ನಾವೆಲ್ಲರೂ ಇಂದು ಅನೇಕ ಆಸೆಗಳನ್ನು ಇಟ್ಟುಕೊಂಡು ಬದುಕುತ್ತಿದ್ದೇವೆ. ಅದರಿಂದ ಸುಖವಿದೆ, ಇದರಿಂದ ಸುಖವಿದೆ ಎನ್ನುತ್ತಾ ಅನೇಕ ಕನಸುಗಳನ್ನು ಕಾಣುತ್ತೇವೆ. ಈ ಕನಸುಗಳೆಲ್ಲವೂ ನಾವು ಸುಖವಾಗಿ ಬಾಳಬೇಕು, ಸುಖವಾಗಿ ಇರಬೇಕು; ಸುಖವನ್ನಲ್ಲದೆ ಕಷ್ಟವನ್ನು ಅನುಭವಿಸಬಾರದು. ಇದು ಎಲ್ಲರ ಆಸೆ. ಆದರೆ ಮನುಷ್ಯರಾದವರು ಈ ಆಸೆಗಳನ್ನು ಪಡುವುದು ತಪ್ಪೆಂದಲ್ಲ. ಇದು ಮಾನವನ ಸಹಜ ಗುಣ. ಆದರೂ ಏನು ಮಾಡೋಣ? “ತಾನೊಂದು ನೆನೆದರೆ ಮಾನವ, ಬೇರೊಂದು ಬಗೆವುದು ದೈವ” ಎಂಬಂತೆ ಎಲ್ಲರ ಆಸೆಗಳು, ಎಲ್ಲರ ಕನಸುಗಳು ಎಣಿಸಿದಂತೆ ಆಗುವುದೇ ಇಲ್ಲ. ನಾವೆಷ್ಟು ಸುಖಿಗಳಾಗಬೇಕೆಂದು ಬಯಸುತ್ತೇವೋ ಅಷ್ಟೇ ಕಷ್ಟಗಳು ನಮ್ಮ ತಲೆಯ ಮೇಲೆ ಬಂದು ಬೀಳುತ್ತವೆ. ಹಾಗಾದರೆ ಸುಖವೆಂದರೇನು? ಈ ಸುಖವೆಲ್ಲಿದೆ? ಈ ಸುಖವೆನ್ನುವುದು ಹಣಕೊಟ್ಟು ಪಡೆಯುವುದು ಸಾಧ್ಯವೇ? ಅದೂ ಇಲ್ಲ. ಅಲ್ಲಿ ಇಲ್ಲಿ ಹುಡುಕಾಡಿದರೆ ಸಿಗಬಹುದೇ? ಅದೂ ಇಲ್ಲ. ಹಾಗಾದರೆ ಈ ಸುಖವನ್ನು ಪಡೆಯುವುದು ಹೇಗೆ?
ಕೆಲವರು ಈ ಸುಖವನ್ನು ಹುಡುಕುವುದರಲ್ಲೇ ತಮ್ಮ ಆಯುಷ್ಯವನ್ನು ಮುಗಿಸಿಬಿಡುತ್ತಾರೆ. ಈ ಸುಖಾನ್ವೇಷಣೆಯ ದಾರಿಯಲ್ಲಿ ಮುಂದುವರೆದವರಲ್ಲಿ ತಮ್ಮ ಗುರಿ ಮುಟ್ಟದವರೇ ಬಹಳಷ್ಟು ಮಂದಿ. ಸುಖದ ಸುಪ್ಪತ್ತಿಗೆಯನ್ನು ಏರಬೇಕೆಂಬ ಕನಸು ಕಂಡು ಹೋರಾಡುವ ಬಹಳಷ್ಟು ಮಂದಿ ಇರುವ ಸುಖವನ್ನು ಕಳೆದುಕೊಂಡವರೇ ಹೆಚ್ಚು. ಸುಖವನ್ನು ಅರಸುತ್ತಾ ಹೋಗಿ ಪ್ರಪಾತಕ್ಕೆ ಬಿದ್ದು ಮೇಲೆ ಬರಲಾರದೆ ಒದ್ದಾಡುವವರು ಅನೇಕರು.
ನಮ್ಮ ಸುಖದ ಕನಸು ಹೇಗಿದೆ ಅಂದರೆ, ಕಾಡು ದಾರಿಯಲ್ಲಿ ನಡೆವಾತನೊಬ್ಬ ಹಾಳು ಬಾವಿಗೆ ಬಿದ್ದು, ಬೀಳುವಾಗ ಸಿಕ್ಕಿದ ಮರದ ಬೇರೊಂದನ್ನು ಹಿಡಿದು ನೇತಾಡುವಾಗ ಮೇಲಿಂದ ಜೇನಿನ ಹನಿ ಬಿಂದು ತೊಟ್ಟಿಕ್ಕುತ್ತಾ ಇರುವಾಗ ನಾಲಗೆ ಚಾಚಿ ಅದರ ಸವಿಯನ್ನು ಅನುಭವಿಸುತ್ತಾನೆ. ಕೆಳಗೆ ನೋಡಿದರೆ ವಿಷ ಸರ್ಪಗಳು ಹರಿದಾಡುತ್ತವೆ. ಮೇಲೆ ನೋಡಲು ಇಲಿಯೊಂದು ಹಿಡಿದ ಬೇರನ್ನು ಕೊರೆಯುತ್ತಿದೆ. ಈಗ ಯೋಚಿಸಿ ನಮ್ಮ ಸುಖದ ಪರಿ ಏನೆಂಬುದನ್ನು ನಾವು ಸುಖವನ್ನು ಬಯಸುತ್ತಾ ಬಯಸುತ್ತಾ ಕಷ್ಟಗಳ ಕೂಪಕ್ಕೆ ಬೀಳುತ್ತೇವೆ. ಇನ್ನು ಕೆಲವರಿಗೆ ಕಷ್ಟಗಳ ಮೇಲೆ ಕಷ್ಟ ಬರುತ್ತಲೇ ಇರುತ್ತದೆ. ಸಮುದ್ರದ ಅಲೆಯಂತೆ ಅಪ್ಪಳಿಸುತ್ತಲೇ ಇರುತ್ತದೆ. ಯಾಕೆ ಹೀಗೆ?
ಈ ಸುಖವನ್ನು ಪಡೆಯುವುದಕ್ಕಾಗಿ ಹಲವಾರು ದಾರಿಗಳನ್ನು ಹುಡುಕುತ್ತೇವೆ. ವಿದ್ಯಾವಂತರಾಗಿ ಸುಖವನ್ನು ಪಡೆಯಬಹುದೆಂದು ವಿದ್ಯೆ ಕಲಿತು ಪದವಿಯನ್ನು ಪಡೆಯುತ್ತೇವೆ. ಕಲಿತ ವಿದ್ಯೆಗೆ ಸರಿಯಾದ ಉದ್ಯೋಗ ಸಿಕ್ಕಿದರೆ ಆಯಿತು. ಸಿಗದಿದ್ದರೆ ಅದರಲ್ಲೂ ಸುಖವಿಲ್ಲ.
ಇನ್ನು ಉದ್ಯೋಗವನ್ನು ಪಡೆದು ಅದರಿಂದ ಸುಖ ಪಡೆಯುವ ಎಂದರೆ ಸಾಕಷ್ಟು ಸಂಬಳ ಸಿಗದಿದ್ದರೆ ಅಲ್ಲೂ ಸುಖವಿಲ್ಲ.
ಇನ್ನು ಕೆಲವರು ತಮ್ಮ ಸುಖಕ್ಕೋಸ್ಕರ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಅನೇಕರು ಮೋಸದ ದಾರಿ ಹಿಡಿಯುತ್ತಾರೆ, ಕೆಲವರು ವಂಚನೆ ದಾರಿ ತುಳಿಯುತ್ತಾರೆ; ಸಜ್ಜನರಂತೆ ನಟಿಸುತ್ತಾ ಸುಳ್ಳಿನಿಂದಲೇ ಬದುಕುವವರು ಇನ್ನು ಕೆಲವರು.
ಇವರ ಮೋಸದ ಬಲೆಗೆ ಬೀಳದವರೇ ವಿರಳ. ವಂಚನೆಯ ಗೂಡಿಗೆ ಬೀಳದ ಇಲಿಗಳೇ ಕಡಿಮೆ. ಈ ದಂಧೆಯಲ್ಲಿರುವವರು ವಿದ್ಯಾವಂತರೇ ಹೆಚ್ಚೆಂದರೆ ಆಶ್ಚರ್ಯವಾಗುತ್ತದೆ.
ನಾವಿಂದು ಪತ್ರಿಕೆಗಳಲ್ಲಿ, ಟಿ.ವಿ. ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿದರೆ ತಿಳಿಯುತ್ತದೆ ಇದೆಲ್ಲವೂ ಆಸೆ ಆಮಿಷಗಳ ಗಾಳ ಹಾಕಿ ತಾವು ಹೆಚ್ಚೆಚ್ಚು ಲಾಭ ಗಳಿಸುವ ತಂತ್ರಗಳೇ.
ವ್ಯಾಪಾರದ ಕ್ಷೇತ್ರವನ್ನು ನೋಡಿದರೆ ಅಲ್ಲೂ ಮೋಸವೆ. ಈ ಮೋಸ, ವಂಚನೆ, ಸುಳ್ಳುಗಳೆಲ್ಲವೂ ಸೇರಿ ಬೆರಕೆ, ಬೆರಕೆ, ಎಲ್ಲವೂ ಕಲಬೆರಕೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬಂತೆ ಇದೆಲ್ಲವೂ ಒಬ್ಬರನ್ನು ಸುಲಿದು ತಾವು ಸುಖ ಪಡಬೇಕೆಂಬ ತಂತ್ರಗಳಲ್ಲದೆ ಬೇರೆನಲ್ಲ. ಆದರೆ ಇದರ ಹಿಂದಿನ ವಿಧಿ ನಿಯಮವನ್ನು ಯಾರೂ ಕಾಣರು.
ಮೀನುಗಾರನೊಬ್ಬ ಗಾಳಕ್ಕೆ ಎರೆಹುಳು ಸಿಕ್ಕಿಸಿ ನೀರಿಗೆ ಎಸೆಯುತ್ತಾನೆ. ನೀರಿಗೆ ಬಿದ್ದ ಎರೆಹುಳವನ್ನು ಕಂಡ ಮೀನೊಂದು ಗಾಳದ ಸುತ್ತು ಸುತ್ತು ಬರುತ್ತಿದೆ. ಇದನ್ನು ಕಂಡ ಎರೆ ಹುಳವು ಹೀಗೆನ್ನುತ್ತದೆ. “ಸುತ್ತಿ ಸುತ್ತಿ ಬರುತ್ತಿ ನನಗಾಗಿ, ಮೇಲೊಬ್ಬ ಕಾಯುತ್ತಾನೆ ನಿನಗಾಗಿ” ಎಂದು. ಒಬ್ಬನಿಗೆ ಮೋಸ ಮಾಡಿದರೆ, ಅವನಿಗೆ ಇನ್ನೊಬ್ಬ ಮೋಸ ಮಾಡುತ್ತಾನೆ. ಒಬ್ಬನನ್ನು ವಂಚಿಸಿದರೆ ಅವನನ್ನು ಇನ್ನೊಬ್ಬ ವಂಚಿಸುತ್ತಾನೆ. ಹೀಗೆ ಮೋಸ, ವಂಚನೆಯ ಜಾಲ ಎಲ್ಲೆಲ್ಲೂ ಹರಡಿದೆ.
ಗಿಡುಗನ ಬಾಯಿಂದ ಹಾರಿಸಿ ತಂದ ಮಾಂಸದ ತುಂಡೊಂದನ್ನು ಕಾಗೆ ತಂದು ಕೊಂಬೆಯಲ್ಲಿ ಕುಳಿತು ತಿಂದು ಸುಖಿಸುವೆ ಎನ್ನುವಾಗಲೇ ಮರದ ಕೆಳಗಿರುವ ನರಿಯೊಂದು ಇದನ್ನು ನೋಡಿ “ಕಾಗಕ್ಕಾ ನೀನೆಷ್ಟು ಚಂದ, ನಿನ್ನ ಧ್ವನಿಯೆಷ್ಟು ಅಂದ ನೀನೊಂದು ಹಾಡು ಹಾಡುವೆಯಾ” ಎಂದಾಗ ಕಾಕಾ ಹಾಡಿದ ಕಾಗೆ ಬಾಯಿಯ ಮಾಂಸದ ತುಂಡು ನರಿಯ ಬಾಯಿಗೆ ಬಿದ್ದಂತೆ; ತಮ್ಮ ತಮ್ಮ ಸುಖಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡಿದರೆ ಅವನನ್ನು ಮೋಸ ಮಾಡಲು ಇನ್ನೊಬ್ಬ ಕಾದಿರುತ್ತಾನೆಂಬುದು ಸತ್ಯ. ವಿದ್ಯೆಗೆ ವಿನಯವೇ ಭೂಷಣ, ವಿನಯಕ್ಕೆ ಅರ್ಹತೆಯೇ ಕಾರಣ; ಅರ್ಹತೆಯಿಂದ ಧನ ಪ್ರಾಪ್ತಿಯ ಹೂರಣ. ಧನ ಪ್ರಾಪ್ತಿಯಿಂದ ಧರ್ಮವೂ, ಧರ್ಮದಿಂದ ಸುಖವನ್ನೂ ಅನುಭವಿಸಬೇಕು. ಎಲ್ಲೂ ಧರ್ಮವನ್ನು ಮೀರಿ ನಡೆಯಬಾರದು.
ಮನೆಯನ್ನು ಕಟ್ಟಿಕೊಂಡು ಅದರಿಂದ ಸುಖವನ್ನು ಅನುಭವಿಸಬೇಕೆಂದು ಒಂದು ಮನೆ ಕಟ್ಟಿಸಿದರೆ ಅಲ್ಲಿಂದ ಶುರುವಾಗುತ್ತದೆ, ಆ ಕೋಣೆಗೆ ಅದು ಬೇಕು, ಈ ಕೋಣೆಗೆ ಇದು ಬೇಕು; ಬಚ್ಚಲು ಮನೆ ಹಾಗಿರಬೇಕು, ಅಡಿಗೆ ಮನೆ ಹೀಗಿರಬೇಕು ಹೀಗೆ ಬೇಕುಗಳ ಸರಮಾಲೆಯ ಸಾಲು ಸಾಲಾಗಿ ಬರಲು ಆರಂಭಿಸಿದಾಗ ಆ ಸುಖದ ಪರಿಯನ್ನು ಕೇಳುವುದೇ ಬೇಡ. ಇನ್ನು ಸಾಲ ಮಾಡಿ ಮನೆ ಕಟ್ಟಿಸಿದ್ದರೆ ದೇವರೇ ಗತಿ.
ಇನ್ನು ಮದುವೆಯಾಗಿಯಾದರೂ ಸುಖದಿಂದಿರುವ ಎಂದು ಮದುವೆ ಆದರೆ ಸುಖವುಂಟೇ? ಬೇಕು ಬೇಡಗಳ ಜಂಜಾಟ, ಸರಿ ತಪ್ಪುಗಳ ತಿಕ್ಕಾಟ; ನಾನು ನೀನೆಂಬ ಸೆಣಸಾಟ. ಒಟ್ಟಾರೆ ಸಂಸಾರ ತಾಪತ್ರಯಗಳ ಪರದಾಟ. ಹೀಗಾದಾಗ ಲೌಖಿಕ ಬದುಕಿನಲ್ಲೂ ಸುಖವಿಲ್ಲ.
ಗಂಡ ಹೆಂಡಿರು “ಸಮಪಾಲು ಸಮಬಾಳು” ಎಂಬ ನೀತಿಯನ್ನು ಅನುಸರಿಸಿ ಬಾಳಿದಾಗ ಮಾತ್ರ ಸುಖ.
ಬದುಕೆಂಬ ಬಂಡಿಯಲಿ ಸುಖವೆಂಬ ಕನಸ ಹೊತ್ತು ಆಸೆ ಆಮಿಷವೆಂಬ ಎತ್ತನ್ನು ಹೂಡಿ ಎಷ್ಟು ದೂರ ಸಾಗಿದರೂ ಸುಖದ ಮಂದಿರ ದೊರಕದೇ ಹೋದರೆ? ಗಾಂಧಾರಿಯ ಪಾಡಲ್ಲವೇ ನಮ್ಮದು? ಒಂದು ಕಾಲದಲ್ಲಿ ಅವಿಭಕ್ತ ಕುಟುಂಬದೊಂದಿಗೆ ಬದುಕುತ್ತಿದ್ದ ನಾವು ಇಂದು ವಿಭಕ್ತ ಕುಟುಂಬ ಪದ್ದತಿಯಲ್ಲಿ ಬಾಳುತ್ತಿದ್ದೇವೆ. ಅವಿಭಕ್ತ ಕುಟುಂಬದಲ್ಲಿ ಅಜ್ಜ, ಅಜ್ಜಿ, ಅತ್ತೆ ಮಾವ, ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ ಚಿಕ್ಕಮ್ಮ, ಅಕ್ಕತಂಗಿ, ಅಣ್ಣತಮ್ಮಂದಿರೆಂದು ಬಹುಮಂದಿಯೊಂದಿಗೆ ಬದುಕುತ್ತಿದ್ದಾಗ ಇವರೆಲ್ಲರೂ ನಮ್ಮವರಾಗಿದ್ದರು. ಒಂದಾಗಿ ಬಾಳುತ್ತಾ, ಒಂದಾಗಿ ಬದುಕುತಾ, ಇದ್ದದ್ದನ್ನು ಎಲ್ಲರೂ ಪ್ರೀತಿಯಿಂದ ಹಂಚಿ ತಿನ್ನುವಾಗ; ಕೂಡಿ ಬಾಳಿದರೆ ಸ್ವರ್ಗ ಸುಖವೆಂಬಂತೆ ಇಲ್ಲೊಂದಷ್ಟು ಸುಖವಿತ್ತು.
ಇಂದಿನ ಕಾಲದ ಪರಿಯೊಳಗೆ ಸಿಕ್ಕಿಬಿದ್ದ ನಾವು ಎಲ್ಲರೊಂದಿಗಿದ್ದರೆ ಸುಖವಿಲ್ಲ ನಾವು ನಾವಾಗಿದ್ದು ಸುಖ ಪಡುವ ಎಂದು ತಾನು, ತನ್ನ ಹೆಂಡತಿ ಮಕ್ಕಳು ಬೇರೆಯಾಗಿದ್ದರೆ ಸುಖ ಪಡಬಹುದೆಂದೆಣಿಸಿ ಹೊರಟ ನಾವಿಂದು ಎಲ್ಲರಿಂದಲೂ, ಎಲ್ಲದರಿಂದಲೂ ದೂರವಾಗಿದ್ದೇವೆ.
ಹೀಗಾಗಿ ಇಂದಿನ ಮಕ್ಕಳೂ ಎಲ್ಲರ ಪ್ರೀತಿ ಪ್ರೇಮದಿಂದ ವಂಚಿತರಾಗಿ ಯಾರ ಗುರುತೂ ಇಲ್ಲದೆ, ಯಾರನ್ನೂ ಪ್ರೀತಿಸದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಹಣದಿಂದಲೇ ಸುಖವೆಂದು ಬಯಸಿದ ಧನಿಕನೊಬ್ಬ ತನ್ನವರನ್ನೂ, ತನ್ನ ಸಂಸಾರವನ್ನು ಮರೆತು ಎಲ್ಲರಿಂದಲೂ ದೂರವಾದಂತೆ ತನ್ನ ನೆಮ್ಮದಿ ತನ್ನ ಸುಖದಿಂದಲೂ ದೂರವಾಗುತ್ತಾನೆ. ತನಗರಿವಿಲ್ಲದಂತೆ.
ಇಂದು ನಾವೆಲ್ಲ ದೈಹಿಕ ಸುಖಕ್ಕಾಗಿ ಹಲವಾರು ಸಾಮಾಗ್ರಿಗಳ, ಹಲವಾರು ಯಂತ್ರಗಳ ದಾಸರಾಗಿದ್ದೇವೆ.
ನೀರೆತ್ತುವ ಅಗತ್ಯವಿಲ್ಲ, ಬಟ್ಟೆ ಬೀಸಿ ಒಗೆಯಬೇಕೆಂದಿಲ್ಲ, ಅರೆಯಲು, ಕಡೆಯಲು ಆಯಾಸವಿಲ್ಲ, ಬೀಸಣಿಗೆ ಬೇಕಾಗಿಲ್ಲ ಎಲ್ಲದಕ್ಕೂ ಯಂತ್ರದ ಮೊರೆ ಹೋಗುತ್ತೇವೆ. ಎಲ್ಲದಕ್ಕೂ ಯಂತ್ರವನ್ನೇ ನಂಬಿದ ನಮ್ಮ ಬದುಕಿಂದು ಕೇವಲ ಯಾಂತ್ರಿಕ ಬದುಕಾಗಿದೆ. ಹೀಗಾಗಿಯೇ ದೈಹಿಕ ಸುಖವನ್ನು ಕಳೆದುಕೊಂಡು ಗಂಟು ನೋವು, ಸೊಂಟ ನೋವು, ಬೆನ್ನು ನೋವುಗಳೆಂಬ ಬಹುನೋವುಗಳಿಗೆಂದೇ ತಯಾರಾದ ಮಾತ್ರೆ ಗುಳಿಗೆಗಳನ್ನು ನುಂಗುತ್ತಾ ಹಸಿವೆಂಬ ಸುಖವನ್ನು ಕೊಲ್ಲುತ್ತಿದ್ದೇವೆ.
ನಾವು ನಿಜವಾದ ಸುಖವನ್ನು ಅನುಭವಿಸಬೇಕಾದರೆ ನಾವು ಮೊದಲು ಸಾಮಾಜಿಕ ಸುಖವನ್ನು ಬಯಸಬೇಕು. ಒಂದು ಸಮಾಜ ಸುಖವಾಗಿದ್ದರೆ ಮಾತ್ರ ನಾವೂ ಸುಖವಾಗಿರಲು ಸಾಧ್ಯ.
ನಂತರ ನಾವು ಕೌಟುಂಬಿಕ ಸುಖವನ್ನು ಬಯಸಬೇಕು. ಕುಟುಂಬವೊಂದು ಸುಖವಾಗಿದ್ದರೆ ನಾವೂ ಸುಖಿಗಳೆ.
ಬುದ್ಧಿಯನ್ನು ಎಲ್ಲೆಂದರಲ್ಲಿ ಹರಿಯಬಿಡದೆ ನಮ್ಮ ಸ್ಥಿಮಿತದಲ್ಲಿಡಬೇಕು. ಅಸ್ಥಿರವಾದ ಬುದ್ಧಿ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅದರಿಂದ ನಮ್ಮ ಭೌದಿಕ ನೆಮ್ಮದಿಯೂ ಹಾಳಾಗಿ ಭೌದಿಕ ಸುಖವೂ ಇಲ್ಲದಾಗುತ್ತದೆ.
ನಾವು ಇಷ್ಟೆಲ್ಲಾ ಮಾಡುವುದಕ್ಕೆ ಕಾರಣ ನಮ್ಮ ಮನಸ್ಸು. ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿಟ್ಟಿರಬೇಕು. ಈ ಮನಸ್ಸನ್ನು ಕೆಲವರು ಮರ್ಕಟನಿಗೆ ಹೋಲಿಸಿದ್ದಾರೆ. ಇನ್ನು ಕೆಲವರು ಹುಚ್ಚು ಕುದುರೆಗೆ ಹೋಲಿಸಿದ್ದಾರೆ. ನಾವು ಇಡೀ ಜಗತ್ತನ್ನೇ ಗೆಲ್ಲಬಹುದು ಆದರೆ ನಮ್ಮ ಮನಸ್ಸನ್ನು ಗೆಲ್ಲುವುದು ಕಷ್ಟ. ಈ ಮನಸ್ಸು ನಮ್ಮ ಹಿಡಿತದಲ್ಲಿರದಿದ್ದರೆ ನಮ್ಮ ಮಾನಸಿಕ ನೆಮ್ಮದಿಯೂ ಮಾನಸಿಕ ಸುಖವೂ ನಾಶವಾಗುತ್ತದೆ.
“ನಿನ್ನ ನೆರೆಕರೆಯವರನ್ನು ನಿನ್ನಂತೆಯೇ ಪ್ರೀತಿಸು” “ನಿನ್ನಲ್ಲಿ ಎರಡಂಗಿ ಇದ್ದರೆ ಒಂದನ್ನು ಇಲ್ಲದವನಿಗೆ ಕೊಡು” ಇದು ಯೇಸು ಕ್ರಿಸ್ತರ ನುಡಿ.
ನಮ್ಮಲ್ಲಿರುವುದನ್ನು ಹಂಚಿ ತಿಂದಾಗ ಆಗುವ ಆನಂದ, ಎಷ್ಟಿದ್ದರೂ ಒಬ್ಬನೆ ತಿನ್ನುವುದರಲ್ಲಿ ಇರುವುದಿಲ್ಲ. ಕೂಡಿ ಬಾಳುವ, ಹಂಚಿ ತಿನ್ನುವ ಸುಖವೇ ನಿಜವಾದ ಸುಖ.
ನಮ್ಮಿಂದಾಗಿ ಮತ್ತೊಬ್ಬನು ಸುಖ ಪಟ್ಟರೆ, ಪಡುವಂತಾದರೆ ಅದು ನಮ್ಮ ನಿಜವಾದ ಸುಖ.
ಸಾಮಾಜಿಕ ಸುಖ, ಕೌಟುಂಬಿಕ ಸುಖ, ಭೌದ್ಧಿಕ ಸುಖ, ಮಾನಸಿಕ ಸುಖ ಎಲ್ಲವನ್ನು ಮೀರಿ ತಾನೊಬ್ಬನೇ ಸುಖವನ್ನು ಅನುಭವಿಸಬೇಕೆಂದು ಬಯಸಿದರೆ ಇಂದಿನ ದೂರವಾಣಿ, ದೂರದರ್ಶನದಂತೆ ನಾವೂ ಎಲ್ಲರಿಂದಲೂ ದೂರಾಗುತ್ತೇವೆ.
ಹಸಿದವನಿಗೆ ನೀಡುವ ಮೂಲಕ ನಾವು ನಮ್ಮ ಸುಖವನ್ನು ಅನುಭವಿಸಬೇಕಲ್ಲದೆ, ತಾನುಂಡು ಮಿಕ್ಕಿದ್ದನ್ನು ತಿಪ್ಪೆಗೆಸೆಯುವು ದರಲ್ಲಿ ಏನಿದೆ ಸುಖ?
ಅಸಹಾಯಕರಿಗೆ ಸಹಾಯ ಮಾಡುವ ಮೂಲಕ, ದೀನರಿಗೆ ದಾನ ಮಾಡುವ ಮೂಲಕ, ಮತ್ತೊಬ್ಬರಿಗೆ ಒಳಿತಾಗಲೆಂಬಂತೆ ಸಮಾಜ ಸೇವೆ ಮಾಡಿದಾಗ, ಮತ್ತೊಬ್ಬರ ಸುಖವನ್ನು ಕಂಡು ನಾವು ಹರ್ಷಿತರಾದಾಗ ಅದು ನಮ್ಮ ಸುಖ.
ನಮ್ಮ ಸುಖಕ್ಕಾಗಿ ಇನ್ನೊಬ್ಬನನ್ನು ನೋಯಿಸುವುದು, ನಮ್ಮ ಸುಖಕ್ಕಾಗಿ ಇನ್ನೊಬ್ಬನನ್ನು ಸಾಯಿಸುವುದು, ನಮ್ಮ ಸುಖಕ್ಕಾಗಿ ಇನ್ನೊಬ್ಬನಿಗೆ ದುಃಖ ಕೊಡುವುದು. ಇದೇನು ಮಹಾಸುಖ? “ಆಸೆಯೇ ದುಃಖಕ್ಕೆ ಮೂಲ” ಎಂಬ ಭಗವಾನ್ ಬುದ್ಧನ ಮಾತಿನಂತೆ ನಮ್ಮ ಆಸೆಗಳಿಗೆ ಕಡಿವಾಣ ಹಾಕಿ ಇದ್ದದ್ದರಲ್ಲೇ ತೃಪ್ತಿಯ ಜೀವನ ನಡೆಸಿದಾಗಲೂ ಪಡೆಯಬಹುದು ಸುಖ.
ಜಾತಿ ಜಾತಿಗಳ ದ್ವೇಷ ಬಿಟ್ಟು, ಮತ ಮತಗಳ ರಾದ್ದಾಂತ ತೊರೆದು, ಧರ್ಮ ಧರ್ಮಗಳ ಕ್ರೋಧ ತರಿದು ಎಲ್ಲರೂ ಒಬ್ಬನೇ ದೇವನ ಮಕ್ಕಳು, ನಾವೆಲ್ಲರೂ ಮಾನವರು, ನಮ್ಮದೆಲ್ಲ ಮನುಜ ಮತ “ಮಾನವ ಕುಲಂ ಒಂದೇ ವಲಂ” ಎಂಬಂತೆ ನಾವೆಲ್ಲರೂ ಸಾಮರಸ್ಯದಿಂದ ಕೂಡಿ ಬೆರೆತಾಗ ನಾವೆಲ್ಲರೂ ಸುಖಿಗಳೆ.
“ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ” ಎಂಬ ಬಸವಣ್ಣನ ವಚನದಂತೆ ನಾವೆಲ್ಲ ಪ್ರೀತಿ ಪ್ರೇಮದಿಂದ ಬದುಕಿದಾಗ ಆ ಸುಖ ನಮ್ಮದು.
“ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟದಲಿ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕು ತಿಮ್ಮ” ಎಂಬ ಡಿ.ವಿ.ಜಿ.ಯವರ ಕಗ್ಗದಂತೆ ಅರ್ಥೈಸಿ ನಡೆದಾಗ ಆ ಸುಖವೂ ನಮ್ಮದಾಗಬಹುದು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ನಾರಾಯಣ ಗುರುಗಳ ತತ್ವವನ್ನು ಪಾಲಿಸುತ್ತ, ಎಲ್ಲರೊಂದಾಗಿ ಪ್ರೀತಿಯಲಿ ನೀತಿ ಮಾರ್ಗದಿ ನಡೆದಾಗ, ನಮ್ಮ ಖ್ಯಾತಿಗಾಗಿ ಮತ್ತೊಬ್ಬರ ಬಲಿ ಕೊಡದೆ ನಿತ್ಯ ಜೀವನದಿ ಸತ್ಯಪಥದೊಳು ನಡೆದು ಎಲ್ಲರೊಂದಾಗಿ ಕೂಡಿ ಬೆರೆತು ಸಾಮರಸ್ಯದಿ ಬಾಳಿದಾಗ ನಮ್ಮದಾಗಬಹುದು ಸುಖ. ಎಲ್ಲಿದೆ? ಎಲ್ಲಿದೆ? ಸುಖ?ವೆಂದು ಎಲ್ಲೊಲ್ಲೊ ಹುಡುಕುವ ನಾವು ನಮ್ಮಂತರಂಗದೊಳೊಮ್ಮೆ ಇಣುಕಿ ಇಲ್ಲಿದೆ ಇಲ್ಲಿದೆ ಸುಖವೆಂದು ಸುಖಿಸೋಣವೆ?
ಸರ್ವೇ ಜನಾಃ ಸುಖಿನೋ ಭವಂತುಃ ಲೋಕಃ ಸಮಸ್ತ ಸುಖಿನೋ ಭವಂತಃ ಸನ್ಮಂಗಲಾನಿ ಭವಂತುಃ ಓಂ ಶಾಂತಿ ಶಾಂತಿ ಶಾಂತಿಃ
–