀಲಿ’ ಎಂಬಂತೆ ಮತ್ತೆ ಮತ್ತೆ ಮರುಹುಟ್ಟು ಪಡೆಯುತ್ತಲೇ ಇರುತ್ತವೆ. ಜಾತಿ ಸಂಘಟನೆಗಳು ಬೇಡ ಎನ್ನುವುದಕ್ಕೆ ಏನೇನು ಕಾರಣಗಳಿವೆಯೋ, ಹಾಗೆಯೇ ಜಾತಿ ಸಂಘಟನೆಗಳು ಬೇಕು ಎನ್ನುವುದಕ್ಕೂ ಕಾರಣಗಳಿವೆ. ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿದರೆ, ಅಥವಾ ಆ ಮಟ್ಟದಲ್ಲಿ ಮಾತ್ರ ಯೋಚಿಸುವಂತಾದರೆ ನಮ್ಮ ಸಂವಿಧಾನವನ್ನೇ ನಾವು ಅಪಾರ್ಥಗೊಳಿಸಿದಂತಾಗುತ್ತದೆ. ಜಾತಿ ಸಂಘಟನೆಯೊಳಗಿದ್ದೂ ವಿಶ್ವ ಮಾನವರಾಗಬೇಕೆಂಬ ಹಂಬಲವು ನಮ್ಮನ್ನು ಸದಾ ಎಚ್ಚರಿಸುತ್ತಿರಬೇಕು. ಕರ್ನಾಟಕದವನಾಗಿಯೂ, ಭಾರತೀಯನಾಗುವುದು, ಭಾಷೆ ಯಾವುದಾದರೂ ದೇಶವೊಂದೇ ಎಂಬ ಭಾವ ಗಟ್ಟಿಗೊಳ್ಳುವುದು ಅತ್ಯಗತ್ಯವೆಂಬ ಸತ್ಯ ಅರಿತರೆ ಜಾತಿ ಸಂಘಟನೆಗಳಿಂದ ಯಾವ ಕುಂದೂ ಉಂಟಾಗದು. ಜಾತಿಯ ಗುರುತು ಇಲ್ಲದೆ ಈ ದೇಶದಲ್ಲಿ ಯಾವ ಕೆಲಸವನ್ನಾದರೂ ಇಲ್ಲಿನ ನಾಗರಿಕನು ಮಾಡಲು ಸಾಧ್ಯವೇ? ಬಹುಶಃ ಸಾಧ್ಯವಿಲ್ಲ. ಹುಟ್ಟಿನಿಂದ ಚಟ್ಟದವರೆಗೂ ಇಲ್ಲಿ ಜಾತಿಯ ಮುದ್ರೆಯನ್ನು ಧರಿಸಿಯೇ ಜೀವಿಸಬೇಕಾದ ಪರಿಸ್ಥಿತಿ ಇದೆ. ಬ್ರಹ್ಮಶ್ರೀ ನಾರಾಯಣಗುರುಗಳೇನೋ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂದು ಸಾರಿ ಮನುಷ್ಯನಾಗಿ ಬದುಕುವ ದಾರಿಯನ್ನು ತೋರಿಸಿಕೊಟ್ಟರು. ಗುರು ಬೋಧಿಸಿದ ಆ ಒಂದು ತತ್ವವನ್ನು ಅದರ ನಿಜವಾದ ಅರ್ಥದಲ್ಲಿ ಬದುಕಿ ತೋರಿಸುವುದು ಎಷ್ಟು ಕಷ್ಟವೆಂದು ಎಲ್ಲರಿಗೂ ಗೊತ್ತಿದೆ. ಗುರುಗಳು ಒಂದೇ ಜಾತಿ ಎಂದು ಹೇಳಿದ್ದು ಎಲ್ಲರನ್ನೂ ಸಮಾನರಾಗಿ ಕಾಣಿರಿ, ಭೇದಭಾವಗಳಿಲ್ಲದೆ ವರ್ತಿಸಿರಿ ಎಂಬ ಕಾರಣಕ್ಕಾಗಿಯೇ ಇರಬೇಕು. ಇಲ್ಲವಾದರೆ ‘ಶಿಕ್ಷಣದಿಂದ ಸ್ವತಂತ್ರರಾಗಿರಿ, ಸಂಘಟನೆಗಳಿಂದ ಬಲಯುತರಾಗಿರಿ’ ಎಂದು ಬೋಧಿಸುತ್ತಿರಲಿಲ್ಲ. ಗುರುಗಳು ಬದುಕಿದ್ದ ಕಾಲದಲ್ಲೇ ಮದ್ರಾಸ್ಸಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಂಡದ್ದು, ಅಭಿವೃದ್ಧಿಗೆ ಪ್ರಯತ್ನಿಸಿದ್ದುದನ್ನು ಕಂಡಿದ್ದರು. ಬ್ರಿಟಿಷ್ ಸರಕಾರ ತನ್ನ ಆಡಳಿತಕ್ಕಾಗಿ ಗುಮಾಸ್ತರನ್ನು ಸಿದ್ಧಗೊಳಿಸುವ ಸಲುವಾಗಿ ಇಂಗ್ಲಿಷ್ ವಿದ್ಯಾಭ್ಯಾಸದ ಶಾಲೆಗಳನ್ನು ತೆರೆಯಿತು. 19ನೇ ಶತಮಾನದ ಪ್ರಾರಂಭಕ್ಕಾಗಲೇ ಹಲವು ಸಾರ್ವಜನಿಕ ಶಾಲೆಗಳನ್ನು ತೆರೆದು ಮೆಕಾಲೆಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಾಗ ಅಲ್ಲಿ ಸರಕಾರಿ ಗುಮಾಸ್ತರು ತಯಾರಾದರು. ಇಂಗ್ಲಿಷ್ ಭಾಷೆಯಲ್ಲಿ ಆಗ ಉತ್ತೀರ್ಣರಾಗದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗ್ರೇಸ್ ಮಾಕ್ರ್ಸ್ ಹಾಕಿ ಪಾಸ್ ಮಾಡುತ್ತಿದ್ದರಂತೆ. ಒಂದರ್ಥದಲ್ಲಿ ಬ್ರಾಹ್ಮಣರಿಗೆ ಬ್ರಿಟಿಷ್ ಸರಕಾರದಲ್ಲಿ ಮೀಸಲಾತಿಯ ಆಧಾರದಲ್ಲಿ ಉದ್ಯೋಗ ಲಭಿಸುವಂತಾಯಿತು. ಆಗ ಹಿಂದುಳಿದ ವರ್ಗದವರು ಶಿಕ್ಷಣ ಮತ್ತು ಸಂಘಟನೆಯ ಕನಸು ಕಾಣಲು ಸಾಧ್ಯವಿರಲಿಲ್ಲ. ಹೀಗೆ ಸರಕಾರಿ ಆಡಳಿತ ವಲಯದಲ್ಲಿ ಪ್ರವೇಶ ಪಡೆದ ಈ ವರ್ಗವು ಮುಂದೆ ದೇಶದ 70% ಉನ್ನತ ಹುದ್ದೆಗಳನ್ನು ಆಕ್ರಮಿಸುವಂತಾದದ್ದು ಆಕಸ್ಮಿಕವಲ್ಲ. ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನರಿತ ಈ ಮೇಲ್‍ವರ್ಗದವರು ತಮ್ಮ ಪ್ರತಿಭೆ ಮತ್ತು ಬುದ್ಧಿವಂತಿಕೆಯಿಂದ ಆಡಳಿತದ ಆಯಕಟ್ಟಿನ ಸ್ಥಾನಗಳಲ್ಲಿ ಕೂತು ಮಾಡಿದ ಹಿಕ್ಮತ್ತುಗಳೇ ಹಿಂದುಳಿದವರಿಗೆ, ದಲಿತರಿಗೆ ಪಾಠ ಕಲಿಸುವಂತಾಯಿತು. ಆ ಪಾಠವೇ ಜಾತಿ ಸಂಘಟೆಯೆಂದರೆ ತಪ್ಪಾಗಲಾರದು. ಪ್ರತೀ ಜಾತಿ ಸಮುದಾಯವು ಸಂಘಟನೆಗೊಂಡು ತನ್ನ ಶೈಕ್ಷಣಿಕ ಸಾಂಸ್ಕ್ರತಿಕ ಸ್ಥಿತಿಗತಿಗಳ ಬಗ್ಗೆ ಆತ್ಮಾವಲೋಕನ ಮಾಡುವಂತಾಯಿತು. ಶ್ರೀ ಗುರುಗಳು ಅಂದು ಜಾಗೃತಿಗೊಳಿಸಿದ್ದು ಅದೇ ಕಾರಣಕ್ಕಾಗಿ. ಸಮಾಜದಲ್ಲಿ ಪ್ರತಿ ಜಾತಿ ಸಮುದಾಯಗಳು ತಮ್ಮ ದಾರಿದ್ರ್ಯಕ್ಕೆ ತಾನೇ ಕಾರಣರೆಂಬುದನ್ನು, ತನ್ನ ಜಾತಿ ಸಮುದಾಯದ ಭವಿಷ್ಯವನ್ನು ರೂಪಿಸಲು ನಾವೇ ಮುಂದಾಗಬೇಕೆಂಬ ಹಕ್ಕೊತ್ತಾಯವನ್ನು ಅಂದು ಶ್ರೀಗುರುಗಳು ಮಾಡಿದ್ದರಿಂದಲೇ ಇಂದು ನಮ್ಮ ಸಮುದಾಯವು ಮೇಲ್ ಮಟ್ಟದಲ್ಲಿಲ್ಲದಿದ್ದರೂ, ತೀರಾ ಕೆಳಮಟ್ಟದಲ್ಲಂತೂ ಇಲ್ಲವೆಂದು ತೃಪ್ತಿ ಪಟ್ಟುಕೊಳ್ಳಬಹುದು.
ಹೀಗೆ ತೃಪ್ತಿ ಪಡುವುದಕ್ಕೆ ಹಲವು ಕಾರಣಗಳಿವೆ. ನಮ್ಮ ಸಮುದಾಯದ ಬೌದ್ಧಿಕ ಮತ್ತು ಸಾಂಸ್ಕ್ರತಿಕ ಶ್ರೀಮಂತಿಕೆಯ ಬಗ್ಗೆ ನಮಗೇ ಅರಿವಿಲ್ಲದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಿಂದೀಚೆಗೆ ಶೈಕ್ಷಣಿಕ ಜಾಗೃತಿಯ ಜೊತೆಗೆ ಸಾಂಸ್ಕ್ರತಿಕ ಮತ್ತು ಚಾರಿತ್ರಿಕ ವಿಷಯಗಳನ್ನು ಅರಿಯುವ, ಅರಿತು ವಿಶ್ಲೇಷಿಸುವ, ವಿಶ್ಲೇಷಿಸಿ, ವಿಮರ್ಶಿಸುವ, ವಿಮರ್ಶಿಸಿ ಬರೆಯುವಂತಹ ಮನಸ್ಸುಳ್ಳವರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ವಿಷಯವಾಗಿದೆ. ಬಿಲ್ಲವರ ಗರಡಿಗಳ ಅಧ್ಯಯನದಿಂದ ಮೊದಲ್ಗೊಂಡು ಬಿಲ್ಲವರ ಗುತ್ತು ಮನೆಗಳ ಅಧ್ಯಯನದ ವರೆಗೆ ಅದು ವಿಸ್ತರಿಸಿಕೊಂಡಿದೆ. ನಾಡಿನ ಚರಿತ್ರೆಯಲ್ಲಿ ಬಿಲ್ಲವರ ಪಾತ್ರವೇನು ಎಂಬ ಸಂಶೋಧನೆಯೂ ನಡೆಯುತ್ತಿದೆ. ಈ ಎಲ್ಲಾ ಸಂಶೋಧನೆಗಳಿಂದ ಈ ಸಮುದಾಯದ ಅಸ್ಮಿತೆಯೇನು ಸಾಧನೆಗಳೇನು ಎಂಬುದು ಪ್ರಕಟಗೊಳ್ಳುತ್ತದೆ. ಸ್ವಾತಂತ್ರ್ಯ ಚಳುವಳಿಗಳಲ್ಲಿ ಬಿಲ್ಲವರು ಬಹುಸಂಖ್ಯೆಯಲ್ಲಿ ಭಾಗವಹಿಸಿದರೆಂಬ ಹೇಳಿಕೆಗಳಿವೆ ಆದರೆ ದಾಖಲೆಗಳಿಲ್ಲದಿರಲು ಕಾರಣಗಳೇನು ಎಂಬುದರ ಬಗ್ಗೆ ಶಾಂತ ಮನಃಸ್ಥಿತಿಯಲ್ಲಿ ಕೂತು ವಿಮರ್ಶಿಸುವ ಪರಿಸ್ಥಿತಿ ಉಂಟಾಗಿದೆ. ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರದು ಪ್ರಧಾನ ಪಾತ್ರ. ಆದರೆ ಇಲ್ಲಿಯೂ ಎಷ್ಟೋ ದೈವಸ್ಥಾನಗಳಲ್ಲಿ ಅವರ ಸ್ಥಾನಗಳು ಪಲ್ಲಟಗೊಂಡಿರುವ ಉದಾಹರಣೆಗಳಿವೆ. ಇವುಗಳ ಬಗ್ಗೆ ನಾಡಿನಾದ್ಯಂತ ಅಧ್ಯಯನ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಈ ಬಗ್ಗೆ ತನ್ನದೇ ಊರಿನ ದೈವಸ್ಥಾನದ ಬಗ್ಗೆ ಅಧ್ಯಯನ ಮಾಡಿದ ಯುವಕ ಸಂಕೇತ್ ಪೂಜಾರಿಯ ಪರಿಶ್ರಮಕ್ಕೆ ನಾವು ಶಿರಬಾಗಲೇಬೇಕು. ಈಗಿನ ಯುವಕರ ಬಗ್ಗೆ ಒಂದು ಪೂರ್ವಾಗ್ರಹವಿದೆ. ಏನೆಂದರೆ ಅವರಿಗೆ ಚರಿತ್ರೆ, ಸಂಸ್ಕ್ರತಿ , ದೈವ, ದೇವರು, ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆ. ಅವರದೇನಿದ್ದರೂ ಭೂತಕಾಲವನ್ನು ಅಗೆಯುವುದಕ್ಕಿಂತ ಭವಿಷ್ಯ ಕಾಲದ ಮುನ್ನೋಟಗಳೆಡೆಗೇ ಆಸಕ್ತಿ ಎಂಬ ಅಭಿಪ್ರಾಯವಿದೆ. ಆಧುನಿಕ ಆಸಕ್ತಿಯ ಜೊತೆಗೇ ಚರಿತ್ರೆಯ ಬಗ್ಗೆ ಆಸಕ್ತಿ ಇರಿಸಿಕೊಂಡ ಈ ಯುವಕ “ಗ್ರಾಮ ದೈವವಾದ ಶ್ರೀ ಅಲೆತ್ತೂರ ಪಂಜುರ್ಲಿ” ಎಂಬ ಸಂಶೋಧಾತ್ಮಕ ಗ್ರಂಥವನ್ನು ಬರೆದು ಮಾದರಿಯಾಗಿದ್ದಾನೆ. ತನ್ನ ಜಾತಿ ಸಮುದಾಯದ ಅಧ್ಯಯನದ ಜೊತೆಗೇ ಊರ ಗ್ರಾಮದೈವಗಳ ಆರಾಧನೆಯಲ್ಲಿರುವ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಿ ಪುಸ್ತಕ ಬರೆದಿರುವುದು ಶ್ಲಾಘನೀಯ. ತುಳುನಾಡಿನ ದೈವಾರಾಧನೆಯ ಇತಿಹಾಸ, ಅಲೆತ್ತೂರು ನಂದರೆ ಬೊಟ್ಟಿಯ ಚರಿತ್ರೆ, ಪಂಜುರ್ಲಿ ದೈವದ ಹುಟ್ಟು, ಕ್ಷೇತ್ರದ ಸಂಪ್ರದಾಯಗಳು, ಜುಮಾದಿ-ಬಂಟ ದೈವಗಳು, ವರ್ಷಾವಧಿ ನೇಮ, ಅಲೆತ್ತೂರು ಕಂಬಳ, ಗುತ್ತಿನ ಮನೆಗಳ ಇತಿಹಾಸ, ಅಲೆತ್ತೂರು ಚಾವಡಿಯ ಇತಿಹಾಸ, ಗ್ರಾಮದ ನಾಲ್ಕು ಗುರಿಕಾರ ಮನೆಗಳ ಇತಿಹಾಸ, ಮಾರಿಪೂಜೆ, ಪಂಬದ ಪರಂಪರೆ. ಹೀಗೆ ಹಲವು ಅಧ್ಯಾಯಗಳಲ್ಲಿ ಈ ಆರಾಧನೆಯ ಕುರಿತು ವಿವರವಾಗಿ ಬರೆದಿದ್ದಾನೆ. ತುಳುವರಿಗೆ ಅದರಲ್ಲೂ ಬಿಲ್ಲವರಿಗೆ ದೇವರುಗಳಿಗಿಂತ ದೈವಗಳೇ ಹೆಚ್ಚು ಆಪ್ತವಾದವುಗಳು. ಯಾಕೆಂದರೆ ಬಿಲ್ಲವರಿಗೆ ಹಿಂದೆ ದೇವಸ್ಥಾನಗಳ ಪ್ರವೇಶವಿರಲಿಲ್ಲವಲ್ಲಾ. ಈ ದೈವಗಳ ಆರಾಧನೆಗೆ ಸಂಬಂಧಿಸಿ ಹಲವಾರು ಪಾಡ್ದನಗಳಿವೆ. ಸಂಕೇತ್ ಪೂಜಾರಿಯು ಪಂಜುರ್ಲಿ ದೈವದ ಪಾಡ್ದನ ಮತ್ತು ಬೀರಗಳನ್ನು ಸಂಗ್ರಹಿಸಿ ಕೊಟ್ಟಿರುವುದು ಶ್ಲಾಘನೀಯವಾಗಿದೆ. ದೈವಸ್ಥಾನಗಳಲ್ಲಿ ಆರಾಧನೆಯ ಕ್ರಮ ನಿಯಮಗಳೇನು, ದೈವಗಳ ಬಣ್ಣಗಾರಿಕೆಯಲ್ಲಿರುವ ವಿಶೇಷತೆಗಳೇನು, ಊರ ನಾಗರಿಕರೊಂದಿಗೆ ಈ ದೈವದ ಸಂಬಂಧವೇನು, ಊರಿನ ಬೇರೆ ಜಾತಿ ಸಮುದಾಯದೊಂದಿಗೆ ಈ ದೈವಸ್ಥಾನದ ಸಂಬಂಧವೇನು, ಅವರ ಕರ್ತವ್ಯವೇನು ಮುಂತಾದ ಎಲ್ಲಾ ವಿಷಯಗಳನ್ನು ಹಿರಿಯರಿಂದ ಸಂಗ್ರಹಿಸಿ ಅದೊಂದು ಸಂಗ್ರಹಯೋಗ್ಯ ಕೃತಿಯನ್ನಾಗಿ ರಚಿಸಿದ್ದಾನೆ. ಮುಂದಿನ ಪೀಳಿಗೆಗೆ ಆರಾಧನೆಯ ಕ್ರಮ ನಿಯಮಗಳ ಬಗ್ಗೆ ಸವಿವರವಾದ ವಿಷಯ ವರ್ಣನೆಯಿದ್ದು ತುಂಬಾ ಉಪಯುಕ್ತವಾಗಿದೆ. ಶ್ರಿ ಅಲೆತ್ತೂರ ಪಂಜುರ್ಲಿಯ ಬಗ್ಗೆ ತಿಳಿಯದವರಿಗೆ ಅಥವಾ ತಿಳಿಯುವ ಆಸಕ್ತಿಯುಳ್ಳವರಿಗೆ ಸಂಕೇತ್‍ನ ಈ ಪುಸ್ತಕ ಒಂದು ಕೈಪಿಡಿಯಾಗಿದೆ.
ಗುತ್ತು ಮನೆಗಳ ಅಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಕೇತ್ ಪೂಜಾರಿ ತನ್ನೊಂದಿಗೆ ಗೆಳೆಯರ ದೊಡ್ಡ ಬಳಗವನ್ನೇ ಕಟ್ಟಿಕೊಂಡಿದ್ದಾನೆ. ಈ ಗೆಳೆಯರು ಬಿಲ್ಲವ ಸಮುದಾಯದ ಸಂಘಟನೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದು ನಮ್ಮ ಸಮುದಾಯಕ್ಕೇ ಒಂದು ಗೌರವದ ವಿಷಯವಾಗಿದೆ. ಶೈಲೇಶ್ ಬಿರ್ವ, ಪ್ರಶಾಂತ್ ಸಾಲ್ಯಾನ್ ಮುಂತಾದ ಯುವಕರು ಹಮ್ಮಿಕೊಂಡಿರುವ ಈ ಕೆಲಸಗಳು ಸಮುದಾಯದಲ್ಲಿ ಅದರಲ್ಲೂ ಯುವಕರಲ್ಲಿ ಹೊಸ ಚೈತನ್ಯವನ್ನು ತುಂಬಿಸಿದೆ. ಹಿರಿಯರಲ್ಲಿ ಹೊಸ ಭರವಸೆಯನ್ನು ತುಂಬಿದೆ. ಜಾತಿ ಸಂಘಟನೆಗಳು ಸಮಾಜವನ್ನು ವಿಘಟಿಸುತ್ತದೆ ಎಂದು ಆರೋಪಿಸುವವರಿಗೆ ಜಾತಿ ಸಂಘಟನೆಗಳು ದೈವಾರಾಧನೆಯ ಹೆಸರಲ್ಲಿ ಹೇಗೆ ಒಂದಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ಮಾದರಿಯಾಗಿವೆ. ಮಾತ್ರವಲ್ಲ ದೈವಾರಾಧನೆಯು ಬೇರೆ ಬೇರೆ ಜಾತಿ ಸಮುದಾಯವನ್ನು ಒಂದಾಗಿ ಬೆಸೆಯುವ ವಿಶಿಷ್ಟ ಕಾರ್ಯವನ್ನು ಮಾಡುತ್ತದೆ ಎಂಬುದನ್ನು ಈ ಪುಸ್ತಕವು ಅಧ್ಯಯನಾತ್ಮಕವಾಗಿ ವಿವರಿಸುತ್ತದೆ. ನಮಗೆ ಈಗ ಬೇಕಾಗಿರುವುದು ಸಮಾಜವನ್ನು ಕಟ್ಟುವಲ್ಲಿ ನೆರವಾಗುವ ಸಂಪ್ರದಾಯಗಳು. ಇತ್ತೀಚಿನ ವರ್ಷಗಳಲ್ಲಿ ಆರಾಧನೆಯ ವಿಷಯದಲ್ಲಿ ಉಂಟಾಗಿರುವ ವಿಕೃತಿಗಳನ್ನು ಗುರುತಿಸಿ ಸಂಕೇತ್ ಬರೆದಿದ್ದಾನೆ. ಸಮಾಜ ಮತ್ತು ದೈವವನ್ನು ಒಂದು ಸಮದೃಷ್ಟಿಯಿಂದ ನೋಡಿದ ಸಂಕೇತ್ ಸಮತೂಕದ ಮಾತುಗಳಿಂದ ಗ್ರಾಮದೈವದ ಆರಾಧನೆಯನ್ನು ಸುಮಾರು 100 ಪುಟಗಳಲ್ಲಿ ವಿಸ್ತಾರವಾಗಿ ವರ್ಣಿಸಿದ್ದಾನೆ. ಸಮಾಜ ಮತ್ತು ಸಂಪ್ರದಾಯ, ಆರಾಧನೆಯ ಬಗ್ಗೆ ನಂಬಿಕೆ ಇರುವವರೆಲ್ಲರೂ ಓದಲೇಬೇಕಾದ ಪುಸ್ತಕವಿದು. ಈ ಯುವ ಲೇಖಕನಿಗೆ ನಮ್ಮ ಸಮಾಜಬಾಂಧವರೆಲ್ಲರೂ ಪ್ರೀತಿಯಿಂದ ಹರಸಬೇಕಾಗಿ ಆಶಿಸುತ್ತೇನೆ. ಕನ್ನಡ ತುಳು ಲೇಖಕ ಬಿ. ತಮ್ಮಯನವರ ಮುನ್ನುಡಿಯೊಂದಿಗೆ, ಹರೀಶ್ ಮಂಜೊಟ್ಟಿಯವರ ಬೆನ್ನುಡಿಯೊಂದಿಗೆ ಕೃತಿ ಸಂಪನ್ನಗೊಂಡಿದೆ. ‘ಸತ್ತಿಗೆ’ ಪ್ರಕಾಶನ, ತಿರ್ತ ಪುರಿಯ, ಪೆರ್ನೆ, ಬಂಟ್ವಾಳ ತಾಲೂಕು-574 325 ಈ ವಿಳಾಸದಿಂದ ಪ್ರಕಟಗೊಂಡಿದೆ. ‘ನಂದರಬೆಟ್ಟು ಮನೆ, ಜೋಡುಮಾರ್ಗ ಅಂಚೆ, ಬಂಟ್ವಾಳ ತಾಲೂಕು-574219’ ಇದು ಸಂಕೇತ್ ಪೂಜಾರಿಯ ವಿಳಾಸ, ದೂರವಾಣಿ: 7259516177, ಆಸಕ್ತರು ಈ ವಿಳಾಸ ಮತ್ತು ನಂಬ್ರವನ್ನು ಸಂಪರ್ಕಿಸಬಹುದು. ಲೇಖಕನ ಮೊದಲ ಕೃತಿಗೆ ಅದರಲ್ಲೂ ವರ್ಷಗಳ ಕಾಲ ಸಂಶೋಧನೆ ಮತ್ತು ಅಧ್ಯಯನ ಮಾಡಿ ಬರೆದ ಈ ಕೃತಿಗೆ ಬೆನ್ನು ತಟ್ಟಿ ಹರಸಬೇಕೆಂದು ನಾನು ಬಯಸುತ್ತಿದ್ದೇನೆ. ಸಂಕೇತ್ ಪೂಜಾರಿಯೇ ಅರಿಕೆ ಮಾಡಿಕೊಂಡಂತೆ ಇದರಲ್ಲಿ ಏನಾದರೂ ಕುಂದು ಕೊರತೆಗಳಿದ್ದರೆ ಲೇಖಕನ ಗಮನಕ್ಕೆ ತಂದರೆ ಮುಂದಿನ ಸಂಶೋಧನಾತ್ಮಕ ಕೃತಿ ರಚನೆಗೆ ಸಹಕಾರಿಯಾದೀತು ಎಂದೂ ವಿನಂತಿಸಿದ್ದಾನೆ. ಸಮಾಜದ ಹಿರಿಯರು ಪ್ರೀತಿಯಿಟ್ಟು ಈ ಕೃತಿಯನ್ನು ಓದಿ ಹರಸುತ್ತಾರೆಂದು ನನಗೆ ಭರವಸೆ ಇದೆ.
– ಬಿ.ಎಂ. ರೋಹಿಣಿ
ಕುಡುಪು, ಮಂಗಳೂರು
ಮೊ.: 9480250244